HD Kumaraswamy
ಹೆಚ್‌ಡಿ ಕುಮಾರಸ್ವಾಮಿ
ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರ ಅವರ ಪುತ್ರ. ಹೆಚ್‌ಡಿ ಕುಮಾರಸ್ವಾಮಿ ಅವರು ಮೂಲತಃ ಚಲನಚಿತ್ರ ನಿರ್ಮಾಪಕರಾಗಿದ್ದವರು. ಹಲವು ವರ್ಷಗಳ ಕಾಲ ಕನ್ನಡ ಸಿನಿಮಾ ರಂಗದಲ್ಲಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದರು. ಇವರು ನಿರ್ಮಾಣದ ಹಲವು ಚಿತ್ರಗಳು ಸೂಪರ್ ಹಿಟ್ ಆಗಿವೆ. ನಂತರ ಹೆಚ್‌ಡಿ ಕುಮಾರಸ್ವಾಮಿ ಅವರು ತಂದೆಯ ನೆರಳಿನಲ್ಲಿ ರಾಜಕಾರಣಕ್ಕೆ ಧುಮುಕಿದರು. ಹೆಚ್‌ಡಿ ಕುಮಾರಸ್ವಾಮಿ 1996ರಲ್ಲಿ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸಿದರು. ಅದೇ ವರ್ಷ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕನಕಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ 11ನೇ ಲೋಕಸಭೆಯ ಸದಸ್ಯರಾಗಿ ಚುನಾಯಿತರಾದರು.
ಬಳಿಕ ರಾಜ್ಯ ರಾಜಕಾರಣದತ್ತ ಮುಖ ಮಾಡಿದ ಕುಮಾರಸ್ವಾಮಿ ಅವರು 2006ರಲ್ಲಿ ಬಿಜೆಪಿ-ಜೆಡಿಎಸ್ ಸಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ನಂತರ ಹಲವು ರಾಜಕೀಯ ಕಾರಣದಿಂದಾಗಿ ಹೆಚ್‌ಡಿ ಕುಮಾರಸ್ವಾಮಿ 2007ರ ಅಕ್ಟೋಬರ್ 8 ರಂದು ಮುಖ್ಯಮಂತ್ರಿ ಸ್ಥಾನದಿಂದ ಕೆಳೆಗೆ ಇಳಿಯಬೇಕಾಯಿತು. ನಂತರ 2018ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮಿಶ್ರ ಸರ್ಕಾರದಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದರು. ಮತ್ತೆ ರಾಜಕೀಯ ಕಾರಣದಿಂದ 2019ರಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದರು. ಇದೀಗ ಕೇಂದ್ರ ಎನ್ಡಿಎ ಸರ್ಕಾರದಲ್ಲಿ ಉಕ್ಕು ಹಾಗೂ ಬೃಹತ್ ಕೈಗಾರಿಕಾ ಸಚಿವರಾಗಿ ಕಾರ್ಯರ್ನಿವಹಿಸುತ್ತಿದ್ದಾರೆ