Ugadi Horoscope 2024: ಮಿಥುನ ರಾಶಿಯ ಕ್ರೋಧಿನಾಮ ಸಂವತ್ಸರದ ಯುಗಾದಿ ವರ್ಷ ಭವಿಷ್ಯ
Ugadi Horoscope 2024: ಮಿಥುನ ರಾಶಿಯವರಿಗೆ ಕ್ರೋಧಿನಾಮ ಸಂವತ್ಸರದ ಯುಗಾದಿ ವರ್ಷ ಭವಿಷ್ಯ. ಕ್ರೋಧಿನಾಮ ಸಂವತ್ಸರದ ವರ್ಷ ಫಲ ಹೇಗಿದೆ ಎಂಬುದನ್ನು ವಿವರಿಸುವಂಥ ಲೇಖನ ಇಲ್ಲಿದೆ. ಏಪ್ರಿಲ್ 9ನೇ ತಾರೀಕು ಸಂವತ್ಸರದ ಆರಂಭ. ಇದನ್ನು ಯುಗಾದಿ ಎನ್ನಲಾಗುತ್ತದೆ.
ಕ್ರೋಧಿನಾಮ ಸಂವತ್ಸರದ ವರ್ಷ ಫಲ ಹೇಗಿದೆ ಎಂಬುದನ್ನು ವಿವರಿಸುವಂಥ ಲೇಖನ ಇಲ್ಲಿದೆ. ಏಪ್ರಿಲ್ 9ನೇ ತಾರೀಕು ಸಂವತ್ಸರದ ಆರಂಭ. ಇದನ್ನು ಯುಗಾದಿ ಎನ್ನಲಾಗುತ್ತದೆ. ಇಲ್ಲಿಂದ ಹೆಚ್ಚು-ಕಡಿಮೆ ಒಂದು ವರ್ಷ, ಮಾರ್ಚ್ 29, 2025ರ ತನಕದ ಗೋಚಾರ ಫಲಾಫಲ ಇಲ್ಲಿದೆ. ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸುವುದಕ್ಕೆ ದೀರ್ಘಾವಧಿಯನ್ನು ತೆಗೆದುಕೊಳ್ಳುವ ಶನಿ, ಗುರು ಮತ್ತು ರಾಹು- ಕೇತುಗಳನ್ನು ಪ್ರಮುಖವಾಗಿ ಗಣನೆಗೆ ತೆಗೆದುಕೊಂಡು, ಈ ಫಲವನ್ನು ತಿಳಿಸಲಾಗುತ್ತಿದೆ.
ಬಹುತೇಕ ಈ ಸಂವತ್ಸರಾದ್ಯಂತ ಗುರು ವೃಷಭ ರಾಶಿಯಲ್ಲಿ, ಶನಿ ಕುಂಭ ರಾಶಿಯಲ್ಲಿ, ರಾಹು ಮೀನ ರಾಶಿಯಲ್ಲಿ ಹಾಗೂ ಕೇತು ಕನ್ಯಾ ರಾಶಿಯಲ್ಲಿ ಸಂಚರಿಸುತ್ತದೆ. ಅಂದ ಹಾಗೆ ಇಲ್ಲಿ ನೀಡುತ್ತಿರುವುದು ಗೋಚಾರ ಫಲ ಮಾತ್ರ. ಮನೆ ನಿರ್ಮಾಣ, ಮದುವೆ, ಉನ್ನತ ವ್ಯಾಸಂಗ, ವಿದೇಶ ಪ್ರಯಾಣ, ಆರೋಗ್ಯ ಸೇರಿದಂತೆ ಯಾವುದೇ ಅತಿ ಮುಖ್ಯ ವಿಚಾರದ ಬಗ್ಗೆ ನಿರ್ದಿಷ್ಟ ಪ್ರಶ್ನೆಗಳು ಇದ್ದಲ್ಲಿ ಜ್ಯೋತಿಷಿಗಳ ಬಳಿ ಜನ್ಮ ಜಾತಕವನ್ನು ಪರಿಶೀಲನೆ ಮಾಡಿಸಿಕೊಳ್ಳಿ. ಅವರ ಮಾರ್ಗದರ್ಶನದ ಮೇಲೆ ತೀರ್ಮಾನಗಳನ್ನು ತೆಗೆದುಕೊಳ್ಳಿ.
ಮಿಥುನ ರಾಶಿಯವರಿಗೆ ಸಂವತ್ಸರ ಫಲ ಹೇಗಿದೆ ಎಂಬ ಮಾಹಿತಿ ನೀಡಲಾಗುತ್ತಿದೆ. ಮೃಗಶಿರಾ ನಕ್ಷತ್ರ ಮೂರು, ನಾಲ್ಕನೇ ಪಾದ ಹಾಗೂ ಆರಿದ್ರಾ ನಕ್ಷತ್ರದ ನಾಲ್ಕೂ ಪಾದ ಮತ್ತು ಪುನರ್ವಸು ನಕ್ಷತ್ರದ ಒಂದು, ಎರಡು, ಮೂರನೇ ಪಾದ ಯಾರದೋ ಅವರದು ಮಿಥುನ ರಾಶಿ ಆಗುತ್ತದೆ. ಈ ರಾಶಿಯು ದ್ವಿಸ್ವಭಾವದ, ವಾಯು ತತ್ವದ್ದಾಗಿದೆ. ಈ ರಾಶಿಯ ಅಧಿಪತಿ ಬುಧ ಗ್ರಹವಾಗಿದೆ.
ಗುಣ- ಸ್ವಭಾವ
ಈ ರಾಶಿಯವರಲ್ಲಿ ಪುರುಷ- ಸ್ತ್ರೀ ಎರಡೂ ಗುಣಗಳನ್ನು ಕಾಣಬಹುದು. ಇವರು ಕೆಲ ಬಾರಿ ಎಷ್ಟು ಭಾವನಾತ್ಮಕವಾಗಿ ಆಲೋಚಿಸುತ್ತಾರೆ, ಅದೇ ರೀತಿ ಕೆಲ ಸಲ ತುಂಬ ಕ್ರೂರಿಗಳು ಅಂತಲೂ ಅನಿಸಿಬಿಡುತ್ತಾರೆ. ಸದಾ ಒಂದಿಲ್ಲೊಂದು ಯೋಚನೆ ಮಾಡುತ್ತಾ ಇರುತ್ತಾರೆ. ಅದು ಕೂಡ ಒಂದು ವಿಚಾರದಿಂದ ಮತ್ತೊಂದಕ್ಕೆ, ಅದರಿಂದ ಇನ್ನೊಂದಕ್ಕೆ ಮನಸ್ಸು ಜಿಗಿಯುತ್ತಾ ಇರುತ್ತದೆ. ಸಮಾಜದ ಮೇಲೆ ಪರಿಣಾಮ ಬೀರುವಂಥ ಒಳ್ಳೆ ಕೆಲಸವನ್ನು ಮಾಡಬೇಕು ಎಂದು ಇವರ ಮನಸ್ಸು ತುಡಿಯುತ್ತಾ ಇರುತ್ತದೆ. ಜವಾಬ್ದಾರಿ ತೆಗೆದುಕೊಳ್ಳುವುದನ್ನು, ತಾವೇ ಮುಂದೆ ನಿಂತು ಕೆಲಸ ಮಾಡುವುದನ್ನು ಬಹುವಾಗಿ ಇಷ್ಟಪಡುತ್ತಾರೆ. ಮಾಧ್ಯಮ ಕ್ಷೇತ್ರದಲ್ಲಿ, ಮಾತು ಪ್ರಧಾನವಾದ ವೃತ್ತಿಯಲ್ಲಿ, ಕಮಿಷನ್ ಆಧಾರದ ಮೇಲೆ ಖರೀದಿ- ಮಾರಾಟ ಮಾಡಿಸುವಂಥ ಕೆಲಸಗಳಲ್ಲಿ ಇವರು ಹೆಚ್ಚು ತೊಡಗಿಕೊಳ್ಳುತ್ತಾರೆ. ಈ ರಾಶಿಯ ಪೈಕಿ ಹಲವರಿಗೆ ಮಾನಸಿಕ ಉದ್ವೇಗ ಇರುತ್ತದೆ. ಅಂಥ ಸ್ಥಿತಿಯಲ್ಲಿ ನಿರ್ಧಾರಗಳನ್ನು ಮಾಡಿ, ಇತರರ ದೃಷ್ಟಿಯಲ್ಲಿ ಸಣ್ಣವರು ಎನಿಸಿಕೊಳ್ಳುತ್ತಾರೆ. ಮನಸ್ಸು ಸ್ಥಿಮಿತದಲ್ಲಿ ಇರಿಸಿಕೊಳ್ಳುವುದನ್ನು ಮತ್ತು ಗುರಿ ಮುಟ್ಟುವಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಬೇಕು.
ಹನ್ನೆರಡಲ್ಲಿ ಗುರು ಸಂಚಾರ (ಯುಗಾದಿ ವರ್ಷ ಫಲ)
ಪಾರ್ಟನರ್ ಷಿಪ್ ವ್ಯವಹಾರ ಮಾಡುತ್ತಿರುವವರ ಮಧ್ಯೆ ವೈರತ್ವ ಮೂಡಲಿದೆ. ಉದ್ಯೋಗ ನಿರ್ವಹಿಸುವ ಸ್ಥಳದಲ್ಲೂ ಅಭಿಪ್ರಾಯ ಭೇದಗಳು ಉದ್ಭವಿಸಲಿವೆ. ಇನ್ನು ನಿಮ್ಮಲ್ಲಿ ಹಲವರಿಗೆ ಪ್ರಭಾವಿಗಳ ಜತೆಗೆ ಶತ್ರುತ್ವ ಆಗಿ, ಅದನ್ನು ಬಗೆಹರಿಸಿಕೊಳ್ಳುವುದಕ್ಕೆ ಅಥವಾ ಕಾನೂನಾತ್ಮಕವಾಗಿ ನಿವಾರಿಸಿಕೊಳ್ಳುವುದಕ್ಕೆ ಸಿಕ್ಕಾಪಟ್ಟೆ ಖರ್ಚುಗಳು ಆಗಲಿವೆ ಹಾಗೂ ಮಾನಸಿಕವಾಗಿ ಹಿಂಸೆ, ಆತಂಕಗಳು ಎದುರಾಗಲಿವೆ. ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡು, ಒಂದು ವೇಳೆ ವೈದ್ಯರಲ್ಲಿ ಪರೀಕ್ಷೆ ಮಾಡಿಸಿಕೊಂಡರೂ ಸಮಸ್ಯೆಗೆ ಕಾರಣ ಏನು ಎಂಬುದನ್ನು ಪತ್ತೆ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಇತರರ ವಾಹನಗಳನ್ನು ತೆಗೆದುಕೊಂಡು ಹೋಗಬೇಡಿ. ಅಪಘಾತವಾಗಿ ಅಥವಾ ರಿಪೇರಿಗಳಾಗಿ, ಕೈಯಿಂದ ಹಣ ಕಟ್ಟಿಕೊಡುವಂಥ ಸನ್ನಿವೇಶ ಎದುರಾಗಲಿದೆ. ನಿಮ್ಮಲ್ಲಿ ಯಾರು ಉನ್ನತ ವ್ಯಾಸಂಗಕ್ಕೆ ಪ್ರಯತ್ನಿಸುತ್ತಿದ್ದೀರಿ, ಅಂಥವರಲ್ಲಿ ಕೆಲವರಿಗೆ ವಿದ್ಯಾಭ್ಯಾಸದಲ್ಲಿ ಅಡೆತಡೆಗಳು ಎದುರಾಗಲಿವೆ. ಈಗಾಗಲೇ ಮದುವೆ ನಿಶ್ಚಯ ಆಗಿರುವವರು, ನಿಶ್ಚಿತಾರ್ಥ ಆಗಿರುವವರು ಈ ಸಂಬಂಧವು ಕಳಚಿಹೋಗದಂತೆ ಎಚ್ಚರಿಕೆ ವಹಿಸಬೇಕು. ಸಾಧ್ಯವಾದಲ್ಲಿ ಗುರು ಗ್ರಹದ ಶಾಂತಿ ಮಾಡಿಸಿಕೊಳ್ಳುವುದು ಉತ್ತಮ.
ಒಂಬತ್ತರಲ್ಲಿ ಶನಿ ಸಂಚಾರ (ಯುಗಾದಿ ವರ್ಷ ಫಲ)
ಸುಲಭವಾಗಿ ಆಗಬೇಕಾದ ಕೆಲಸಗಳು ಸಹ ಸಿಕ್ಕಾಪಟ್ಟೆ ತಡವಾಗಲಿದೆ. ತಂದೆ ಅಥವಾ ತಂದೆಯ ಸಮಾನರಾದವರ ಜತೆಗೆ ಅಭಿಪ್ರಾಯ ಭೇದಗಳು ಕಾಣಿಸಿಕೊಳ್ಳಲಿದೆ. ನಿಮ್ಮಲ್ಲಿ ಕೆಲವರು ಕೋರ್ಟ್- ಕಚೇರಿ ಮೆಟ್ಟಿಲನ್ನು ಹತ್ತಲಿದ್ದೀರಿ. ಇನ್ನು ಹೊಸದಾಗಿಯೇ ಮನೆ ಕಟ್ಟಿದ್ದರೂ ಒಂದಲ್ಲಾ ಒಂದು ಸಮಸ್ಯೆಗಳು ಕಾಣಿಸಿಕೊಂಡು, ದುರಸ್ತಿ ಮಾಡಿಸಬೇಕಾಗುತ್ತದೆ. ಹೀಗೆ ಮಾಡುವುದರಿಂದ ಹೆಚ್ಚಿನ ಖರ್ಚು ಆಗಲಿದೆ. ಇತರರು ಈ ಅವಧಿಯಲ್ಲಿ ನಿಮಗೆ ಹೇಳುವ ಬುದ್ಧಿಮಾತು, ಸಲಹೆ- ಉಪದೇಶಗಳನ್ನು ಗಂಭೀರವಾಗಿ ಪರಿಗಣಿಸಿ. ನೀವು ಯಾವುದೇ ಕೆಲಸಗಳನ್ನು ಒಪ್ಪಿಕೊಳ್ಳಬೇಕಾದರೆ ಅದಕ್ಕೆ ಎಷ್ಟು ಸಮಯ ಹಿಡಿಸಬಹುದು, ಎಷ್ಟೆಲ್ಲ ಸವಾಲುಗಳು ಇವೆ ಎಂಬುದನ್ನು ಸರಿಯಾಗಿ ಲೆಕ್ಕಾಚಾರ ಮಾಡಿಕೊಳ್ಳಿ.
ಹತ್ತರಲ್ಲಿ ರಾಹು ಸಂಚಾರ (ಯುಗಾದಿ ವರ್ಷ ಫಲ)
ಈ ಅವಧಿಯಲ್ಲಿ ಇರುವ ಕೆಲಸವನ್ನು ಬಿಟ್ಟು, ಹೊಸದನ್ನು ಹುಡುಕಿಕೊಳ್ಳುವ ಅಂದುಕೊಳ್ಳಬೇಡಿ. ಈ ಅವಧಿಯಲ್ಲಿ ಸ್ನೇಹಿತರು ಅಥವಾ ಸಂಬಂಧಿಕರು ತಾವಾಗಿಯೇ ಮುಂದೆ ಬಂದು, ಬಂಡವಾಳ ಹೂಡುವುದಾಗಿಯೂ ನೀವು ವ್ಯಾಪಾರ ಮಾಡಿ, ಅದು ಚೆನ್ನಾಗಿ ಆದ ಮೇಲೆ ಹಣ ಹಿಂತಿರುಗಿಸಬಹುದು ಎಂದು ಹೇಳಲಿದ್ದಾರೆ. ಅಥವಾ ಪ್ರತಿಷ್ಠಿತ ಸಂಸ್ಥೆಗಳಲ್ಲಿ, ವಿದೇಶಗಳಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ, ಈಗಿರುವ ಕೆಲಸವನ್ನು ಬಿಡುವಂತೆ ಹೇಳಲಿದ್ದಾರೆ. ನಿಮ್ಮಿಂದ ಜಾಬ್ ಕನ್ಸಲ್ಟಂಟ್ ಗಳಿಗೆ ಹಣ ಪಾವತಿಯಾಗಿ, ಅದು ನಷ್ಟ ಆಗಲಿದೆ. ಯಾವ ಕಾರಣಕ್ಕೆ ಒಳ್ಳೆ ಕಡೆ ಉದ್ಯೋಗ ಸಿಗದೆ ಈಗಿರುವ ಉದ್ಯೋಗವನ್ನು ಬಿಡಬೇಡಿ. ಇನ್ನು ಆಪ್ತರಿಂದ ದೂರ ಆಗಲಿದ್ದೀರಿ. ನಿಮ್ಮದಲ್ಲದ ತಪ್ಪಿಗೆ ನಿಮ್ಮನ್ನೇ ಗುರಿ ಮಾಡಿಕೊಂಡು ಆರೋಪಗಳನ್ನು ಮಾಡುತ್ತಾರೆ.
ನಾಲ್ಕರಲ್ಲಿ ಕೇತು ಸಂಚಾರ (ಯುಗಾದಿ ವರ್ಷ ಫಲ)
ಮಾತಿನ ಮೇಲೆ ಹಿಡಿತ ಇಟ್ಟುಕೊಳ್ಳಿ. ಅನ್ನಿಸಿದ್ದನ್ನು ನೇರಾನೇರ ಹೇಳುತ್ತೇನೆ ಎಂಬ ಧೋರಣೆಯಿಂದ ಸಮಸ್ಯೆಗಳನ್ನು ಮಾಡಿಕೊಳ್ಳುತ್ತೀರಿ. ಇತರರ ವರ್ತನೆ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ಮಾಡುವುದಕ್ಕೆ ಹೋಗಬೇಡಿ. ಹಗುರ ಮಾತುಗಳನ್ನು ಆಡುವುದರಿಂದ ವರ್ಚಸ್ಸಿಗೆ ಧಕ್ಕೆ ಆಗಲಿದೆ. ನಿಮ್ಮ ಬಳಿ ಇರುವಂಥ ವಾಹನದ ಸರ್ವೀಸ್ ಸಮಯಕ್ಕೆ ಸರಿಯಾಗಿ ಮಾಡಿಸುವ ಕಡೆಗೆ ಗಮನ ನೀಡಿ. ನಿಮಗೆ ಮಾಹಿತಿ ಇಲ್ಲದ ವಿಷಯ- ಸಂಗತಿಗಳ ಬಗ್ಗೆ ವಿಪರೀತ ಆಸಕ್ತಿಯನ್ನು ತೋರಿಸಬೇಡಿ. ನಿಮ್ಮಲ್ಲಿ ಕೆಲವರಿಗೆ ತಾಯಿಯ ಅನಾರೋಗ್ಯದಿಂದ ಚಿಂತೆ ಹಾಗೂ ಖರ್ಚು ಹೆಚ್ಚಾಗುತ್ತದೆ. ತಪ್ಪು ನಿರ್ಧಾರಗಳಿಂದ ಬೇರೆಯವರ ಸಿಟ್ಟಿಗೂ ಕಾರಣರಾಗುತ್ತೀರಿ.
ಎನ್.ಕೆ. ಸ್ವಾತಿ