ಮಾಜಿ ಸಂಸದರೊಬ್ಬರದ್ದು ಎನ್ನಲಾದ ಆಡಿಯೋ ವೈರಲ್: ರಾಜಕೀಯ ರಹಸ್ಯಗಳು ಬಯಲು
ಮಾಜಿ ಸಂಸದರೊಬ್ಬರು ಮಾತಾಡಿದ್ದಾರೆ ಎನ್ನಲಾದ ಸ್ಫೋಟಕ ಆಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜೆಡಿಎಸ್ ಕಾರ್ಯಕರ್ತನೊಂದಿಗೆ ಮಾತನಾಡುತ್ತಾ, ಹಲವು ರಾಜಕೀಯ ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಜೊತೆಗೆ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಸೇರಿದಂತೆ ಕೆಲವ ವಿರುದ್ಧ ಗಂಭೀರ ಆರೋಪ ಕೂಡ ಮಾಡಿದ್ದಾರೆ.

ಮಂಡ್ಯ, ಜನವರಿ 28: ಮಾಜಿ ಸಂಸದ ಎಲ್ಆರ್ ಶಿವರಾಮೇಗೌಡರದ್ದು (LR ShivarameGowda) ಎನ್ನಲಾದ ಆಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಜೆಡಿಎಸ್ (jds) ಕಾರ್ಯಕರ್ತನೊಂದಿಗೆ ಫೋನ್‌ನಲ್ಲಿ ಮಾತನಾಡುವ ವೇಳೆ ಮಾತಿನ ಭರದಲ್ಲಿ ಹಲವು ರಾಜಕೀಯ ರಹಸ್ಯಗಳನ್ನು ಬಿಚ್ಚಿಟ್ಟು, ಕೆಲ ರಾಜಕೀಯ ನಾಯಕರಿಗೆ ಏಕವಚನದಲ್ಲಿ ವಾಗ್ದಾಳಿ ಮಾಡಿದ್ದಾರೆ ಎನ್ನಲಾಗುತ್ತಿದೆ.
ಮತ್ತೊಮ್ಮೆ ನಾಲಗೆ ಹರಿಬಿಟ್ಟ ಎಲ್.ಆರ್ ಶಿವರಾಮೇಗೌಡ
ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ ಮತ್ತೊಮ್ಮೆ ನಾಲಗೆ ಹರಿಬಿಟ್ಟಿದ್ದಾರೆ. ಅವರು ಮಾತಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಮಾತಿನ ಭರದಲ್ಲಿ ಹಲವು ರಾಜಕೀಯ ರಹಸ್ಯ ಬಿಚ್ಚಿಟ್ಟಿದ್ದಾರೆ. ಅಷ್ಟೇ ಅಲ್ಲದೆ, ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಅಂಬರೀಶ್ ಬಗ್ಗೆ ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಪೆನ್ಡ್ರೈವ್ ಕೇಸ್: ಶಿವರಾಮೇಗೌಡ, ದೇವರಾಜೇಗೌಡ, ಡಿಕೆಶಿ ಸೀಕ್ರೆಟ್ ಆಡಿಯೋ ವೈರಲ್
ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ಮಾಡಿರುವ ಶಿವರಾಮೇಗೌಡ, ಲೋಕಸಭೆ ಉಪಚುನಾವಣೆಗೆ ಟಿಕೆಟ್ ನೀಡಿ ನನ್ನಿಂದ 36 ಕೋಟಿ ರೂ. ಹಣ ಖರ್ಚು ಮಾಡಿಸಿದರು. ಬಳಿಕ ನನಗೆ ಟಿಕೆಟ್ ನೀಡದೇ ಮೋಸ ಮಾಡಿದರು ಎಂದು ಆರೋಪಿಸಿದ್ದಾರೆ.
ಅದೇ ರೀತಿ ಜೆಡಿಎಸ್‌ನಲ್ಲಿದ್ದ ಒಕ್ಕಲಿಗ ನಾಯಕರನ್ನು ಬೆಳೆಯಲು ಬಿಡಲಿಲ್ಲ ಎಂಬ ಆರೋಪ ಕೂಡ ಅವರು ಮಾಡಿದ್ದಾರೆ. ಸ್ವಪಕ್ಷದ ಸಚಿವ ಚಲುವರಾಯಸ್ವಾಮಿ ವಿರುದ್ಧ ಹಾಗೂ ಮಾಜಿ ಸಂಸದ ದಿವಂಗತ ಮಾದೇಗೌಡ ವಿರುದ್ಧವೂ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಜಿ ಶಾಸಕ ಸುರೇಶ್ ಗೌಡ ವಿರುದ್ಧವೂ ಅಶ್ಲೀಲ ಪದಗಳನ್ನು ಬಳಸಿ ನಿಂದಿಸಿದ್ದಾರೆ. ಅಲ್ಲದೆ, ಅಂಬರೀಶ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತಂದಿದ್ದು ನಾನು. ಬಳಿಕ ಅವರು ಪಕ್ಷವನ್ನು ತೊಳೆದುಬಿಟ್ಟು ಹೊರಟುಹೋದರು ಎಂದಿದ್ದಾರೆ.
ಇದನ್ನೂ ಓದಿ: ಎಲ್ಆರ್ ಶಿವರಾಮೇಗೌಡ ಆಡಿಯೋ ವೈರಲ್ ವಿಚಾರಕ್ಕೆ ಹೆಚ್ಡಿ ಕುಮಾರಸ್ವಾಮಿ ಗರಂ; ಪಕ್ಷದಿಂದ ಹೊರಹಾಕಲು ಸೂಚನೆ
ಈ ಹಿಂದೆ ಕೂಡ ದಿವಂಗತ ಮಾದೇಗೌಡ ವಿರುದ್ಧ ಮಾತನಾಡಿದ್ದ ಆಡಿಯೋ ವೈರಲ್ ಆಗಿದ್ದ ಹಿನ್ನೆಲೆಯಲ್ಲಿ ಎಲ್ಆರ್ ಶಿವರಾಮೇಗೌಡ ಅವರನ್ನು ಜೆಡಿಎಸ್ ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು. ಇದೀಗ ಮತ್ತೊಮ್ಮೆ ಅವರದ್ದೆ ಎನ್ನಲಾದ ಆಡಿಯೋ ವೈರಲ್ ಆಗಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.