ಜೂನ್ 23 ರಿಂದ 29 ರವರೆಗೆ ನಾಲ್ಕನೇ ವಾರವಾಗಿದ್ದು, ಬುಧನ ಸಂಚಾರದಲ್ಲಿ ವ್ಯತ್ಯಾಸ ಆಗಲಿದೆ. ಸ್ವಕ್ಷೇತ್ರದಲ್ಲಿ ಇರುವ ಬುಧನು ಶತ್ರುವಿನ ಮನೆಯನ್ನು ಪ್ರವೇಶ ಮಾಡಲಿದ್ದು ಮಿಥುನ ಹಾಗೂ ಕನ್ಯಾ ರಾಶಿಯವರಿಗೆ ಸ್ವಲ್ಪ ಕ್ಲೇಷಗಳು ಬರಲಿವೆ. ಮನಸ್ಸು ಗಟ್ಟಿಯಿದ್ದರೆ ಎಂತಹ ವಿಘ್ನವನ್ನೂ ದಾಟುವ ಸಾಮರ್ಥ್ಯ ಪ್ರಾಪ್ತವಾಗಲಿದೆ. ಎಲ್ಲರಿಗೂ ಶುಭವಾಗಲಿ.
ಮೇಷ ರಾಶಿ : ಜೂನ್ ತಿಂಗಳ ನಾಲ್ಕನೇ ವಾರದಲ್ಲಿ ರಾಶಿ ಚಕ್ರದ ಮೊದಲ ರಾಶಿಯವರಿಗೆ ಶುಭ ಫಲ. ಸ್ವರಾಶಿಯ ಅಧಿಪತಿ ಹಾಗೂ ಅಷ್ಟಮ ಸ್ಥಾನಾಧಿಪತಿಯೂ ಆದ ಅಂಗಾರಕನು ನಿಮ್ಮ ರಾಶಿಯಲ್ಲಿ ಇರುವನು. ಸಾಹಸ ಕಾರ್ಯಕ್ಕೆ ಅವನಿಂದ ಉತ್ತೇಜನ ಸಿಗಲಿದೆ. ದ್ವಿತೀಯದಲ್ಲಿ ಗುರು ನಿಮಗೆ ಗೌರವವನ್ನು ಕೊಡಿಸುವನು. ಚತುರ್ಥದಲ್ಲಿ ಬುಧನು ಇರುವ ಕಾರಣ ಬಂಧುಗಳ ಆಗಮನ ಅಧಿಕವಾಗಲಿದೆ. ದ್ವಾದಶದಲ್ಲಿ ರಾಹುವು ನಿಮಗೆ ಒತ್ತಡವನ್ನು ತಂದು ಕಾರ್ಯ ಮಾಡಿಸುವನು. ನಾಗದೇವರ ಬಿಂಬವನ್ನು ದಾನ ಮಾಡಿ.
ವೃಷಭ ರಾಶಿ : ರಾಶಿ ಚಕ್ರದ ಎರಡನೇ ರಾಶಿಯವರಿಗೆ ಈ ವಾರ ಮಿಶ್ರಫಲ. ಸ್ವ ರಾಶಿಯ ಅಧಿಪತಿಯೂ ಷಷ್ಠ ಸ್ಥಾನಾಧಿಪತಿಯೂ ಆದ ಶುಕ್ರನು ದ್ವಿತೀಯದಲ್ಲಿ ಇರುವನು. ಮಾತಿನಿಂದ ಸ್ತ್ರೀಶತ್ರುತ್ವ ಉಂಟಾಗುವುದು. ವಿದ್ಯಾಭ್ಯಾಸದಲ್ಲಿ ಆಸಕ್ತಿ ಇದ್ದರೂ ಓದಲಾಗದ ಸ್ಥಿತಿ. ಹಣದ ಹೂಡಿಕೆಯಲ್ಲಿ ಯಶಸ್ಸನ್ನು ಕಾಣಿಸುವುದು. ಉಪಕರಗಳಿಂದ ಗಾಯವಾಗುವ ಸಾಧ್ಯತೆ ಹೆಚ್ಚು. ಸ್ವರಾಶಿಯಲ್ಲಿ ಗುರುವಿದ್ದ ಕಾರಣ ಮಾನಸಿಕ ಚಿಂತೆ ಕಡಿಮೆಯಾಗಲಿದೆ. ಮಹಾಲಕ್ಷ್ಮಿಯ ಸ್ತೋತ್ರವನ್ನು ಮಾಡಿ.
ಮಿಥುನ ರಾಶಿ : ರಾಶಿ ಚಕ್ರದ ಮೂರನೇ ರಾಶಿಯವರಿಗೆ ಮಿಶ್ರ ಫಲ. ಸ್ವರಾಶಿಯ ಅಧಿಪತಿಯೂ ಚತುರ್ಥ ಸ್ಥಾನದ ಅಧಿಪತಿಯೂ ಆದ ಬುಧನು ದ್ವಿತೀಯದಲ್ಲಿ ಇರುವನು. ಇದು ಬುಧನಿಗೆ ಶತ್ರುವಿನ ಮನೆಯಾಗಿದ್ದು ತಾಯಿಯ ವಿಚಾರದಲ್ಲಿ ಮನಸ್ತಾಪ ಕಾಣಿಸುವುದು. ವಾಗ್ವಾದ ನಡೆಯಲಿದೆ. ಗುರುಬಲವೂ ಇಲ್ಲದ ಕಾರಣ ಯಾವ ಪ್ರಯತ್ನಗಳೂ ಫಲಿಸಲಾರವು. ತಂತ್ರಜ್ಞರಿಗೆ ಲಾಭವಾಗುವ ದಿನ. ಸೂರ್ಯನು ಸ್ವರಾಶಿಯಲ್ಲಿ ಇರುವ ಕಾರಣ ಜ್ವರಾದಿ ರೋಗಗಳು ಕಾಣಿಸಿಕೊಳ್ಳುವುದು. ಎಚ್ಚರಿಕೆಯಿಂದ ಇರಿ. ಧನ್ವಂತರಿಯ ಉಪಾಸನೆ ಮಾಡಿ.
ಕಟಕ ರಾಶಿ : ರಾಶಿ ಚಕ್ರದ ನಾಲ್ಕನೇ ರಾಶಿಯವರಿಗೆ ಈ ವಾರ ಶುಭ. ರಾಶಿಯ ಅಧಿಪತಿಯಾದ ಚಂದ್ರನು ಷಷ್ಠ, ಸಪ್ತಮ, ಅಷ್ಟಮ, ನವಮದಲ್ಲಿ ಪ್ರವೇಶಿಸಲಿದ್ದು ಸ್ತ್ರೀಯರಿಂದ ಅನುಕೂಲವಾಗಲಿದೆ. ಏಕಾದಶದಲ್ಲಿ ಗುರುವು ಇರುವುದು ನಿಮಗೆ ಎಲ್ಲ ಕಾರ್ಯಗಳು ಸರಿಯಾಗಿ ಆಗಲಿದೆ. ರಾಹುವು ನವಮದಲ್ಲಿ ಇರುವುದು ಹಿರಿಯ ಮೇಲೆ ಗೌರವ ಕಡಿಮೆ ಆಗಲಿದೆ. ತಂದೆಯಿಂದ ನೋವಾಗಲಿದೆ. ವೃತ್ತಿಯಲ್ಲಿ ವಿನಾಕಾರಣ ಸಿಟ್ಟು ಮಾಡಿಕೊಳ್ಳುವಿರಿ. ಭೋಗವಸ್ತುವಿಂದ ನಷ್ಟವಾಗಲಿದೆ. ದೇಹಪೀಡೆಯಿರಲಿದೆ. ದರ್ಗಾದೇವಿಯ ಸ್ತುತಿ ಮಾಡಿ.
ಸಿಂಹ ರಾಶಿ : ಜೂನ್ ತಿಂಗಳ ನಾಲ್ಕನೇ ವಾರದಲ್ಲಿ ನಿಮಗೆ ಮಿಶ್ರ ಫಲವಿರಲಿದೆ. ರಾಶಿಯ ಅಧಿಪತಿಯಾದ ಸೂರ್ಯನು ಬುಧನ ಮನೆಯಲ್ಲಿ ಇರುವನು. ಏಕಾದಶದಲ್ಲಿ ಸೂರ್ಯನಿರುವ ಕಾರಣ ಸರ್ಕಾರದ ಕಾರ್ಯಗಳು ಸಲೀಸಾಗಿ ಆಗುವುದು. ತಂದೆಯಿಂದ ಆಸ್ತಿಯೂ ಸಿಗಲಿದೆ. ಕಲಾವಿದರು ಆದಾಯವನ್ನು ಪಡೆಯುವರು. ದಶಮದಲ್ಲಿ ಗುರುವು ವೃತ್ತಿಯಲ್ಲಿ ಗೌರವವಿರುವುದು. ಸಂಗಾತಿಯ ನಡುವೆ ಮನಸ್ತಾಪವಾಗಲಿದೆ. ನವಮದಲ್ಲಿ ಕುಜ ಸ್ವಕ್ಷೇತ್ರದಲ್ಲಿ ಇದ್ದ ಕಾರಣ ಹಿರಿಯರ ಮೇಲೆ ದ್ವೇಷ ಸಾಧಿಸುವಿರಿ. ಬಂಧುಗಳ ಬಗ್ಗೆ ಪ್ರೀತಿ ಕಡಿಮೆ ಆಗುವುದು. ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಿ.
ಕನ್ಯಾ ರಾಶಿ : ಜೂನ್ ತಿಂಗಳ ನಾಲ್ಕನೇ ವಾರದಲ್ಲಿ ನಿಮಗೆ ಶುಭ ಫಲವಿದೆ. ರಾಶಿಯ ಅಧಿಪತಿಯೂ ದಶಮಾಧಿಪತಿಯೂ ಆದ ಬುಧನು ಏಕಾದಶದಲ್ಲಿ ಇರುವುದು ನಿಮ್ಮ ವೃತ್ತಿ ಜೀವನಕ್ಕೆ ಹೊಸ ಬದಲಾವಣೆಯನ್ನು ಕೊಡಲಿದೆ. ಉನ್ನತ ಸ್ಥಾನಕ್ಕೆ ಏರುವ ಸಾಧ್ಯತೆಯು ತೆರೆದುಕೊಳ್ಳುವುದು. ಗುರುವಿನ ಬಲವು ಸಹಜವಾಗಿದೆ. ಶನಿಯೂ ಸ್ವಕ್ಷೇತ್ರದಲ್ಲಿ ಇದ್ದು ದುಃಖ ಪರಿಹಾರ ಮಾಡುವನು. ವಿವಾಹಕ್ಕೆ ಅಡ್ಡಿಗಳು ಎದುರಾಗುವುದು. ದಶಮದಲ್ಲಿ ಸೂರ್ಯ ಹಾಗೂ ಶುಕ್ರರು ಇದ್ದು ವೃತ್ತಿಯಲ್ಲಿ ಚಾಣಾಕ್ಷ ತನವನ್ನು ತೋರಿಸುವಿರಿ. ಗಣಪತಿಗೆ ಪ್ರಿಯವಾದ ದೂರ್ವಾಪತ್ರದಿಂದ ಅರ್ಚಿಸಿ.
ತುಲಾ ರಾಶಿ : ಈ ತಿಂಗಳ ನಾಲ್ಕನೇ ವಾರದಲ್ಲಿ ಗ್ರಹಗಳು ಸ್ವಲ್ಪ ಪರಿವರ್ತನೆ ಆಗಲಿವೆ. ಸ್ವರಾಶಿಯ ಅಧಿಪತಿಯೂ ಅಷ್ಟಮಾಧಿಪತಿಯೂ ಆದ ಶುಕ್ರನು ನವಮದಲ್ಲಿ ಇದ್ದಾನೆ. ಪುಣ್ಯ ಫಲಿಸಲಿ ನಿಮ್ಮ ಶ್ರಮವೂ ಅಗತ್ಯ. ಸ್ತ್ರೀಯರ ಸಹವಾಸ ಹೆಚ್ಚಾಗುವುದು. ಕಲಾವಿದರು ಯಶಸ್ಸನ್ನು ಪಡೆಯುಬರು. ಬುಧನು ದಶಮದಲ್ಲಿ ಇರುವ ಕಾರಣ ಕಾರ್ಯಕ್ಷೇತ್ರದಲ್ಲಿ ಯಾವ ತೊಂದರೆಯೂ ಎದುರಾಗದು. ಷಷ್ಠದಲ್ಲಿ ಇರುವ ರಾಹುವು ನಿಮ್ಮ ಬಾಧೆಗಳನ್ನು ಎದುರಿಸುವ ಶಕ್ತಿಯನ್ನು ಕೊಡುವನು. ಸರ್ಕಾರದಿಂದ ಆಗಬೇಕಾದ ಕೆಲಸವನ್ನು ಮುಂದಿನ ವಾರ ಮುಗಿಸಿಕೊಳ್ಳಿ. ಪತ್ನಿಯ ವಿಚಾರದಲ್ಲಿ ಒಮ್ಮನಸ್ಸು ಇರದು.
ವೃಶ್ಚಿಕ ರಾಶಿ : ಜೂನ್ ತಿಂಗಳ ನಾಲ್ಕನೇ ವಾರದಲ್ಲಿ ನಿಮಗೆ ಶುಭ ಫಲ. ಸ್ವರಾಶಿಯ ಅಧಿಪತಿಯೂ ಷಷ್ಠ ಸ್ಥಾನದ ಅಧಿಪತಿಯೂ ಆದ ಕುಜನು ಷಷ್ಠದಲ್ಲಿ ಇರುವುದು ನಿಮಗೆ ಹೆಚ್ಚು ಪೂರಕ. ಶತ್ರುವಿನ ಬಲವನ್ನು ತಗ್ಗಿಸುವ ಸಾಮರ್ಥ್ಯ ಬರಲಿದೆ. ವಿವಾಹಕ್ಕೆ ಬೇಕಾದ ತಯಾರಿ ಮಾಡಿಕೊಳ್ಳಬಹುದು. ಅಷ್ಟಮದಲ್ಲಿ ಸೂರ್ಯನು ಮಾಮಸಿಕ ಒತ್ತಡವನ್ನು ಹೆಚ್ಚಿಸುವನು. ಬುಧನು ನವಮದಲ್ಲಿ ಇದ್ದು ಸಿಗಬೇಕಾದ ಮನ್ನಣೆಯನ್ನು ಕೊಡಿಸುವನು. ಪಂಚಮದ ರಾಹುವಿನಿಂದ ನಿಮ್ಮ ಮಕ್ಕಳ ಬಗ್ಗೆ ಅನಾದರ ಕಾಣಿಸುವುದು. ಸುಬ್ರಹ್ಮಣ್ಯನ ಆರಾಧನೆಯನ್ನು ಮಾಡಿ.
ಧನಸ್ಸು ರಾಶಿ : ರಾಶಿ ಚಕ್ರದ ಹತ್ತನೇ ರಾಶಿಯವರಿಗೆ ಈ ತಿಂಗಳ ನಾಲ್ಕನೇ ವಾರವು ಮಿಶ್ರಫಲವು ಸಿಗಲಿದೆ. ಸ್ವರಾಶಿಯ ಅಧಿಪತಿಯೂ ಚತುರ್ಥದ ಅಧಿಪತಿಯೂ ಆದ ಗುರುವು ಷಷ್ಠದಲ್ಲಿ ಇರುವುದು ನಿಮ್ಮ ಎಲ್ಲ ಕಾರ್ಯಗಳಿಗೂ ವಿಘ್ನವಾಗಲಿದೆ. ಕುಟುಂಬದಲ್ಲಿ ನೀವು ನಗಣ್ಯರಾಗಬಹುದು. ಪಂಚಮದಲ್ಲಿ ಕುಜನು ಸ್ವಕ್ಷೇತ್ರದಲ್ಲಿ ಇದ್ದರೂ ಇದರಿಂದ ಆಗಬೇಕಾದ ಕಾರ್ಯಗಳು ಆಗದು. ಅಪನಂಬಿಕೆ ಹೆಚ್ಚಾಗುವುದು. ದಾಂಪತ್ಯದಲ್ಲಿ ಉತ್ಸಾಹವು ಕಾಣಿಸುವುದು. ಬಂಧುಗಳ ದ್ವೇಷವನ್ನು ಕಟ್ಟಿಕೊಳ್ಳಬೇಕಾದೀತು. ಗುರುಸಮಾಧಿಗೆ ಗುರುವಾರದಂದು ಪ್ರದಕ್ಷಿಣೆ ಮಾಡಿ ನಮಸ್ಕರಿಸಿ ಬನ್ನಿ.
ಮಕರ ರಾಶಿ : ಈ ರಾಶಿಯವರಿಗೆ ಜೂನ್ ತಿಂಗಳ ನಾಲ್ಕನೇ ವಾರ ಸುಖಕರವಾದ ವಾರವಾಗಲಿದೆ. ರಾಶಿಯ ಅಧಿಪತಿಯಾದ ಶನಿಯು ದ್ವಿತೀಯದಲ್ಲಿ ಇದ್ದಾನೆ. ಆಕಾಂಕ್ಷೆಗಳನ್ನು ಪೂರ್ಣಮಾಡಿಕೊಳ್ಳುವುದು ಕಷ್ಟ. ಎಲ್ಲದಕ್ಕೂ ಒತ್ತಡ ಹೇರಬೇಕಾಗುವುದು. ತೃತೀಯದ ರಾಹುವು ನಿಮ್ಮನ್ನು ಕಟ್ಟಿಹಾಕುವನು. ಕೌಟುಂಬಿಕ ಕಲಹದಿಂದ ಬೇಸರವಗಲಿದೆ. ಹೊಸ ಅವಕಾಶಗಳು ನಿಮ್ಮನ್ನು ಹುಡುಕಿ ಬರಲಿವೆ. ಅದನ್ನು ಜಾಣತನದಿಂದ ನಿಭಾಯಿಸಬೇಕು. ಬಂಧುಗಳ ಸಹಕಾರದಿಂದ ಅವಿವಾಹಿತರಿಗೆ ಕಂಕಣಭಾಗ್ಯವು ಕೂಡಿ ಬರುತ್ತದೆ. ವಾಹನದ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಅವಶ್ಯಕ. ಪ್ರಾತಃಕಾಲದಲ್ಲಿ ಹನುಮಾನ್ ಚಾಲೀಸಾ ಪಠಿಸಿ.
ಕುಂಭ ರಾಶಿ : ಜೂನ್ ತಿಂಗಳ ನಾಲ್ಕನೇ ವಾರದಂದು ರಾಶಿಯ ಅಧಿಪತಿಯೂ ದ್ವಾದಶ ಸ್ಥಾನದ ಅಧಿಪತಿಯೂ ಆದ ಶನಿಯು ಸ್ವಕ್ಷೇತ್ರದಲ್ಲಿ ಇರುವನು. ಶನಿಯು ನಿಮಗೆ ಎಂತಹ ಸಂಕಷ್ಟವನ್ನು ತಂದರೂ ಖುಷಿ ಪಡಿ. ಅವನೇ ನಿಮಗೆ ಸುಖವನ್ನೂ ಕೊಡುವವನಾಗಿದ್ದಾನೆ. ಆದ್ದರಿಂದ ನಿಮ್ಮ ನಿರೀಕ್ಷೆಯನ್ನು ಹೆಚ್ಚು ಮಾಡಿಕೊಳ್ಳಿ. ಷಷ್ಠದಲ್ಲಿ ಬುಧನ ಸಂಚಾರವಿರಲಿ. ರೋಗಗಳಿಂದ ಪೀಡಿತರಾಗುವಿರಿ. ನೋವುಗಳು ಕಾಣಿಸಿಲೊಳ್ಳುವುವು. ಪಂಚಮದಲ್ಲಿ ಸೂರ್ಯ ಹಾಗೂ ಶುಕ್ರರು ನಿಮ್ಮ ಉನ್ನತ ವಿದ್ಯಾಭ್ಯಾಸಕ್ಕೆ ಪೂರಕವಾಗುವರು. ಶಿವನಿಗೆ ಬಿಲ್ವಪತ್ರಯಿಂದ ಅರ್ಚನೆ ಮಾಡಿ.
ಮೀನ ರಾಶಿ : ತಿಂಗಳ ನಾಲ್ಕನೇ ವಾರದಲ್ಲಿ ಗ್ರಹಗತಿಯಲ್ಲಿ ಸಣ್ಣ ಬದಲಾವಣೆ ಆಗಲಿದೆ. ರಾಶಿಯ ಅಧಿಪತಿಯೂ ದಶಮಾಧಿಪತಿಯೂ ಆದ ಗುರುವು ತೃತೀಯದಲ್ಲಿ ನಿಮಗೆ ಪ್ರತಿಕೂಲನಾಗಿ ಇರುವನು. ಶುಕ್ರನು ಪಂಚಮದಲ್ಲಿಯೂ ಬುಧನು ಪಂಚಮಸ್ಥಾನವನ್ನು ಪ್ರವೇಶಿಸುವನು. ಮಕ್ಕಳ ಮುಂದೆ ತಲೆ ತಗ್ಗಿಸಬೇಕಾಗುವುದು. ಮನೆಗೆ ಅವಶ್ಯಕವಿರುವ ವಸ್ತುಗಳನ್ನು ಹೆಚ್ಚು ಖರೀದಿಸುವಿರಿ. ಸ್ವಂತ ವಾಹನವನ್ನು ಇಟ್ಟುಕೊಂಡವರಿಗೆ ಲಾಭವಾಗಲಿದೆ. ಮನೆಯ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುವುದು. ಪ್ರತಿ ದಿನ ವಿಷ್ಣುವಿನ ಸ್ತುತಿ ಮಾಡಿ.
-ಲೋಹಿತ ಹೆಬ್ಬಾರ್ – 8762924271 (what’s app only)