
ತುಳುನಾಡಿನಲ್ಲಿರುವ (Tulunadu) ವಿಶಿಷ್ಟ ಆಚರಣೆಗಳಲ್ಲೊಂದು ಆಟಿ ಕಳಂಜ (Aati Kalenja). ತುಳುವಿನಲ್ಲಿ ಆಟಿ ತಿಂಗಳು ಅಂದರೆ ಆಷಾಢ ಮಾಸ. ಜೋರು ಮಳೆ ಬರುವ ಈ ಹೊತ್ತಲ್ಲಿ ಕೃಷಿ ಕೆಲಸಗಳು, ಹಬ್ಬವಾಗಲೀ ಶುಭ ಕಾರ್ಯವಾಗಲೀ ನಡೆಯುವುದಿಲ್ಲ. ಮಳೆಯಿಂದಾಗಿ ರೋಗ ರುಜಿನಗಳೂ ಬರುವ ಕಾಲ. ಹೀಗೆ ಊರಿಗೇ ಊರೇ ತಾಪತ್ರಯ ಎದುರಿಸುವಾಗ ಊರಿನ ಮಾರಿ ಕಳೆಯಲು ಮನೆಗೆ ಮನೆಗೆ ಬರುತ್ತಾನೆ ಆಟಿ ಕಳಂಜ. ಆಟಿ ಅಂದರೆ ಆಷಾಢ, ಕಳಂಜ/ಕಳೆಂಜ ಅಂದ್ರೆ ಕಳೆಯುವವನು ಎಂದರ್ಥ. ಆಷಾಢ ಮಾಸದ ಕಷ್ಟಗಳನ್ನು ಕಳೆಯಲು ಬರುವ ಆಟಿ ಕಳಂಜ ಈಗೀಗ ಅಪರೂಪ. ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕೇರಳದ ಕಾಸರಗೋಡಿನ ತುಳುವರು (ತುಳು ಭಾಷಿಗರು) ಹೆಚ್ಚಾಗಿ ವಾಸಿಸುವ ಪ್ರದೇಶದಲ್ಲಿ ಈಗಲೂ ಆಟಿ ತಿಂಗಳಲ್ಲಿ ಆಟಿ ಕಳಂಜ ಬರುತ್ತಾನೆ. ಆಟಿ ಕಳಂಜೆ ಬತ್ತುಂಡ್ ( ಆಟಿ ಕಳಂಜ ಬಂದ) ಎಂದು ಆಟಿ ಕಳಂಜನಿಗೆ ಬೇಕಾದ ವಸ್ತುಗಳನ್ನು ಮನೆಮಂದಿ ದಾನ ಮಾಡುವುದನ್ನು ಗ್ರಾಮೀಣ ಪ್ರದೇಶದಲ್ಲಿ ಈಗಲೂ ಕಾಣಬಹುದು. ಈ ಜಾನಪದ ಸಂಪ್ರದಾಯದ ಬಗ್ಗೆ ಮತ್ತಷ್ಟು ತಿಳಿಯೋಣ… ಆಟಿ ಕಳಂಜನೆಂಬ ನಂಬಿಕೆ ಆಷಾಢ ತಿಂಗಳು ಅಂದರೆ ಜೋರು ಮಳೆಗಾಲ ಬೇರೆ ಹೀಗಾಗಿ ಊರಿನಲ್ಲಿ ಮನುಷ್ಯರಿಗೆ ಪ್ರಾಣಿಗಳಿಗೆ ಕಾಯಿಲೆ ಹರಡುವುದು ಸರ್ವೇ ಸಾಮಾನ್ಯ. ಇಂಥಾ ಸಾಂಕ್ರಾಮಿಕ ಸೋಂಕುಗಳನ್ನು ಜನರು ಊರಿಗೆ ಮಾರಿ ಬಂತು ಎಂದೇ ಭಾವಿಸುತ್ತಾರೆ. ಈ ಮಾರಿಯನ್ನು ಕಳೆಯಲು ಬರುವವನೇ ಆಟಿ ಕಳಂಜ. ತುಳುನಾಡಿನಲ್ಲಿ ಭೂತಕಟ್ಟುವ ಸಮುದಾಯ (ನಲಿಕೆಯವರು) ಆಟಿ ಕಳಂಜ ವೇಷ ಹಾಕಿ ಮನೆ ಮನೆಗೆ ಬರುತ್ತಾರೆ. ಬೆಳ್ತಂಗಡಿ ಭಾಗದಲ್ಲಿ ಮೇರ ಜನಾಂಗದವರು ಈ ವೇಷ ತೊಡುತ್ತಾರೆ....