
ಯಾರಿಗೆ ಯಾವ ವಿಚಾರವನ್ನು ಹೇಗೆ ಹೇಳಬೇಕು ಹಾಗೂ ಒಬ್ಬ ವ್ಯಕ್ತಿಯ ಗ್ರಹಿಕೆ ಹೇಗಿದೆ ಎಂಬುದನ್ನು ಅರ್ಥ ಮಾಡಿಕೊಂಡು ಮುಂದಕ್ಕೆ ಹೆಜ್ಜೆ ಇಡುವುದರ ಬಗ್ಗೆ ಆಲೋಚಿಸಿ. ಇಲ್ಲದಿದ್ದಲ್ಲಿ ನಿಮ್ಮ ಬಗ್ಗೆ ಇತರರು ತಪ್ಪಾಗಿ ಆಲೋಚಿಸುವ ಸಾಧ್ಯತೆ ಇರುತ್ತದೆ. ಸ್ವಂತಕ್ಕೆ ಏನೂ ಅನುಕೂಲ ಮಾಡಿಕೊಳ್ಳಬೇಕು ಎಂಬ ಆಲೋಚನೆ ನಿಮ್ಮಲ್ಲಿ ಇಲ್ಲದಿರಬಹುದು. ಆದರೆ ನೀವು ಇತರರಿಗೆ ಸಹಾಯ ಮಾಡಲು ತೋರುವ ಆಸಕ್ತಿ ಕಾರಣಕ್ಕೆ ಅಂಥದ್ದೊಂದು ಭಾವನೆ ಸೃಷ್ಟಿ ಆಗುತ್ತದೆ. ದುಡ್ಡಿನ ವಿಚಾರದಲ್ಲಿ ನೀವು ಕೆಲ ಬದಲಾವಣೆ ಮಾಡಿಕೊಳ್ಳಲಿದ್ದೀರಿ. ಉಳಿತಾಯ- ಹೂಡಿಕೆ ಬಗ್ಗೆ ಚಿಂತೆ ಹೆಚ್ಚಾಗಲಿದೆ. ಕೃಷಿಕರಿಗೆ ಅಂದಾಜು ಮಾಡಿದ್ದಕ್ಕಿಂತ ಹೆಚ್ಚಿನ ಖರ್ಚು ಮತ್ತು ನೀವು ತೊಡಗಿಕೊಂಡ ಕೆಲಸಕ್ಕೆ ಹೆಚ್ಚಿನ ಸಮಯ ನೀಡ ಬೇಕಾದ ಪರಿಸ್ಥಿತಿ ಉದ್ಭವಿಸಲಿದೆ. ಹೊಟ್ಟೆಗೆ ಸಂಬಂಧಿಸಿದ ಅನಾರೋಗ್ಯ ನಿಮ್ಮನ್ನು ಕಾಡಬಹುದು. ಈ ಹಿಂದೆ ನೀವು ಯಾವಾಗಲೋ ಆಡಿದ ಮಾತನ್ನು ಮುಂದೆ ಮಾಡಿ, ಸಂಬಂಧಿಕರು ಜಗಳಕ್ಕೆ ಬರಬಹುದು. ನೀವು ಸಹ ಕಲಹಕ್ಕೆ ಇಳಿಯದೆ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ. ವೃತ್ತಿನಿರತರು ಒತ್ತಡದಲ್ಲಿ ಸಿಲುಕಿ ಕೊಳ್ಳುತ್ತೀರಿ. ಬೇರೆಯವರ ಆತುರಕ್ಕೆ ನೀವು ಎದ್ದುಬಿದ್ದು ಕೆಲಸ ಮಾಡುವಂತೆ ಆಗಲಿದೆ. ಯಾರಿಗೆ ಮಾತು ನೀಡುವ ಮುಂಚೆ ಸಾಧಕ- ಬಾಧಕ ಏನು ಎತ್ತ ಎಂಬುದರ ವಿಶ್ಲೇಷಣೆ ಮಾಡಿಕೊಂಡು, ಮುಂದಕ್ಕೆ ನಡೆಯಿರಿ. ಹಳೆಯದು ಇನ್ನು ಇದು ಸಮಸ್ಯೆ ಮಾಡಲಾರದು ಎಂದುಕೊಂಡಿದ್ದು ನಿಮಗೆ ತೊಂದರೆ ನೀಡಬಹುದು. ಮುಂಜಾಗ್ರತೆ ಬಹಳ ಮುಖ್ಯ. ವಿದ್ಯಾರ್ಥಿಗಳು ಸ್ನೇಹಿತರು- ಸಂಬಂಧಿಗಳ ಜೊತೆಗೆ ಪ್ರವಾಸಕ್ಕೆ ತೆರಳುವಂಥ ಯೋಗ ಇದೆ. ಇನ್ನು ನಿಮ್ಮಲ್ಲಿ ಕೆಲವರಿಗೆ ಆಹಾರಕ್ಕೆ ಸಂಬಂಧಿಸಿದ ಅಲರ್ಜಿ ಕಾಡಬಹುದು. ಮನೆಯ ಹೊರಗಿನ ಆಹಾರ ಪದಾರ್ಥಗಳು, ಜಂಕ್ ಫುಡ್ ಗಳ ಸೇವನೆಯಿಂದ ದೂರ ಇದ್ದಷ್ಟು ಉತ್ತಮ. ನಿಮ್ಮಲ್ಲಿ ಕೆಲವರಿಗೆ ಹೊಸ ವಾಹನ, ಲ್ಯಾಪ್ ಟಾಪ್, ಗ್ಯಾಜೆಟ್ ಗಳನ್ನು ಖರೀದಿಸುವ ಯೋಗ ಇದೆ. ಮಹಿಳೆಯರು ನಿಮ್ಮಲ್ಲಿ ಕೆಲವರು ಬಳಿ ಇರುವ ಚಿನ್ನವನ್ನು ಮಾರಿ ಅಥವಾ ಅಡಮಾನ ಮಾಡಿ, ಕೆಲವು ತುರ್ತು ಸಾಲಗಳನ್ನು ಹಿಂತಿರುಗಿಸಲು ಆಲೋಚಿಸುತ್ತೀರಿ. ಇನ್ನು ಕೆಲವರು ತೀರ್ಥಯಾತ್ರೆಗಳಿಗೆ ತೆರಳುವ ಯೋಗ ಇದೆ. ಯಾರ ಸಲುವಾಗಿ ನಿಮಗೆ ಗೊತ್ತಿರುವ ಕೆಲವು ರಹಸ್ಯಗಳನ್ನು ಎಲ್ಲಿಯೂ ಹೇಳದೆ ಇರುತ್ತೀರೋ ಅಂಥವರೇ ನಿಮ್ಮ ವಿರುದ್ಧ ದೂರು, ಚಾಡಿ ಹೇಳಿಕೊಂಡು ಬರುತ್ತಿರುವುದು ಗಮನಕ್ಕೆ ಬರಲಿದೆ.
ಆಗಲಿ ನೋಡೋಣ ಎಂದಿದ್ದ ಮಾತು ನಿಮಗೆ ಭಾರೀ ಖರ್ಚುಗಳನ್ನು ಈ ವಾರ ತಂದೊಡ್ಡಬಹುದು. ಮುಖ್ಯವಾಗಿ ನವ ವಿವಾಹಿತರಿಗೆ ವಿಪರೀತದ ಖರ್ಚು ಆಗಲಿದೆ. ಇನ್ನು ಮಕ್ಕಳ ಸಲುವಾಗಿಯೂ ಭಾರೀ ವೆಚ್ಚಗಳು ಆಗಲಿದೆ. ಸ್ನೇಹಿತರು- ಸಂಬಂಧಿಗಳಿಗೆ ಪಾರ್ಟಿ ನೀಡಲಿದ್ದೀರಿ. ನಿಮ್ಮ ಸೋಷಿಯಲ್ ಕಾಂಟ್ಯಾಕ್ಟ್ ಹೆಚ್ಚಾಗಲಿದೆ. ಇನ್ನು ಯಾರು ವಿವಾಹ ವಯಸ್ಕರಾಗಿದ್ದು, ಸೂಕ್ತ ಸಂಬಂಧದ ಹುಡುಕಾಟದಲ್ಲಿ ಇದ್ದೀರಿ ಅಂಥವರಿಗೆ ಮನಸ್ಸಿಗೆ ಒಪ್ಪುವಂಥ ವಧು/ವರ ದೊರೆಯುವ ಯೋಗ ಸಹ ಇದೆ. ಈ ಹಿಂದೆ ನೀವು ಮಾಡಿದ್ದ ಪ್ರಯತ್ನಗಳು ಫಲ ನೀಡುವ ಸಮಯ ಇದಾಗಿರಲಿದೆ. ಕೃಷಿಕರಿಗೆ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವ ಉದ್ದೇಶ ಈಡೇರಲಿದೆ. ನಿಮ್ಮಲ್ಲಿ ಕೆಲವರು ಸಾಲವನ್ನು ಹಿಂತಿರುಗಿಸುವ ಸಾಧ್ಯತೆ ಇದೆ. ಹೈನುಗಾರಿಕೆ ಮಾಡುತ್ತಾ ಇರುವವರಿಗೆ ಆದಾಯ ಲಾಭ ಎರಡೂ ಹೆಚ್ಚಾಗುವ ಮಾರ್ಗೋಪಾಯ ಅಳವಡಿಸುವ ಸಮಯ ಆಗಿರಲಿದೆ. ಮಕ್ಕಳ ಶಿಕ್ಷಣದ ಸಲುವಾಗಿ ಪಶು ಸಾಕಣೆ ಮಾಡುತ್ತಾ ಇರುವವರು ಮಾರಾಟ ಮಾಡಲಿದ್ದೀರಿ. ಹಣದ ಒತ್ತಡ ಕಡಿಮೆ ಆಗಲಿದೆ. ವೃತ್ತಿನಿರತರು ಕೋರ್ಟ್ ಕಚೇರಿ ಅಥವಾ ಪೊಲೀಸ್ ಸ್ಟೇಷನ್ ನಲ್ಲಿ ಇರುವಂಥ ಪ್ರಕರಣಗಳನ್ನು ಬಗೆ ಹರಿಸಿಕೊಳ್ಳಲು ಅವಕಾಶ ದೊರೆಯಲಿದೆ. ತುಂಬ ಕಷ್ಟ ಎಂದು ಇತರರಿಗೆ ಅನಿಸಿದ ಕೆಲಸಗಳನ್ನು ನೀವು ಸುಲಭವಾಗಿ ಮಾಡಿ ಮುಗಿಸಲಿದ್ದೀರಿ. ಮನೆ ಅಥವಾ ಕಚೇರಿಯನ್ನು ಬದಲಾಯಿಸಬೇಕು ಎಂದುಕೊಳ್ಳುತ್ತಾ ಇರುವವರಿಗೆ ಉತ್ತಮ ಹಾಗೂ ಮನಸಿಗೆ ಹಿಡಿಸಿದಂಥದ್ದು ದೊರೆಯಲಿದೆ. ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಯಲ್ಲಿ ಹೆಚ್ಚು ಸಾಧಿಸುತ್ತೀರಿ. ನೀವು ಬಹಳ ಸಮಯದಿಂದ ಕೇಳುತ್ತಿದ್ದ ಅಥವಾ ಕೊಳ್ಳಬೇಕು ಅಂದುಕೊಂಡಿದ್ದ ವಸ್ತು, ಆಟಿಕೆ ಮನೆಯಲ್ಲಿ ಕೊಡಿಸಲಿದ್ದಾರೆ. ನಿಮ್ಮಲ್ಲಿ ಕೆಲವರಿಗೆ ಉಡುಗೊರೆಗಳು ಸಿಗಲಿವೆ. ನಿಮ್ಮ ಆಪ್ತ ಸ್ನೇಹಿತರ ಅನಾರೋಗ್ಯ ನಿಮಗೆ ಚಿಂತೆಗೆ ಕಾರಣ ಆಗಲಿದೆ. ಬಹಳ ಸಮಯದಿಂದ ನೀವು ಪಾಲಿಸುತ್ತಾ ಬಂದಿದ್ದ ನಿಯಮ ಮುರಿಯುವಂತೆ ಆಗಬಹುದು. ಮಹಿಳೆಯರಿಗೆ ಮನೆಯಲ್ಲಿ ಪೂಜೆ ಪುನಸ್ಕಾರ ಅದರ ಸಿದ್ಧತೆ ಇವುಗಳಿಗೆ ಹೆಚ್ಚು ಸಮಯ ಮೀಸಲು ಇಡಬೇಕಾಗುತ್ತದೆ. ಕಳೆದು ಹೋಗಿದೆ ಎಂದುಕೊಂಡ ಬೆಲೆ ಬಾಳುವ ವಸ್ತುವೊಂದು ಮತ್ತೆ ಸಿಗುವ ಯೋಗ ಇದೆ. ನಿಮ್ಮಲ್ಲಿ ಕೆಲವರಿಗೆ ಗೆಳತಿಯರ ಜೊತೆಗೆ ಅವರ ಮನೆಗೆ ಬೇಕಾದ ವಸ್ತು ತರುವುದಕ್ಕೆ ಹೋದಾಗ ನೀವೂ ಕೆಲವು ವಸ್ತು ಕೊಳ್ಳುವ ಸಾಧ್ಯತೆ ಇದೆ. ನೀವು ಏನಾದರೂ ಕ್ರೆಡಿಟ್ ಕಾರ್ಡ್ ಬಳಸುತ್ತೀರಿ ಎಂದಿದ್ದಲ್ಲಿ ಖರ್ಚಿನ ಮೇಲೆ ನಿಗಾ ಇರಲಿ.
ನೀವು ಏನನ್ನು ಮಾಡಬಲ್ಲಿರಿ ಮತ್ತು ಏನು ಮಾತ್ರ ಮಾಡಲು ಸಾಧ್ಯ ಎಂಬ ಬಗ್ಗೆ ಗಮನ ಇಟ್ಟುಕೊಳ್ಳಿ. ಅತ್ಯುತ್ಸಾಹ ತೋರಿಸಿ, ನೀವಾಗಿ ಮೈ ಮೇಲೆ ಎಳೆದುಕೊಂಡ ಜವಾಬ್ದಾರಿ ಭಾರೀ ಭಾರ ಆಗಿ ಒತ್ತಡ ಎನಿಸಬಹುದು. ನಿಮ್ಮಲ್ಲಿ ಕೆಲವರು ಯೋಗ, ರೇಕಿ, ಪ್ರಾಣಾಯಾಮ ಅಥವಾ ಜಿಮ್ ಇಂಥದ್ದಕ್ಕೆ ಸೇರುವ ಸಾಧ್ಯತೆ ಇದೆ. ಆನ್ ಲೈನ್ ಕ್ಲಾಸ್ ಆದರೂ ಸೇರಿಕೊಳ್ಳುವ ನಿರ್ಧಾರ ಮಾಡಲಿದ್ದೀರಿ. ಗುರಿ ಇಲ್ಲದೆ ಒಮ್ಮೆ ಪ್ರಯತ್ನ ಎಂದು ಮಾಡಿದ ಕೆಲಸದಿಂದ ಲಾಭ ಕಂಡು, ಅದನ್ನೇ ಮುಂದುವರಿಸುವ ಸಾಧ್ಯತೆ ಇದೆ. ಸಿದ್ಧತೆ ಬಗ್ಗೆ ಕೂಡ ಗಮನ ಕೊಡಿ, ಅಗತ್ಯ ಮಾರ್ಗದರ್ಶನ ಪಡೆದು ಮುಂದುವರಿಯುವುದು ಕ್ಷೇಮ. ಕೃಷಿಕರಿಗೆ ಹಣದ ಹೊಂದಾಣಿಕೆ ಪ್ರಯತ್ನಗಳು ಯಶ ಕಾಣಲಿವೆ. ನೀವು ಈಗಾಗಲೇ ಯಾರಿಗಾದರೂ ಹಣ ನೀಡುವ ಮಾತು ಕೊಟ್ಟಿದ್ದಲ್ಲಿ ಅದನ್ನು ಈಡೇರಿಸಲು ಸಾಧ್ಯ ಆಗಲಿದೆ. ಮನೆಗೆ ಹೊಸ ಸ್ಕೂಟರ್- ಬೈಕ್ ಅಥವಾ ಕಾರು ಇಂಥದ್ದನ್ನು ಖರೀದಿ ಮಾಡುವ ಯೋಗ ನಿಮ್ಮಲ್ಲಿ ಕೆಲವರಿಗೆ ಇದೆ. ಸ್ನೇಹಿತರು ನಿಮ್ಮ ಸಹಾಯ ಕೇಳಿ ಬರಲಿದ್ದು, ಅವರಿಗೆ ನಿಮ್ಮಿಂದ ಆದ ಸಹಾಯ ಮಾಡಲು ಮುಂದಾಗುತ್ತೀರಿ. ವೃತ್ತಿನಿರತರು ಸಿಟ್ಟು ಉದ್ರೇಕದಿಂದ ವರ್ತಿಸುವಂತೆ ಆಗಲಿದೆ. ನೀವು ಎಲ್ಲ ಸೂಚನೆ- ಸಲಹೆ ನೀಡಿದ ಹೊರತಾಗಿಯೂ ಕೆಲವರು ತಪ್ಪು ಮಾಡುವುದರಿಂದ ನಿಮಗೆ ಸಹಿಸಲು ಸಾಧ್ಯವಾಗದೆ ಹೀಗಾಗಲಿದೆ. ಸಮಸ್ಯೆ ಮೂಲ ತಿಳಿಯದೆ ಅದರ ಪರಿಹಾರಕ್ಕೆ ಹೊರಡಬೇಡಿ. ನಿಮ್ಮ ಅನುಭವ, ಬುದ್ಧಿ ಹಾಗೂ ತಿಳಿವಳಿಕೆಯನ್ನು ಮೀರಿದ ಸಂಗತಿಗಳು ಇವೆ ಎಂದು ಒಪ್ಪಿಕೊಳ್ಳುವಂಥ ಸನ್ನಿವೇಶಗಳು ಎದುರಾಗಲಿವೆ. ವಿದ್ಯಾರ್ಥಿಗಳು ಒಂದು ಬಗೆಯ ಅಸಹಾಯಕತೆ ಎದುರಿಸುತ್ತೀರಿ. ನಿಮಗೆ ಗೊತ್ತಿರುವ ವಿಚಾರವನ್ನು ಸಹಿ ಹೇಳಲಾಗದ ಸನ್ನಿವೇಶ ಎದುರಾಗಲಿದೆ. ಇತರರಿಗೆ ಸಹಾಯ ಆಗುವುದಾದರೆ ಆಗಲಿ ಎಂದುಕೊಂಡು ನಿಮಗೆ ಬಂದಂಥ ಅವಕಾಶ ಸಹ ಬಿಟ್ಟುಕೊಡಲು ಮುಂದಾಗುತ್ತೀರಿ. ನೀವು ತೋರಿದ ಕಾಳಜಿ- ಪ್ರೀತಿ ಇತರರು ನಿಮ್ಮ ಬಗ್ಗೆ ಹೊಂದಿಲ್ಲ ಎಂಬುದು ಬೇಸರಕ್ಕೆ ಕಾರಣ ಆಗಬಹುದು. ಮಹಿಳೆಯರಿಗೆ ಮನಸ್ಸಲ್ಲಿ ಇರುವಂಥ ಸಂಗತಿಯನ್ನು ಹೇಳಲು ಅವಕಾಶ ಸಿಗಲಿದೆ. ಸಿಟ್ಟು ಇರಬಹುದು ಅಥವಾ ಪ್ರೀತಿ ಇರಬಹುದು, ಅದನ್ನು ಸಂಬಂಧ ಪಟ್ಟವರಿಗೆ ತಿಳಿಸಲಿದ್ದೀರಿ. ಇದರಿಂದ ಮಾನಸಿಕ ಸಮಾಧಾನ ದೊರೆಯಲಿದೆ. ನಿಮ್ಮಲ್ಲಿ ಯಾರು ಬಟ್ಟೆ, ಪರ್ ಫ್ಯೂಮ್, ಸೋಪ್, ಮೇಕಪ್ ಸಾಮಗ್ರಿಗಳು ಇಂಥವುಗಳು ಮಾರಾಟ ಮಾಡುತ್ತಾ ಇದ್ದೀರಿ ಅಂಥವರಿಗೆ ಆದಾಯ ಮತ್ತು ಲಾಭ ಎರಡೂ ಹೆಚ್ಚಾಗುವಂಥ ಯೋಗ ಇದೆ.
ಮನೆಯಲ್ಲಿ ಶುಭ ಕಾರ್ಯಗಳು ನಡೆಯುವ ಯೋಗ ಇದೆ. ಇನ್ನು ಸಂತಾನ ನಿರೀಕ್ಷೆಯಲ್ಲಿ ಇರುವವರಿಗೆ ಸಹ ಶುಭ ಸುದ್ದಿ ಕೇಳಿ ಬರಲಿದೆ. ತುಂಬ ಕಡಿಮೆ ಮೊತ್ತದಲ್ಲಿ ಖರೀದಿಸಿದ್ದ ಚಿನ್ನ, ಬೆಳ್ಳಿ, ಷೇರು ಅಥವಾ ಭೂಮಿಗೆ ತುಂಬ ಒಳ್ಳೆ ಬೆಲೆ ಬರಲಿದ್ದು, ನಿಮ್ಮಲ್ಲಿ ಕೆಲವರು ಅದು ಮಾರಾಟ ಮಾಡಿ, ಬೇರೆ ಹೂಡಿಕೆ ಮಾಡಲು ಮುಂದಾಗುತ್ತೀರಿ. ಏಕಾಏಕಿ ಹಲವು ಅವಕಾಶ ಹುಡುಕಿ ಬರಲಿವೆ. ಉದ್ಯೋಗ ಬದಲಾವಣೆಗೆ ಉತ್ತಮ ಸಮಯ. ಪ್ರತಿಷ್ಠಿತ ಸಂಸ್ಥೆಗಳಿಂದ ತಾವಾಗಿಯೇ ನಿಮಗೆ ಆಫರ್ ನೀಡಬಹುದು. ಅಥವಾ ಈಗಾಗಲೇ ಇಂಟರ್ ವ್ಯೂ ಆಗಿದೆ ಎಂದಾದಲ್ಲಿ ಜಾಬ್ ಆಫರ್ ಬಂದು ಬಿಡಬಹುದು. ಕೃಷಿಕರು ಜಮೀನು ಮಾರಾಟ ಮಾಡಬೇಕು ಎಂದೇನಾದರೂ ಪ್ರಯತ್ನ ಮಾಡುತ್ತಾ ಇದ್ದಲ್ಲಿ ಉತ್ತಮ ಬೆಲೆ ದೊರೆಯುವ ಅಥವಾ ಮಾತುಕತೆ ಮುಗಿಸಿ, ಅಡ್ವಾನ್ಸ್ ನೀಡುವ ಸಾಧ್ಯತೆ ಇದೆ. ಸ್ವಂತಕ್ಕೆ ಅಂತ ಇಟ್ಟುಕೊಂಡಿದ್ದ ಹಣವನ್ನು ಸೋದರ ಸಂಬಂಧಿಗಳ ಅನುಕೂಲಕ್ಕೆ ನೀಡಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ನಿಮ್ಮ ಈ ನಿರ್ಧಾರಕ್ಕೆ ಕುಟುಂಬ ಸದಸ್ಯರಿಂದ ಆಕ್ಷೇಪ ಬರುವ ಸಾಧ್ಯತೆ ಇದೆ. ವೃತ್ತಿನಿರತರು ನಿಮ್ಮ ವೃತ್ತಿಗೆ ಸಂಬಂಧಿಸಿದ ಹೊಸ ಕೋರ್ಸ್ ಗೆ ಸೇರ್ಪಡೆ ಆಗುವ ಬಗ್ಗೆ ತೀರ್ಮಾನ ಕೈಗೊಳ್ಳುತ್ತೀರಿ. ಇನ್ನು ನಿಮಗೆ ಅವಮಾನ ಮಾಡಬೇಕು ಎಂಬ ಉದ್ದೇಶ ಇರಿಸಿಕೊಂಡು, ಪ್ರಶ್ನೆ ಕೇಳುವವರಿಗೆ ಸರಿಯಾದ ಉತ್ತರ ನೀಡಲಿದ್ದೀರಿ. ನಿಮ್ಮಲ್ಲಿ ಕೆಲವರಿಗೆ ಸನ್ಮಾನ- ಗೌರವಗಳು ದೊರೆಯುವ ಯೋಗ ಇದೆ. ಇನ್ನು ಮಕ್ಕಳ ವಿದ್ಯಾಭ್ಯಾಸದ ಸಲುವಾಗಿ ನಿಮ್ಮಲ್ಲಿ ಕೆಲವರು ಮನೆ ಬದಲಾವಣೆ ಮಾಡುವ ಆಲೋಚನೆ ಮಾಡಲಿದ್ದೀರಿ. ವಿದ್ಯಾರ್ಥಿಗಳಿಗೆ ಮರೆವಿನ ಸಮಸ್ಯೆ ಕಾಡಬಹುದು. ಇನ್ನು ಬೆಲೆ ಬಾಳುವ ವಸ್ತುಗಳನ್ನೋ ಅಥವಾ ಗಾಡಿ ಕೀ, ಗ್ಯಾಜೆಟ್ ಗಳು, ಚಾರ್ಜರ್ ಅನ್ನು ಎಲ್ಲಿಟ್ಟಿದ್ದೀರಿ ಎಂಬುದು ಮರೆತು ಹೋಗಿ, ಹುಡುಕಾಡುವಂತೆ ಆಗಲಿದೆ. ಬಹಳ ಹೊತ್ತಿನ ತನಕ ಟೀವಿ ಅಥವಾ ಮೊಬೈಲ್ ಅಥವಾ ಟ್ಯಾಬ್ಲೆಟ್ ನೋಡುವ ಅಭ್ಯಾಸ ಇರುವವರಿಗೆ ತಲೆ ನೋವು, ಕಣ್ಣಿನ ಸಮಸ್ಯೆ ಈ ವಾರ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಮಹಿಳೆಯರು ಈಗಾಗಲೇ ನೀಡಿರುವ ಇಂಟರ್ ವ್ಯೂ ಫಲಿತಾಂಶ ಕಾಯುತ್ತಿದ್ದೀರಿ ಹಾಗೂ ಒಂದು ವೇಳೆ ಒಂದಕ್ಕಿಂತ ಹೆಚ್ಚು ಕಡೆಯಿಂದ ಉದ್ಯೋಗದ ಆಫರ್ ಬಂದಲ್ಲಿ ಸಾವಧಾನವಾಗಿ ಆಲೋಚಿಸಿ, ಮುಂದುವರಿಯಿರಿ. ನಿಮ್ಮ ಆಪ್ತರು ಅಥವಾ ಗುರು ಸಮಾನರಿಂದ ಸಲಹೆ ಪಡೆಯುವುದು ಉತ್ತಮ ಎನಿಸುತ್ತದೆ. ಮಸಾಲೆ ಪದಾರ್ಥಗಳ ಸೇವನೆಯಿಂದ ದೂರ ಇರುವುದು ಉತ್ತಮ. ನಿಮ್ಮಲ್ಲಿ ಕೆಲವರಿಗೆ ಗ್ಯಾಸ್ಟ್ರಿಕ್ ಸಮಸ್ಯೆ ಉಲ್ಬಣಿಸಲಿದೆ.
ನಿಮ್ಮ ಬಳಿ ಇದ್ದದ್ದು ಹಾಗೂ ನೀವು ಈಗ ಕಳೆದುಕೊಂಡದ್ದು ಏನು ಎಂಬ ಬಗ್ಗೆ ಬಹಳ ಚಿಂತೆ ಕಾಡಲಿದೆ. ಮುಖ್ಯವಾಗಿ ಸಂಬಂಧದ ವಿಷಯದಲ್ಲಿ ತುಂಬ ಯೋಚನೆ ಮಾಡುವಂತೆ ಆಗಲಿದೆ. ನೀವು ಬೇಡ ಅಂದುಕೊಂಡರೂ ಹಳೆ ನೆನಪುಗಳು ಆವರಿಸಲಿವೆ. ಪ್ರೀತಿ- ಪ್ರೇಮದಲ್ಲಿ ಇದ್ದು, ಆ ನಂತರ ಕೆಲ ಸಮಯದಿಂದ ಮಾತನಾಡುತ್ತಿಲ್ಲ ಅಥವಾ ನೇರವಾಗಿ ನೋಡಿಲ್ಲ ಎನ್ನುವವರಿಗೆ ವಿರಹ ತುಂಬ ಕಾಡಲಿದೆ. ಸಂಬಂಧಿಕರ ಮನೆ ಕಾರ್ಯಕ್ರಮಗಳಿಗೆ ನಿಮಗೆ ಆಹ್ವಾನ ಬರಬಹುದು. ನಿಮಗೆ ಅಂತ ವಹಿಸಿದ ಕೆಲಸ ಅದೆಷ್ಟೇ ಸಣ್ಣದಾದರೂ ನೀವೇ ಮಾಡಿ. ಯಾವುದೇ ಕಾರಣಕ್ಕೂ ಬೇರೆಯವರಿಗೆ ವಹಿಸ ಬೇಡಿ. ಒಂದು ವೇಳೆ ಹೀಗೆ ಮಾಡಿದಲ್ಲಿ ದೊಡ್ಡ ಅವಕಾಶ ಕಳೆದುಕೊಳ್ಳುವಂಥ ಸನ್ನಿವೇಶ ಸೃಷ್ಟಿ ಆಗಲಿದೆ. ಕೃಷಿಕರಿಗೆ ತಮ್ಮ ಆಪ್ತರ ವರ್ತನೆಯೇ ಕಿರಿಕಿರಿ ಮಾಡಲು ಶುರು ಆಗುತ್ತದೆ. ಮೊದ ಮೊದಲಿಗೆ ನಿಮ್ಮ ಯೋಜನೆ, ಯೋಚನೆ ಸರಿಯಾಗಿದೆ, ಹಾಗೇ ಮಾಡೋಣ ಎಂದಿದ್ದವರು ದಿಢೀರ್ ಆಗಿ ಆಕ್ಷೇಪ ಹೇಳಲಿಕ್ಕೆ ಶುರು ಮಾಡಲಿದ್ದಾರೆ. ತರಕಾರಿ ಬೆಳೆಗಾರರಿಗೆ ನಷ್ಟ ಆಗುವ ಸಾಧ್ಯತೆ ಹೆಚ್ಚಿದೆ. ನೀವು ಸಾಮಾನ್ಯವಾಗಿ ಅನುಸರಿಸುವ ಪದ್ಧತಿಯನ್ನು ಬದಲಿಸಿಕೊಳ್ಳಬೇಡಿ. ವೃತ್ತಿನಿರತರಿಗೆ ಪ್ರತಿಷ್ಠೆ ಎಂಬಂತೆ ಕೆಲವು ವಿಚಾರಗಳು ಆಗಲಿವೆ. ಯಾವುದೇ ವಿಷಯಕ್ಕೆ ಪ್ರತಿಕ್ರಿಯೆ ನೀಡಬಾರದು ಅಂದುಕೊಂಡ ನಂತರವೂ ಹಾಗಿರುವುದಕ್ಕೆ ಸಾಧ್ಯವಾಗುವುದಿಲ್ಲ. ಇತರರ ಕಣ್ಣಿಗೆ ನೀವು ಅಹಂಕಾರಿ ಎಂಬಂತೆ ಕಾಣುವ ಸಾಧ್ಯತೆ ಇದೆ. ಆದ್ದರಿಂದ ಸನ್ನಿವೇಶ ಹೇಗೆ ನಿಭಾಯಿಸಬೇಕು ಎಂಬ ಸ್ಪಷ್ಟತೆ ಇಟ್ಟುಕೊಳ್ಳುವುದು ಮುಖ್ಯ. ವಿದ್ಯಾರ್ಥಿಗಳಿಗೆ ಬ್ರ್ಯಾಂಡೆಡ್ ಶೂ, ಬಟ್ಟೆ, ವಾಚ್ ಇಂಥವುಗಳನ್ನು ಪಡೆಯುವ ಯೋಗ ಇದೆ. ಒಂದೋ ನಿಮ್ಮ ತಂದೆ- ತಾಯಿಯೇ ಕೊಡಿಸಬಹುದು ಅಥವಾ ಸಂಬಂಧಿಗಳೋ ನಿಮಗೆ ಬಹಳ ಹತ್ತಿರದ ಸ್ನೇಹಿತರೋ ಉಡುಗೊರೆ ನೀಡುವ ಯೋಗ ಇದೆ. ಇತರರಿಂದ ನೀವಾಗಿಯೇ ವಹಿಸಿಕೊಂಡ ಜವಾಬ್ದಾರಿ ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವ ಕಡೆಗೆ ಲಕ್ಷ್ಯವನ್ನು ನೀಡಿ. ಹೆಣ್ಣುಮಕ್ಕಳು ತಮ್ಮ ನಿತ್ಯದ ಔಷಧಗಳು ಅಥವಾ ಅಲಂಕಾರಿಕ ಬಳಕೆ ಲೋಷನ್, ಕ್ರೀಮ್ ಇತ್ಯಾದಿಗಳನ್ನು ಗಮನಿಸಿ, ಎಚ್ಚರಿಕೆಯಿಂದ ಬಳಸುವುದು ಕ್ಷೇಮ. ಏಕೆಂದರೆ ಈ ವಾರ ಅಲರ್ಜಿ ಆಗುವ ಸಾಧ್ಯತೆ ಇದೆ. ಅದರಲ್ಲೂ ಚರ್ಮಕ್ಕೆ ಸಂಬಂಧಿಸಿದ ಕೆಲವು ಅಲರ್ಜಿ ಆಗಬಹುದು, ಜಾಗ್ರತೆ. ಇನ್ನು ಇತರರ ಪ್ರೀತಿ- ಪ್ರೇಮ ಹಾಗೂ ಮದುವೆ ವಿಚಾರದಲ್ಲಿ ತಲೆ ಹಾಕುವುದಕ್ಕೆ ಹೋಗಬೇಡಿ.
ಬೂಟಿನಲ್ಲಿ ಇರುವ ಕಲ್ಲಿನಂತೆ ನಿಮ್ಮನ್ನು ಕಾಡುತ್ತಿದ್ದ ವಿಷಯ ಒಂದನ್ನು ಬಗೆ ಹರಿಸಿಕೊಳ್ಳಲು ತೀರ್ಮಾನ ಮಾಡಲಿದ್ದೀರಿ. ತುಂಬ ನಯವಾಗಿ ಮಾತಾಡುವ ಅಭ್ಯಾಸ ಇರುವವರು ಸಹ ಧ್ವನಿ ಎತ್ತರಿಸಿ ಮಾತು ಆಡುವಂಥ ಸನ್ನಿವೇಶ ಕೆಲವು ಸೃಷ್ಟಿ ಆಗಬಹುದು. ನಿಮ್ಮಲ್ಲಿ ಯಾರು ಮನೆ ನಿರ್ಮಾಣದಲ್ಲಿ ತೊಡಗಿದ್ದೀರೋ ಅಂಥವರಿಗೆ ಈ ವಾರ ಭಾರೀ ಓಡಾಟ ಆಗಲಿದೆ. ಒಂದೇ ಕೆಲಸಕ್ಕೆ ನಾಲ್ಕಾರು ಬಾರಿ ಓಡಾಟ ನಡೆಸುವಂತೆ ಆಗುತ್ತದೆ. ಆದರೂ ಅಂತಿಮವಾಗಿ ನಿಮ್ಮ ಮನಸ್ಸಿಗೆ ಸಮಾಧಾನ ಆಗುವಂಥ ಬೆಳವಣಿಗೆ ಆಗಲಿದೆ. ಕಾಗದ- ಪತ್ರ, ದಾಖಲಾತಿಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆ ತೆಗೆದುಕೊಂಡು ಹೋಗುವಾಗ ನೀವು ಸಾಮಾನ್ಯವಾಗಿ ತೆಗೆದುಕೊಳ್ಳುವ ಮುನ್ನೆಚ್ಚರಿಕೆಗಿಂತ ಹೆಚ್ಚಿನ ಜಾಗ್ರತೆ ವಹಿಸಿ. ಕೃಷಿಕರಿಗೆ ಬಹಳ ಉತ್ತಮವಾದ ವಾರ ಇದಾಗಿರಲಿದೆ. ಆದಾಯ ಮೂಲ ಜಾಸ್ತಿ ಮಾಡಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ನೀವು ಮಾಡುವ ಪ್ರಯತ್ನಗಳು ಯಶಸ್ಸು ಕಾಣಲು ಆರಂಭಿಸುತ್ತವೆ. ನಿಮ್ಮದೇ ಕುಟುಂಬ ಸದಸ್ಯರು ಸಹ ಅನುಮಾನ ವ್ಯಕ್ತ ಪಡಿಸಿದ್ದ ಕೆಲಸ- ಕಾರ್ಯಗಳು ಅಂದುಕೊಂಡಿದ್ದಕ್ಕಿಂತ ಸರಾಗ ಹಾಗೂ ಸರಳವಾಗಿ ಮುಗಿಯಲಿದ್ದು, ಇದರಿಂದಾಗಿ ನಿಮ್ಮ ಆತ್ಮವಿಶ್ವಾಸ ಬಹಳ ಹೆಚ್ಚಾಗಿರುತ್ತದೆ. ಸೋದರ ಸಂಬಂಧಿಗಳ ಜೊತೆಗೆ ಆಸ್ತಿ ವ್ಯಾಜ್ಯಗಳು ಇದ್ದಲ್ಲಿ ಅದನ್ನು ಬಗೆಹರಿಸಿಕೊಳ್ಳುವ ವೇದಿಕೆ ದೊರೆಯಲಿದೆ. ವೃತ್ತಿನಿರತರು ಮಾತಿನ ಮೂಲಕವಾಗಿ ಬಹಳ ಕಠಿಣವಾಗಿದ್ದ ಕೆಲಸವನ್ನು ಸಹ ಮಾಡಿ ಮುಗಿಸಲಿದ್ದೀರಿ. ನೀವು ಊಹೆ ಕೂಡ ಮಾಡಿರದಂಥ ಕೆಲವು ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ನೀವು ತುಂಬ ಗೌರವದಿಂದ ಕಾಣುವ ವ್ಯಕ್ತಿಯೇ ನಿಮ್ಮ ಬಗ್ಗೆ ಬಹಳ ಮೆಚ್ಚುಗೆ ಮಾತುಗಳನ್ನು ಆಡಲಿದ್ದಾರೆ. ಕೌಟುಂಬಿಕ ಜೀವನದಲ್ಲಿಯೂ ಸಂತೋಷ ಇರುತ್ತದೆ. ವಿದ್ಯಾರ್ಥಿಗಳು ಸಣ್ಣ- ಪುಟ್ಟದಾದರೂ ಅಪಘಾತ ಮಾಡಿಕೊಳ್ಳುವ ಸಾಧ್ಯತೆ ಇದೆ. ಸಾಧ್ಯವಾದಷ್ಟೂ ಈ ವಾರ ಹೊಸದು ಏನನ್ನೂ ಪ್ರಯತ್ನಿಸುವುದಕ್ಕೆ ಹೋಗಬೇಡಿ. ಅದರಲ್ಲೂ ಸ್ನೇಹಿತರ ಸ್ಕೂಟರ್, ಬೈಕ್ ಅಥವಾ ಕಾರು ಇಂಥದ್ದೇನಾದರೂ ಒಮ್ಮೆ ಓಡಿಸಿ, ನೋಡೋಣ ಅಂತೇನಾದರೂ ಮನಸ್ಸಲ್ಲಿ ಇದ್ದಲ್ಲಿ ಈ ವಾರ ಖಡಾಖಂಡಿತವಾಗಿ ಮಾಡಬೇಡಿ. ಮಹಿಳೆಯರಿಗೆ ಕೆಲವು ಕೆಲಸಗಳು ಮುಜುಗರ ಉಂಟು ಮಾಡಲಿವೆ. ಇನ್ನು ನಿಮ್ಮ ಹತ್ತಿರದವರು, ಆಪ್ತರಾದವರು ನೀಡಿದ್ದ ಮಾತನ್ನು ನೆಚ್ಚಿಕೊಂಡು, ನೀವು ಇತರರಿಗೆ ಮಾತು ನೀಡಿದಲ್ಲಿ ಅವಮಾನ ಎದುರಿಸುವಂತೆ ಆಗುತ್ತದೆ. ಆಹಾರ ಪಥ್ಯ ಅನುಸರಿಸುತ್ತಾ ಇರುವವರು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬೇಡಿ.
ಹಣದ ವಿಚಾರದಲ್ಲಿ ಶಿಸ್ತು ರೂಢಿಸಿಕೊಳ್ಳಲು ನಿರ್ಧಾರ ಮಾಡಲಿದ್ದೀರಿ. ಈ ತನಕ ನೀವು ತೆಗೆದುಕೊಂಡ ತೀರ್ಮಾನಗಳ ತಪ್ಪು- ಒಪ್ಪುಗಳ ವಿಮರ್ಶೆ ಮಾಡುವುದಕ್ಕೆ ಅಂತಲೇ ಸಮಯ ಮೀಸಲು ಇಡಲಿದ್ದೀರಿ. ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೊಸ ಅವಕಾಶಗಳು ತೆರೆಯಲಿವೆ. ನಿಮ್ಮಲ್ಲಿ ಕೆಲವರು ಮನೆಯಲ್ಲಿ ದೇವತಾ ಕಾರ್ಯಗಳು ಆಯೋಜಿಸುವಂಥ ಯೋಗ ಇದೆ. ಈ ವಾರ ನಿಮಗೆ ಕೆಲವು ಸಾಲಗಳನ್ನು ತಕ್ಷಣ ತೀರಿಸಬೇಕು ಎಂಬ ಒತ್ತಡ ಸೃಷ್ಟಿ ಆಗಬಹುದು. ಅದರಲ್ಲೂ ನೀವೇನಾದರೂ ಸ್ನೇಹಿತರು ಸಂಬಂಧಿಗಳಿಂದ ಸಾಲ ಪಡೆದಿದ್ದೀರಿ ಅಂತಾದರೆ ಆ ಒತ್ತಡ ಜಾಸ್ತಿ ಆಗಬಹುದು. ಈ ಹಿಂದೆ ನೀವೇ ಮಾಡಿದ ನಿರ್ಧಾರ ಬದಲಿಸುವುದರಿಂದ ಕುಟುಂಬ ಸದಸ್ಯರಿಂದ ಆಕ್ಷೇಪ ವ್ಯಕ್ತವಾಗಲಿದೆ. ಕೃಷಿಕರಿಗೆ ಮನೆಯ ಜವಾಬ್ದಾರಿ ಆದ್ಯತೆ ಪಡೆದುಕೊಳ್ಳಲಿದೆ. ಮನೆ ದುರಸ್ತಿ, ನವೀಕರಣಕ್ಕೆ ಅಂತ ನಿರ್ಧರಿಸಿ, ಅಲ್ಪ ಪ್ರಮಾಣದಲ್ಲಿಯಾದರೂ ಸಾಲ ಮಾಡಬೇಕಾದ ಪರಿಸ್ಥಿತಿ ಉದ್ಭವಿಸಲಿದೆ. ಸಂಘ- ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಗಳು ದೊರೆಯುವ ಸೂಚನೆ ನಿಮಗೆ ದೊರೆಯಬಹುದು. ರಾಜಕೀಯ ಕ್ಷೇತ್ರದಲ್ಲಿ ಯಾರ ಜೊತೆಗೆ ನೀವು ಗುರುತಿಸಿಕೊಂಡಿದ್ದೀರಿ ಎಂಬುದು ಈ ವಾರ ಪ್ರಾಮುಖ್ಯ ಪಡೆಯಲಿದ್ದು, ಸ್ಥಾನ- ಮಾನ, ಜವಾಬ್ದಾರಿಗಳು ವಹಿಸುವ ಸಾಧ್ಯತೆ ಇದೆ. ವೃತ್ತಿನಿರತರಿಗೆ ಏಕಾಗ್ರತೆ ಕೊರತೆ ಕಾಡಬಹುದು. ಇದರಿಂದಾಗಿ ನೀವು ಕೆಲಸದಲ್ಲಿ ನಿರ್ಲಕ್ಷ್ಯ ತೋರುತ್ತಿದ್ದೀರಿ ಎಂಬಂತೆ ಬಿಂಬಿತ ಆಗಲಿದೆ. ನೀವು ಹೊಸ ಕ್ಲೈಂಟ್ ಗಳ ಕೆಲಸಗಳನ್ನು ಒಪ್ಪಿಕೊಳ್ಳುವ ಮುನ್ನ ಅದರ ಸಾಧ್ಯಾಸಾಧ್ಯತೆ ನೋಡಿಕೊಳ್ಳಿ. ಇತರರ ಒತ್ತಾಯಕ್ಕೆ ಮಣಿದು, ಒಪ್ಪಿಕೊಂಡು ಬಿಟ್ಟಲ್ಲಿ ಅದು ಒತ್ತಡ ಆಗಿಬಿಡಬಹುದು. ನೀವು ಬಹಳ ಇಷ್ಟಪಟ್ಟು ಖರೀದಿ ಮಾಡಿದ್ದ ವಸ್ತುವೊಂದನ್ನು ನಿಮ್ಮ ಸ್ನೇಹಿತರೊಬ್ಬರು ಕೇಳಿದರು ಎಂಬ ಕಾರಣಕ್ಕೆ ಅವರಿಗೆ ನೀಡಬೇಕಾದಂಥ ಸನ್ನಿವೇಶ ಸೃಷ್ಟಿ ಆಗಲಿದೆ. ವಿದ್ಯಾರ್ಥಿಗಳಿಗೆ ಹಠದ ಧೋರಣೆ ಇರುತ್ತದೆ. ಇತರರು ನಿಮ್ಮ ಬಗ್ಗೆ ಹೇಳಿದಂಥ ವಿಮರ್ಶೆಯನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಿ. ಒಂದು ವೇಳೆ ನಿಮ್ಮ ಗುಣದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂದಾದಲ್ಲಿ ಅದನ್ನು ಸಹ ಮಾಡಿಕೊಳ್ಳಿ. ಹೊಸದಾಗಿ ಸ್ನೇಹಿತರನ್ನು ಮಾಡಿಕೊಳ್ಳುವ ಮುಂಚೆ ಒಂದಕ್ಕೆ ನಾಲ್ಕು ಬಾರಿಗೆ ಆಲೋಚಿಸಿ, ನಿರ್ಧಾರ ಮಾಡಿ. ಮಹಿಳೆಯರಿಗೆ ಮದುವೆಗಾಗಿ ಪ್ರಯತ್ನ ಮಾಡುತ್ತಾ ಇದ್ದಲ್ಲಿ ಮನಸ್ಸಿಗೆ ಒಪ್ಪುವಂಥ ಸಂಬಂಧಗಳು ದೊರೆಯುವ ಯೋಗ ಇರಲಿದೆ. ನಿಮ್ಮ ಸಂಬಂಧಿಗಳ ಮೂಲಕ ಬರುವಂಥ ರೆಫರೆನ್ಸ್ ಗಳನ್ನು ಗಂಭೀರವಾಗಿ ಪರಿಗಣಿಸಿ. ಉದ್ಯೋಗ ಬದಲಾವಣೆಗಾಗಿ ಪ್ರಯತ್ನ ಮಾಡುತ್ತಿದ್ದಲ್ಲಿ ಅದರಲ್ಲಿ ಯಶಸ್ಸು ದೊರೆಯಲಿದೆ.
ನಿಮ್ಮಲ್ಲಿ ಯಾರು ವ್ಯಾಪಾರ- ವ್ಯವಹಾರ ಮಾಡಬೇಕು ಅಂದುಕೊಂಡು ಹಣಕಾಸಿನ ಹೊಂದಾಣಿಕೆಗೆ ಪ್ರಯತ್ನ ಮಾಡುತ್ತಾ ಇದ್ದಲ್ಲಿ ನಿಮ್ಮ ತಂದೆ ಅಥವಾ ತಾಯಿ ಅಥವಾ ಸ್ನೇಹಿತರು ಅಥವಾ ಸಂಬಂಧಿಕರಿಂದ ನೆರವು ದೊರೆಯುವ ಸಾಧ್ಯತೆ ಇದೆ. ನಿಮ್ಮಲ್ಲಿ ಯಾರು ಈಗಾಗಲೇ ಸೈಟು- ಜಮೀನು ಖರೀದಿ ಮಾಡಿದ್ದೀರಿ ಅಲ್ಲಿಂದ ಆದಾಯ ತರುವುದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಿದ್ದೀರಿ. ಸರ್ಕಾರಿ ಕೆಲಸಕ್ಕೆ ಪ್ರಯತ್ನ ಮಾಡುತ್ತಿರುವವರಿಗೆ ಪರೀಕ್ಷೆ- ದೈಹಿಕ ಕ್ಷಮತೆ ಇತ್ಯಾದಿಗಳಿಗೆ ಅತ್ಯುತ್ತಮ ತರಬೇತಿ ದೊರೆಯುವ ಸ್ಥಳ- ವ್ಯಕ್ತಿ ಬಗ್ಗೆ ಮಾಹಿತಿ ದೊರೆಯಲಿದೆ. ತಾಯಿ ಅಥವಾ ತಾಯಿ ಸಮಾನರಾದವರ ಆರೋಗ್ಯ ಸ್ಥಿತಿ ಚಿಂತೆಗೆ ಕಾರಣ ಆಗಬಹುದು. ಅದರಲ್ಲೂ ಥೈರಾಯ್ಡ್- ಕೊಲೆಸ್ಟ್ರಾಲ್ ರೀತಿಯ ಸಮಸ್ಯೆಯಿಂದ ಬಳಲುತ್ತಿದ್ದಲ್ಲಿ ಹೆಚ್ಚಿನ ನಿಗಾ ವಹಿಸಿ. ಕೃಷಿಕರಿಗೆ ಹೊಸ ಹೊಸ ಆದಾಯ ಮೂಲಗಳು ಗೋಚರಿಸುವುದಕ್ಕೆ ಆರಂಭಿಸುತ್ತದೆ. ಈಗ ಜಮೀನಿದ್ದಲ್ಲಿ ಅದರ ಜೊತೆಗೆ ಇನ್ನಷ್ಟು ಸ್ಥಳ ಖರೀದಿ ಮಾಡುವ ಆಲೋಚನೆ ಮಾಡಬಹುದು ಅಥವಾ ಗುತ್ತಿಗೆಗಾದರೂ ಸ್ಥಳವನ್ನು ಪಡೆಯುವ ನಿರ್ಧಾರ ಮಾಡುವ ಸಾಧ್ಯತೆ ಇದೆ. ನಿಮ್ಮ ಸಂಬಂಧಿಗಳಿಗೋ ಅಥವಾ ಸ್ನೇಹಿತರಿಗೋ ನೀವು ಒಂದು ವೇಳೆ ಸಾಲ ನೀಡಿದ್ದಲ್ಲಿ ಅದನ್ನು ವಸೂಲಿ ಮಾಡುವುದಕ್ಕೆ ಅವಕಾಶ ದೊರೆಯಲಿದೆ. ವೃತ್ತಿನಿರತರು ಸಣ್ಣದಾಗಿ ಆರಂಭಿಸಿದ ಹೊಸ ಸೇವೆಯೊಂದು ಅತ್ಯುತ್ತಮ ಆದಾಯ ಹಾಗೂ ಲಾಭ ತರುವುದಕ್ಕೆ ಆರಂಭಿಸಲಿದೆ. ಇನ್ನು ಇದೇ ವೇಳೆ ಅದಕ್ಕಾಗಿ ಹೆಚ್ಚುವರಿ ಜನರನ್ನು ನೇಮಿಸಿಕೊಳ್ಳಲು ತೀರ್ಮಾನವನ್ನು ಮಾಡಲಿದ್ದೀರಿ. ಯಾರು ನಿಮ್ಮ ಬಗ್ಗೆ ಈ ಹಿಂದೆ ಹಗುರವಾಗಿ ಮಾತನಾಡಿದ್ದರೋ ಅಂಥವರೇ ಸಹಾಯ ಕೇಳಿಕೊಂಡು ಬರಲಿದ್ದಾರೆ. ಒಂದು ವೇಳೆ ನೆರವು ನೀಡಲು ನಿಮಗೆ ಸಾಧ್ಯವಿದ್ದರೆ ನೆರವಾಗಿ. ಏಕೆಂದರೆ, ಭವಿಷ್ಯದಲ್ಲಿ ಅವರಿಂದ ನಿಮಗೆ ಕೆಲವು ಅನುಕೂಲಗಳು ಒದಗಿ ಬರಲಿವೆ. ವಿದ್ಯಾರ್ಥಿಗಳಿಗೆ ವ್ಯಾಸಂಗ ಮಾಡುವ ಶಿಕ್ಷಣ ಸಂಸ್ಥೆಯಲ್ಲಿ ಹಾಗೂ ಸ್ನೇಹಿತರ ಮಧ್ಯೆ ಜನಪ್ರಿಯತೆ ಹೆಚ್ಚಾಗುವ ಸಮಯ ಇದಾಗಿರಲಿದೆ. ನಿಮ್ಮಲ್ಲಿ ಕೆಲವರಿಗೆ ಪ್ರತಿಷ್ಠಿತ ಸಂಸ್ಥೆಗಳಿಂದ ಸ್ಕಾಲರ್ ಷಿಪ್ ದೊರೆಯುವ ಯೋಗ ಇದೆ. ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನಾದರೂ ನಿಮಗೆ ಯಾರಾದರೂ ಹೇಳಲಿದ್ದಾರೆ. ಮಹಿಳೆಯರು ಉದ್ಯೋಗಸ್ಥರಾದಲ್ಲಿ ಬೆಳವಣಿಗೆಗೆ ಅವಕಾಶಗಳು ಇರುವ ಕಡೆಗೆ ವರ್ಗಾವಣೆ ಆಗುವ ಸಾಧ್ಯತೆಗಳಿವೆ. ಅಥವಾ ನಿಮ್ಮ ಬಳಿಯೇ ಈ ಬಗ್ಗೆ ವಿಚಾರಿಸಿ, ಅಲ್ಲಿಗೆ ತೆರಳುವುದಕ್ಕೆ ಆಸಕ್ತಿ ಇದೆಯೇ ಎಂದು ಕೇಳುವ ಸಾಧ್ಯತೆ ಇದೆ. ಇದನ್ನು ಬಳಸಿಕೊಂಡಲ್ಲಿ ಭವಿಷ್ಯದಲ್ಲಿ ಒಳ್ಳೊಳ್ಳೆ ಅವಕಾಶಗಳು ತೆರೆದುಕೊಳ್ಳಲಿವೆ. ಯಾವುದೇ ಪ್ರಸ್ತಾವಕ್ಕೆ “ಇಲ್ಲ” ಎನ್ನುವ ಮುನ್ನ ಸಾವಿರ ಬಾರಿ ಆಲೋಚಿಸಿ.
ಇತರರು ನಿಮ್ಮ ಮೇಲೆ ಅಭಿಪ್ರಾಯ ಹೇರಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಬಲವಾಗಿ ಅನಿಸುವುದಕ್ಕೆ ಆರಂಭ ಆಗುತ್ತದೆ. ಮೊದಮೊದಲಿಗೆ ಸಣ್ಣ ಧ್ವನಿಯಲ್ಲಿ ಹೇಳುತ್ತಿದ್ದವರು ರೇಗುವುದಕ್ಕೆ, ಬಯ್ಯುವುದಕ್ಕೆ ಆರಂಭಿಸಿದ್ದಾರೆ ಎಂಬುದು ನಿಮ್ಮೊಳಗೆ ಅಸಹನೆಗೆ ಕಾರಣ ಆಗಬಹುದು. ಇದಕ್ಕೆ ನೀವು ಅವರಿಗೆ ಕೊಟ್ಟ ಸಲುಗೆ ಅಥವಾ ಅತಿಯಾದ ಗೌರವ ಕಾರಣ ಎಂದು ಅನಿಸಲಿದ್ದು, ನಿಮ್ಮ ಧೋರಣೆಯಲ್ಲಿ ಬದಲಾವಣೆ ಮಾಡಿಕೊಳ್ಳಲೇ ಬೇಕು ಎಂದೆನಿಸುವುದಕ್ಕೆ ಶುರು ಆಗಲಿದೆ. ನಿಮ್ಮಲ್ಲಿ ಕೆಲವರಿಗೆ ದಿಢೀರನೆ ದೂರ ಪ್ರಯಾಣ ಮಾಡಬೇಕಾದ ಅನಿವಾರ್ಯ ಸೃಷ್ಟಿ ಆಗಬಹುದು. ಇನ್ನು ಬರಲಾರದು ಎಂದುಕೊಂಡ ಉದ್ಯೋಗವೋ ಹಣವೋ ಅಥವಾ ಅವಕಾಶವೋ ಅಚಾನಕ್ಕಾಗಿ ಹುಡುಕಿಕೊಂಡು ಬರುವಂಥ ಯೋಗ ನಿಮ್ಮ ಪಾಲಿಗೆ ಇದೆ. ಕೃಷಿಕರಿಗೆ ಒಂದು ಬಗೆಯ ವೈರಾಗ್ಯ ಕಾಡಲಿದೆ. ಎಷ್ಟು ಶ್ರಮ ಹಾಕಿದರೂ ಇದಿಷ್ಟೇ ಹಣೆಬರಹ ಎಂಬ ಭಾವನೆ ಅದಾಗಿರಲಿದೆ. ನಿಮಗೆ ಬಹಳ ಹತ್ತಿರದವರ ಅನಾರೋಗ್ಯವೋ ಅಥವಾ ಆರ್ಥಿಕ ಸ್ಥಿತಿಯೋ ನಿಮಗೆ ಒಂದು ರೀತಿಯಲ್ಲಿ ಆತಂಕಕ್ಕೆ ಕಾರಣ ಆಗಬಹುದು. ಆದರೆ ಇಂಥ ವಿಚಾರವನ್ನು ಮನಸ್ಸಿಗೆ ಹಚ್ಚಿಕೊಳ್ಳಬೇಡಿ. ಸರ್ಕಾರಕ್ಕೆ ಅರ್ಜಿ ಹಾಕಿಕೊಂಡಂಥದ್ದು ಇಲ್ಲಿಯ ತನಕ ನಾನಾ ಕಾರಣಗಳಿಗೆ ತಡ ಆಗುತ್ತಾ ಬಂದಿದೆ ಎಂದಾದಲ್ಲಿ ಅದಕ್ಕಿರುವ ಅಡೆತಡೆಗಳು ನಿವಾರಣೆ ಆಗುವಂತೆ ಪ್ರಭಾವಿಗಳು ನಿಮ್ಮ ನೆರವಿಗೆ ಬರಲಿದ್ದಾರೆ. ವೃತ್ತಿನಿರತರು ನಿಮ್ಮಲ್ಲಿ ಒಂದು ಸಾತ್ವಿಕ ಸಿಟ್ಟು ಈ ವಾರ ಇರಲಿದೆ. ಯಾರು ಸರಿಯಾಗಿ ತಮ್ಮ ಜವಾಬ್ದಾರಿ ನಿರ್ವಹಿಸುತ್ತಿಲ್ಲ ಎಂದು ಎನಿಸುತ್ತದೆಯೋ ಅವರಿಗೆ ಮುಖಕ್ಕೆ ಹೊಡೆದಂತೆ, ಯಾವ ಮುಲಾಜು ಸಹ ನೋಡದಂತೆ ಹೇಳಲಿದ್ದೀರಿ. ಈ ಕಾರಣಕ್ಕೆ ನಿಮ್ಮ ಜೊತೆಗೆ ಕೆಲಸ ಮಾಡುವವರಿಗೆ ಬೇಸರ ಸಹ ಆಗಬಹುದು. ಆದರೆ ಇದು ತಾತ್ಕಾಲಿಕ ಅಷ್ಟೇ. ನಿಮಗೆ ಸರಿ ಅನಿಸಿದ್ದನ್ನು ಮಾಡುವುದಕ್ಕೆ ಹಿಂಜರಿಕೆ ಬೇಡ. ಇದರಿಂದ ದೀರ್ಘಾವಧಿಗೆ ನಿಮಗೆ ಅನುಕೂಲ ಆಗಲಿದೆ. ವಿದ್ಯಾರ್ಥಿಗಳಿಗೆ ನಾಟಕ ತರಬೇತಿ, ಸಂಗೀತ- ನೃತ್ಯ ತರಬೇತಿ ಇಂಥವುಗಳಿಗೆ ಸೇರುವಂಥ ಯೋಗ ಇದೆ. ಹೀಗೆ ನೀವು ತೆರಳುವ ಕಡೆಯಲ್ಲಿ ಆಗುವ ಹೊಸ ಪರಿಚಯಗಳಿಂದ ಮನಸ್ಸಿಗೆ ಸಂತೋಷ ಆಗಲಿದೆ. ಇನ್ನು ನಿಮ್ಮಲ್ಲಿ ಕೆಲವರು ಮನೆಯಲ್ಲಿ ಲೈಬ್ರರಿ ಮಾಡಿಕೊಳ್ಳುವುದಕ್ಕೆ ಮುಂದಾಗಲಿದ್ದೀರಿ. ಅದಕ್ಕೆ ಬೇಕಾದ ಪುಸ್ತಕಗಳನ್ನು ಹುಡುಕಿ ತರುವುದಕ್ಕೆ ಹೆಚ್ಚಿನ ಸಮಯ ಮೀಸಲಿಡಲಿದ್ದೀರಿ. ಮಹಿಳೆಯರಿಗೆ ಆಲಸ್ಯ ಕಾಡಲಿದೆ. ದೈನಂದಿನ ಕೆಲಸ- ಕಾರ್ಯಗಳಲ್ಲಿ ತೊಡಗಿಕೊಳ್ಳುವುದರಲ್ಲಿ ಆಸಕ್ತಿ ಇರುವುದಿಲ್ಲ. ಮುಖ್ಯವಾಗಿ ದಣಿವು- ಸುಸ್ತು ನಿಮ್ಮನ್ನು ಕಾಡಬಹುದು. ವೈದ್ಯಕೀಯ ತಪಾಸಣೆ ಅಗತ್ಯ ಇದೆ ಎಂದು ಕಂಡುಬಂದಲ್ಲಿ ಕಡ್ಡಾಯವಾಗಿ ಪರೀಕ್ಷೆ ಮಾಡಿಸಿಕೊಳ್ಳುವುದು ಕ್ಷೇಮ.
ಲೇಖನ- ಎನ್.ಕೆ.ಸ್ವಾತಿ