Azadi ka Amrit Mahotsav Part 8: 2014-ದೇಶದಲ್ಲಿ ಎದ್ದ ಮೋದಿ ಅಲೆಗೆ ಕಾಂಗ್ರೆಸ್ ತತ್ತರ, ಪಾಕ್ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿ ದಿಟ್ಟತನ ಮೆರೆದ ಭಾರತೀಯ ಯೋಧರು

| Updated By: ಗಂಗಾಧರ​ ಬ. ಸಾಬೋಜಿ

Updated on: Aug 14, 2022 | 6:31 PM

75th Independence Day: ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕು 75 ವರ್ಷವಾಗಿದೆ. ಭಾರತವು ಸಾಕಷ್ಟು ಸಾಧನೆಯನ್ನು ಮಾಡಿದೆ. ಸಾಕಷ್ಟು ಏಳುಬೀಳುಗಳನ್ನು ಕಂಡಿದೆ. ಹೊಸ ಸಾಧನೆಯ ಮೂಲಕ ಅಭಿವೃದ್ದಿಯ ಹಾದಿಯಲ್ಲಿ ದಾಪುಗಾಲು ಇಟ್ಟಿದೆ. ಸ್ವಾತಂತ್ರ್ಯ ನಂತರದ ಭಾರತದ ಪ್ರಮುಖ ಸಾಧನೆಗಳನ್ನು ಅಕ್ಷರ ರೂಪದಲ್ಲಿ ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ.

Azadi ka Amrit Mahotsav Part 8: 2014-ದೇಶದಲ್ಲಿ ಎದ್ದ ಮೋದಿ ಅಲೆಗೆ ಕಾಂಗ್ರೆಸ್ ತತ್ತರ, ಪಾಕ್ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿ ದಿಟ್ಟತನ ಮೆರೆದ ಭಾರತೀಯ ಯೋಧರು
ಪ್ರಧಾನಿ ನರೇಂದ್ರ ಮೋದಿ ಮತ್ತು ಸರ್ಜಿಕಲ್ ಸ್ಟ್ರೈಕ್
Follow us on

Azadi ka Amrit Mahotsav: ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕು 75 ವರ್ಷ ಪೂರ್ಣವಾಗಿದೆ. 75 ವರ್ಷದಲ್ಲಿ ಭಾರತವು ಸಾಕಷ್ಟು ಸಾಧನೆಯನ್ನು ಮಾಡಿದೆ. ಅನೇಕ ಮೈಲಿಗಲ್ಲುಗಳನ್ನು ನಿರ್ಮಿಸಿದೆ. ಸಾಕಷ್ಟು ಏಳುಬೀಳುಗಳನ್ನು ಕಂಡಿದೆ. ಭಾರತವು ಹೊಸ ಸಾಧನೆಯ ಮೂಲಕ ಅಭಿವೃದ್ದಿಯ ಹಾದಿಯಲ್ಲಿ ದಾಪುಗಾಲು ಇಟ್ಟಿದೆ. ಸ್ವಾತಂತ್ರ್ಯ ನಂತರದ ಭಾರತದ ಪ್ರಮುಖ ಸಾಧನೆ, ಮೈಲಿಗಲ್ಲು, ಏಳುಬೀಳುಗಳು, ಪ್ರಮುಖ ಘಟನಾವಳಿ ಅಕ್ಷರ ರೂಪದಲ್ಲಿ ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ.

71. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ನು 2013ರಲ್ಲಿ ಯುಪಿಎ ಎರಡನೇ‌ ಅವಧಿಯ ಸರಕಾರದಲ್ಲಿ ಜಾರಿಗೆ ತರಲಾಯಿತು. ಆಹಾರ ಹಕ್ಕು ಕಾಯ್ದೆ ಇದು ಭಾರತದ 1.2 ಶತಕೋಟಿ ಜನರಲ್ಲಿ ಸುಮಾರು ಮೂರನೇ ಎರಡರಷ್ಟು ಜನರಿಗೆ ಸಬ್ಸಿಡಿ ಆಹಾರ ಧಾನ್ಯಗಳನ್ನು ಒದಗಿಸುವ ಗುರಿ ಯೋಜನೆಯ ಉದ್ದೇಶವಾಗಿದೆ.‌ 2013ರ ಸೆಪ್ಟೆಂಬರ್ 12 ರಂದು ಈ ಕಾನೂನಿಗೆ ಸಹಿ ಹಾಕಲಾಯಿತು. ದೇಶದ ಶೇ.63ರಷ್ಟು ಜನತೆಗೆ ಸಬ್ಸಿಡಿ ದರದಲ್ಲಿ ಧಾನ್ಯ ಪೂರೈಸುವ ಯೋಜನೆಯೇ ಆಹಾರ ಭದ್ರತಾ ಕಾಯ್ದೆ. ಗ್ರಾಮಾಂತರ ಪ್ರದೇಶಗಳ ಶೇ.75ರಷ್ಟು ಮತ್ತು ನಗರ ಪ್ರದೇಶಗಳ ಶೇ.50ರಷ್ಟು ಜನರಿಗೆ ರಿಯಾಯಿತಿ ದರದ ಧಾನ್ಯ ಪೂರೈಕೆಯ ಮಾಡುವುದು, ಬಡತನದ ರೇಖೆಯ ಕೆಳಗಿನ ಪ್ರತಿ ಫಲಾನುಭವಿಗೆ 3ರೂ. ದರದಂತೆ 7 ಕಿಲೋ ಅಕ್ಕಿ, 2 ರೂ. ದರದಂತೆ ಗೋಧಿ ಮತ್ತು 1 ರೂ. ದರದಂತೆ ಇನ್ನಿತರ ಧಾನ್ಯ ಪಡೆಯುವ ಹಕ್ಕನ್ನು ಈ ಕಾಯ್ದೆಯಲ್ಲಿ ನೀಡುವುದು ಸರ್ಕಾರದ ಉದ್ದೇಶವಾಗಿದೆ.‌ ಭಾರತದ ಬಡವರ ಹಸಿವು ನೀಗಿಸುವಲ್ಲಿ ಈ ಯೋಜನೆ‌ ಮಹತ್ವದ್ದಾಗಿದೆ.

72. ಮಾರ್ಸ್ ಆರ್ಬಿಟರ್ ಮಿಷನ್

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮಂಗಳ ಗ್ರಹದ ಅಧ್ಯಯನಕ್ಕಾಗಿ 2013ರ ನವೆಂಬರ್ 5 ರಂದು ಮಾರ್ಸ್ ಆರ್ಬಿಟರ್ ಮಿಷನ್ ಉಡಾಯಿಸಿತು. ಭಾರತ ಮಂಗಳನ ಕಕ್ಷೆಯನ್ನು ತಲುಪಿದ ಮೊದಲ ಏಷ್ಯಾದ ರಾಷ್ಟ್ರವಾಗಿದೆ. ತನ್ನ ಮೊದಲ ಪ್ರಯತ್ನದಲ್ಲಿ ಯಶಸ್ವಿಯಾದ ವಿಶ್ವದ ಮೊದಲ ರಾಷ್ಟ್ರ ಭಾರತವಾಗಿದೆ. ಅಮೆರಿಕಕ್ಕಾಗಲಿ, ರಷ್ಯಾಗಾಗಲಿ, ಯೂರೋಪ್‌ಗಾಗಲಿ ಮೊದಲ ಬಾರಿಗೆ ಇಂತಹ ಸಾಧನೆ ಮಾಡಲು ಸಾಧ್ಯವಾಗಿರಲಿಲ್ಲ. ಏಷ್ಯಾದ ಯಾವುದೇ ದೇಶವೂ ಮಾಡದ ಬಾಹ್ಯಾಕಾಶ ತಂತ್ರಜ್ಞಾನ ಸಾಧನೆಯನ್ನು ಭಾರತ ಮಾಡಿತ್ತು. ವಿಶ್ವದ 25 ಅತ್ಯುತ್ತಮ ಆವಿಷ್ಕಾರಗಳ ಪಟ್ಟಿಯಲ್ಲಿ ಮಂಗಳಯಾನ ಸ್ಥಾನ ಪಡೆದಿದೆ. ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಸಿದ್ಧಪಡಿಸಿರುವ ಮಾರ್ಸ್ ಬಾಹ್ಯಾಕಾಶ ನೌಕೆಗೆ ಕೇವಲ 74 ದಶಲಕ್ಷ ಯುಎಸ್ ಡಾಲರ್ ವ್ಯಯವಾಗಿದ್ದು, ಇದು ಹಾಲಿವುಡ್ ಸಿನೆಮಾ ಗ್ರಾವಿಟಿ ಚಲನಚಿತ್ರದ ಬಜೆಟ್​ಗಿಂತಲೂ ಕಡಿಮೆ ವೆಚ್ಚವಾಗಿದೆ.

73. ಆಂಧ್ರಪ್ರದೇಶ ವಿಭಜನೆ

ಅಖಂಡ‌ ಆಂಧ್ರಪ್ರದೇಶದಲ್ಲಿ‌ ತೆಲಂಗಾಣ ಭಾಗ ಹಿಂದುಳಿದ‌ಪ್ರದೇಶವಾಗಿತ್ತು. ತೆಲಂಗಾಣ ಪ್ರತ್ಯೇಕ ರಾಜ್ಯವಾದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಸಮಿತಿ ರಚಿಸಿ 5 ದಶಗಳ ಕಾಲ‌ ಹೋರಾಟ ನಡೆಸಲಾಗಿತ್ತು. ಇದರ ಫಲವಾಗಿ ಆಂಧ್ರಪ್ರದೇಶ ರಾಜ್ಯದಿಂದ 2014ರ ಜೂ.2ರಂದು ತೆಲಂಗಾಣ ವಿಭಾಗಗೊಂಡು ಹೊಸ ರಾಜ್ಯವಾಗಿ ರಚನೆಯಾಯಿತು. ಆ ಮೂಲಕ ದೇಶದ ರಾಜ್ಯಗಳ ಒಟ್ಟು ಸಂಖ್ಯೆ 28ರಿಂದ 29ಕ್ಕೆ ಏರಿಕೆಯಾಯಿತು. ತೆಲಂಗಾಣ ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ತೆಲಂಗಾಣ ರಾಷ್ಟ್ರ ಸಮಿತಿ ಅಧ್ಯಕ್ಷ ಕೆಚಂದ್ರಶೇಖರ ರಾವ್‌ ಅಧಿಕಾರ ಸ್ವೀಕರಿಸಿದರು. ರಾವ್‌ ಅವರ ಪುತ್ರ ಕೆ.ಟಿ ರಾಮ ರಾವ್‌ ಮತ್ತು ಅಳಿಯ ಹರೀಶ್‌ ರಾವ್‌ ಸೇರಿದಂತೆ ಇತರ 11 ಮಂದಿ ಸಚಿವ ಸಂಪುಟ ಸದಸ್ಯರಿಗೆ ರಾಜ್ಯಪಾಲ ಇ.ಎಸ್‌.ಎಲ್‌ ನರಸಿಂಹನ್‌ ಅವರು ಅಧಿಕಾರದ ಪ್ರಮಾಣ ವಚನ ಬೋಧಿಸಿದರು.‌ ಹೈದರಾಬಾದ್ ತೆಲಂಗಾಣದ ಶಾಶ್ವತ ರಾಜಧಾನಿಯಾಗಿ ಪ್ರತ್ಯೇಕಗೊಂಡಿತು. 1969ರಲ್ಲಿಯೇ ತೆಲಂಗಾಣ ಪ್ರತ್ಯೇಕತೆಯ ಕೂಗೆದ್ದಿತ್ತು. ಅಂದು ಶುರುವಾಗಿದ್ದ ವಿದ್ಯಾರ್ಥಿಗಳ ಆಂದೋಲನದ ಕಾವು ಯಾವತ್ತೂ ತಣ್ಣಗಾಗಲಿಲ್ಲ. ತೆಲಂಗಾಣಕ್ಕೆ ಸೇರಿದ ಹತ್ತು ಜಿಲ್ಲೆಗಳಿಗೆ ಚಳವಳಿಯನ್ನು ವಿಸ್ತರಿಸಿ ಅದನ್ನು ಜನತಾ ಆಂದೋಲನವನ್ನಾಗಿ ಮಾರ್ಪಡಿಸಿದ್ದು ವಿದ್ಯಾರ್ಥಿಗಳೇ ಆಗಿದ್ದರು.

74. ಬಿಜೆಪಿಯಲ್ಲಿ ಮೋದಿ‌ ಯುಗ

ಯುಪಿಎ ಮೈತ್ರಿಕೂಟ ಸರಕಾರದ 10 ವರ್ಷದ ಆಡಳಿತಕ್ಕೆ ಬೇಸತ್ತಿದ್ದ ದೇಶದ ಜನರು ಹೊಸ ನಾಯಕನ ಹುಡುಕಾಟದಲ್ಲಿತ್ತು. ಭಾರತದಲ್ಲಿ ಏಕಪಕ್ಷದ ಸರ್ಕಾರದ ಯುಗ ಮುಗಿಯಿತು ಇನ್ನೇನಿದ್ದರೂ ಸಮ್ಮಿಶ್ರ ಸರ್ಕಾರದ ಯುಗ ಎಂದು ಹೇಳುತ್ತಿದ್ದ ಎಲ್ಲ ರಾಜಕೀಯ ವಿಶ್ಲೇಷಕರಿಗೆ ಶಾಕ್ ಆಗಿತ್ತು. ಇಂತಹ ರಾಜಕೀಯ ಪಂಡಿತರ ಲೆಕ್ಕಾಚಾರವನ್ನೇ ತಲೆಕೆಳಗಾಗಿಸಿದವರು ಗುಜರಾತ್​ನಲ್ಲಿ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ಸ್ಪಷ್ಟ ಬಹುಮತವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. 30 ವರ್ಷಗಳ ಬಳಿಕ ಪಕ್ಷವೊಂದು ಸ್ವಂತ ಬಲದ ಮೇಲೆ‌ ಅಧಿಕಾರಕ್ಕೆ‌ ಬಂದಿತ್ತು. ಬಿಜೆಪಿ ಮೈತ್ರಿಕೂಟ ಎನ್​ಡಿಎ 300ಕ್ಕೂ ಹೆಚ್ಚು ಲೋಕಸಭೆಯಲ್ಲಿ ಗೆಲುವು ದಾಖಲಿಸಿತ್ತು. ಈ ಪೈಕಿ ಬಿಜೆಪಿ 282 ಸ್ಥಾನಗಳಲ್ಲಿ ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಐತಿಹಾಸಿಕ ಜನಾದೇಶದ ನಂತರ ನರೇಂದ್ರ ಮೋದಿ ಅವರು ಭಾರತದ ಪ್ರಧಾನ ಮಂತ್ರಿಯಾಗಿ 2014ರ ಮೇ 26 ರಂದು ಸಂಜೆ ರಾಷ್ಟ್ರಪತಿ ಭವನದ ಮುಂಭಾಗ ಪ್ರಮಾಣ‌ವಚನ ಸ್ವೀಕರಿದರು. 464 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಕೇವಲ 44ಸ್ಥಾನಗಳನ್ನು ಗೆದ್ದುಕೊಂಡು ದಯನೀಯ ಸೋಲು ಕಂಡಿತ್ತು. ಅಪರೂಪ ಎನ್ನುವಂತೆ, ವಿರೋಧ ಪಕ್ಷದ ಸ್ಥಾನಮಾನವೂ ಕಾಂಗ್ರೆಸ್ ಪಕ್ಷಕ್ಕೆ‌ ಸಿಕ್ಕಿರಲಿಲ್ಲ.

75. ಸರ್ಜಿಕಲ್ ಸ್ಟ್ರೈಕ್

ಭಾರತದ ವಿರುದ್ಧದ ಭಯೋತ್ಪಾದನೆಯನ್ನು ಬೆಳೆಸುತ್ತಾ ಗಡಿಯಲ್ಲಿ ಪದೇ ಪದೇ ಭಾರತವನ್ನು ಕೆಣಕುವ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಚುರುಕು ಮುಟ್ಟಿಸಿತ್ತು. 2016ರ ಸೆಪ್ಟಂಬರ್ 29ರಂದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಅಡಗಿ ಕುಳಿತಿದ್ದ ಭಯೋತ್ಪಾದಕರ ನೆಲೆಗಳ ಮೇಲೆ ಭಾರತೀಯ ಸೈನಿಕರು ಸರ್ಜಿಕಲ್ ಸ್ಟ್ರೈಕ್ ನಡೆಸಿದರು. ಇದು ಭಾರತದ ಸೇನಾ ಕಾರ್ಯಾಚರಣೆಗಳ ಇತಿಹಾಸದಲ್ಲೇ ಮಹತ್ವದಾಗಿತ್ತು. ಶತ್ರು ನೆಲೆಗಳಿಗೆ ನುಗ್ಗಿ ಹೊಡೆಯುವ ಪ್ರವೃತ್ತಿಗೆ ಮೊದಲ ಬಾರಿ ಭಾರತ ಕೈ ಹಾಕಿತ್ತು. ಭಾರತೀಯ ಸೈನಿಕರನ್ನು ಹೀಗೆ ಕೆಚ್ಚೆದೆಯಿಂದ ಹೋರಾಡುವಂತೆ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಇಡೀ ದೇಶದ ಜನತೆ ಕೊಂಡಾಡಿತು. 2017ರ ಮೇ 23 ರಂದು ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಮಾಡಿದ ಭಾರತ, ಜಮ್ಮು ಕಾಶ್ಮೀರದ ಗಡಿಯಾಚೆಗಿದ್ದ ಪಾಕಿಸ್ತಾನದ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿ ಸುಮಾರು 10 ನೆಲೆಗಳನ್ನು ಧ್ವಂಸಗೊಳಿಸಿ ಮತ್ತೆ ಶಹಬ್ಬಾಸ್ ಗಿರಿ ಪಡೆದಿತ್ತು. (ಮುಂದುವರಿಯುವುದು)

ವರದಿ: ಚಂದ್ರಮೋಹನ್ 

Published On - 11:53 am, Sun, 14 August 22