ವೀರಶೈವ ಲಿಂಗಾಯತ ಪಂಚಮಸಾಲಿ 3ನೇ ಪೀಠ ಅಸ್ತಿತ್ವಕ್ಕೆ; ಬಬಲೇಶ್ವರದ ಮಹಾದೇವ ಶಿವಾಚಾರ್ಯ ಸ್ವಾಮೀಜಿ ಪೀಠಾರೋಹಣ

| Updated By: ಆಯೇಷಾ ಬಾನು

Updated on: Feb 13, 2022 | 7:37 AM

ಬೆಳಗ್ಗೆ 5 ಗಂಟೆಗೆ ಜಗದ್ಗುರುಗಳ ಪಟ್ಟಾಭಿಷೇಕ ನಡೀತು. 6.15 ನಿಮಿಷಕ್ಕೆ ಜಗದ್ಗುರುಗಳಿಗೆ ರುದ್ರಾಕ್ಷಿ ಕಿರೀಟಧಾರಣೆ ಜರುಗಿದೆ. ಬೆಳಗ್ಗೆ 8 ಗಂಟೆಗೆ ಆಲಗೂರ ಗ್ರಾಮದ ಕೃಷ್ಣಾನದಿಗೆ ಕೃಷ್ಣಾರತಿ ಕಾರ್ಯವನ್ನು ಒಕ್ಕೂಟದ ಸ್ವಾಮೀಜಿಗಳು ಹಾಗೂ ಸಮಾಜದ ಮುಖಂಡರು ನೆರವೇರಿಸಲಿದ್ದಾರೆ.

ವೀರಶೈವ ಲಿಂಗಾಯತ ಪಂಚಮಸಾಲಿ 3ನೇ ಪೀಠ ಅಸ್ತಿತ್ವಕ್ಕೆ; ಬಬಲೇಶ್ವರದ ಮಹಾದೇವ ಶಿವಾಚಾರ್ಯ ಸ್ವಾಮೀಜಿ ಪೀಠಾರೋಹಣ
ವೀರಶೈವ ಲಿಂಗಾಯತ ಪಂಚಮಸಾಲಿ 3ನೇ ಪೀಠ ಅಸ್ತಿತ್ವಕ್ಕೆ
Follow us on

ಬಾಗಲಕೋಟೆ: ವೀರಶೈವ ಲಿಂಗಾಯತ ಪಂಚಮಸಾಲಿ 3ನೇ ಪೀಠ ಸ್ಥಾಪನೆ ಪರ ವಿರೋಧದ ಮಧ್ಯೆ ಕೊನೆಗೂ ಪೀಠಾರೋಹಣ ನಡೆದಿದೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಆಲಗೂರಿನಲ್ಲಿ ನೂತನ ಪೀಠ ಸ್ಥಾಪನೆಯಾಗಿದ್ದು, ಬಬಲೇಶ್ವರದ ಮಹಾದೇವ ಶಿವಾಚಾರ್ಯ ಸ್ವಾಮೀಜಿ ಮೊದಲ ಜಗದ್ಗುರುಗಳಾಗಿ ಪೀಠ ಏರಿದ್ದಾರೆ.

3ನೇ ಪೀಠಕ್ಕೆ ಪೀಠಾರೋಹಣ
ಪಂಚಮಸಾಲಿ ಸ್ವಾಮೀಜಿಗಳ ಒಕ್ಕೂಟದಿಂದ ಪೀಠಾರೋಹಣ ನೆರವೇರಿದೆ. ಬ್ರಾಹ್ಮಿ ಮುಹೂರ್ತದಲ್ಲಿ ವಿವಿಧ ಪೂಜಾ ಕೈಂಕರ್ಯಗಳನ್ನು ಮಾಡಲಾಗಿದೆ. ಮಠದಲ್ಲಿ ಅಷ್ಟ ದುರ್ಗಾ ಪೂಜೆ, ಪಾರ್ವತಿ ಪೂಜೆ, ಏಕಾದಶಿ ಮಹಾರುದ್ರ ಪೂಜೆ, ಸ್ವಸ್ತಿ ಪುಣ್ಯ ಆಹ್ವಾಚನ ಪೂಜೆ, ವೈದಿಕರಿಂದ ಮಂತ್ರ ಪಠಣ ಸೇರಿದಂತೆ ಪೂಜಾ ವಿಧಿವಿಧಾನಗಳು ನೆರವೇರಿವೆ. ಬೆಳಗ್ಗೆ 4.30 ಗಂಟೆ ಮಹದೇವ ಶಿವಾಚಾರ್ಯ ಮಹಾಸ್ವಾಮೀಜಿಗಳನ್ನ ಗಿರೀಶ್ ಬಳ್ಳೂಲರ ನಿವಾಸದಿಂದ ಪೀಠಾರೋಹಣ ಸ್ಥಳಕ್ಕೆ ಶ್ರದ್ಧಾಭಕ್ತಿಯಿಂದ ಕರೆದುಕೊಂಡು ಬರಲಾಯ್ತು. ಮಹದೇವ ಶಿವಾಚಾರ್ಯ ಅವರಿಗೆ ಅರಿಶಿನ ಲೇಪನ ಮಾಡಿ ಸ್ವಾಮೀಜಿಗಳು ಪರಸ್ಪರ ಅರಿಶಿನ ಬಳಿದುಕೊಂಡ್ರು.

ಪಂಚಮಸಾಲಿ ಸ್ವಾಮೀಜಿಗಳ ಒಕ್ಕೂಟದ ಕಾರ್ಯದರ್ಶಿ ಅಭಿನವ ಸಂಗನಬಸವ ಸ್ವಾಮೀಜಿ, ಬೆಂಡವಾಡ ಸ್ವಾಮೀಜಿ, ಸಿದ್ದಲಿಂಗದೇವರು ಸ್ವಾಮೀಜಿ ಸೇರಿದಂತೆ ವಿವಿಧ ಸ್ವಾಮೀಜಿಗಳು ಭಾಗಿಯಾಗಿದ್ರು. ವೈದಿಕರಿಂದ ಮಂತ್ರಪಠಣ ನೆರವೇರಿತು. ಮಹದೇವ ಶಿವಾಚಾರ್ಯ ಅವರಿಗಡ ರುದ್ರಾಭಿಷೇಕ, ಹಾಲು, ಜೇನು ತುಪ್ಪ, ಸಕ್ಕರೆ, ಜಲದಿಂದ ಪಂಚಾಮೃತಾಭಿಷೇಕ ನೆರವೇರಿದೆ. ಬೆಳಗ್ಗೆ 5 ಗಂಟೆಗೆ ಜಗದ್ಗುರುಗಳ ಪಟ್ಟಾಭಿಷೇಕ ನಡೀತು. 6.15 ನಿಮಿಷಕ್ಕೆ ಜಗದ್ಗುರುಗಳಿಗೆ ರುದ್ರಾಕ್ಷಿ ಕಿರೀಟಧಾರಣೆ ಜರುಗಿದೆ. ಬೆಳಗ್ಗೆ 8 ಗಂಟೆಗೆ ಆಲಗೂರ ಗ್ರಾಮದ ಕೃಷ್ಣಾನದಿಗೆ ಕೃಷ್ಣಾರತಿ ಕಾರ್ಯವನ್ನು ಒಕ್ಕೂಟದ ಸ್ವಾಮೀಜಿಗಳು ಹಾಗೂ ಸಮಾಜದ ಮುಖಂಡರು ನೆರವೇರಿಸಲಿದ್ದಾರೆ. ಬೆಳಗ್ಗೆ 10.30ಕ್ಕೆ ವೇದಿಕೆ ಕಾರ್ಯಕ್ರಮ ಇದ್ರೆ, 11 ಕ್ಕೆ ಧಾರ್ಮಿಕ ಮುಖಂಡರು ಹಾಗೂ ರಾಜಕೀಯ ಗಣ್ಯರ ಉಪಸ್ಥಿತಿಯಲ್ಲಿ ಜಗದ್ಗುರುಗಳ ಸಿಂಹಾಸನರೋಹಣ ಮತ್ತು ರುದ್ರಾಕ್ಷಿ ಕಿರೀಟಧಾರಣೆ ನಡೆಯಲಿದೆ. ಬಳಿಕ ಧರ್ಮಸಭೆ, ರೈತ ವಿರಾಟ ಸಮಾವೇಶ ಜರುಗಲಿದೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸಂಗನಬಸವ ಸ್ವಾಮೀಜಿ ತಿಳಿಸಿದ್ರು.

ಗದಗಿನ ತೋಂಟದಾರ್ಯ ಮಠದ ಸಿದ್ದರಾಮ ಸ್ವಾಮೀಜಿ ಮಾತನಾಡಿ, ಹೆಚ್ಚೆಚ್ಚು ಪೀಠಗಳು ಆದಂತೆ ಸಮಾಜದಲ್ಲಿನ ಅಂಧಕಾರ, ಅನಾಚಾರಗಳು ದೂರವಾಗುತ್ತವೆ. ಹೀಗಾಗಿ, ಇಂತಹ ಪೀಠಗಳು ಹೆಚ್ಚೆಚ್ಚು ಆಗಬೇಕು ಅಂತಾ ಹೇಳಿದ್ರು. ಇನ್ನು ಇದೇ‌ ಮೊದಲ ಬಾರಿಗೆ ಪೀಠದ ಕಾರ್ಯಕ್ರಮ ಸಿದ್ಧತೆಯಲ್ಲಿ ಸಚಿವ ಮುರುಗೇಶ್ ನಿರಾಣಿ ಕಾಣಿಸಿಕೊಂಡು, ಪರಿಶೀಲನೆ ನಡೆಸಿದ್ರು. ಅಡುಗೆ ಕಾರ್ಯಗಳು ಭರದಿಂದ ಸಾಗಿದೆ. ಮುಖ್ಯವೇದಿಕೆಯಲ್ಲಿ 300 ಆಸನಗಳ ವ್ಯವಸ್ಥೆ ಇದ್ದು, ಸ್ವಾಮೀಜಿಗಳು ವೇದಿಕೆ ಅಲಂಕರಿಸಲಿದ್ದಾರೆ. ಇನ್ನು ಸಮಾವೇಶಕ್ಕೆ ಬರುವ ಭಕ್ತರು, ರೈತರಿಗೆ ಹತ್ತು ಎಕರೆ ಜಾಗೆಯಲ್ಲಿ ಶಾಮಿಯಾನ ಹಾಕಲಾಗಿದೆ. ಒಟ್ಟಾರೆ ವೀರಶೈವ ಪಂಚಮಸಾಲಿ ಸಮುದಾಯದ 3ನೇ ಪೀಠ ಕೊನೆಗೂ ಅಸ್ತಿತ್ವಕ್ಕೆ ಬಂದಿದ್ದು, ಈ ಪೀಠ ಸಮುದಾಯಕ್ಕೆ ಯಾವ ರೀತಿ ಅನುಕೂಲ ಆಗಲಿದೆ ಅನ್ನೋದನ್ನ ನೋಡಬೇಕಿದೆ.

ವರದಿ: ರವಿ ಮೂಕಿ, ಟಿವಿ9 ಬಾಗಲಕೋಟೆ

ಇದನ್ನೂ ಓದಿ: ಪಂಚಮಸಾಲಿ ಸಮುದಾಯದ 3ನೇ ಪೀಠಕ್ಕೂ ನಮ್ಮ ಕುಟುಂಬದ ಬೆಂಬಲ ಇದೆ: ಮುರುಗೇಶ್ ನಿರಾಣಿ