ಮಂಗಳೂರು: ಎಣ್ಮಕಜೆ ಹೌಸ್ ಎಂಬುದು ತಲೆಮಾರುಗಳ ಹಿಂದೆ ಒಂದು ವಂಶಕ್ಕೆ ಸೇರಿದ ಮನೆ. ಈ ಮನೆ ಹೆಸರೇ ಊರಿನ ಹೆಸರಾಯಿತು. ಊರಿನ ಹೆಸರೇ ಅಲ್ಲಿನ ಗ್ರಾಮ ಪಂಚಾಯತಿ ಹೆಸರಾಯಿತು. ಈ ಮನೆಯಲ್ಲಿ ಆರಾಧಿಸುವ ದೈವಗಳೇ ಎರಡು ರಾಜ್ಯದ ಗಡಿ ಗ್ರಾಮಗಳಿಗೆ ಆರಾಧ್ಯ ದೈವವಾಯಿತು. ಮನೆ ಬೆಂಕಿಯಿಂದ ಭಸ್ಮವಾದರೂ ಮರು ನಿರ್ಮಾಣವಾಗಿ ಮತ್ತೆ ಗತವೈಭವ ಮುಂದುವರೆದಿದೆ.
9 ದೈವಗಳ ಆರಾಧನೆ
ದೈವರಾಧನೆ.. ತುಳುನಾಡ ಪರಂಪರೆ. ದೈವಾರಾಧನೆಗೆ ತುಳುನಾಡಿನಲ್ಲಿ ವಿಶಿಷ್ಟ ಸ್ಥಾನಮಾನವಿದೆ. ತುಳುವರು ದೇವರಿಗಿಂತ ದೈವವನ್ನೆ ಹೆಚ್ಚು ನಂಬುತ್ತಾರೆ. ಎಣ್ಮಕಜೆ ಹೌಸ್ ಎಂಬ ಮನೆ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕೇರಳದ ಕಾಸರಗೋಡು ಜಿಲ್ಲೆ ಗಡಿಯಲ್ಲಿ ಬರುವ ಎಣ್ಮಕಜೆ ತರವಡು ಎಂಬ ಗ್ರಾಮದಲ್ಲಿದೆ. ದೇವಳದಂತಿರುವ ಮನೆಗೆ ತನ್ನದೇ ಆದ ಒಂದು ಐತಿಹ್ಯವಿದೆ. 450 ವರ್ಷಗಳ ಹಿಂದೆ ಇಲ್ಲಿ ಈ ಮನೆ ನಿರ್ಮಾಣವಾಯಿತು ಎನ್ನುವ ಇತಿಹಾಸ ಪ್ರಶ್ನಾವಳಿಯಿಂದ ತಿಳಿದುಬಂದಿದೆ. ಅಂದು ಈ ಮನೆಯಲ್ಲಿ 9 ದೈವಗಳ ಆರಾಧನೆ ನಡೆಯುತ್ತಿತ್ತು. ಪ್ರಮುಖ ದೈವಗಳಾದ ಪಿಲಿಚಾಮುಂಡಿ, ಪರಿವಾರ ದೈವಗಳಾದ 3 ಗುಳಿಗ, ಸತ್ಯದೇವತೆ, 2 ಕೊರತಿ, ಪೊಸ ಬೂತ, ಚೆಲೆನ ಬೂತ ಮತ್ತು ರಕ್ತೇಶ್ವರಿ ದೈವಗಳ ಆರಾಧನೆ ನಡೆಯುತ್ತಿತ್ತು.
ನ್ಯಾಯ ಹೇಳುವ ಮನೆ
ಗ್ರಾಮವನ್ನು ಎಣ್ಮಕಜೆ ಎಂಬ ಮನೆಯ ಹೆಸರಿಂದ ಕರೆಯಲಾಗಿತ್ತು. ಈಗ ಈ ಸುತ್ತಮುತ್ತಲಿನ ಗ್ರಾಮಗಳು ಸೇರಿದ ಗ್ರಾಮ ಪಂಚಾಯತಿಗೆ ಇದೇ ಮನೆಯ ಹೆಸರನ್ನು ಇಡಲಾಗಿದೆ. ಅಂದು ಈ ಮನೆ ನ್ಯಾಯ ಹೇಳುವ ಮನೆಯಾಗಿತ್ತಂತೆ. ದೈವಗಳಿಗೆ ವರ್ಷಾವಧಿ ನಡೆಯುವ ಇಲ್ಲಿನ ಉತ್ಸವಕ್ಕೆ ಸುತ್ತಾಮುತ್ತಲಿನ ಗ್ರಾಮಗಳು ಜನರು ಆಗಮಿಸಿ ಹರಕೆ ಕಟ್ಟಿಕೊಂಡು ಕಷ್ಟಕಾರ್ಪಣ್ಯಗಳನ್ನು ದೂರವಾಗಿಸಿಕೊಳ್ಳುತ್ತಿದ್ದರು. ಆದರೆ 1994 ರಲ್ಲಿ ಇಲ್ಲಿ ಅಗ್ನಿ ಅವಘಡ ನಡೆದು ಮನೆ ಸುಟ್ಟು ಭಸ್ಮವಾಗಿತ್ತು. ಅಷ್ಟೊತ್ತಿಗೆ ಮನೆಯ ಕುಟುಂಬ ಸದಸ್ಯರು ವಿದೇಶದಲ್ಲಿ ನೆಲೆಸಿದ್ದರಿಂದ ಇಲ್ಲಿನ ಆಚರಣೆ ನಿಂತು ಹೋಗಿತ್ತು. ಮತ್ತೆ 2001ರಲ್ಲಿ ಪ್ರಶ್ನಾವಳಿ ಕೇಳಿಸಿದಾಗ ಈ ಮನೆಯ ಐತಿಹ್ಯ ತಿಳಿದು ಬಂದಿತ್ತು. ಅದಾದ ಬಳಿಕ 10 ವರ್ಷಗಳ ಕಾಲ ಈ ಮನೆ ಪುನರ್ ನಿರ್ಮಾಣ ಮಾಡಿ ಮತ್ತೆ ನವದೈವಗಳಿಗೆ ನಮೋತ್ಸವವನ್ನು ಮಾಡಲಾಗುತ್ತಿದೆ.
ಪ್ರತಿ ವರ್ಷ ಮಾರ್ಚ್ನಲ್ಲಿ ಐದು ದಿನಗಳ ಕಾಲ ಈ ನೇಮೋತ್ಸವ ನಡೆಯುತ್ತದೆ. ಇದು ಕರ್ನಾಟಕ-ಕೇರಳ ಗಡಿಯಲ್ಲಿ ಇರುವುದರಿಂದ ಕರ್ನಾಟಕ ಮತ್ತು ಕೇರಳ ಎರಡು ಗ್ರಾಮದ ಭಕ್ತರು ಇಲ್ಲಿಗೆ ಬರುತ್ತಾರೆ. ಇಲ್ಲಿಗೆ ಬಂದು ತಮ್ಮ ಕಷ್ಟಕಾರ್ಪಣ್ಯಗಳನ್ನು ನಿವಾರಿಸಿಕೊಳ್ಳಲು ಹರಕೆ ಕಟ್ಟಿಕೊಂಡು ಹರಕೆ ತೀರಿಸಿ ಹೋಗುತ್ತಾರೆ.
ದೈವಗಳ ಆರಾಧನೆಯಿಂದ ಈ ಮನೆಯೇ ಸುತ್ತಮುತ್ತಲಿನ ಊರುಗಳಿಗೆ ಮಂದಿರವಾಗಿದೆ. ಈ ವರ್ಷ ಕೂಡ ಎಲ್ಲಾ ಉತ್ಸವಗಳು ನೆಡೆಯಿತು. ಕೋವಿಡ್ ಕಾರಣದಿಂದ ಗಡಿ ಪ್ರವೇಶದ ನಿರ್ಬಂಧದ ನಡುವೆ ನೇಮೋತ್ಸವ ಅದ್ಧೂರಿಯಾಗಿ ನಡೆಯಿತು.
ಇದನ್ನೂ ಓದಿ
ಹನಿಮೂನ್ಗೆ ಗೋವಾಗೇ ಏಕೆ ಹೋಗ್ತಾರೆ? ನೀವೂ ತಿಳಿದುಕೊಳ್ಳಿ ಹನಿಮೂನ್ ಬೀಚ್ನ ವಿಶೇಷತೆ
ಟಿವಿ 9 ಹೀಗೂ ಉಂಟೇ! ಬೆಂಗಳೂರಿನಲ್ಲಿರುವ ಶ್ರೀ ಕ್ಷೇತ್ರ ಹೊನ್ನಾವ ಮಂತ್ರಾಲಯ ಮಂದಿರದ ಪವಾಡ