ಬಾಗಲಕೋಟೆ: ಅದೊಂದು ಸರ್ಕಾರಿ ಶಾಲೆ. ಆದರೆ ಈ ಶಾಲೆಯನ್ನು ನೋಡಿದರೆ ಒಂದು ಕ್ಷಣ ಗೊಂದಲ ಆಗುವುದು ಖಚಿತ. ಏಕೆಂದರೆ ಸರ್ಕಾರಿ ಶಾಲೆಯಾಗಿದ್ದರೂ ಯಾವುದೇ ಖಾಸಗಿ ಶಾಲೆಗಳಿಗೆ ಕಮ್ಮಿ ಇಲ್ಲ ಎನ್ನುವಂತೆ ಕಣ್ಣಿಗೆ ರಾಚುತ್ತದೆ. ಬರೀ ಕಾಣುವುದಲ್ಲ. ಈ ಶಾಲೆಯ ಸಾಧನೆ ಕೂಡಾ ಅಷ್ಟೇ ಚೆಂದವಾಗಿದೆ. ಹಾಗಾದರೆ ಆ ಶಾಲೆ ಯಾವುದು? ಆ ಶಾಲೆಯ ಸಾಧನೆಗಳೇನು? ಎಂದು ಪ್ರಶ್ನಿಸುವವರಿಗೆ ಇಲ್ಲಿದೆ ಉತ್ತರ.
ಚುಕು ಬುಕು ರೈಲಿನ ಬೋಗಿ ಹೋಲುವಂತೆ ಬಣ್ಣಗಳಿಂದ ಶೃಂಗಾರಗೊಂಡಿರುವ ಶಾಲೆ. ಅಚ್ಚುಕಟ್ಟಾದ ಶಾಲಾ ಕೊಠಡಿಗಳು. ಸುಸಜ್ಜಿತ ಡೆಸ್ಕ್, ಪ್ರೊಜೆಕ್ಟರ್. ಇದ್ಯಾವುದೋ ಖಾಸಗಿ ಶಾಲೆಯಲ್ಲ ಬದಲಿಗೆ ಸರ್ಕಾರಿ ಶಾಲೆ. ಬಾಗಲಕೋಟೆ ತಾಲ್ಲೂಕಿನ ಛಬ್ಬಿ ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಚಿತ್ರಣವಿದು. ಕೇವಲ ಎರಡು ಸಾವಿರ ಜನಸಂಖ್ಯೆಯ ಪುಟ್ಟ ಊರು ಛಬ್ಬಿ. ಸರ್ಕಾರ ನೀಡುವ ಅನುದಾನದಿಂದ ಶಾಲೆಯನ್ನು ಚೆಂದಗಾಣಿಸಬೇಕು ಎಂದರೆ ಅದು ಸಾಧ್ಯವಿಲ್ಲ. ಹೀಗಾಗಿ ಶಾಲೆಯ ಶಿಕ್ಷಕರು ಮಾಡಿದ ಪ್ರಯತ್ನ ಹಾಗೂ ಒಗ್ಗಟ್ಟು ಛಬ್ಬಿ ಸರ್ಕಾರಿ ಪ್ರಾಥಮಿಕ ಶಾಲೆಯ ಅಂದಕ್ಕೆ ಪ್ರಮುಖ ಕಾರಣವಾಗಿದೆ.
ಕೇವಲ ನಾಲ್ಕು ಜನ ಶಿಕ್ಷಕರಿರುವ ಈ ಶಾಲೆಯ ಅಂದ-ಚೆಂದ ಮತ್ತಷ್ಟು ಉತ್ತುಂಗಕ್ಕೆ ಏರಿಕೆಯಾಗಿದೆ. ಶಾಲೆಗೆ ಬೇಕಾದ ಎಲ್ಲವನ್ನು ಬೇರೆ ಬೇರೆ ಸಂಘ ಸಂಸ್ಥೆಗಳಿಂದ ಧನ ಸಹಾಯ ಪಡೆದು ಈ ರೀತಿ ಶೃಂಗಾರ ಮಾಡಿದ್ದಾರೆ. ದುಡ್ಡು ಕಡಿಮೆಯಾದಾಗ ಶಿಕ್ಷಕರೇ ಸ್ವತಃ ದುಡ್ಡು ಹಾಕಿ ಶಾಲೆಯ ಅಭಿವೃದ್ಧಿಗೆ ಹಣದ ಕೊರತೆಯಾಗದಂತೆ ನೋಡಿಕೊಂಡಿದ್ದು, ಇಷ್ಟು ಚೆಂದವಾಗಿರಲು ಪ್ರಮುಖ ಕಾರಣವಾಗಿದೆ.
ನಾಲ್ಕು ಜನ ಶಿಕ್ಷಕರು ಸೇರಿ ಇನ್ನರ್ ವ್ಹೀಲ್ ಹಾಗೂ ಗ್ರಾಮ ಪಂಚಾಯತಿಯಿಂದ ಧನ ಸಹಾಯ ಪಡೆದುಕೊಂಡಿದ್ದಾರೆ. ಶಾಲೆಯ ಎಲ್ಲ ಕೊಠಡಿಗಳಿಗೆ ರೈಲು ಬೋಗಿ ಹೋಲುವಂತೆ ಪೇಂಟ್ ಮಾಡಿದ್ದಾರೆ. ಮೇಲ್ಛಾವಣಿ ದುರಸ್ತಿ, ವಿಶೇಷ ಬೋಧನೆ ಸಲುವಾಗಿ ಪ್ರೊಜೆಕ್ಟರ್ ಹಾಕಲಾಗಿದ್ದು, ಕನ್ನಡ ಚಿತ್ರ, ರಾಷ್ಟ್ರೀಯ ನಾಯಕರ ಬಗೆಗಿನ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ.
ನಲಿಕಲಿ ಸಲುವಾಗಿ ವಿಶೇಷ ಆಸನಗಳನ್ನು ವ್ಯವಸ್ಥೆ ಮಾಡಲಾಗಿದೆ. ಕೊರೊನಾದಿಂದ ಶಾಲೆಯ ಕಡೆ ಮುಖ ಮಾಡದ ಮಕ್ಕಳನ್ನು ಆಕರ್ಷಿಸಲು ಶಾಲೆಗೆ ಆಕರ್ಷಕ ಬಣ್ಣ ಬಳಿಯಲಾಗಿದೆ. ಆಯಾ ವರ್ಗಕ್ಕೆ ಸಂಬಂದಿಸಿದ ಕಲಿಕೆಗೆ ಸಂಬಂಧಿಸಿದ ಚಿತ್ರಗಳನ್ನು ವರ್ಗದ ಕೊಠಡಿಯೊಳಗೆ ಸಹ ಬಿಡಿಸಲಾಗಿದೆ. ಇದಲ್ಲದೇ ಮುರಾರ್ಜಿ ಶಾಲೆ, ಆದರ್ಶ ಶಾಲೆಗೆ ಈ ಶಾಲೆಯಿಂದ 5-6 ವಿದ್ಯಾರ್ಥಿಗಳಿಗೆ ವಿಶೇಷ ಬೋಧನೆ ಮಾಡಲಾಗುತ್ತಿದೆ. ಹೀಗಾಗಿ ಈ ಶಾಲೆಯಿಂದ ಪ್ರತಿವರ್ಷ 5 ರಿಂದ 6 ಮಕ್ಕಳು ಮುರಾರ್ಜಿ, ನವೋದಯ ಹಾಗೂ ಆದರ್ಶ ಶಾಲೆಗಳಿಗೆ ಆಯ್ಕೆಯಾಗುತ್ತಿದ್ದಾರೆ.
ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಲಿ ಎಂದು ಯಾವುದೇ ಖಾಸಗಿ ಶಾಲೆಗಳ ಶಿಕ್ಷಣಕ್ಕೆ ಸೆಡ್ಡು ಹೊಡೆಯುವಂತೆ ಮಾಡಲಾಗಿದೆ. ಮೊದಲು ಈ ಶಾಲೆಯಲ್ಲಿ 45 ಜನ ವಿದ್ಯಾರ್ಥಿಗಳು ಇದ್ದರು. ಈಗ 90 ಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಏರಿಕೆ ಆಗಿದೆ. ಈ ಶ್ರಮ ಶಿಕ್ಷಕರಿಗೆ ಸಲ್ಲಬೇಕು. ಶಿಕ್ಷಕರ ಶ್ರಮದಿಂದ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ಸಹ ಇಲ್ಲಿಗೆ ಬರುತ್ತಿದ್ದಾರೆ ಎಂದು ಛಬ್ಬಿ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಅರವಿಂದ ಲೋಖರೆ ಹೇಳಿದ್ದಾರೆ.
ಒಟ್ಟಿನಲ್ಲಿ ಛಬ್ಬಿ ಎಂಬ ಪುಟ್ಟ ಗ್ರಾಮದ ಸರ್ಕಾರಿ ಶಾಲೆ ಶಿಕ್ಷಕರ ಪ್ರಯತ್ನದಿಂದ ತನ್ನ ಅಂದವನ್ನು ಹೆಚ್ಚಿಸಿಕೊಂಡಿದೆ. ಕೇವಲ ಅಂದವಲ್ಲ ಶಿಕ್ಷಣದ ಗುಣಮಟ್ಟ ಕಾಯ್ದುಕೊಂಡು ಅಕ್ಕಪಕ್ಕದ ಊರುಗಳಿಗೆ ಮಾದರಿಯಾಗಿರುವುದು ವಿಶೇಷ. ಈಗ ಅಕ್ಟೋಬರ್ 25 ರಿಂದ ಶಾಲೆಗಳ ಆರಂಭಕ್ಕೆ ಅವಕಾಶ ಸಿಕ್ಕಿದ್ದು, ಶಿಕ್ಷಕರ ಪ್ರಯತ್ನ ಮಕ್ಕಳನ್ನು ಆಕರ್ಷಿಸಿದೆ.
ವರದಿ: ರವಿ ಮೂಕಿ
ಇದನ್ನೂ ಓದಿ:
ರಾಜ್ಯ ಶಿಕ್ಷಣ ರಂಗದಲ್ಲಿ ಇಂದು ಐತಿಹಾಸಿಕ ದಿನ, ಕಳಚಲಿದೆ ಕೊರೊನಾ ಗುಮ್ಮ! ಶಾಲೆಗಳಲ್ಲಿ ಪೂರ್ಣಾವಧಿಗೆ ಮಕ್ಕಳ ಹಾಜರಾತಿ