ಬೆಂಗಳೂರು: ರಾಜ್ಯದಲ್ಲಿ 26 ಜನರಲ್ಲಿ ಹೆಚ್3ಎನ್2(H3N2) ಸೋಂಕು ಪತ್ತೆಯಾಗಿದೆ. ಹೆಚ್3ಎನ್2 ಸೋಂಕಿನಿಂದ 15 ವರ್ಷದ ಒಳಗಿನ ಮಕ್ಕಳಿಗೆ ಹೆಚ್ಚು ಅಪಾಯವಿದೆ. 60 ವರ್ಷ ಮೆಲ್ಪಟ್ಟವರಿಗೂ ಇದು ಸುಲಭವಾಗಿ ಹರಡುತ್ತೆ. ಗರ್ಭಿಣಿಯರು ಹೆಚ್ಚು ಎಚ್ಚರಿಕೆ ವಹಿಸಬೇಕು. ರಾಜ್ಯದ ಜನರು ಹೆಚ್ಚು ಜಾಗೃತವಾಗಿರಬೇಕು. ಸೀನುವಾಗ ಕೆಮ್ಮುವಾಗ ಮುನ್ನೇಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್(K. Sudhakar) ಹೇಳಿದ್ದಾರೆ.
ರಾಜ್ಯದಲ್ಲಿ ಹೆಚ್3ಎನ್2 ಆತಂಕ ಹಿನ್ನೆಲೆ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಹೆಚ್3ಎನ್2 ಸೋಂಕು ನಿಯಂತ್ರಣ ಹಾಗೂ ಮುನ್ನೇಚ್ಚರಿಕೆ ಕ್ರಮಗಳ ಕುರಿತು ತಜ್ಞರು, ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ತಾಂತ್ರಿಕ ಸಲಹಾ ಸಭೆ ನಡೆಯಿತು. ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ರಾಜ್ಯದಲ್ಲಿ ಒಟ್ಟು 60 ಅಡೆನಾಯ್ಡ್ ವೈರಸ್ ಪತ್ತೆಯಾಗಿದೆ ಎಂದು ಹೇಳಿದರು.
ಕಳೆದ 6 ತಿಂಗಳಿನಿಂದ ಆರೋಗ್ಯ ಸಿಬ್ಬಂದಿಗಳು ಮಾಸ್ಕ್ ಧರಿಸುತ್ತಿಲ್ಲ. ಹೀಗಾಗಿ ಇವತ್ತಿನಿಂದಲೇ ರಾಜ್ಯದ ಆರೋಗ್ಯ ಇಲಾಖೆ ಹಾಗೂ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಮಾಸ್ಕ್ ಹಾಕಿಕೊಳ್ಳಬೇಕು. ಬೆಂಗಳೂರಿನಲ್ಲಿ ಹೆಚ್3ಎನ್2 ಎರಡು ಪ್ರಕರಣಗಳು ಪತ್ತೆಯಾಗಿವೆ. ಜನವರಿ ಯಿಂದ ಮಾರ್ಚ್ವರೆಗೆ 20 H1N1 ಪ್ರಕರಣಗಳು ಪತ್ತೆಯಾಗಿವೆ. ಅಡಿನಾಯ್ಡ್ ವೈರಸ್ ಕೊಂಚ ಜಾಸ್ತಿ ಆಗಿದೆ. ಜನ ಗಾಬರಿ ಪಡಬೇಕಾದ ಅವಶ್ಯಕತೆ ಇಲ್ಲ. ಎಲ್ಲ ಮುನ್ನೆಚ್ಚರಿಕೆ ವಹಿಸಲಾಗಿದೆ. ರಾಜ್ಯದಲ್ಲಿ ಔಷಧಿಯ ಕೊರತೆ ಇಲ್ಲ. ಬೇಸಿಗೆಯಲ್ಲಿ ತಾಪಮಾನ ಹೆಚ್ಚಾಗಿರುತ್ತೆ. ಹೀಗಾಗಿ ಮುನ್ನೆಚ್ಚರಿಕೆ ವಹಿಸಬೇಕಿದೆ ಎಂದು ತಿಳಿಸಿದ್ದಾರೆ.
ಜನರು ವೈಯಕ್ತಿಕವಾಗಿ ಚಿಕಿತ್ಸೆ ತೆಗೆದುಕೊಳ್ಳುವುದು ಸೂಕ್ತವಲ್ಲ. ಅತಿಯಾಗಿ ರೋಗನಿರೋಧಕ ಔಷಧಿಗಳನ್ನು ತೆಗೆದುಕೊಳ್ಳುವುದು ಸೂಕ್ತವಲ್ಲ. ಬೇಸಿಗೆಗೆ ನಾವು ಕಾಲಿಟ್ಟಿದ್ದೇವೆ. ಬಿಸಿಗಾಳಿ ಇದ್ದು, ಬಿಸಿಲಿನಲ್ಲಿ ಅನಗತ್ಯವಾಗಿ ಓಡಾಟ ಮಾಡುವುದು ಜನರು ನಿಲ್ಲಿಸಬೇಕು. ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆ ವರೆಗೆ ಬಿಸಿಲಿಗೆ ಹೋಗೋದು ಕಡಿಮೆ ಮಾಡಬೇಕು. ಇಲ್ಲದಿದ್ದರೇ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ ಎಂದು ಸೂಚನೆ ನೀಡಿದರು.
ಈ ಸಂಬಂಧ ಆರೋಗ್ಯ ಇಲಾಖೆ ಇಂದು ಪ್ರತ್ಯೇಕ ಮಾರ್ಗಸೂಚಿ ನೀಡುತ್ತೆ. ಹೆಚ್3ಎನ್2 ಕೂಡಾ ಕೊವಿಡ್ ಟೆಸ್ಟ್ ರೀತಿಯಲ್ಲಿಯೇ ಮಾಡಲಾಗುವುದು. ಸ್ವ್ಯಾಬ್ ಟೆಸ್ಟ್ ಮೂಲಕ ಹೆಚ್3ಎನ್2 ವೈರಸ್ ಪತ್ತೆ ಹಚ್ಚಬಹುದು. ಎಚ್3ಎನ್2 ಸೋಂಕು ಪತ್ತೆಯಾದರೂ ಗುಣಮುಖರಾಗಬಹುದು ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:39 pm, Mon, 6 March 23