ಹೆತ್ತ ಮಕ್ಕಳಿಂದಲೇ ವಂಚನೆಗೆ ಒಳಗಾದ 85 ವರ್ಷದ ವೃದ್ಧೆ; ಹಿರಿಯ ನಾಗರಿಕರ ನ್ಯಾಯ ಮಂಡಳಿಗೆ ದೂರು

| Updated By: ganapathi bhat

Updated on: Mar 30, 2021 | 8:18 PM

ಐವರು ಮಕ್ಕಳಲ್ಲಿ ಮೂವರು ನ್ಯಾಯಮಂಡಳಿಯ ಸಹಾಯಕ ಆಯುಕ್ತರಿಗೆ ಪತ್ರ ಬರೆದು ತಾಯಿಯ ಪೋಷಣೆಯ ಹಣ ನೀಡಲು ಸಾಧ್ಯವಿಲ್ಲ ಎಂದು ಲಿಖೀತವಾಗಿ ಹೇಳಿದ್ದಾರೆ. ಇದರಿಂದ ರೋಸಿ ಹೋದ ಮೋಂತಿಯಮ್ಮ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಟಾನದ ಮೊರೆ ಹೋಗಿದ್ದಾರೆ.

ಹೆತ್ತ ಮಕ್ಕಳಿಂದಲೇ ವಂಚನೆಗೆ ಒಳಗಾದ 85 ವರ್ಷದ ವೃದ್ಧೆ; ಹಿರಿಯ ನಾಗರಿಕರ ನ್ಯಾಯ ಮಂಡಳಿಗೆ ದೂರು
ಮೋಂತಿನ್ ಡಿಸೆಲ್ವಾ
Follow us on

ಉಡುಪಿ: ವೃದ್ಧೆಯೊಬ್ಬರು ಮಕ್ಕಳಿಂದಲೇ ವಂಚನೆಗೊಳಗಾಗಿದ್ದು, ಪತಿಬಿಟ್ಟು ಹೋದ ಎಕರೆಗಟ್ಟಲೆ ಆಸ್ತಿ ಇದ್ದರೂ ಆಸ್ತಿಯಲ್ಲಿ ತನ್ನ ಪಾಲು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಕಣ್ಣೆದುರೇ ತನ್ನ ಭೂಮಿ ಪರರ ಪಾಲಾಗುತ್ತಿರುವುದನ್ನು ಕಂಡು ಕಂಗಾಲಾಗಿರುವ 85 ವರ್ಷದ ಮೋಂತಿನ್ ಡಿಸೆಲ್ವಾ ಹಿರಿಯ ನಾಗರಿಕರ ನ್ಯಾಯ ಮಂಡಳಿಯ ಮೊರೆ ಹೋಗದ್ದಾರೆ. ಆದರೆ ಇದ್ಯಾವುದಕ್ಕೂ ಬೆಲೆ ಕೊಡದ ಮಕ್ಕಳು, ಮೋಂತಿನ್ ಡಿಸೆಲ್ವಾ ಅವರಿಗೆ ಇಳಿ ವಯಸ್ಸಿನಲ್ಲಿ ಹೋರಾಟಕ್ಕಿಳಿಯುವ ಅನಿವಾರ್ಯತೆಯನ್ನು ಸೃಷ್ಟಿಸಿದ್ದಾರೆ.

ಸಾಕಿದ ಗಿಣಿ ಹದ್ದಾಗಿ ಚುಚ್ಚುವುದು ಎಂದರೆ ಇದೇ ಇರಬೇಕು. ಮಂಗಳೂರಿನ ಕಲ್ಲಮುಂಡ್ಕೂರು ಗ್ರಾಮದ ನಿವಾಸಿಯಾದ ಮೋಂತಿನ್ ಡಿಸೆಲ್ವಾ ಅವರಿಗೆ ಮಕ್ಕಳೇ ವೈರಿಗಳಾಗಿದ್ದಾರೆ. ಅವರ ಪತಿ ಬ್ಯಾಪ್ಟಿಸ್ಟ್ ಡಿಸೆಲ್ವಾ ಬದುಕಿದ್ದಾಗ ಇಬ್ಬರೂ ಸೇರಿ ಸ್ವಂತ ಪರಿಶ್ರಮದಿಂದ ದುಡಿದು, ಮಕ್ಕಳಿಗೆಲ್ಲಾ ಶಿಕ್ಷಣ ನೀಡಿ, ಮದುವೆ ಮಾಡಿದ್ದರು. 2006 ರಲ್ಲಿ ಬ್ಯಾಪ್ಟಿಸ್ಟ್ ಡಿಸೆಲ್ವಾರು ತೀರಿಕೊಂಡಾಗ, ಕುಟುಂಬಕ್ಕಾಗಿ 6.25 ಎಕರೆ ಜಮೀನು ಹಾಗೂ ಒಂದು ಮನೆ ಬಿಟ್ಟು ಹೋಗಿದ್ದರು.

ತಂದೆ ಸತ್ತ ಕೂಡಲೇ ನಾಲ್ಕು ಹೆಣ್ಣು ಹಾಗೂ ಓರ್ವ ಗಂಡು ಮಗ ಆಸ್ತಿ ಪಾಲು ಮಾಡಲು ಒತ್ತಾಯ ಮಾಡಿದರು. ದಿನನಿತ್ಯದ ಒತ್ತಡದಿಂದ ರೋಸಿ ಹೋದ ಮೋಂತಿಯಮ್ಮ ಪರಸ್ಪರ ಒಪ್ಪಿಗೆ ಮೂಲಕ ಪಾಲು ಮಾಡಿಕೊಳ್ಳಲು ಸೂಚಿಸಿದರು. 2009 ರಲ್ಲಿ ವಿಭಾಗದ ಪತ್ರದ ಮೂಲಕ ಆಸ್ತಿಗಳನ್ನು ತಮ್ಮ ಪಾಲಿಗೆ ಮಾಡಿಕೊಂಡರು. ತಾಯಿಯ ಪಾಲಿಗೆ ಬಂದ 2.25 ಎಕರೆ ಜಮೀನು ವಿಂಗಡಿಸಿದ್ದರೂ ಕೂಡ ಹಕ್ಕುಪತ್ರಗಳಲ್ಲಿ ಮೋಂತಿಯಮ್ಮನ ಹೆಸರೇ ಸೇರಿಸಲಿಲ್ಲ. ಅಮ್ಮನ ಆಸ್ತಿಗೆ ಎಲ್ಲಾ ಮಕ್ಕಳು ಜಂಟಿಯಾಗಿ ಹಕ್ಕುದಾರರು ಎಂದು ವಿಭಾಗ ಪತ್ರದಲ್ಲೇ ದಾಖಲಿಸಿದ್ದರು. ಅಕ್ಷರ ಜ್ಞಾನ ಇಲ್ಲದ ಮೋಂತಿಯಮ್ಮನಿಗೆ ಅಕ್ಷರಸ್ತ ಮಕ್ಕಳು ಮಾಡಿದ ಕಿತಾಪತಿ ಗೊತ್ತೇ ಆಗಿಲ್ಲ.

ಆಸ್ತಿಗಾಗಿ ಮಕ್ಕಳ ವಿರುದ್ಧವೇ ಹೋರಾಟ ನಡೆಸುತ್ತಿರುವ ಮೋಂತಿನ್ ಡಿಸೆಲ್ವಾ

ಆಸ್ತಿ ಪಾಲಾದ ನಂತರ ತಾಯಿಯನ್ನು ನೋಡಿಕೊಳ್ಳೋದು ಯಾರು? ಎನ್ನುವ ಚರ್ಚೆ ಶುರುವಾಗಿದೆ. ಒಬ್ಬ ಮಗಳು ಜೀವನ ಪರ್ಯಂತ ತಾಯಿಯನ್ನು ನೋಡಿಕೊಳ್ಳುವ ನೆಪದಲ್ಲಿ ತಾಯಿಯ ಪಾಲಿಗೆ ಸೇರಿದ ಮೂರು ಸರ್ವೇ ನಂಬರ್​ಗಳನ್ನು ವರ್ಗಾಯಿಸಿಕೊಂಡಳು. ಅಂತಿಮ ದಿನಗಳಲ್ಲಿ ಮಕ್ಕಳು ತನ್ನನ್ನು ನೋಡಿಕೊಳ್ಳುತ್ತಾರಲ್ಲ ಎಂಬ ಆಸೆಯಿಂದ ಮೋಂತಿಯಮ್ಮ ಎಲ್ಲದಕ್ಕೂ ಒಪ್ಪಿಗೆ ನೀಡಿದರು. ಆದರೆ ತನ್ನ ಪಾಲನೆ ಮಾಡಬೇಕಾದ ಮಗಳು ಔಷಧಕ್ಕೂ ಹಣ ನೀಡದೇ ಇದ್ದಾಗ, ಆಸ್ತಿ ಮಾರಲು ನಿರ್ಧರಿಸಿದರು.

ತನ್ನ ವೈಯಕ್ತಿಕ ಹೆಸರಲ್ಲಿ ಯಾವುದೇ ಆಸ್ತಿ ಇಲ್ಲ ಎಂದು ತಿಳಿದದ್ದೇ ಆವಾಗ. ಮೋಂತಿಯಮ್ಮನಿಗೆ ಒಬ್ಬನೇ ಮಗ, ಮುಂಬೈನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಆತ ಸ್ವಲ್ಪ ಬುದ್ದಿಮಾಂದ್ಯ. ಈಗ ಅವನೇ ಮೋಂತಿಯಮ್ಮನನ್ನು ನೋಡಿಕೊಳ್ಳುವಂತಾಗಿದೆ. ಮಂಗಳೂರಿನ ಹಿರಿಯ ನಾಗರಿಕರ ಸಹಾಯವಾಣಿಯ ಮೂಲಕ ಪೊಲೀಸರನ್ನು ಸಂಪರ್ಕಿಸಿದ ಮೋಂತಿಯಮ್ಮ, ಪಾಂಡೇಶ್ವರ ಠಾಣೆಯಲ್ಲಿ ದೂರು ನೀಡಿದರು.

ಪೊಲೀಸರ ಮುಂದೆ ಮಕ್ಕಳು ತಪ್ಪು ಒಪ್ಪಿಕೊಂಡು, ತಾಯಿಯ ಪಾಲಿನ ಜಮೀನನ್ನು ಆರು ತಿಂಗಳೊಳಗೆ ಹಿಂದುರುಗಿಸುವ ಭರವಸೆ ಕೊಟ್ಟರು, ಆದರೆ ಆಸ್ತಿ ಕೊಡಲೇ ಇಲ್ಲ. ಮತ್ತೆ 2018 ರಲ್ಲಿ ಮೋಂತಿಯಮ್ಮ ಮಂಗಳೂರಿನ ಹಿರಿಯ ನಾಗರಿಕರ ನ್ಯಾಯ ಮಂಡಳಿಗೆ ದೂರುಕೊಟ್ಟರು. ನ್ಯಾಯಮಂಡಳಿಯು ವಿಚಾರಣೆ ನಡೆಸಿ ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಎಲ್ಲಾ ಮಕ್ಕಳು ಪ್ರತೀ ತಿಂಗಳು ತಲಾ 2 ಸಾವಿರ ರುಪಾಯಿ ನೀಡುವಂತೆ ಆದೇಶಿಸಿದೆ.

ಐವರು ಮಕ್ಕಳಲ್ಲಿ ಮೂವರು ನ್ಯಾಯಮಂಡಳಿಯ ಸಹಾಯಕ ಆಯುಕ್ತರಿಗೆ ಪತ್ರ ಬರೆದು ತಾಯಿಯ ಪೋಷಣೆಯ ಹಣ ನೀಡಲು ಸಾಧ್ಯವಿಲ್ಲ ಎಂದು ಲಿಖಿತವಾಗಿ ಹೇಳಿದ್ದಾರೆ. ಇದರಿಂದ ರೋಸಿ ಹೋದ ಮೋಂತಿಯಮ್ಮ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಟಾನದ ಮೊರೆ ಹೋಗಿದ್ದಾರೆ.

ತನ್ನ ಕಣ್ಣೆದುರೇ ಆಸ್ತಿಯ ಪರಭಾರೆ ಆಗುವುದನ್ನು ಕಂಡು ಮೋಂತಿಯಮ್ಮ ಕಣ್ಣೀರಿಡುತ್ತಿದ್ದಾರೆ. ಸ್ವಯಾರ್ಜಿತ ಆಸ್ತಿಯಾದ ಕಾರಣ ಪಾಲು ಮಾಡಿಕೊಂಡಿರುವುದನ್ನು ರದ್ದು ಮಾಡಲು ಕಾನೂನಲ್ಲಿ ಅವಕಾಶ ಇದೆ. ಆದರೆ ತನ್ನ ಪಾಲು ತನಗೆ ಕೊಟ್ಟರೆ ಸಾಕು, ಅದನ್ನು ಮಾರಿ ಬಂದ ಹಣದಲ್ಲಿ ಉಳಿದ ಜೀವನ ಕಳೆಯುತ್ತೇನೆ ಎನ್ನವುದು ಮೋಂತಿಯಮ್ಮನ ಉದಾರತೆ. ಇನ್ನಾದರೂ ಮಕ್ಕಳು ವೃದ್ಧಾಪ್ಯದಲ್ಲಿ ತಾಯಿಗೆ ಆರ್ಥಿಕವಾಗಿ ಆಸರೆ ಆಗಲಿ ಎನ್ನುವುದು ನಮ್ಮ ಆಶಯ.

ಇದನ್ನೂ ಓದಿ:
ವೃದ್ಧೆ ಹೆಸರಿನಲ್ಲಿದ್ದ ಆಸ್ತಿ ಬೇರೊಬ್ಬರಿಗೆ ನೋಂದಣಿ ಮಾಡಿ ಮೋಸ ಮಾಡುತ್ತಿದ್ದ ಖತರ್ನಾಕ್ ರಿಯಲ್ ಎಸ್ಟೇಟ್ ಗ್ಯಾಂಗ್ ವಿರುದ್ಧ FIR