ಮೇಷ ರಾಶಿಯವರಿಗೆ ಕ್ರೋಧಿನಾಮ ಸಂವತ್ಸರದ ಯುಗಾದಿ ವರ್ಷ ಭವಿಷ್ಯ ಕ್ರೋಧಿನಾಮ ಸಂವತ್ಸರದ ವರ್ಷ ಫಲ ಹೇಗಿದೆ ಎಂಬುದನ್ನು ವಿವರಿಸುವಂಥ ಲೇಖನ ಇಲ್ಲಿದೆ. ಏಪ್ರಿಲ್ 9ನೇ ತಾರೀಕು ಸಂವತ್ಸರದ ಆರಂಭ. ಇದನ್ನು ಯುಗಾದಿ ಎನ್ನಲಾಗುತ್ತದೆ. ಇಲ್ಲಿಂದ ಹೆಚ್ಚು-ಕಡಿಮೆ ಒಂದು ವರ್ಷ, ಮಾರ್ಚ್ 29, 2025ರ ತನಕದ ಗೋಚಾರ ಫಲಾಫಲ ಇಲ್ಲಿದೆ. ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸುವುದಕ್ಕೆ ದೀರ್ಘಾವಧಿಯನ್ನು ತೆಗೆದುಕೊಳ್ಳುವ ಶನಿ, ಗುರು ಮತ್ತು ರಾಹು- ಕೇತುಗಳನ್ನು ಪ್ರಮುಖವಾಗಿ ಗಣನೆಗೆ ತೆಗೆದುಕೊಂಡು, ಈ ಫಲವನ್ನು ತಿಳಿಸಲಾಗುತ್ತಿದೆ.
ಬಹುತೇಕ ಈ ಸಂವತ್ಸರಾದ್ಯಂತ ಗುರು ವೃಷಭ ರಾಶಿಯಲ್ಲಿ, ಶನಿ ಕುಂಭ ರಾಶಿಯಲ್ಲಿ, ರಾಹು ಮೀನ ರಾಶಿಯಲ್ಲಿ ಹಾಗೂ ಕೇತು ಕನ್ಯಾ ರಾಶಿಯಲ್ಲಿ ಸಂಚರಿಸುತ್ತದೆ. ಅಂದ ಹಾಗೆ ಇಲ್ಲಿ ನೀಡುತ್ತಿರುವುದು ಗೋಚಾರ ಫಲ ಮಾತ್ರ. ಮನೆ ನಿರ್ಮಾಣ, ಮದುವೆ, ಉನ್ನತ ವ್ಯಾಸಂಗ, ವಿದೇಶ ಪ್ರಯಾಣ, ಆರೋಗ್ಯ ಸೇರಿದಂತೆ ಯಾವುದೇ ಅತಿ ಮುಖ್ಯ ವಿಚಾರದ ಬಗ್ಗೆ ನಿರ್ದಿಷ್ಟ ಪ್ರಶ್ನೆಗಳು ಇದ್ದಲ್ಲಿ ಜ್ಯೋತಿಷಿಗಳ ಬಳಿ ಜನ್ಮ ಜಾತಕವನ್ನು ಪರಿಶೀಲನೆ ಮಾಡಿಸಿಕೊಳ್ಳಿ. ಅವರ ಮಾರ್ಗದರ್ಶನದ ಮೇಲೆ ತೀರ್ಮಾನಗಳನ್ನು ತೆಗೆದುಕೊಳ್ಳಿ.
ಮೊದಲಿಗೆ ಮೇಷ ರಾಶಿಯವರಿಗೆ ಹೇಗಿದೆ ಎಂಬ ಮಾಹಿತಿ ನೀಡಲಾಗುತ್ತಿದೆ. ಅಶ್ವಿನಿ ನಕ್ಷತ್ರ ಒಂದು, ಎರಡು, ಮೂರು, ನಾಲ್ಕು ಹಾಗೂ ಭರಣಿ ನಕ್ಷತ್ರದ ನಾಲ್ಕೂ ಪಾದ ಮತ್ತು ಕೃತ್ತಿಕಾ ನಕ್ಷತ್ರದ ಒಂದನೇ ಪಾದ ಯಾರದೋ ಅವರದು ಮೇಷ ರಾಶಿ ಆಗುತ್ತದೆ. ಈ ರಾಶಿಯು ಚರ ಸ್ವಭಾವದ, ಅಗ್ನಿ ತತ್ವದ್ದಾಗಿದೆ. ಈ ರಾಶಿಯ ಅಧಿಪತಿ ಕುಜ ಗ್ರಹವಾಗಿದೆ.
ಮೇಷ ರಾಶಿಯವರು ಪಟ್ಟು ಹಿಡಿದರೆ ಯಾವುದೇ ಕೆಲಸದಿಂದ ಹಿಂದಕ್ಕೆ ಸರಿಯುವವರಲ್ಲ. ಲಾಭವೋ- ನಷ್ಟವೋ ಅದನ್ನು ಮಾಡಿಯೇ ಮಾಡುತ್ತಾರೆ. ಇವರಿಗೆ ಸಮಾಜದಲ್ಲಿ ಪ್ರತಿಷ್ಠೆ, ವರ್ಚಸ್ಸು ಬಹಳ ಮುಖ್ಯವಾಗಿರುತ್ತದೆ. ಪ್ರೀತಿ- ವಿಶ್ವಾಸದಲ್ಲಿ ತುಂಬ ಪೊಸೆಸಿವ್ ಆದಂಥವರು. ಶತ್ರುತ್ವ ಅಂತ ಬಂದರೆ ರಾಜೀ ಮಾಡಿಕೊಳ್ಳದ ವ್ಯಕ್ತಿತ್ವದವರು. ಇದೇ ಕಾರಣದಿಂದ ಕೆಲವು ಕಷ್ಟ-ನಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಇವರು ಸರಿಯಾದ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು. ಅಪಾಯ ಮೈ ಮೇಲೆ ಎಳೆದುಕೊಳ್ಳುವ ಸ್ವಭಾವದ ಇವರು, ಜೀವನದ ಒಂದಲ್ಲ ಒಂದು ಹಂತದಲ್ಲಿ ಕುತ್ತಿಗೆ ತನಕ ಕಮಿಟ್ ಮೆಂಟ್ ಗಳನ್ನು ಮಾಡಿಕೊಂಡು, ವಿಲವಿಲ ಒದ್ದಾಡುತ್ತಾರೆ. ನನಗೆ ಅನಿಸಿದ್ದನ್ನು ನೇರಾನೇರ ಹೇಳಿಬಿಡ್ತೀನಿ ಎನ್ನುವ ಇವರಿಗೆ ಎದುರಿಗೆ ಇರುವಂಥ ವ್ಯಕ್ತಿ ಇವರ ಬಗ್ಗೆಯೂ ಅದೇ ರೀತಿ ನೇರಾನೇರ ಮಾತನಾಡಿದರೆ ಸಹಿಸುವುದಕ್ಕೆ ಸಾಧ್ಯವೇ ಆಗುವುದಿಲ್ಲ. ಹೊಂದಾಣಿಕೆ ಮಾಡಿಕೊಂಡು ಮುನ್ನಡೆಯುವುದನ್ನು ರೂಢಿ ಮಾಡಿಕೊಳ್ಳಬೇಕು.
ಎರಡನೇ ಮನೆ ಎಂಬುದು ಕುಟುಂಬ, ಮಾತು, ಹಣ ಇವುಗಳ ಬಗ್ಗೆ ಸೂಚಿಸುವಂಥದ್ದು. ಇನ್ನು ಎರಡನೇ ಮನೆಯಲ್ಲಿ ಗುರು ಗ್ರಹ ಸಂಚಾರ ಮಾಡುತ್ತದೆ ಎಂದಾದರೆ ಈ ವಿಚಾರಗಳಲ್ಲಿ ಉತ್ತಮವಾದ ಬೆಳವಣಿಗೆ ನಿರೀಕ್ಷೆ ಮಾಡಬಹುದು. ಕೌಟುಂಬಿಕವಾಗಿ ಬಹಳ ಒಳ್ಳೆಯ ಸಮಯವಿದು. ಆ ಕಾರಣಕ್ಕೆ ಮನೆಯಲ್ಲಿ ಸಂತಸದ ವಾತಾವರಣ ಇರುತ್ತದೆ. ಗಂಡ- ಹೆಂಡತಿ ಹಾಗೂ ಪ್ರೇಮಿಗಳಿದ್ದಲ್ಲಿ ಅವರ ಮಧ್ಯೆ ಪ್ರೀತಿ- ಪ್ರೇಮ ಸಂಬಂಧಗಳು ಗಟ್ಟಿಯಾಗಲಿದೆ. ಸಮಾಜದಲ್ಲಿ ನಿಮಗೆ ಗೌರವಾದರ ದೊರೆಯಲಿದ್ದು, ಹೆಚ್ಚೆಚ್ಚು ಪ್ರಭಾವಿಗಳಾಗಲಿದ್ದೀರಿ. ಒಂದು ವೇಳೆ ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಕೋರ್ಟ್- ಕಚೇರಿಗೆ ಹೋಗುವ ಮಟ್ಟದ ವ್ಯಾಜ್ಯಗಳು ಇದ್ದಲ್ಲಿ ಅದು ಬಗೆಹರಿಯಲಿದೆ. ಒಂದು ವೇಳೆ ನಿಮ್ಮದೇ ಆಸ್ತಿಯನ್ನು ಏನಾದರೂ ಮಾರಾಟಕ್ಕೆ ಇಟ್ಟಿದ್ದರೂ ಅದಕ್ಕೆ ನಿರೀಕ್ಷೆಗೂ ಮೀರಿ ಬೆಲೆ ದೊರೆಯಲಿದೆ. ಭೂಮಿ- ಕಾಣಿ ಖರೀದಿ ಮಾಡಬೇಕು ಅಂದುಕೊಳ್ಳುತ್ತಿದ್ದರೂ ಮನೆ ಹುಡುಕುತ್ತಿದ್ದರೂ ಅದು ಕೂಡ ದೊರೆಯಲಿದೆ.
ನಿಮಗೆ ಲಾಭ ಸ್ಥಾನಾಧಿಪತಿ ಆದ ಶನಿಯು ಅದೇ ಹನ್ನೊಂದನೇ ಮನೆಯಲ್ಲಿ ಸಂಚರಿಸಲಿದೆ. ಆದ್ದರಿಂದ ಲಾಭವನ್ನು ಹೆಚ್ಚು ನಿರೀಕ್ಷೆ ಮಾಡಬಹುದು. ವ್ಯಾಪಾರ- ವ್ಯವಹಾರಗಳಲ್ಲಿ ಆದಾಯ ಹಾಗೂ ಆದಾಯ ಮೂಲ ಎರಡೂ ಜಾಸ್ತಿ ಆಗಲಿದೆ. ನಿಮ್ಮ ಕೈಗೆ ಹಣ ಸೇರುವುದು ಸ್ವಲ್ಪ ತಡ ಆಗಬಹುದು, ಅದೇ ರೀತಿ ಒತ್ತಡಕ್ಕೂ ಕಾರಣ ಆಗಲಿದೆ. ಆದರೆ ಆದಾಯದ ಹರಿವನ್ನು ನಿರೀಕ್ಷಿಸಬಹುದು. ರಾಜಕೀಯವಾಗಿ ಮಹತ್ವಾಕಾಂಕ್ಷಿ ಆಗಲಿದ್ದೀರಿ. ಅಧಿಕಾರ ಮತ್ತು ಪ್ರಭಾವವನ್ನು ಜಾಸ್ತಿ ಮಾಡಿಕೊಳ್ಳುವುದಕ್ಕೆ ಹೆಚ್ಚಿನ ಪ್ರಯತ್ನವನ್ನು ಪಡಲಿದ್ದೀರಿ. ಸೆಕೆಂಡ್ ಹ್ಯಾಂಡ್ ವಾಹನಗಳನ್ನು ಖರೀದಿ ಮಾಡುವ ಯೋಗ ಇದೆ. ಸರ್ಕಾರಿ ಕೆಲಸಗಳನ್ನು ಟೆಂಡರ್ ಪಡೆದು, ಕೆಲಸಗಳನ್ನು ಮಾಡುವಂಥವರಿಗೆ ದೊಡ್ಡ ದೊಡ್ಡ ಪ್ರಾಜೆಕ್ಟ್ ಗಳು ದೊರೆಯಬಹುದು.
ವ್ಯಯ ಸ್ಥಾನದಲ್ಲಿ ರಾಹು ಸಂಚಾರ ಆಗಲಿದ್ದು, ಸಟ್ಟಾ ವ್ಯವಹಾರ, ಜೂಜು ಇಂಥದ್ದರಲ್ಲಿ ಹಣ ಹಾಕಬೇಡಿ. ನಿಮ್ಮ ಸುತ್ತಮುತ್ತಲ ಪರಿಸರದ ಕಾರಣಕ್ಕೋ ಅಥವಾ ನಿಮಗೆ ಇದು ವ್ಯಸನ ಆಗದಂತೆ ನೋಡಿಕೊಳ್ಳಿ. ಮೂತ್ರ ಸೋಂಕು, ಕಿಡ್ನಿ ಸ್ಟೋನ್, ಕಣ್ಣಿನ ಸಮಸ್ಯೆ ಇಂಥವುಗಳಿಗೆ ಹೆಚ್ಚಿನ ಖರ್ಚು ಮಾಡಬೇಕಾಗುತ್ತದೆ. ಚರಾಸ್ತಿಯೋ ಅಥವಾ ಸ್ಥಿರಾಸ್ತಿಯೋ ಯಾವುದೇ ಆದರೂ ಕಾನೂನು ವಿಚಾರಗಳು, ಕಾಗದ- ಪತ್ರಗಳು, ದಾಖಲಾತಿಗಳನ್ನು ಸರಿಯಾಗಿ ಪರಿಶೀಲನೆ ಮಾಡುವುದು ಮುಖ್ಯವಾಗುತ್ತದೆ. ಇಂಥ ವ್ಯವಹಾರ ಮಾಡುತ್ತಿದ್ದೀರಿ ಅಂತಾದಲ್ಲಿ ಪರಿಣತ ವಕೀಲರ ಮಾರ್ಗದರ್ಶನ ಪಡೆದುಕೊಳ್ಳಿ.
ನಿಮಗೆ ಇಷ್ಟು ಸಮಯ ಯಾರಿಂದ ತೊಂದರೆ ಆಗುತ್ತಿತ್ತು ಹಾಗೂ ನಿಮ್ಮ ವಿರುದ್ಧ ಯಾರು ಕೆಲಸ ಮಾಡುತ್ತಿದ್ದರು ಎಂಬುದು ಗೊತ್ತಾಗಿರಲಿಲ್ಲ ಎಂದಾದರೆ ಈ ಅವಧಿಯಲ್ಲಿ ತಿಳಿದುಬರಲಿದೆ. ಆಧ್ಯಾತ್ಮಿಕವಾಗಿ ನಿಮ್ಮಲ್ಲಿ ಸಕಾರಾತ್ಮಕ ಬದಲಾವಣೆ ಹಾಗೂ ಬೆಳವಣಿಗೆ ಆಗಲಿದೆ. ನಿಮ್ಮ ಪಾಲಿಗೆ ಬರಬೇಕಾದದ್ದನ್ನು ಪಟ್ಟು ಹಿಡಿದು, ವಸೂಲಿ ಮಾಡುವಂಥ ಮನಸ್ತತ್ವ ಇರಲಿದೆ. ಧಾರ್ಮಿಕ ವೃತ್ತಿ, ಪ್ರವೃತ್ತಿಯಲ್ಲಿ ಇರುವಂಥವರಿಗೆ ಆದಾಯದ ಮೂಲ- ಹರಿವು ಜಾಸ್ತಿ ಆಗಲಿದೆ. ಇತರ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಹಿರಿಯರ ಮಾರ್ಗದರ್ಶನ, ನೆರವು ಸಿಗಲಿದೆ.
ಎನ್.ಕೆ. ಸ್ವಾತಿ