ನಿಖಿಲ್ ಹ್ಯಾಟ್ರಿಕ್​ ಸೋಲಿನ ಬಗ್ಗೆ ಅನಿತಾ ಕುಮಾರಸ್ವಾಮಿ ಭಾವನಾತ್ಮಕ ಪೋಸ್ಟ್

|

Updated on: Nov 25, 2024 | 7:52 PM

ಚನ್ನಪಟ್ಟಣ ಉಪಚುನಾವಣೆಯಲ್ಲಿ ಸೋಲು ದೇವೇಗೌಡ ಕುಟುಂಬವನ್ನು ಶಾಕ್​ಗೆ ಒಳಗಾಗುವಂತೆ ಮಾಡಿದೆ. ಅದರಲ್ಲೂ ನಿಖಿಲ್​ ಸತತ ಮೂರು ಬಾರಿ ಸೋಲುಕಂಡಿರುವುದಕ್ಕೆ ತೀವ್ರ ಬೇಸರದಲ್ಲಿದ್ದಾರೆ. ಇನ್ನು ಚನ್ನಪಟ್ಟಣ ಉಪಚುನಾವಣೆಯಲ್ಲಿ ನಿಖಿಲ್ ಸೋಲಿಗೆ ಅವರ ತಾಯಿ ಅನಿತಾ ಕುಮಾರಸ್ವಾಮಿ ಅವರು ಮೊದಲ ಬಾರಿಗೆ ಭಾವನಾತ್ಮಕ ಪೋಸ್ಟ್ ಮಾಡಿ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ.

ನಿಖಿಲ್ ಹ್ಯಾಟ್ರಿಕ್​ ಸೋಲಿನ ಬಗ್ಗೆ ಅನಿತಾ ಕುಮಾರಸ್ವಾಮಿ ಭಾವನಾತ್ಮಕ ಪೋಸ್ಟ್
ಅನಿತಾ ಕುಮಾರಸ್ವಾಮಿ, ನಿಖಿಲ್
Follow us on

ಬೆಂಗಳೂರು: (ನವೆಂಬರ್ 25): ಚನ್ನಪಟ್ಟಣ ಉಪಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲುಕಂಡಿದ್ದಾರೆ. ಈ ಮೂಲಕ ಸತತ ಮೂರು ಚುನಾವಣೆಯಲ್ಲಿ ಅವರಿಗ ಸೋಲಾಗಿದೆ. ಇನ್ನು ಮಗನ ಹ್ಯಾಟ್ರಿಕ್ ಸೋಲಿನ ಬಗ್ಗೆ ಅನಿತಾ ಕುಮಾರಸ್ವಾಮಿ ಅವರು ಮೊದಲ ಬಾರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು, ಭಾವನಾತ್ಮಕ ಭಾವಣೆಗಳನ್ನು ಹಂಚಿಕೊಂಡಿದ್ದಾರೆ. ನನ್ನ ಮಗ ಮೂರನೇ ಸಲ ಸೋತಿದ್ದಾನೆ. ಅವನು ಚುನಾವಣೆಯಲ್ಲಿ ಮಾತ್ರ ಸೋತಿದ್ದಾನೆಯೇ ಹೊರತು ಮನುಷ್ಯನಾಗಿ ಸೋತಿಲ್ಲ. ಅವನ ಮಾನವೀಯತೆ, ಸಹೃದಯತೆ ಸೋತಿಲ್ಲ ಎಂದಿದ್ದಾರೆ. ಈ ಮೂಲಕ ನಿಖಿಲ್​ ಸೋಲು ಹೀಯಾಳಿಸುವವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

ಚನ್ನಪಟ್ಟಣ ಫಲಿತಾಂಶದ ಬಗ್ಗೆ ಮೊದಲ ಬಾರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ಅನಿತಾ ಕುಮಾರಸ್ವಾಮಿ, ನನ್ನ ಪುತ್ರ ನಿಖಿಲ್ ಕುಮಾರಸ್ವಾಮಿ, ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಪರಾಜಯ ಹೊಂದಿದ್ದಾನೆ, ಒಪ್ಪುತ್ತೇನೆ. ಚುನಾವಣೆ ವ್ಯವಸ್ಥೆಯಲ್ಲಿ ಸೋಲು ಗೆಲುವು ಇದ್ದೇ ಇರುತ್ತದೆ ಹಾಗೂ ಒಬ್ಬರು ಗೆಲ್ಲಬೇಕಾದರೆ ಇನ್ನೊಬ್ಬರು ಸೋಲಲೇಬೇಕಾಗುತ್ತದೆ. ಆದರೆ ಸೋಲಿಗೆ ಅನೇಕ ಕಾರಣಗಳಿರುತ್ತವೆ. ಹಾಗೆಂದು ನಿಖಿಲ್ ಸೋಲಿನ ಕಾರಣಗಳ ಬಗ್ಗೆ ಚರ್ಚಿಸುವುದು ನನ್ನ ಉದ್ದೇಶವಲ್ಲ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಎಲ್ಲಿ ಕಳೆದುಕೊಂಡಿದ್ದೇನೋ..ಅಲ್ಲೇ ಹುಡುಕುತ್ತೇನೆ: ಶಪಥ ಮಾಡಿದ ನಿಖಿಲ್ ಕುಮಾರಸ್ವಾಮಿ


ರಾಜಕಾರಣದಲ್ಲಿ ನನಗಾಗಲಿ, ನನ್ನ ಪತಿಗಾಗಲಿ ಅಥವಾ ನನ್ನ ಪೂಜ್ಯ ಮಾವನವರಿಗೇ ಆಗಲಿ ಗೆಲುವು, ಸೋಲು ಹೊಸದೇನಲ್ಲ. ಎರಡನ್ನೂ ಸಮಚಿತ್ತದಿಂದ ಸ್ವೀಕರಿಸಿದ್ದೇವೆ. ಗೆದ್ದಾಗ ಬೀಗಿಲ್ಲ, ಸೋತಾಗ ಕುಗ್ಗಿಲ್ಲ. ಸೋತ ಹತಾಶೆಯಲ್ಲಿ ಅನ್ಯರನ್ನು ಹೀಗಳೆದಿಲ್ಲ. ನನ್ನ ಮಗನಿಗೂ ಇದೇ ಅನ್ವಯ ಆಗುತ್ತದೆ. ನನ್ನ ಮಗನ ಬಗ್ಗೆ ರಾಜ್ಯದ ಜನತೆಗೆ ಹೆಚ್ಚೇನೂ ಹೇಳುವ ಅಗತ್ಯವಿಲ್ಲ. ಅವನು ಒಳ್ಳೆಯ ಮಗ, ಒಳ್ಳೆಯ ಪತಿ, ಒಳ್ಳೆಯ ತಂದೆ. ರಾಜಕಾರಣಕ್ಕೆ ಬರುವ ಮುನ್ನ ಒಳ್ಳೆಯ ನಾಯಕ ನಟ. ಅವನಂಥ ಒಳ್ಳೆಯ ಮಗನನ್ನು ಪಡೆದಿದ್ದಕ್ಕಾಗಿ ನಾನೂ ನನ್ನ ಪತಿ ಹೆಮ್ಮೆಪಡುತ್ತೇವೆ ಎಂದಿದ್ದಾರೆ.

ತಾಯಿಯಾಗಿ ಅವನ ಯಶಸ್ಸನ್ನು ಸಂಭ್ರಮಿಸುತ್ತೇನೆ. ಅವನಿಗೆ ಕಷ್ಟ ಎದುರಾದಾಗ ಕಣ್ಣೀರಿಟ್ಟಿದ್ದೇನೆ. ನನ್ನ ಕರುಳಬಳ್ಳಿಯ ಮೇಲೆ ನನಗಷ್ಟು ಮಮಕಾರ ಇರುತ್ತದಲ್ಲವೇ? ನನ್ನಂತಹ ಎಲ್ಲಾ ತಾಯಂದಿರಿಗೂ ನನ್ನ ಭಾವನೆಗಳು ಅರ್ಥವಾಗುತ್ತವೆ ಎನ್ನುವ ವಿಶ್ವಾಸ ನನ್ನದು. ನನ್ನ ಮಗ 3ನೇ ಸಲ ಸೋತಿದ್ದಾನೆ. ಅವನು ಚುನಾವಣೆಯಲ್ಲಿ ಮಾತ್ರ ಸೋತಿದ್ದಾನೆಯೇ ಹೊರತು ಮನುಷ್ಯನಾಗಿ ಸೋತಿಲ್ಲ, ಅವನ ಮಾನವೀಯತೆ, ಸಹೃದಯತೆ ಸೋತಿಲ್ಲ. ಅವನ ಮನಸ್ಸು, ಹೃದಯ ವೈಶಾಲ್ಯತೆ ಏನೆಂದು ತಾಯಿಯಾಗಿ ನನಗೆ ಚನ್ನಾಗಿ ಗೊತ್ತು ಎಂದು ಭಾವನೆಗಳನ್ನು ಹಂಚಿಕೊಂಡಿದ್ದಾರೆ.

ನಾನು ಸದಾ ಆ ಭಗವಂತನಲ್ಲಿ ನಂಬಿಕೆ ಇಟ್ಟಿದ್ದೇನೆ. ನನ್ನ ಮಗನ ಮೇಲೆ ಆ ದೈವದ ಕರುಣೆ, ಅನುಗ್ರಹವಿದೆ ಹಾಗೂ ಚನ್ನಪಟ್ಟಣ ಜನತೆಯ ಪ್ರೀತಿ ವಿಶ್ವಾಸವೂ ಸದಾ ಅವನ ಮೇಲಿರುತ್ತದೆ. ಇಂದಲ್ಲ ನಾಳೆ ಜನಸೇವೆ ಮಾಡುವ ಅವಕಾಶ ಅವನಿಗೆ ಸಿಕ್ಕೇ ಸಿಗುತ್ತದೆ ಎನ್ನುವ ಅಚಲ ನಂಬಿಕೆ ನನ್ನದು ಎಂದು ಅನಿತಾ ಕುಮಾರಸ್ವಾಮಿ ಟ್ವಿಟ್ಟರ್​ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:44 pm, Mon, 25 November 24