ಮಂಡ್ಯ: ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸದಂತೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ಮಂಡ್ಯ ಜಿಲ್ಲಾಧಿಕಾರಿ ಅಶ್ವಥಿ ಅವರಿಗೆ ಪತ್ರ ಬರೆದಿದ್ದಾರೆ. ಪಾಂಡವಪುರ ತಾಲೂಕು ವ್ಯಾಪ್ತಿಯ ಬೇಬಿ ಬೆಟ್ಟ ಬೆಟ್ಟದ 1,600 ಎಕರೆ ಪ್ರದೇಶ ರಾಜಮನೆತಕ್ಕೆ ಸೇರಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಟ್ರಯಲ್ ಬ್ಲಾಸ್ಟ್ ನಡೆಸಬಾರದು ಎಂದು ಪತ್ರ ಬರೆದಿದ್ದಾರೆ.
ಬೇಬಿ ಬೆಟ್ಟದ ಕಲ್ಲು ಗಣಿಗಾರಿಕೆ ಪ್ರದೇಶಕ್ಕೆ ಈಗಾಗಲೆ ಜಾರ್ಖಂಡ್ನ ಧನ್ಬಾದ್ನಿಂದ ವೈಜ್ಞಾನಿಕ ಮತ್ತು ಸಂಶೋಧನಾ ಕೇಂದ್ರದ ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ಟ್ರಯಲ್ ಬ್ಲಾಸ್ಟ್ ನಡೆಸದಂತೆ ರೈತರು ಪಟ್ಟು ಹಿಡದಿದ್ದಾರೆ. ಹಾಗೇ ಟ್ರಯಲ್ ಬ್ಲಾಸ್ಟ್ನ್ನು ಒಂದು ವಾರ ಮುಂದೂಡುವಂತೆ ರೈತರು ಆಗ್ರಹಿಸುತ್ತಿದ್ದಾರೆ.
ನಮ್ಮ ಬಳಿಯೂ ತಜ್ಱರು ಇದ್ದಾರೆ. ಅವರ ಜೊತೆಗೂ ಚರ್ಚೆ ಮಾಡಿ ಅಂತಿಮ ನಿರ್ಧಾರಕ್ಕೆ ಬರೋಣ. ಒಂದು ವಾರದ ಸಮಯಾವಕಾಶ ಕೊಟ್ಟು ಟ್ರಯಲ್ ಬ್ಲಾಸ್ಟ್ ಮಾಡಿ ಎಂದು ಜಿಲ್ಲಾಧಿಕಾರಿಗಳೊಂದಿಗಿನ ಸಭೆಯಲ್ಲಿ ರೈತ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಂದ ವಿಜ್ಙಾನಿಗಳನ್ನು ವಾಪಸ್ ಕಳಿಸಿ. ನಾವು ಕೂಡ ಕಾನೂನಾತ್ಮಕವಾಗಿ ಹೋರಾಡುತ್ತೇವೆ. ಸಮಯಾವಕಾಶ ತೆಗೆದುಕೊಂಡು ಚರ್ಚಿಸೋಣ. ಸಾರ್ವಜನಿಕರ ಹಿತದೃಷ್ಟಿಯಿಂದ ಹೈಕೋರ್ಟ್ಗೆ ಮನವರಿಕೆ ಮಾಡಿಕೊಡಿ ಎಂದು ಮನವಿ ಮಾಡುತ್ತಿದ್ದಾರೆ.
ಹೈಕೋರ್ಟ್ ನಿರ್ದೇಶನದಂತೆ ಟ್ರಯಲ್ ಬ್ಲಾಸ್ಟ್ ಮಾಡಲಾಗುತ್ತಿದೆ. ಮಡಿಕೇರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ರೈತರ ಜೊತೆ ಸಭೆಯಲ್ಲಿ ಮಂಡ್ಯ ಜಿಲ್ಲಾಧಿಕಾರಿ ಅಶ್ವಥಿ ಹೇಳಿದ್ದಾರೆ. 2018ರಿಂದ ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ನಿಷೇಧಿಸಿದ್ದೇವೆ. ಹೈಕೋರ್ಟ್ ನಿಂದ ನಿರ್ದೇಶನ ಬಂದಿದೆ. ಆ ಹಿನ್ನಲೆ ಟ್ರಯಲ್ ಬ್ಲಾಸ್ಟ್ ಮಾಡಲಾಗುತ್ತಿದೆ ಎಂದು ರೈತರಿಗೆ ತಿಳಿಸಿದ್ದಾರೆ.
ಟ್ರಯಲ್ ಬ್ಲಾಸ್ಟ್ ನ ವರದಿ ಬಂದ ಬಳಿಕ ಮತ್ತೆ ಚರ್ಚಿಸೋಣ. ಎಲ್ಲರ ಜೊತೆ ಸಭೆ ನಡೆಸಿ ತೀರ್ಮಾನ ಮಾಡುತ್ತೇವೆ. ಟ್ರಯಲ್ ಬ್ಲಾಸ್ಟ್ ಪ್ರಕ್ರಿಯೆ ನಡೆಸುವುದು ಅನಿವಾರ್ಯವಾಗಿದೆ. ವರದಿ ಬಂದ ಬಳಿಕ ಪರಿಶೀಲಿಸಿ ತೀರ್ಮಾನ ಕೈಗೊಳುತ್ತೇವೆ. ಶಾಶ್ವತವಾಗಿ ನಿಲ್ಲಿಸೋದು ನಿಮ್ಮ ಅಭಿಪ್ರಾಯ. ಅದಕ್ಕೂ ಕೂಡ ಒಂದು ವರದಿ ಬೇಕಿದೆ. ಸೈಂಟಿಫಿಕ್ ರಿಪೋರ್ಟ್ ಬಂದ ಬಳಿಕ ತೀರ್ಮಾನ ಕೈಗೊಳ್ಳೋಣ ಎಂದು ಹೇಳಿದರು.
ಬೇಬಿ ಬೆಟ್ಟದಲ್ಲಿ ವಿಜ್ಞಾನಿ ಸಿಸೋಮ್ ಟಿವಿ9 ಜೊತೆ ಮಾತನಾಡಿ ಗಣಿಗಾರಿಕೆಯಿಂದ ಆಗುವ ಪರಿಣಾಮದ ಬಗ್ಗೆ ತಿಳಿಯಲು ಬಂದಿದ್ದೇವೆ. ಟ್ರಯಲ್ ಬ್ಲಾಸ್ಟ್ನಿಂದ ಎಲ್ಲವೂ ಗೊತ್ತಾಗಲಿದೆ. ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ಮಾಡಿದರೆ ಗ್ರೌಂಡ್ ವೈಬ್ರೇಷನ್ ಕೆಆರ್ಎಸ್ ಮೇಲೆ ಪರಿಣಾಮ ಬೀರುತ್ತಾ ನೋಡಬೇಕು. ಟ್ರಯಲ್ ಬ್ಲಾಸ್ಟ್ ನಡೆಸದ ಹೊರತಾಗಿ ಪರಿಣಾಮ ಗೊತ್ತಾಗಲ್ಲ ಎಂದು ಹೇಳಿದರು.
ಇಂದಿನಿಂದಲೇ ಟ್ರಯಲ್ ಬ್ಲಾಸ್ಟ್ ಪ್ರಕ್ರಿಯೆ ಆರಂಭವಾಗಲಿದೆ. ಬೇಬಿ ಬೆಟ್ಟದಲ್ಲಿ ಆದಷ್ಟು ಬೇಗ ಟ್ರಯಲ್ ಬ್ಲಾಸ್ಟ್ ಮಾಡಲಿದ್ದೇವೆ. ಆಧುನಿಕ ತಂತ್ರಜ್ಞಾನ ಬಳಸಿ ಟ್ರಯಲ್ ಬ್ಲಾಸ್ಟ್ ಮಾಡುತ್ತಿದ್ದೇವೆ. ಕೆಆರ್ಎಸ್ ಡ್ಯಾಂ ಡೈರೆಕ್ಷನ್ಗೆ 8 ಸಿಸ್ಮೋಗ್ರಾಫ್ ಅಳವಡಿಸುತ್ತೇವೆ. ಎಷ್ಟು ವೈಬ್ರರೇಟ್ ಜನರೇಟ್ ಆಗುತ್ತೆ ಅನ್ನೋದನ್ನ ಪರಿಶೀಲಿಸುತ್ತೇವೆ ಎಂದರು.
ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ಬಗ್ಗೆ ವಿಜ್ಞಾನಿ ಸಿಸೋಮ್ ಹೇಳಿಕೆ
ನ್ಯಾಯಾಲಯದ ಆದೇಶದಂತೆ ಟ್ರಯಲ್ ಬ್ಲಾಸ್ಟ್‌ಗೆ ಸಿದ್ದತೆ ಮಾಡಿಕೊಂಡಿದ್ದೇವೆ. ಇವತ್ತು ಸ್ಥಳ ಪರಿಶೀಲನೆ ಮಾಡಲಾಗಿದೆ. ಆಳವಾದ ಸ್ಥಳಗಳಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸುತ್ತಾರೆ. ಒಂದು ವರ್ಗ ಟ್ರಯಲ್ ಬ್ಲಾಸ್ಟ್ ಮಾಡಕೂಡದು ಎಂದು ಪ್ರತಿಭಟಿಸುತ್ತಿದ್ದಾರೆ. ಅವರಿಗೆ ಟ್ರಯಲ್ ಬ್ಲಾಸ್ಟ್ ಅಗತ್ಯದ ಬಗ್ಗೆ ಮನವರಿಕೆ ಮಾಡಿದ್ದೇನೆ. ಪ್ರತಿಭಟನಾಕಾರರು ಯಾವುದೇ ಕಾರಣಕ್ಕೂ ಸಾಧ್ಯ ಇಲ್ಲ ಎಂದಿದ್ದಾರೆ. ಪರಿಸ್ಥಿತಿಯನ್ನು ಮೇಲಧಿಕಾರಿಗಳಿಗೆ ತಿಳಿಸುತ್ತೇನೆ ಎಂದು ಶ್ರೀರಂಗಪಟ್ಟಣ ಉಪ ವಿಭಾಗಧಿಕಾರಿ ಶಿವಾನಂದಮೂರ್ತಿ ಮಾತನಾಡಿದರು.
ಟ್ರಯಲ್ ಬ್ಲಾಸ್ಟ್ 1 ವಾರ ಮುಂದೂಡಲು ರೈತರ ಆಗ್ರಹ ಹಿನ್ನೆಲೆ ಮಂಡ್ಯ ಡಿಸಿ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಅಶ್ವಥಿ ಪ್ರತ್ಯೇಕ ಸಭೆ ನಡೆಸಿದ್ದಾರೆ. ಗಣಿ ಮತ್ತು ವಿಜ್ಞಾನ ಇಲಾಖೆ ಅಧಿಕಾರಿ, ಎಸ್ಪಿ, ಡಿಸಿಎಫ್ ಭಾಗಿಯಾಗಿದ್ದಾರೆ. ಅಧಿಕಾರಿಗಳ ಸಲಹೆ ಬಳಿಕ ನಿರ್ಧಾರ ಪ್ರಕಟಿಸಲಿದ್ದಾರೆ.
Published On - 8:17 pm, Mon, 25 July 22