Ugadi Horoscope 2024: ವೃಷಭ ರಾಶಿಯ ಕ್ರೋಧಿನಾಮ ಸಂವತ್ಸರದ ಯುಗಾದಿ ವರ್ಷ ಭವಿಷ್ಯ

| Updated By: ರಮೇಶ್ ಬಿ. ಜವಳಗೇರಾ

Updated on: Apr 09, 2024 | 1:15 AM

Ugadi Horoscope 2024: ವೃಷಭ ರಾಶಿಯವರಿಗೆ ಕ್ರೋಧಿನಾಮ ಸಂವತ್ಸರದ ಯುಗಾದಿ ವರ್ಷ ಭವಿಷ್ಯ ಕ್ರೋಧಿನಾಮ ಸಂವತ್ಸರದ ವರ್ಷ ಫಲ ಹೇಗಿದೆ ಎಂಬುದನ್ನು ವಿವರಿಸುವಂಥ ಲೇಖನ ಇಲ್ಲಿದೆ.

Ugadi Horoscope 2024: ವೃಷಭ ರಾಶಿಯ ಕ್ರೋಧಿನಾಮ ಸಂವತ್ಸರದ ಯುಗಾದಿ ವರ್ಷ ಭವಿಷ್ಯ
Follow us on

Ugadi Horoscope 2024: ವೃಷಭ ರಾಶಿಯವರಿಗೆ ಕ್ರೋಧಿನಾಮ ಸಂವತ್ಸರದ ಯುಗಾದಿ ವರ್ಷ ಭವಿಷ್ಯ
ಕ್ರೋಧಿನಾಮ ಸಂವತ್ಸರದ ವರ್ಷ ಫಲ ಹೇಗಿದೆ ಎಂಬುದನ್ನು ವಿವರಿಸುವಂಥ ಲೇಖನ ಇಲ್ಲಿದೆ. ಏಪ್ರಿಲ್ 9ನೇ ತಾರೀಕು ಸಂವತ್ಸರದ ಆರಂಭ. ಇದನ್ನು ಯುಗಾದಿ ಎನ್ನಲಾಗುತ್ತದೆ. ಇಲ್ಲಿಂದ ಹೆಚ್ಚು-ಕಡಿಮೆ ಒಂದು ವರ್ಷ, ಮಾರ್ಚ್ 29, 2025ರ ತನಕದ ಗೋಚಾರ ಫಲಾಫಲ ಇಲ್ಲಿದೆ. ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸುವುದಕ್ಕೆ ದೀರ್ಘಾವಧಿಯನ್ನು ತೆಗೆದುಕೊಳ್ಳುವ ಶನಿ, ಗುರು ಮತ್ತು ರಾಹು- ಕೇತುಗಳನ್ನು ಪ್ರಮುಖವಾಗಿ ಗಣನೆಗೆ ತೆಗೆದುಕೊಂಡು, ಈ ಫಲವನ್ನು ತಿಳಿಸಲಾಗುತ್ತಿದೆ.

ಬಹುತೇಕ ಈ ಸಂವತ್ಸರಾದ್ಯಂತ ಗುರು ವೃಷಭ ರಾಶಿಯಲ್ಲಿ, ಶನಿ ಕುಂಭ ರಾಶಿಯಲ್ಲಿ, ರಾಹು ಮೀನ ರಾಶಿಯಲ್ಲಿ ಹಾಗೂ ಕೇತು ಕನ್ಯಾ ರಾಶಿಯಲ್ಲಿ ಸಂಚರಿಸುತ್ತದೆ. ಅಂದ ಹಾಗೆ ಇಲ್ಲಿ ನೀಡುತ್ತಿರುವುದು ಗೋಚಾರ ಫಲ ಮಾತ್ರ. ಮನೆ ನಿರ್ಮಾಣ, ಮದುವೆ, ಉನ್ನತ ವ್ಯಾಸಂಗ, ವಿದೇಶ ಪ್ರಯಾಣ, ಆರೋಗ್ಯ ಸೇರಿದಂತೆ ಯಾವುದೇ ಅತಿ ಮುಖ್ಯ ವಿಚಾರದ ಬಗ್ಗೆ ನಿರ್ದಿಷ್ಟ ಪ್ರಶ್ನೆಗಳು ಇದ್ದಲ್ಲಿ ಜ್ಯೋತಿಷಿಗಳ ಬಳಿ ಜನ್ಮ ಜಾತಕವನ್ನು ಪರಿಶೀಲನೆ ಮಾಡಿಸಿಕೊಳ್ಳಿ. ಅವರ ಮಾರ್ಗದರ್ಶನದ ಮೇಲೆ ತೀರ್ಮಾನಗಳನ್ನು ತೆಗೆದುಕೊಳ್ಳಿ.

ವೃಷಭ ರಾಶಿಯವರಿಗೆ ಸಂವತ್ಸರ ಫ ಹೇಗಿದೆ ಎಂಬ ಮಾಹಿತಿ ನೀಡಲಾಗುತ್ತಿದೆ. ಕೃತ್ತಿಕಾ ನಕ್ಷತ್ರ ಎರಡು, ಮೂರು, ನಾಲ್ಕನೇ ಪಾದ ಹಾಗೂ ರೋಹಿಣಿ ನಕ್ಷತ್ರದ ನಾಲ್ಕೂ ಪಾದ ಮತ್ತು ಮೃಗಶಿರಾ ನಕ್ಷತ್ರದ ಒಂದು, ಎರಡನೇ ಪಾದ ಯಾರದೋ ಅವರದು ವೃಷಭ ರಾಶಿ ಆಗುತ್ತದೆ. ಈ ರಾಶಿಯು ಸ್ಥಿರ ಸ್ವಭಾವದ, ಪೃಥ್ವಿ ತತ್ವದ್ದಾಗಿದೆ. ಈ ರಾಶಿಯ ಅಧಿಪತಿ ಶುಕ್ರ ಗ್ರಹವಾಗಿದೆ.

ಗುಣ- ಸ್ವಭಾವ

ಈ ರಾಶಿಯವರು ತಮ್ಮ ಕೆಲಸದ ಮೇಲೆ ಹೆಚ್ಚು ನಂಬಿಕೆ ಇಡುವಂಥವರು. ತಾನು ಸರಿಯಾಗಿದ್ದಲ್ಲಿ ಏನು ಸಮಸ್ಯೆಯೂ ಆಗುವುದಿಲ್ಲ ಎಂಬ ವಿಶ್ವಾಸ ಇರುವಂಥವರು. ಈ ರಾಶಿಯವರಲ್ಲಿ ಒಂದು ಬಗೆಯ ಆಕರ್ಷಣಾ ಶಕ್ತಿ ಇರುತ್ತದೆ. ಇತರರನ್ನು ಸೆಳೆಯಬಲ್ಲಂಥ ಶಕ್ತಿ ಅದಾಗಿರುತ್ತದೆ. ಆದರೆ ಇವರು ಇತರರಿಗೆ ಹಣ ನೀಡಿ ಅಥವಾ ಜಾಮೀನಾಗಿ ನಿಂತು, ಕಷ್ಟ- ನಷ್ಟಗಳನ್ನು ಅನುಭವಿಸುವಂತಾಗುತ್ತದೆ. ಯಾರ ಮೇಲೆ ನಂಬಿಕೆ ಇರಿಸಬೇಕು, ಯಾರಿಗೆ ಸಹಾಯ ಮಾಡಬೇಕು ಎಂಬ ಬಗ್ಗೆ ಇವರು ಸರಿಯಾದ ವಿವೇಚನೆಯನ್ನು ಬಳಸುವುದು ತುಂಬ ಮುಖ್ಯ. ಫೈನಾನ್ಸ್, ಬ್ಯಾಂಕಿಂಗ್, ಲೇವಾದೇವಿ, ಬ್ಯೂಟಿಪಾರ್ಲರ್, ಬ್ಯಾಂಗಲ್ ಸ್ಟೋರ್ಸ್, ಕಮಿಷನ್ ವ್ಯವಹಾರ ಇಂಥ ಕ್ಷೇತ್ರಗಳಲ್ಲಿ ಇವರು ಹೆಚ್ಚಿನ ಯಶಸ್ಸು ಪಡೆಯುತ್ತಾರೆ. ಸಂಬಂಧಗಳಿಗೆ ಜಾಸ್ತಿ ಗೌರವ- ಬೆಲೆ ನೀಡುವಂಥ ಜನರಾದ ಇವರು, ಅದೇ ವಿಚಾರಕ್ಕೆ ಇತರರಿಂದ ಬ್ಲ್ಯಾಕ್ ಮೇಲ್ ಗೆ ಸಹ ಒಳಗಾಗುತ್ತಾರೆ. ಇವರು ಕಡ್ಡಿ ತುಂಡು ಮಾಡಿದಂತೆ ಮಾತನ್ನು ರೂಢಿಸಿಕೊಳ್ಳಬೇಕು. ಸಂಕೋಚವನ್ನು ಬಿಡಬೇಕು.

ಜನ್ಮ ರಾಶಿಯಲ್ಲಿ ಗುರು ಸಂಚಾರ (ಯುಗಾದಿ ವರ್ಷ ಫಲ)

ಜನ್ಮ ರಾಶಿಯಲ್ಲಿ ಗುರು ಸಂಚರಿಸುವಾಗ ಆರೋಗ್ಯ ಸಮಸ್ಯೆಗಳು ಜಾಸ್ತಿ ಆಗುತ್ತವೆ. ಡಯಾಬಿಟೀಸ್, ನರಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವವರು ಸಾಮಾನ್ಯ ಸಮಯಕ್ಕಿಂತ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ನೀವು ಇಲ್ಲಿಯ ತನಕ ಆರೋಗ್ಯವಾಗಿಯೇ ಇದ್ದೀರಿ ಅಂತಾದರೂ ಈ ಸಂದರ್ಭದಲ್ಲಿ ಸಮಸ್ಯೆ ಕಾಣಿಸಿಕೊಳ್ಳಲಿದೆ. ವ್ಯಾಪಾರ- ವ್ಯವಹಾರ ಮಾಡುತ್ತಿರುವವರಿಗೆ ನಷ್ಟಗಳು ಕಾಣಿಸಿಕೊಳ್ಳಲಿದೆ. ಆದಾಯದಲ್ಲಿ ಭಾರೀ ಇಳಿಕೆ ಕಾಣಿಸಲಿದೆ. ನಿಮಗೆ ಬರುವ ಆದಾಯಕ್ಕಿಂತ ಖರ್ಚು ಹೆಚ್ಚಾಗಲಿದೆ. ಉದ್ಯೋಗ ಸ್ಥಳದಲ್ಲಿ ನಿಮಗೆ ಸಿಗಬೇಕಾದ ಮಾನ್ಯತೆ, ಗೌರವ, ವೇತನ ಹೆಚ್ಚಳ, ಬಡ್ತಿ ಮೊದಲಾದವು ಬೇರೆಯವರ ಪಾಲಾಗುತ್ತದೆ. ಯಾವುದೇ ಕಾರಣಕ್ಕೂ ಕೆಲಸ ಬಿಡುವುದಕ್ಕೋ ಅಥವಾ ಬದಲಾಯಿಸುವುದಕ್ಕೋ ಹೋಗಬೇಡಿ. ಹೊಸದಾಗಿ ಹಣ ಹೂಡಿಕೆ ಮಾಡಬೇಡಿ. ಗುರು ಗ್ರಹದ ಅಶುಭ ಫಲಗಳ ಪ್ರಭಾವ ಕಡಿಮೆ ಆಗುವುದಕ್ಕೆ ನೀವು ಗುರುಗಳಾಗಿ ಭಾವಿಸುವಂಥವರಿಗೆ ಗುರುವಾರದಂದು ವಸ್ತ್ರ ಸಮರ್ಪಣೆ ಮಾಡಿ.

ಹತ್ತರಲ್ಲಿ ಶನಿ ಸಂಚಾರ (ಯುಗಾದಿ ವರ್ಷ ಫಲ)

ನಿಮ್ಮ ಕರ್ಮ ಸ್ಥಾನದಲ್ಲಿ ಶನಿ ಸಂಚಾರ ಮಾಡುವುದರಿಂದ ತಂದೆ- ತಾಯಿ, ಅಜ್ಜಿ- ತಾತ, ಸೋದರಮಾವ, ಚಿಕ್ಕಪ್ಪ- ದೊಡ್ಡಪ್ಪ ಇವರ ಆರೋಗ್ಯಕ್ಕೆ ಸಮಸ್ಯೆ ಆಗಲಿದೆ. ಉದ್ಯೋಗ ಸ್ಥಳದಲ್ಲಿ ನಿಮಗೆ ವಹಿಸಿದ ಜವಾಬ್ದಾರಿಯನ್ನು ಶ್ರದ್ಧೆಯಿಂದ ಮಾಡಿ. ನಿಮ್ಮ ಕೆಲಸವನ್ನು ಬೇರೆಯವರಿಗೆ ವಹಿಸಿಕೊಡುವುದಕ್ಕೆ ಹೋಗಬೇಡಿ. ವಿದೇಶಗಳಲ್ಲಿ ಕೆಲಸ ಮಾಡುವಂಥವರು ನಿಮಗೆ ಬರಬೇಕಾದ ಹಣವನ್ನು ಆಯಾ ಸಮಯಕ್ಕೆ ಪಡೆದುಕೊಳ್ಳುವುದು ಉತ್ತಮ. ನಾನು ಹೇಳಿದಂತೆಯೇ ಆಗಬೇಕು ಎಂದು ಸಂಗಾತಿ ಜತೆಗೆ ವಾದ ಮಾಡುವುದಕ್ಕೋ ಅಥವಾ ಜಗಳಕ್ಕೋ ಹೋಗಬೇಡಿ. ನೀವು ಯಾವುದೇ ಉದ್ಯೋಗ, ವೃತ್ತಿಯಲ್ಲಿಯೇ ಇದ್ದರೂ ಉತ್ತಮ ಫಲಿತಾಂಶ ನಿರೀಕ್ಷಿಸುವುದು ಕಷ್ಟ.

ಹನ್ನೊಂದರಲ್ಲಿ ರಾಹು ಸಂಚಾರ (ಯುಗಾದಿ ವರ್ಷ ಫಲ)

ಹನ್ನೊಂದನೇ ಮನೆಯಲ್ಲಿ ರಾಹು ಸಂಚರಿಸುವುದರಿಂದ ಭೂಮಿಗೆ ಸಂಬಂಧಿಸಿದ ವ್ಯಾಜ್ಯಗಳು ನಿಮಗೆ ಈಗಾಗಲೇ ಇದೆ ಎಂದಾದರೆ ಅದನ್ನು ನಿವಾರಿಸಿಕೊಳ್ಳುವುದಕ್ಕೆ ವೇದಿಕೆ ದೊರೆಯಲಿದೆ. ಇನ್ನು ನಿಮ್ಮಲ್ಲಿ ಯಾರು ಈಗಾಗಲೇ ಹಣ ಕಟ್ಟಿಯಾಗಿದೆ, ಸೈಟು ಅಥವಾ ಮನೆ ಅಥವಾ ವಿಲ್ಲಾ ಅಥವಾ ಅಪಾರ್ಟ್ ಮೆಂಟ್ ನಮಗೆ ಹಸ್ತಾಂತರ ಆಗುವುದಷ್ಟೇ ಬಾಕಿ ಇದ್ದು, ಅದಕ್ಕಾಗಿ ಕಾಯುತ್ತಾ ಇರುವಿರೋ ಅಂಥವರಿಗೆ ನಿರೀಕ್ಷೆ ನಿಜವಾಗಲಿದೆ. ಆದರೆ ಈ ವಿಷಯದಲ್ಲಿ ನಿಮ್ಮ ಶ್ರಮ ಹೆಚ್ಚು ಬೇಕಾಗುತ್ತದೆ. ದ್ವಿಚಕ್ರ ವಾಹನಗಳನ್ನು ಖರೀದಿಸುವ ಯೋಗ ಇದೆ. ನಿಮ್ಮಲ್ಲಿ ಕೆಲವರಿಗೆ ಅಲ್ಪ ಸಮಯಕ್ಕಾದರೂ ವಿದೇಶಗಳಿಗೆ ಭೇಟಿ ನೀಡುವ ಅವಕಾಶ ದೊರೆಯಲಿದೆ. ನಿಮ್ಮ ಸಾಮರ್ಥ್ಯವನ್ನು ಸಾಬೀತು ಮಾಡುವುದಕ್ಕೆ ಅವಕಾಶಗಳು ದೊರೆಯಲಿವೆ.

ಐದರಲ್ಲಿ ಕೇತು ಸಂಚಾರ (ಯುಗಾದಿ ವರ್ಷ ಫಲ)

ಮಕ್ಕಳ ಆರೋಗ್ಯ, ಶಿಕ್ಷಣ, ಉದ್ಯೋಗ, ವೃತ್ತಿ- ವ್ಯಾಪಾರ, ವ್ಯವಹಾರಗಳು, ವಿವಾಹದ ವಿಚಾರಗಳು ಚಿಂತೆಗೆ ಕಾರಣ ಆಗುತ್ತವೆ. ಈ ಹಿಂದೆ ಯಾವಾಗಲೋ ನಿಮ್ಮಿಂದ ಆಗಿದ್ದ ತಪ್ಪುಗಳು ಈಗ ಸಮಸ್ಯೆ ನೀಡಲು ಶುರುವಾಗುತ್ತದೆ. ಯಾವುದೇ ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳುವಾಗ ಈ ಹಿಂದಿನ ನಿಮ್ಮ ಅನುಭವದ ಆಧಾರದಲ್ಲಿ ತೆಗೆದುಕೊಳ್ಳುವುದಕ್ಕೆ ಹೋದಲ್ಲಿ ಅಷ್ಟೇನೂ ಸಹಾಯ ಆಗುವುದಿಲ್ಲ. ನೀವು ಇತರರಿಗೆ ಸಹಾಯ ಮಾಡುತ್ತೇನೆ ಎಂಬ ಧೋರಣೆಯಿಂದ ಯಾವುದಾದರೂ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿರೋ ನಿಂದೆ, ಆಕ್ಷೇಪ, ಆರೋಪಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ಈ ಅವಧಿಯಲ್ಲಿ ಸಿಟ್ಟು ಜಾಸ್ತಿ ಆಗುತ್ತದೆ. ಆ ಸಿಟ್ಟಿನಿಂದಾಗಿ ಕೆಲವು ಮುಖ್ಯ ಸಂಗತಿಗಳನ್ನೇ ನೀವು ಗಮನಿಸದೆ, ಅವಮಾನದ ಪಾಲಾಗುವ ಸಾಧ್ಯತೆಗಳಿವೆ.

ಎನ್.ಕೆ. ಸ್ವಾತಿ