ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ವಾರಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿಯೇ ಮಾಹಿತಿಯೂ ಇದೆ. ಫೆಬ್ರವರಿ 26ರಿಂದ ಮಾರ್ಚ್ 4ರ ತನಕ ವಾರಭವಿಷ್ಯ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಜನ್ಮಸಂಖ್ಯೆಯನ್ನು ಹಾಗೂ ಆ ನಂತರ ಈ ವಾರ ಹೇಗಿರುತ್ತದೆ ತಿಳಿಯಿರಿ.
ಎರಡೆರಡು ದೋಣಿಯಲ್ಲಿನ ಪಯಣ ಅಪಾಯಕಾರಿಯೂ ಹೌದು ಹಾಗೂ ಅಪಾರ ಶ್ರಮದಿಂದ ಕೂಡಿರುವಂಥದ್ದು ಎಂಬುದು ಸಹ ಅಷ್ಟೇ ನಿಜ. ಆದ್ದರಿಂದ ಅದು ಉದ್ಯೋಗವೇ ಆಗಿರಲಿ, ಸಂಬಂಧವೇ ಇರಲಿ ಏಕಕಾಲಕ್ಕೆ ಎರಡನ್ನೂ ಸಂಭಾಳಿಸುತ್ತೇನೆ ಎಂದು ಹೊರಟು ನಿಲ್ಲದಿರಿ. ನಿಮ್ಮ ಕೈ ಕೆಳಗೆ ಕೆಲಸ ಮಾಡುವವರ ಅಭಿಪ್ರಾಯಗಳಿಗೆ ಗೌರವವನ್ನು ನೀಡಿ. ಏಕಾಂತಕ್ಕೂ ಒಂಟಿತನಕ್ಕೂ ಖಂಡಿತಾ ವ್ಯತ್ಯಾಸ ಇದೆ. ನೀವಾಗಿಯೇ ಕೆಲವು ಅವಕಾಶವನ್ನು ಕೈಯಾರೆ ಕಳೆದುಕೊಳ್ಳುವ ಸಾಧ್ಯತೆ ಇದೆ, ಎಚ್ಚರ.ಕೃಷಿಕರಿಗೆ- ಹೈನುಗಾರಿಕೆಯಲ್ಲಿ ಇರುವವರಿಗೆ ಮನೆಗೆ ರಾಸುಗಳು, ಸಾಕು ಪ್ರಾಣಿಗಳು ಬರುವಂಥ ಯೋಗ ಇದೆ. ಮೇಲ್ನೋಟಕ್ಕೆ ಆದಾಯ ಬಾರದು ಎಂದು ಕಂಡುಬರುವ ಕೆಲಸಗಳಿಗೆ ಹೆಚ್ಚಿನ ಸಮಯ ಮೀಸಲಿಡದೆ ಇರುವುದು ಉತ್ತಮ. ಕುಟುಂಬದವರೊಂದಿಗೆ ಕಿರುಪ್ರವಾಸಕ್ಕೆ ತೆರಳುವಂಥ ಯೋಗ ಇದೆ. ವೃತ್ತಿನಿರತರು ಸರ್ಕಾರಕ್ಕೆ ಸಂಬಂಧಿಸಿದ ನೋಂದಣಿ, ಶುಲ್ಕಗಳು, ಪರವಾನಗಿ ಇತ್ಯಾದಿ ಸಂಗತಿಗಳು ಸರಿಯಾಗಿವೆಯೇ ಎಂಬುದನ್ನು ಪರಿಶೀಲಿಸಿಕೊಳ್ಳುವುದು ಮುಖ್ಯ ಆಗುತ್ತದೆ. ಇಲ್ಲದಿದ್ದಲ್ಲಿ ಕೈಯಿಂದ ಹಣ ಕಳೆದುಕೊಳ್ಳಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ದೈವಾನುಗ್ರಹ ಒದಗಿ ಬರಲಿದೆ. ಶಿಕ್ಷಣ ಸಂಸ್ಥೆ ಮಟ್ಟದಲ್ಲಿ ಅಥವಾ ತಾಲೂಕು ಅಥವಾ ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ನೀವು ಹೆಸರು ಮಾಡುವಂಥ ಅವಕಾಶಗಳಿವೆ. ಮಹಿಳೆಯರಿಗೆ ತವರು ಮನೆಯಿಂದ ಶುಭ ಕಾರ್ಯಗಳಿಗೆ ಆಹ್ವಾನ ಬರಲಿದೆ.
ಇತರರನ್ನು ನಿಮ್ಮ ಜತೆಗೆ ಹೋಲಿಕೆ ಮಾಡಿಕೊಳ್ಳದಿರಿ. ಇಂದಿನ ಸ್ಥಿತಿಯಲ್ಲಿ ಒಂದು ವೇಳೆ ನಿಮ್ಮಲ್ಲಿ ಬೇಸರ ಅಥವಾ ಹೀಗಾಗಬಾರದಿತ್ತು ಎಂದು ಇದ್ದಲ್ಲಿ ಹಾಗೆ ಅಂದುಕೊಳ್ಳುವುದನ್ನು ನಿಲ್ಲಿಸುವಂಥ ಬೆಳವಣಿಗೆ ಆಗಲಿದೆ. ಸ್ವತಂತ್ರ ಕೆಲಸ ಮಾಡುತ್ತಿರುವವರು ಆದಾಯ ಹೆಚ್ಚಳ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿ, ನಾನಾ ಮಾಧ್ಯಮಗಳ ಮೂಲಕ ಪ್ರಯತ್ನಿಸುವ ಸಾಧ್ಯತೆ ಇದೆ. ಸ್ನೇಹಿತರ ಸಹಾಯ ನಿಮ್ಮ ಪಾಲಿಗೆ ಒದಗಿ ಬರಲಿದೆ. ದೂರ ಪ್ರಯಾಣದಿಂದ ಅನುಕೂಲ ಅಥವಾ ಲಾಭ ಆಗುವಂಥ ಸಾಧ್ಯತೆಗಳಿವೆ. ಕೃಷಿಗೆ ಸಂಬಂಧಿಸಿದ ಕೆಲಸದಲ್ಲಿ ಇರುವವರಿಗೆ ಅಧ್ಯಯನ ಪ್ರವಾಸಕ್ಕೆ ತೆರಳುವಂಥ ಸಾಧ್ಯತೆ ಇದೆ. ಡೇರಿ ವ್ಯವಹಾರಗಳಲ್ಲಿ ಇರುವವರಿಗೆ ಕಮಿಷನ್ ಅಥವಾ ಲಾಭದ ಪ್ರಮಾಣ ಜಾಸ್ತಿ ಆಗುವಂಥ ಅವಕಾಶ ಇದೆ. ಯಾರದೋ ಮಾತನ್ನು ನಂಬಿಕೊಂಡು ಖರೀದಿಸಿದ ವಸ್ತುಗಳು ಕಳಪೆ ಮಟ್ಟದ್ದು ಎಂದು ತಿಳಿದು ಬರಬಹುದು. ವೃತ್ತಿನಿರತರು ಮೃದುವಾದ ಮಾತುಗಳಿಂದ ಎದುರಿನವರ ಜತೆಗೆ ವ್ಯವಹರಿಸಬೇಕು. ಮಾಧ್ಯಮಗಳ ಜತೆಗೆ ವ್ಯವಹರಿಸುವಾಗ ಮಾತಿನ ಮೇಲೆ ನಿಗಾ ಇರಿಸಿ. ವಿದ್ಯಾರ್ಥಿಗಳು ಹಣದ ವಿಚಾರದಲ್ಲಿ ಮನೆಯಲ್ಲಿ ಪಾರದರ್ಶಕತೆಯಿಂದ ಇರಬೇಕು. ತೀರಾ ಅಗತ್ಯ ಇದ್ದಾಗಲೂ ನಿಮಗೆ ದೊರೆಯದೆ ಹೋಯಿತು ಎಂಬ ಕಾರಣಕ್ಕೆ ಸಿಟ್ಟಿನಿಂದ ಮಾತನಾಡಬೇಡಿ. ಇದರಿಂದ ನಿಮ್ಮ ಮೇಲಿರುವ ಸದಭಿಪ್ರಾಯ ಕೂಡ ಬದಲಾಗುತ್ತದೆ. ಮಹಿಳೆಯರು ಫೋನ್ ನಲ್ಲಿ ಇರುವ ಡೇಟಾವನ್ನು ಎಚ್ಚರವಾಗಿ ಇಟ್ಟುಕೊಳ್ಳುವುದು ಮುಖ್ಯ.
ಈ ವಾರ ಬಹಳ ಮುಖ್ಯವಾದ ಎಚ್ಚರಿಕೆಯೊಂದನ್ನು ಕಡ್ಡಾಯವಾಗಿ ಗಮನಿಸಿ. ಏಕೆಂದರೆ ನಿಮಗೆ ದೃಷ್ಟಿ ದೋಷ ತಾಗುವ ಸಾಧ್ಯತೆಗಳಿವೆ. ಹೀಗೆ ದೋಷ ತಾಗಿದೆ ಎಂಬುದು ಗೊತ್ತಾಗುವುದು ಹೇಗೆ ಅಂದರೆ, ಮೈ- ಕೈ ನೋವು ಕಾಡಲಿದೆ, ಊಟ ಸೇರದಂತೆ ಆಗುತ್ತದೆ. ಆದ್ದರಿಂದ ನೀವು ಧರಿಸುವ ಬಟ್ಟೆ, ಒಡವೆ ಇತ್ಯಾದಿಗಳು ಜನರ ಕಣ್ಣು ಕುಕ್ಕದಂತೆ ಇರಲಿ. ಸ್ವಾದಿಷ್ಟವಾದ ಊಟ- ತಿಂಡಿ ಮಾಡುವಂಥ ಯೋಗ ಇದೆ. ಆದರೆ ಮಸಾಲೆಯುಕ್ತ ಪದಾರ್ಥಗಳು, ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಸೇವನೆ ಮಾಡುವಾಗ ಎಚ್ಚರಿಕೆಯಿಂದ ಇರಿ. ಇನ್ನು ನಾಲಗೆ ಚಪಲವನ್ನು ಕಡಿಮೆ ಮಾಡಿಕೊಂಡಲ್ಲಿ ಆರೋಗ್ಯ ಉತ್ತಮವಾಗಿ ಇರುತ್ತದೆ. ಕೃಷಿಕರು ಮನೆ ಬದಲಾವಣೆ ಅಥವಾ ಹೊಸ ಮನೆ ನಿರ್ಮಾಣ, ಸೈಟು ಖರೀದಿಸಿ ಅಲ್ಲಿ ಗೋದಾಮು ಮೊದಲಾದವುಗಳ ನಿರ್ಮಾಣ ಮಾಡುವುದಕ್ಕೆ ಮನಸ್ಸು ಮಾಡಲಿದ್ದೀರಿ. ವೃತ್ತಿನಿರತರು ಹೊಸಬರನ್ನು ನಂಬಿಕೊಂಡು, ಅಂತರಂಗದ ಸಂಗತಿಗಳನ್ನು ಹಂಚಿಕೊಳ್ಳದಿರಿ. ಇನ್ನು ನೀವು ಅನುಸರಿಸುತ್ತಿರುವ ವ್ಯವಹಾರದ ಗುಟ್ಟನ್ನು ಎಷ್ಟೇ ಹತ್ತಿರದವರಿಗೆ ಬಿಟ್ಟುಕೊಡದಿರಿ. ವಿದ್ಯಾರ್ಥಿಗಳು ನಿಮ್ಮ ತಪ್ಪಿದ್ದಲ್ಲಿ ಅದನ್ನು ಒಪ್ಪಿಕೊಂಡು ಬಿಡಿ. ಅದನ್ನು ಮುಂದುವರಿಸಿಕೊಂಡು ಹೋಗದಿರಿ. ಮಹಿಳಾ ಉದ್ಯೋಗಿಗಳಿಗೆ ಮೇಲಧಿಕಾರಿಗಳ ಜತೆಗೆ ವೈಚಾರಿಕವಾಗಿ ಭಿನ್ನಾಭಿಪ್ರಾಯ ತಲೆದೋರಬಹುದು.
ನೀವು ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಯಶಸ್ಸು ದೊರೆಯಲಿದೆ. ಭವಿಷ್ಯದ ಬಗ್ಗೆ ಬಹಳ ಮುಖ್ಯವಾದ ತೀರ್ಮಾನವೊಂದನ್ನು ತೆಗೆದುಕೊಳ್ಳಲಿದ್ದೀರಿ. ನಿಮ್ಮ ಮಾತಿಗೆ ಬೆಲೆ ದೊರೆಯಲಿದೆ. ಇತರರ ಮೇಲೆ ಪ್ರಭಾವ ಬೀರುವಷ್ಟರ ಮಟ್ಟಿಗೆ ನೀವು ಪ್ರಭಾವಿಗಳಾಗಲಿದ್ದೀರಿ. ವಿದೇಶಗಳಿಗೆ ತೆರಳುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವವರಿಗೆ ಬೆಳವಣಿಗೆ ವೇಗ ಪಡೆದುಕೊಳ್ಳಲಿದೆ. ನಿಮ್ಮ ನಿರೀಕ್ಷೆಗೂ ಮೀರಿದಂತೆ ಸವಾಲುಗಳನ್ನು ಸಲೀಸಾಗಿ ದಾಟಿ ಹೋಗಲಿದ್ದೀರಿ. ಕೃಷಿ ವಲಯದಲ್ಲಿ ಇರುವವರಿಗೆ ಕಟ್ಟಡ ನಿರ್ಮಾಣಗಳಿಗೆ ಹಣ ಖರ್ಚಾಗುವ ಯೋಗ ಇದೆ. ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಸಾಲಕ್ಕಾಗಿ ಅಥವಾ ಹಣದ ಮೂಲಕ್ಕಾಗಿ ಪ್ರಯತ್ನಿಸುತ್ತಾ ಇದ್ದಲ್ಲಿ ಅದು ಒದಗಿ ಬರುವಂಥ ಸಾಧ್ಯತೆಗಳಿವೆ. ಯಾವುದೇ ಕೆಲಸವನ್ನಾಗಲಿ ಪೂರ್ಣ ಮನಸ್ಸಿನಿಂದ ಮಾಡಬೇಕು. ಆರಂಭದಲ್ಲಿ ಇರುವ ಉತ್ಸಾಹ ಕೆಲಸ ಪೂರ್ಣ ಆಗುವ ತನಕ ಇರಬೇಕು. ವೃತ್ತಿನಿರತರಿಗೆ ಈ ವಾರ ಮಿಶ್ರ ಫಲ ಇದೆ. ಶುಭಾಶುಭ ಫಲಗಳ ಮಿಶ್ರಣ ಇರುವುದರಿಂದ ಯಾವುದೇ ಕೆಲಸ ಮಾಡುವಾಗಲೂ ಅದರ ಫಲಿತಾಂಶ ಏನಾಗಬಹುದು ಎಂಬ ಬಗ್ಗೆ ಅಂದಾಜು ಇರಲಿ. ವಿದ್ಯಾರ್ಥಿಗಳು ಸ್ನೇಹಿತರ ಮಧ್ಯೆ ತುಂಬ ಅಚ್ಚರಿ ಮೂಡಿಸುವಂಥ ಸಾಧನೆಯನ್ನು ಮಾಡುವಿರಿ. ಮದುವೆ ಸೂಕ್ತ ವಯಸ್ಸಿನ ಯುವತಿಯರಿಗೆ ಸೂಕ್ತ ಸಂಬಂಧಗಳು ದೊರೆಯಲಿವೆ.
ಹಣಕಾಸಿನ ಹೂಡಿಕೆ, ಈ ಹಿಂದೆ ನೀವು ಮಾಡಿಕೊಂಡಿರುವ ಸಾಲ ಹಾಗೂ ತಿಂಗಳಾ ತಿಂಗಳು ಕಟ್ಟುತ್ತಿರುವ ಬಡ್ಡಿ ಇಂಥದ್ದನ್ನೆಲ್ಲ ಲೆಕ್ಕ ಹಾಕಿಕೊಳ್ಳಲಿದ್ದೀರಿ. ಆಪ್ತರು, ಸ್ನೇಹಿತರು, ಸಂಬಂಧಿಗಳ ಮದುವೆಗಾಗಿ ಪ್ರಯಾಣ ಮಾಡಬೇಕಾಗುತ್ತದೆ. ಕೊನೆ ಕ್ಷಣದ ತನಕ ಕೆಲಸ ಮಾಡದೆ ಹಾಗೇ ಉಳಿಸಿಕೊಂಡು ಬಂದಿದ್ದು ಡೆಡ್ ಲೈನ್ ಹತ್ತಿರ ಬರುತ್ತಿದ್ದಂತೆ ಒತ್ತಡ ಹೆಚ್ಚಾಗುವಂತೆ ಆಗುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಶೀಘ್ರವಾಗಿ ಕೆಲಸಗಳನ್ನು ಮುಗಿಸಿಕೊಳ್ಳಿ. ಕೃಷಿ ವೃತ್ತಿಯಲ್ಲಿ ಇರುವವರಿಗೆ ನಿಮ್ಮದೇ ಕ್ಷೇತ್ರದಲ್ಲಿ ಇರುವ ಇತರರ ಸಹಾಯ ಬೇಕಾಗುತ್ತದೆ. ಸಾಲದ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಕಂಡುಬರುತ್ತಿದೆ. ನೀವಾಗಿಯೇ ಕೆಲವು ಕೆಲಸಗಳನ್ನು ಮೈ ಮೇಲೆ ಹಾಕಿಕೊಂಡು, ಕುಟುಂಬದವರ ಸಲುವಾಗಿ ಹೆಚ್ಚಿನ ಸಮಯ ಮೀಸಲಿಡುವುದು ಕಷ್ಟ ಆಗಲಿದೆ. ಚಾರ್ಟರ್ಡ್ ಅಕೌಂಟೆಂಟ್, ವಕೀಲರು, ದಂತ ವೈದ್ಯರು ಹೀಗೆ ವೃತ್ತಿನಿರತರಿಗೆ ಆದಾಯದಲ್ಲಿ ಹೆಚ್ಚಳ ಆಗುವುದಕ್ಕೆ ದಾರಿ ಗೋಚರ ಆಗಲಿದೆ. ಸ್ನೇಹಿತರು- ಸಂಬಂಧಿಗಳ ಮೂಲಕವಾಗಿ ಹೊಸ ಕ್ಲೈಂಟ್ ಹುಡುಕಿಕೊಂಡು ಬರುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಹೊಸ ಬಟ್ಟೆ, ವಾಹನ, ಕನಿಷ್ಠ ಬೆಳ್ಳಿಯ ವಸ್ತುಗಳನ್ನಾದರೂ ಖರೀದಿ ಮಾಡುವಂಥ ಯೋಗ ಇದೆ. ಸಂಘಟನೆಯಲ್ಲಿ ತೊಡಗಿರುವಂಥ ಮಹಿಳೆಯರಿಗೆ ಬಿಡುವೇ ಆಗದಷ್ಟು ಕೆಲಸಗಳು ಮೈ ಮೇಲೆ ಬರಲಿವೆ. ಸೋದರ ಸಂಬಂಧಿಗಳು ನಿಮ್ಮಿಂದ ಹಣದ ಹೊರತಾದ ಸಹಾಯವನ್ನು ಕೇಳಿಕೊಂಡು ಬರುವ ಸಾಧ್ಯತೆಗಳು ಹೆಚ್ಚಿವೆ.
ಬಡ್ತಿ, ವರ್ಗಾವಣೆಗೆ ಪ್ರಯತ್ನ ಮಾಡುತ್ತಿದ್ದಲ್ಲಿ ಈ ಬಗ್ಗೆ ಶುಭ ಸುದ್ದಿ ಕೇಳುವ ಯೋಗ ಇದೆ. ಆದರೆ ಇದಕ್ಕಾಗಿ ನೀವು ಹೆಚ್ಚು ಶ್ರಮ ಹಾಕಬೇಕಾಗುತ್ತದೆ. ನಿತ್ಯದ ಕೆಲಸಗಳಲ್ಲಿ ಕೆಲವು ಮಟ್ಟಿಗೆ ಗೊಂದಲ ಏರ್ಪಡಬಹುದು. ಇನ್ನೊಬರು ಮಾಡುತ್ತಾರೆ ಎಂದುಕೊಂಡು ನೀವು ಹಾಗೂ ನೀವೇ ಮಾಡುತ್ತಿರಿ ಎಂದುಕೊಂಡು ಇತರರು ಗೊಂದಲ ಮಾಡಿಕೊಂಡು ಕೆಲಸವು ಕೊನೆ ಕ್ಷಣದ ಹಾಗೇ ಬಾಕಿ ಉಳಿದುಹೋಗುವ ಸಾಧ್ಯತೆ ಇದೆ. ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಇರುವವರುಗೆ ಆದಾಯದಲ್ಲಿ ಹೆಚ್ಚಳ ಆಗುವಂಥ ಸಾಧ್ಯತೆ ಇದೆ. ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು ಎಂಬ ಕಾರಣಕ್ಕಾಗಿ ಹಣವನ್ನು ಹೂಡಿಕೆ ಮಾಡಲಿದ್ದೀರಿ. ಆಯುರ್ವೇದ ಮೂಲಿಕೆಗಳನ್ನು ಬೆಳೆಯುತ್ತಾ ಇರುವವರಿಗೆ ಆದಾಯ ಜಾಸ್ತಿ ಆಗುವ ಜತೆಗೆ ಹೆಸರು, ಕೀರ್ತಿ ಹಾಗೂ ಮನ್ನಣೆ ಕೂಡ ಜಾಸ್ತಿ ಆಗುತ್ತದೆ. ವೃತ್ತಿನಿರತರು ಹೊಸ ವಾಹನ, ಲ್ಯಾಪ್ ಟಾಪ್, ಕಚೇರಿಗೆ ಬೇಕಾದಂಥ ಸಲಕರಣೆಗಾಗಿ ಹಣ ಖರ್ಚು ಮಾಡುವಂಥ ಸಾಧ್ಯತೆಗಳಿವೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಸ್ವಲ್ಪ ಮಟ್ಟಿಗೆ ಆಸಕ್ತಿ ಕಡಿಮೆ ಆಗಬಹುದು. ಪಠ್ಯೇತರ ಸಂಗತಿಗಳಲ್ಲಿ ನಿಮ್ಮ ಮನಸ್ಸು ವಾಲುವುದರಿಂದ ಮನೆಯಲ್ಲಿ ಕೂಡ ಆಕ್ಷೇಪಣೆಗಳು ಕೇಳಿಬರಲಿವೆ. ಮಹಿಳೆಯರು ಕ್ರೀಡಾ ಕ್ಷೇತ್ರದಲ್ಲಿ ಇದ್ದಲ್ಲಿ ಏಳ್ಗೆ ಸಾಧ್ಯತೆಗಳು ಹೆಚ್ಚಾಗಿವೆ. ಸಿಗುವ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳುವ ಕಡೆಗೆ ಗಮನವನ್ನು ನೀಡಬೇಕು.
ನಿಮ್ಮ ಬಗ್ಗೆ ಯಾರೋ ಹೀಗೆ ಮಾತನಾಡಿದರಂತೆ, ಹಾಗೆ ಅಂದರಂತೆ ಎಂದು ನಿಮ್ಮ ಬಳಿ ಬಂದು ಹೇಳುವವರು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ. ನೀವು ತಕ್ಷಣ ಪ್ರತಿಕ್ರಿಯಿಸುವುದಕ್ಕೆ ಅಥವಾ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಿದರು ಎಂದವರ ವೈಯಕ್ತಿಕ ವಿಚಾರಗಳನ್ನು ಎತ್ತಾಡಬೇಡಿ. ಏಕೆಂದರೆ ನಿಮಗೆ ಶಾಶ್ವತವಾಗಿ ಕೆಟ್ಟವರೆಂಬ ಕಿರೀಟ ತಲೆಗೆ ಏರುತ್ತದೆ. ಯಾರು ನಿಮ್ಮ ಬಳಿ ದೂರು ತಂದು ಹೇಳಿದರೋ ಅವರೇ ಅಪಪ್ರಚಾರ ಮಾಡುವ ಸಾಧ್ಯತೆ ಇದೆ. ಆ ಕಾರಣದಿಂದ ಎಚ್ಚರಿಕೆ ವಹಿಸಿ. ಇನ್ನು ಕೃಷಿ- ಕೃಷಿ ಚಟುವಟಿಕೆ ಆಧಾರಿತ ಕೆಲಸಗಳಲ್ಲಿ ತೊಡಗಿರುವವರಿಗೆ ಹಣಕಾಸಿನ ಮುಗ್ಗಟ್ಟು ತಲೆದೋರಬಹುದು. ಇಷ್ಟು ಸಮಯ ನಿಮ್ಮ ನಿರ್ಧಾರಕ್ಕೆ, ಮಾತಿಗೆ ಗೌರವ ನೀಡುತ್ತಿದ್ದವರು ಈಗ ಮೊದಲಿನಷ್ಟು ಕಿಮ್ಮತ್ತು ನೀಡುತ್ತಿಲ್ಲ ಎಂದು ಬಲವಾಗಿ ಅನಿಸುವುದಕ್ಕೆ ಶುರುವಾಗುತ್ತದೆ. ಇತರರ ಮೇಲೆ ಅತಿಯಾದ ನಿರೀಕ್ಷೆಯನ್ನು ಇಟ್ಟುಕೊಳ್ಳಬೇಡಿ. ವೃತ್ತಿ ನಿರತರಿಗೆ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಈಗಾಗಲೇ ಕಾಯಿಲೆ- ಕಸಾಲೆಗಳಿಂದ ಬಳಲುತ್ತಿರುವವರಿಗೆ ಅದು ಉಲ್ಬಣ ಆಗುವ ಎಲ್ಲ ಸಾಧ್ಯತೆಗಳಿವೆ. ವಿದೇಶಗಳಿಗೆ ಉನ್ನತ ವ್ಯಾಸಂಗಕ್ಕಾಗಿ ತೆರಳಬೇಕು ಎಂದಿರುವವರಿಗೆ ಹಣಕಾಸು ಸಮಸ್ಯೆಗಳು ಇದ್ದಲ್ಲಿ ಅದು ನಿವಾರಣೆ ಆಗುವ ದಾರಿ ಗೋಚರ ಆಗುತ್ತದೆ. ಆದರೆ ಯಾವುದಕ್ಕೂ ಆಲಸ್ಯ ಮಾಡಬೇಡಿ. ಇನ್ನು ಮಹಿಳೆಯರಿಗೆ ಸಾಮಾಜಿಕವಾಗಿ ಮನ್ನಣೆ, ಗೌರವ- ಸಮ್ಮಾನ ಪಡೆಯುವಂಥ ಯೋಗ ಇದೆ.
ಬ್ಯಾಂಕಿಂಗ್ ವ್ಯವಹಾರಗಳಿಗೆ ಅಲೆದಾಟ ನಡೆಸುತ್ತಾ, ಬಹಳ ದಿನಗಳಿಂದ ಬಾಕಿ ಉಳಿದಿರುವ ಕೆಲಸ ಈ ವಾರದಲ್ಲಿ ಮುಗಿಯುವ ಸಾಧ್ಯತೆಗಳು ಹೆಚ್ಚಾಗಿವೆ. ಯಾರನ್ನಾದರೂ ಸರಿ, ಸುಖಾ- ಸುಮ್ಮನೆ ಬೈದಾಡಿಕೊಂಡು ಓಡಾಡಬೇಡಿ.ಯಾರು- ಯಾವ ಸಮಯದಲ್ಲಿ ಹಾಗೂ ಹೇಗೆ ಸಹಾಯಕ್ಕೆ ಬರುತ್ತಾರೆ ಎಂಬುದನ್ನು ಹೇಳುವುದೇ ಕಷ್ಟವಾದ ದಿನಗಳಿವು. ವಾಹನ ಖರೀದಿ ಮಾಡಬೇಕು ಎಂದು ಕೊನೆ ಕ್ಷಣದ ತನಕ ಯೋಚನೆ ಮಾಡದೆ ದಿಢೀರ್ ಎಂದು ತೀರ್ಮಾನ ಮಾಡಲಿದ್ದೀರಿ. ಋಷಿ ವಲಯದಲ್ಲಿ ಇರುವವರಿಗೆ ಹೊಸ ಮಾರುಕಟ್ಟೆ, ಖರೀದಿದಾರರು ದೊರೆಯುವ ಅವಕಾಶಗಳು ಹೆಚ್ಚಿವೆ. ಇದರೊಂದಿಗೆ ನಿಮ್ಮ ಹಣಕಾಸಿನ ಅಗತ್ಯಗಳು ಸ್ವಲ್ಪ ಮಟ್ಟಿಗಾದರೂ ಪೂರೈಕೆ ಆಗುತ್ತದೆ. ಕೃಷಿ ಉತ್ಪನ್ನಗಳ ರಫ್ತು ವಹಿವಾಟನ್ನು ಮಾಡುತ್ತಿರುವವರಿಗೆ ಸವಾಲಿನ ಸಮಯ ಇದಾಗಿರುತ್ತದೆ. ನಿಮ್ಮದಲ್ಲದ ತಪ್ಪಿಗೆ ಇತರರ ನಿಂದೆಯನ್ನು ಅನುಭವಿಸಬೇಕಾಗುತ್ತದೆ. ಜ್ಯೋತಿಷ್ಯ, ಪೌರೋಹಿತ್ಯ, ರೇಕಿ, ಪ್ರಾಣಿಕ್ ಹೀಲಿಂಗ್ ಇಂಥದ್ದರದಲ್ಲಿ ತೊಡಗಿರುವವರಿಗೆ ಈ ವಾರ ಬಿಡುವಿಲ್ಲದಂಥ ಕೆಲಸ ಇರಲಿದೆ. ಈ ಮೊದಲು ನಿಮ್ಮಿಂದ ಕೆಲಸ ಮಾಡಿಸಿರುವವರು ಮತ್ತೆ ಹುಡುಕಿಕೊಂಡು ಬಂದು, ಕೆಲವು ಕೆಲಸಗಳನ್ನು ಒಪ್ಪಿಸುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣ ಸಂಸ್ಥೆಯಿಂದ ಯಾವುದಾದರೂ ಸ್ಪರ್ಧೆ, ಅಧ್ಯಯನ ಪ್ರವಾಸ ಇತ್ಯಾದಿಗಳಿಗೆ ಕಳಿಸುವಂಥ ಯೋಗ ಇದೆ. ಮಹಿಳೆಯರು ಈ ವಾರ ಸಾಧ್ಯವಾದಷ್ಟೂ ಇತರರ ವೈಯಕ್ತಿಕ ವಿಚಾರಗಳನ್ನು ಮಾತನಾಡದಿರುವುರು ಒಳಿತು.
ವಿದೇಶದಿಂದ ಶುಭ ಸುದ್ದಿ ನಿರೀಕ್ಷೆ ಮಾಡುತ್ತಿರುವವರಿಗೆ ಅದು ಬರುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಸ್ಥಾನ ಬದಲಾವಣೆ ಅಥವಾ ಕೆಲಸವೇ ಹೋಗುವಂಥ ಸನ್ನಿವೇಶ ಸೃಷ್ಟಿ ಆಗಬಹುದು. ಆದರೆ ತೀರಾ ಗಾಬರಿಗೆ ಬೀಳಬೇಡಿ. ನಿಮ್ಮ ಸಾಮರ್ಥ್ಯದ ಆಧಾರದ ಮೇಲೆ ಕೆಲಸದಿಂದ ತೆಗೆಯಲಾಗಿದೆ ಎಂದುಕೊಂಡು, ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ಇನ್ನು ಬೇಸರದಿಂದಾಗಿ ಈಗಿನ ಸ್ನೇಹಿತರಿಂದ ದೂರ ಕೂಡ ಆಗದಿರಿ. ಏಕೆಂದರೆ ನಿಮ್ಮ ಸ್ನೇಹಿತರೇ ಹೊಸ ಅವಕಾಶಗಳ ಬಗ್ಗೆ ತಿಳಿಸುವ ಸಾಧ್ಯತೆ ಇದೆ. ಕೃಷಿ ಕ್ಷೇತ್ರದಲ್ಲಿ ಇರುವವರಿಗೆ ಹೊಸದಾಗಿ ಸಣ್ಣ ಪ್ರಮಾಣದಲ್ಲಿಯಾದರೂ ಭೂಮಿ ಖರೀದಿಸುವುದಕ್ಕೆ ಮನಸ್ಸು ಮಾಡುವ ಸಾಧ್ಯತೆ ಇದೆ. ಇನ್ನು ಕೆಲವರು ಗುತ್ತಿಗೆ ಆಧಾರದಲ್ಲಿ ಭೂಮಿಯನ್ನು ಖರೀದಿಸಬಹುದು. ಇನ್ನು ಮನೆಯಲ್ಲಿ ಶುಭ ಕಾರ್ಯಗಳು ನಡೆಯಬಹುದು. ಅದಕ್ಕೆ ಸಿದ್ಧತೆ ನಡೆಸಲಿದ್ದೀರಿ. ವೃತ್ತಿನಿರತರಿಗೆ ಅನಿರೀಕ್ಷಿತವಾಗಿ ಹೊಸ ಆದಾಯ ಮೂಲ ದೊರೆಯಲಿದೆ. ಆದರೆ ನಿಮಗೆ ಬರಬೇಕಾದ ಹಣವನ್ನು ಪಡೆಯುವುದಕ್ಕೆ ಹೆಚ್ಚಿನ ಪರಿಶ್ರಮವನ್ನು ಹಾಕಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಹೊಸ ಕೋರ್ಸ್ ತೆಗೆದುಕೊಳ್ಳುವ ಇಚ್ಛೆಯಿದ್ದಲ್ಲಿ ಸರಿಯಾಗಿ ವಿಚಾರಿಸಿ, ಸೂಕ್ತ ಮಾರ್ಗದರ್ಶನವನ್ನು ಪಡೆದುಕೊಂಡು ನಿರ್ಧಾರವನ್ನು ತೆಗೆದುಕೊಳ್ಳಿ. ಇನ್ನು ಮಹಿಳೆಯರು ರಕ್ತಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುವಂತಾಗುತ್ತದೆ.
ಲೇಖನ- ಎನ್.ಕೆ.ಸ್ವಾತಿ