ಸ್ಥಳೀಯ ಸಂಸ್ಥೆ ಚುನಾವಣೆಗೆ ಬಿಜೆಪಿ-JDS ಮೈತ್ರಿಯಲ್ಲಿ ಭಿನ್ನರಾಗ: ಹೆಚ್ಡಿಕೆ ಮುಂದಿನ ನಡೆ ಏನು?
ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ವಿಚಾರದಲ್ಲಿ ಭಿನ್ನಮತ ಭುಗಿಲೆದ್ದಿದೆ. ಜೆಡಿಎಸ್ ಎಲ್ಲಾ ಚುನಾವಣೆಗಳಲ್ಲೂ ಒಟ್ಟಾಗಿ ಬಯಸಿದರೆ, ಕೆಲವು ಬಿಜೆಪಿ ನಾಯಕರು ಸ್ಥಳೀಯ ಮಟ್ಟದಲ್ಲಿ ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಕಾರ್ಯಕರ್ತರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಈ ವಿರೋಧ ಎದುರಾಗಿದೆ ಎನ್ನಲಾಗಿದೆ. ಆದರೆ ಹೆಚ್.ಡಿ. ಕುಮಾರಸ್ವಾಮಿ ಅವರು ಬಿಜೆಪಿ ಹೈಕಮಾಂಡ್ ಜೊತೆ ಸಭೆ ನಡೆಸಿ ಈ ಗೊಂದಲಗಳಿಗೆ ಶೀಘ್ರ ತೆರೆ ಎಳೆಯಲು ಮುಂದಾಗಿದ್ದಾರೆ.

ಬೆಂಗಳೂರು, ಜನವರಿ 14: ಸ್ಥಳೀಯ ಸಂಸ್ಥೆ ಚುನಾವಣೆ ಮೈತ್ರಿ ವಿಚಾರವೀಗ ಬಿಜೆಪಿ, ಜೆಡಿಎಸ್ಗೆ ಕಗ್ಗಂಟಾಗಿ ಮಾರ್ಪಟ್ಟಿದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿಗೆ ಬಿಜೆಪಿಯ ಕೆಲವರು ವಿರೋಧ ವ್ಯಕ್ತಪಡಿಸಿದ ಕಾರಣ, ಬಿಜೆಪಿ ಹೈಕಮಾಂಡ್ ಜೊತೆ ಕೇಂದ್ರ ಸಚಿವ ಮತ್ತು ಜೆಡಿಎಸ್ ನಾಯಕ ಕುಮಾರಸ್ವಾಮಿ ಶೀಘ್ರದಲ್ಲೇ ಸಭೆ ನಡೆಸಲಿದ್ದಾರೆ. ಆ ಮೂಲಕ ಸಂಕ್ರಾಂತಿ ಬಳಿಕ ಎಲ್ಲ ಗೊಂದಲಗಳಿಗೆ ತೆರೆ ಎಳೆಯಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ಎಲ್ಲ ಚುನಾವಣೆಯಲ್ಲೂ ಮೈತ್ರಿಗೆ ಜೆಡಿಎಸ್ ಒಲವು
ಸ್ಥಳೀಯ ಸಂಸ್ಥೆ ಚುನಾವಣೆಗೆ ಬಿಜೆಪಿ ಜೊತೆ ಮೈತ್ರಿ ವಿಚಾರವಾಗಿ ಈಗಾಗಲೇ ಜೆಡಿಎಸ್ ಶಾಸಕರು, ಮುಖಂಡರಿಂದ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ಸ್ಥಳೀಯ ಸಂಸ್ಥೆ, ಜಿಬಿಎ ಚುನಾವಣೆಯಲ್ಲಿ ಮೈತ್ರಿಗೆ ಒಲವು ವ್ಯಕ್ತವಾಗಿದ್ದು, ಬಿಜೆಪಿ ಜೊತೆಗೇ ಚುನಾವಣೆ ಎದುರಿಸೋಣ ಎಂದು ಮುಖಂಡರು ತಿಳಿಸಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮೈತ್ರಿಯಾಗದಿದ್ದರೆ, ಮುಂಬರುವ ವಿಧಾನಸಭೆ ಚುನಾವಣೆಗೆ ಒಟ್ಟಾಗಿ ಹೋಗೋದು ಕಷ್ಟ. ಕಾರ್ಯಕರ್ತರು, ಮುಖಂಡರ ನಡುವೆ ಗೊಂದಲವಾದ್ರೆ ಅದು ಕಾಂಗ್ರೆಸ್ಗೆ ಲಾಭ ಆಗಲಿದೆ. ಹೀಗಾಗಿ ಎಲ್ಲಾ ಚುನಾವಣೆಗೂ ಮೈತ್ರಿಯಲ್ಲೇ ಹೋಗೋಣ ಎಂಬ ನಿಲುವು ಜೆಡಿಎಸ್ ಮುಖಂಡರದ್ದು ಎನ್ನಲಾಗಿದೆ.
ಇದನ್ನೂ ಓದಿ: ಸ್ಥಳೀಯ ಸಂಸ್ಥೆ ಚುನಾವಣೆ; JDS ಜೊತೆ ಮೈತ್ರಿಗೆ ಮಂಡ್ಯದಲ್ಲಿ ಬಿಜೆಪಿಗರ ಅಪಸ್ವರ
ಸ್ಥಳೀಯ ಮಟ್ಟದಲ್ಲಿ ಮೈತ್ರಿಗೆ ಕೆಲ ಬಿಜೆಪಿಗರ ವಿರೋಧ
ನಾವು ಲೋಕಸಭೆ, ವಿಧಾನಸಭೆ ಮತ್ತು ಪರಿಷತ್ತಿನ ಚುನಾವಣೆಗಳಲ್ಲಿ ಬಿಜೆಪಿ ಮೈತ್ರಿಯೊಂದಿಗೆ ಸ್ಪರ್ಧಿಸಲಿದ್ದೇವೆ. ಆದರೆ ಎಲ್ಲಾ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿಯೂ ಜೆಡಿಎಸ್ ಸ್ವಂತ ಬಲದ ಮೇಲೆ ಸ್ಪರ್ಧಿಸಲಿದೆ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಈ ಹಿಂದೆ ಹೇಳಿದ್ದರು. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸ್ವಂತ ಬಲದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂಬ ಬಿ.ವೈ. ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿ ಮಾತನಾಡಿದ್ದರು. ಆ ಬೆನ್ನಲ್ಲೇ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿಗೆ ಮಂಡ್ಯ ಬಿಜೆಪಿಯಿಂದಲೂ ವಿರೋಧ ಕೇಳಿಬಂದಿತ್ತು. ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಕೋರ್ ಕಮಿಟಿ ಸದಸ್ಯರ ಮುಂದೆ ಈ ಕುರಿತು ನಾಯಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, ಮಾಜಿ ಸಂಸದೆ ಸುಮಲತಾ ಅಂಬರೀಷ್ ಮತ್ತು ಮಾಜಿ ಸಚಿವ ಕೆ.ಸಿ. ನಾರಾಯಣ ಗೌಡ ಹಾಗೂ ಜಿಲ್ಲೆಯ ಇತರ ಪರಾಜಿತ ಅಭ್ಯರ್ಥಿಗಳು ಇದಕ್ಕೆ ದನಿಗೂಡಿಸಿದ್ದರು. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಇದ್ದರೂ ಸ್ಥಳೀಯ ಮಟ್ಟದಲ್ಲಿ ಕಾರ್ಯಕರ್ತರ ಹಿತಾಸಕ್ತಿ ಕಾಪಾಡಲು ಮೈತ್ರಿ ಸಾಧ್ಯವಿಲ್ಲ ಎಂದು ವಾದಿಸಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.