ಟ್ರಾಫಿಕ್ ಪೊಲೀಸರ ಎಐ ಕ್ಯಾಮರಾಗಳ ಕಣ್ಣುತಪ್ಪಿಸ್ತಿವೆ ಈ ನಂಬರ್ ಪ್ಲೇಟ್‌ಗಳು!
ಬೆಂಗಳೂರಿನಲ್ಲಿ ಡಿಫೆಕ್ಟಿವ್ ಮತ್ತು ಫ್ಯಾನ್ಸಿ ನಂಬರ್ ಪ್ಲೇಟ್‌ಗಳು AI ಕ್ಯಾಮೆರಾಗಳ ಪತ್ತೆಯಿಂದ ತಪ್ಪಿಸಿಕೊಂಡು ಸಂಚಾರ ನಿಯಮ ಉಲ್ಲಂಘನೆ ಮತ್ತು ಅಪರಾಧ ತನಿಖೆಗೆ ಅಡ್ಡಿಯಾಗುತ್ತಿವೆ. ಇದಕ್ಕೆ ಸಂಬಂಧಿಸಿದಂತೆ ಕಳೆದ ಮೂರು ವರ್ಷಗಳಲ್ಲಿ 4.2 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, HSRP ನಂಬರ್ ಪ್ಲೇಟ್‌ಗಳ ಕಡ್ಡಾಯಗೊಳಿಸುವುದರಿಂದ ಈ ಸವಾಲುಗಳಿಗೆ ಪರಿಹಾರ ಒದಗುತ್ತದೆಯೆಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು, ಜನವರಿ 14: ಸಂಚಾರ ನಿಯಂತ್ರಣ ಮತ್ತು ಕಾನೂನು ಜಾರಿಗೆ ನಿಗಾ ಕ್ಯಾಮೆರಾಗಳ ಅವಲಂಬನೆ ಹೆಚ್ಚುತ್ತಿರುವ ನಡುವೆಯೇ, ದೋಷವಿರುವ ಹಾಗೂ ಫ್ಯಾನ್ಸಿ ನಂಬರ್ ಪ್ಲೇಟ್‌ಗಳು ಬೆಂಗಳೂರು ಸಂಚಾರ ಪೊಲೀಸರಿಗೆ (BTP) ದೊಡ್ಡ ಸವಾಲಾಗಿ ಪರಿಣಮಿಸಿವೆ. ಇಂತಹ ನಂಬರ್ ಪ್ಲೇಟ್ಗಳನ್ನು ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಶನ್ (ANPR) ಕ್ಯಾಮೆರಾಗಳು ಪತ್ತೆಹಚ್ಚಲು ವಿಫಲವಾಗುತ್ತಿದ್ದು, ಇದರಿಂದ ಕಾನೂನು ಜಾರಿ ಹಾಗೂ ಅಪರಾಧ ತನಿಖೆಗೆ ಅಡ್ಡಿಯಾಗುತ್ತಿದೆ.
ಡಿಫೆಕ್ಟಿವ್ ನಂಬರ್ ಪ್ಲೇಟ್ಗಳಿಂದ ಅಪರಾಧ ಪತ್ತೆಹಚ್ಚುವಲ್ಲಿ ವಿಳಂಬ
ಕಳೆದ ಮೂರು ವರ್ಷಗಳಲ್ಲಿ ಡಿಫೆಕ್ಟಿವ್ ನಂಬರ್ ಪ್ಲೇಟ್‌ಗಳಿಗೆ ಸಂಬಂಧಿಸಿದಂತೆ 4.2 ಲಕ್ಷಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಾಗಿದೆ. 2023ರಲ್ಲಿ 1,50,861 ಪ್ರಕರಣಗಳು, 2024ರಲ್ಲಿ 1,57,665 ಪ್ರಕರಣಗಳು ಹಾಗೂ 2025ರಲ್ಲಿ ನವೆಂಬರ್‌ವರೆಗೆ 1,50,861 ಪ್ರಕರಣಗಳು ದಾಖಲಾಗಿವೆ ಎಂದು ಅಂಕಿಅಂಶಗಳು ತಿಳಿಸುತ್ತವೆ.
ಮಂದವಾದ, ಮುರಿದ ಅಥವಾ ಟೇಪ್, ಕಾಗದದಿಂದ ಮುಚ್ಚಿದ ನಂಬರ್ ಪ್ಲೇಟ್‌ಗಳು ANPR ಕ್ಯಾಮೆರಾ ಕಣ್ಣಿಗೆ ಬೀಳದ ಕಾರಣ ಅತಿವೇಗ, ಸಿಗ್ನಲ್ ಜಂಪ್ ಮುಂತಾದ ಅಪರಾಧಗಳಿಗೆ ಇ-ಚಲನ್ ಗೆ ಒಳಗಾಗುವುದಿಲ್ಲ. ಹಿಟ್ ಅಂಡ್ ರನ್ ಪ್ರಕರಣಗಳು ಹಾಗೂ ವಾಹನ ಬಳಸಿ ದರೋಡೆ ಮಾಡಿದ ಕೇಸ್ಗಳ ತನಿಖೆಯೂ ಇದರಿಂದ ವಿಳಂಬವಾಗುತ್ತಿದೆ ಎಂದು ಹಿರಿಯ ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟ್ಯಾಂಪರ್-ಪ್ರೂಫ್ HSRP ನಂಬರ್ ಪ್ಲೇಟ್ಗಳಿಂದ ಸಾಕಷ್ಟು ಸುಧಾರಣೆ
ಡೆಲಿವರಿ ಬಾಯ್ಸ್ನಲ್ಲಿ ಹೆಚ್ಚಿನವರು ಸರಿಯಾದ ಫಲಕ ಬಳಸಿದರೂ, ಕೆಲವರು ಉದ್ದೇಶಪೂರ್ವಕವಾಗಿ ನಂಬರ್ ಪ್ಲೇಟ್‌ಗಳನ್ನು ಮುಚ್ಚಿಕೊಳ್ಳುತ್ತಿದ್ದಾರೆ. ವೀಲೀಂಗ್ ಮಾಡುವವರು ನಂಬರ್ ಪ್ಲೇಟ್‌ಗಳನ್ನೇ ಪ್ರದರ್ಶಿಸುತ್ತಿಲ್ಲ. ಉದ್ದೇಶಪೂರ್ವಕವಾಗಿ ಡಿಫೆಕ್ಟಿವ್ ನಂಬರ್ ಪ್ಲೇಟ್ಗಳನ್ನು ಬಳಸುವವರ ವಿರುದ್ಧ ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಸಂಚಾರ ಪಶ್ಚಿಮ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ ಹೇಳಿದ್ದಾರೆ.
ಇದನ್ನೂ ಓದಿ Bengaluru: ಟ್ರಾಫಿಕ್ ನಿಯಮ ಉಲ್ಲಂಘಿಸುವ ಮುನ್ನ ಜೋಕೆ: ಇನ್ಮುಂದೆ ದಾಖಲಾಗುತ್ತೆ FIR
ಇದರ ನಡುವೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ಗಳನ್ನು (HSRP) ಕಟ್ಟುನಿಟ್ಟಾಗಿ ಜಾರಿಗೊಳಿಸುವುದರಿಂದ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಸಂಚಾರ ತಜ್ಞ ಪ್ರೊ. ಎಂ.ಎನ್. ಶ್ರೀಹರಿ ಅಭಿಪ್ರಾಯಪಟ್ಟಿದ್ದಾರೆ. ಟ್ಯಾಂಪರ್-ಪ್ರೂಫ್ ಗುಣಲಕ್ಷಣ ಹೊಂದಿರುವ HSRP ನಂಬರ್ ಪ್ಲೇಟ್‌ಗಳನ್ನು ಅಳವಡಿಸುವುದರಿಂದ ಅವುಗಳನ್ನು ಬದಲಾಯಿಸುವುದು ಕಷ್ಟವಾಗಿದ್ದು, RTO ಹಾಗೂ ಪೊಲೀಸರ ಸಂಯುಕ್ತ ಕ್ರಮ ಪರಿಣಾಮಕಾರಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
