ಬಾಗಲಕೋಟೆ: ರಾಜ್ಯದಲ್ಲಿ ಬೇಸಿಗೆಯ ಬಿಸಿ ಜೊತೆಗೆ ಚುನಾವಣೆಯ ಕಾವು ಕೂಡ ಹೆಚ್ಚುತ್ತಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಕೋಲಾರ (Kolar) ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದೇ ತಡ ಬಿಜೆಪಿ (BJP), ಜೆಡಿಎಸ್ (JDS) ಪಕ್ಷಗಳ ಚಿತ್ತ ಕೋಲಾರದತ್ತ ನೆಟ್ಟಿದ್ದು, ಶತಾಯಗತಾಯ ಹಣಿಯಲು ಸಿದ್ದವಾಗುತ್ತಿವೆ. ಹಾಲಿ ಬಾದಾಮಿ (Badami) ಕ್ಷೇತ್ರ ಶಾಸಕ ಸಿದ್ದರಾಮಯ್ಯ ಮತ್ತೆ ಬಾದಾಮಿ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಸಿದ್ದರಾಮಯ್ಯ ಅವರ ಈ ನಿರ್ಧಾರಕ್ಕೆ ಬಾದಾಮಿ ಜನ ತೀರ್ವ ವಿರೋಧ ವ್ಯಕ್ತಪಡಿಸಿದ್ದು, ಬಾದಾಮಿಯಿಂದಲೇ ಸ್ಪರ್ಧಿಸಬೇಕೆಂದು ಪಟ್ಟು ಹಿಡದಿದ್ದಾರೆ. ಆದರೆ ಸಿದ್ದರಾಮಯ್ಯ ಮಾತ್ರ ಇದಕ್ಕೆ ಒಪ್ಪಿಗೆ ನೀಡಿಲ್ಲ. ಈಗ ಸಿದ್ದರಾಮಯ್ಯ ಬಾದಾಮಿಯಿಂದಲೇ ಸ್ಪರ್ಧೆ ಮಾಡುವಂತೆ ಸೂಚಿಸಬೇಕೆಂದು, ಸಿದ್ದರಾಮಯ್ಯ ಬೆಂಬಲಿಗರು ಕಾಂಗ್ರೆಸ್ ಹೈಕಮಾಂಡಗೆ ಮನವಿ ಮಾಡಲು ದೆಹಲಿಗೆ ಹೊರಟಿದ್ದಾರೆ.
ಸಿದ್ದರಾಮಯ್ಯ ಬೆಂಬಲಿಗರು, ದೆಹಲಿಯಲ್ಲಿ ‘ಕೈ’ ವರಿಷ್ಠರ ಭೇಟಿ ಮಾಡಿ ಬಾದಾಮಿ ಕ್ಷೇತ್ರದಿಂದಲೇ ಸ್ಪರ್ಧಿಸುವಂತೆ ಸೂಚಿಸಬೇಕೆಂದು ಮನವಿ ಮಾಡಲಿದ್ದಾರೆ. ಈ ಸಂಬಂಧ ದೆಹಲಿಗೆ ಹೊರಟಿರುವ ಬೆಂಬಲಿಗರು ಕಾಂಗ್ರೆಸ್ ವತಿಷ್ಠರಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾಗಾಂಧಿ, ರಾಹುಲ್ ಗಾಂಧಿ, ಕರ್ನಾಟಕ ರಾಜ್ಯ ಉಸ್ತುವಾರಿ ರಣದೀಪಸಿಂಗ್ ಸುರ್ಜೆವಾಲಾ, ಕಾಂಗ್ರೆಸ್ ಚುನಾವಣಾ ಸಮಿತಿಯ ಸದಸ್ಯರನ್ನು ಭೇಟಿಯಾಗಲಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಬಾದಾಮಿ ಜನ ಬೆಂಗಳೂರಿನ ಕುಮಾರಕೃಪದಲ್ಲಿರುವ ಸಿದ್ದರಾಮಯ್ಯನವರ ಸರ್ಕಾರಿ ನಿವಾಸಕ್ಕೆ ಆಗಮಿಸಿ ನೀವು (ಸಿದ್ದರಾಮಯ್ಯ) ಮತ್ತೆ ಬಾದಾಮಿಯಿಂದಲೇ ಸ್ಪರ್ಧಿಸಬೇಕೆಂದು ಪಟ್ಟು ಹಿಡದಿದ್ದರು. ನೂರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು, ಸಿದ್ದರಾಮಯ್ಯ ಅಭಿಮಾನಿಗಳು ಮತ್ತು ಕ್ಷೇತ್ರದ ಜನತೆ ನೀವು ಈ ಬಾರಿ ಕೋಲಾರಕ್ಕೆ ಶಿಫ್ಟ್ ಆಗುವ ಹಾಗಿಲ್ಲ, ಬಾದಾಮಿಯಿಂದಲೇ ಸ್ಪರ್ಧೆ ಮಾಡಬೇಕು, ಯಾವುದೇ ಕಾರಣಕ್ಕೂ ನಿಮ್ಮನ್ನು ನಾವು ಬಿಡುವುದಿಲ್ಲ’ ಎಂದು ಪಟ್ಟುಬಿಡದೆ ತಿಭಟನೆ ನಡೆಸುತ್ತಿದ್ದರು. ಬಾದಾಮಿ, ಗುಳೇದಗುಡ್ಡ, ಕೆರೂರ ಸೇರಿದಂತೆ ನಾನಾ ಭಾಗಗಳಿಂದ ಬೆಂಗಳೂರಿಗೆ ಸುಮಾರು 300 ಕ್ಕೂ ಅಧಿಕ ಕ್ರೂಸರ್ ವಾಹನಗಳಲ್ಲಿ ಬೆಂಗಳೂರಿಗೆ ಸಿದ್ದರಾಮಯ್ಯ ಅಭಿಮಾನಿಗಳು ಆಗಮಿಸಿದ್ದರು.
ಸಿದ್ದರಾಮಯ್ಯನವರಿಗೆ ರಾಜಕೀಯ ಪುನರ್ಜನ್ಮ ನೀಡಿದ ಕ್ಷೇತ್ರ ಬಾದಾಮಿ, 2018ರಲ್ಲಿ ಅವರನ್ನು ಗೆಲ್ಲಿಸಿ ವಿಧಾನಸಭೆಗೆ ಕಳುಹಿಸಿದ್ದು ಬಾದಾಮಿ ಕ್ಷೇತ್ರದ ಜನತೆ, ಹೀಗಾಗಿ ಅವರು ಕ್ಷೇತ್ರ ಬಿಟ್ಟು ಹೋಗಬಾರದು, ಹೋದರೆ ನಾವು ಸಾಮೂಹಿಕ ರಾಜೀನಾಮೆ ಕೊಡುತ್ತೇವೆ, ಬಾದಾಮಿಯಲ್ಲಿ ಮತ್ತೊಮ್ಮೆ ಗೆದ್ದು ಬಂದು ಕ್ಷೇತ್ರಜ ಜನತೆಯ ಋಣ ತೀರಿಸಬೇಕು ಎಂದು ಹೇಳಿದ್ದರು. ಸಿದ್ದರಾಮಯ್ಯನವರು ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸದಿದ್ದರೆ ಪಟ್ಟಣ ಪಂಚಾಯತ್, ಪುರಸಭೆ ಸ್ಥಾನಗಳಿಗೆ ರಾಜೀನಾಮೆ ನೀಡುವುದಾಗಿ ಸಹ ಸ್ಥಳೀಯ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಎಚ್ಚರಿಕೆ ನೀಡಿದ್ದರು.
ರಾಜ್ಯದ ಮತ್ತಷ್ಟ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:07 am, Fri, 24 February 23