ಟಯರ್- 2 ಕಟ್ಟಡ ನಿರ್ಮಾತೃ ಕ್ರಿಸ್ಟಲ್ ಗ್ರೂಪ್ನ ಅಟ್ಲಾಂಟಿಸ್ ಪ್ರಾಜೆಕ್ಟ್ನಲ್ಲಿ ಚಿತ್ರನಟ ಅಮಿತಾಬ್ ಬಚ್ಚನ್ ಅವರು 5,84 ಚದರಡಿಯ ಡೂಪ್ಲೆಕ್ಸ್ ಫ್ಲ್ಯಾಟ್ ಆಸ್ತಿಯನ್ನು ರೂ. 31 ಕೋಟಿಗೆ ಖರೀದಿ ಮಾಡಿದ್ದಾರೆ. ಮುಂಬೈನಲ್ಲಿ ಖರೀದಿ ಮಾಡಿರುವ ಈ ಫ್ಲ್ಯಾಟ್ ವ್ಯವಹಾರಕ್ಕೆ ಸಂಬಂಧಿಸಿದ ನೋಂದಣಿ ದಾಖಲಾತಿಗಳ ಮಾಹಿತಿ Zapkey.comಗೆ ದೊರೆತಿದೆ. ಈ ಆಸ್ತಿಯನ್ನು ಅಮಿತಾಬ್ ಬಚ್ಚನ್ 2020ರ ಡಿಸೆಂಬರ್ನಲ್ಲಿ ಖರೀದಿ ಮಾಡಿದ್ದು, 2021ರ ಏಪ್ರಿಲ್ನಲ್ಲಿ ನೋಂದಣಿ ಆಗಿದೆ. 31 ಕೋಟಿ ರೂಪಾಯಿ ಮೌಲ್ಯದ ಆಸ್ತಿಗೆ ಶೇ 2ರಂತೆ 62 ಲಕ್ಷ ರೂಪಾಯಿಯ ಮುದ್ರಾಂಕ ಶುಲ್ಕ (ಸ್ಟ್ಯಾಂಪ್ ಡ್ಯೂಟಿ) ಕೂಡ ಭರಿಸಿದ್ದಾರೆ. ಈ ಆಸ್ತಿ ಖರೀದಿಯ ಮೌಲ್ಯದ ಲೆಕ್ಕ ನೋಡಿದರೆ, ಚದರಡಿಗೆ ರೂ. 60,000 ಆಗುತ್ತದೆ. ಆರು ಕಾರು ಪಾರ್ಕ್ ಜಾಗ, 27 ಹಾಗೂ 28ನೇ ಅಂತಸ್ತಿನಲ್ಲಿ ಈ ಆಸ್ತಿ ಇದೆ. ಮನಿಕಂಟ್ರೋಲ್ ವೆಬ್ಸೈಟ್ನಿಂದಲೂ ಈ ಆಸ್ತಿ ನೋಂದಣಿ ದಾಖಲೆ ಕಾಪಿಯನ್ನು ಪರಿಶೀಲಿಸಲಾಗಿದೆ.
ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ವಿಲಾಸಿ ಅಪಾರ್ಟ್ಮೆಂಟ್ಗಳ ಮಾರಾಟಕ್ಕೆ ಉತ್ತೇಜನ ಸಿಕ್ಕಿದೆ. ಸೆಲೆಬ್ರಿಟಿಗಳು, ಉದ್ಯಮಿಗಳು, ವೃತ್ತಿಪರರು ಈಗಿನ ಬೆಲೆ ಇಳಿಕೆ ಸಂದರ್ಭದ ಲಾಭ ಪಡೆಯುವುದಕ್ಕೆ ಮುಂದಾಗಿದ್ದಾರೆ. ಜತೆಗೆ ಕೆಲವು ರಾಜ್ಯಗಳಲ್ಲಿ ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನೂ ಇಳಿಸಲಾಗಿದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಮಹಾರಾಷ್ಟ್ರ ಸರ್ಕಾರವು ಮುದ್ರಾಂಕ ಶುಲ್ಕವನ್ನು ಡಿಸೆಂಬರ್ 31, 2020ರ ತನಕ ಶೇ 5ರಿಂದ ಶೇ 2ಕ್ಕೆ ತಾತ್ಕಾಲಿಕವಾಗಿ ಇಳಿಸಿತ್ತು. ಆ ನಂತರ 2021ರ ಜನವರಿಯಿಂದ ಮಾರ್ಚ್ ತನಕ ಶೇ 3ಕ್ಕೆ ತಂದಿತು. ಆ ನಂತರ ವಿಸ್ತರಣೆ ಮಾಡದಿರುವುದಕ್ಕೆ ನಿರ್ಧರಿಸಿ, 2021- 22ರ ಸಾಲಿಗೆ ಸಿದ್ಧಪಡಿಸಿದ ದರವನ್ನು ಬದಲಾಯಿಸದೆ ಹಾಗೇ ಇಡುವುದಕ್ಕೆ ತೀರ್ಮಾನಿಸಿತು.
ಇದೇ ಪ್ರಾಜೆಕ್ಟ್ನಲ್ಲಿ ನಟಿ ಸನ್ನಿ ಲಿಯೋನ್ ಕೂಡ ಖರೀದಿ ಮಾಡಿದ್ದಾರೆ. ಅವರು ಖರೀದಿ ಮಾಡಿದ ಆಸ್ತಿ ಮೌಲ್ಯ ರೂ. 16 ಕೋಟಿ. ಮಾರ್ಚ್ 28, 2021ಕ್ಕೆ ಕೊಂಡಿದ್ದಾರೆ. ಅಂದಹಾಗೆ ಬಾಲಿವುಡ್ ನಿರ್ದೇಶಕ ಹಾಗೂ ನಿರ್ಮಾಪಕ ಆನಂದ್ ಎಲ್. ರಾಯ್ ಕೂಡ ಇದೇ ಪ್ರಾಜೆಕ್ಟ್ನಲ್ಲಿ ಡೂಪ್ಲೆಕ್ಸ್ ಅಪಾರ್ಟ್ಮೆಂಟ್ ಖರೀದಿಸಿದ್ದಾರೆ. ಪತಿ-ಪತ್ನಿ ಹೆಸರಲ್ಲಿ ಅಪಾರ್ಟ್ಮೆಂಟ್ನಲ್ಲಿ ರೂ. 25.3 ಕೋಟಿಗೆ ಕೊಂಡಿದ್ದಾರೆ. ಈ ಡೂಪ್ಲೆಕ್ಸ್ 27 ಮತ್ತು 28ನೇ ಅಂತಸ್ತಿನಲ್ಲಿ ಇದ್ದು, ಒಟ್ಟು 5,761 ಚದರಡಿಯ ಜಾಗ, ಜತೆಗೆ 5 ಕಾರು ನಿಲ್ಲಿಸುವಷ್ಟು ಜಾಗ ಬರುತ್ತದೆ. ಮಾರ್ಚ್ 8, 2021ರಲ್ಲಿ ನೋಂದಣಿ ಆಗಿದ್ದು, ರೂ. 75.9 ಲಕ್ಷ ಮುದ್ರಾಂಕ ಶುಲ್ಕ ಪಾವತಿಸಲಾಗಿದೆ. ಕ್ರಿಸ್ಟಲ್ ಪ್ರೈಡ್ ಡೆವಲಪರ್ಸ್ನ ಈ ಅಟ್ಲಾಂಟಿಸ್ ಪ್ರಾಜೆಕ್ಟ್ ಇನ್ನೂ ನಿರ್ಮಾಣ ಹಂತದಲ್ಲಿದೆ. ಕೇವಲ 34 ಅಪಾರ್ಟ್ಮೆಂಟ್ಗಳು ಮಾತ್ರ ಇವೆ. ಹೆಚ್ಚಿನ ದಟ್ಟಣೆ ಇಲ್ಲದ ಹೌಸಿಂಗ್ ಪ್ರಾಜೆಕ್ಟ್ ಇದಾಗಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಕೊರೊನಾ ಹೊಡೆತಕ್ಕೆ ನೆಲ ಕಚ್ಚಿದ ರಿಯಲ್ಎಸ್ಟೇಟ್ ಉದ್ಯಮ
(Bollywood stars Amitabh Bachchan and Sunny Leone purchased crores of rupees woth of flats in Mumbai)
Published On - 1:26 pm, Fri, 28 May 21