ಬಾಗಲಕೋಟೆ: ಸಿದ್ದರಾಮಯ್ಯ (Siddaramaiah) ಮುಖ್ಯಮಂತ್ರಿ ಆಗುವುದಕ್ಕೆ ಅಯೋಗ್ಯವಾದ ವ್ಯಕ್ತಿ. ಬೇರೆ ಪಕ್ಷಗಳ ನಾಯಕರ ಬಗ್ಗೆ ಹಗುರವಾಗಿ ಮಾತಾಡುತ್ತಾರೆ. ತಾನು ಸತ್ಯ ಹರಿಶ್ಚಂದ್ರ ಮೊಮ್ಮಗ ಎಂದು ಭಾವಿಸಿದ್ದಾರೆ. ಆದರೆ ಸಿದ್ದರಾಮಯ್ಯ ಭಸ್ಮಾಸುರ ಇದ್ದ ಹಾಗೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು. ಬಾಗಲಕೋಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಯಾವ ಪಕ್ಷದಲ್ಲಿದ್ದರೂ ಯಾರನ್ನೂ ಬೆಳೆಯಲು ಬಿಡಲ್ಲ. ಸಿದ್ದರಾಮಯ್ಯ ಬಳಿ ಹೋಗುವವರು ಭಸ್ಮವಾಗುತ್ತಾರೆ. ಅಂತಹ ಭಸ್ಮಾಸುರನನ್ನು ಬಿಜೆಪಿ ಸುಟ್ಟು ಬಿಡುತ್ತೆ ಎಂದು ವಾಗ್ದಾಳಿ ಮಾಡಿದರು. ನರೇಂದ್ರ ಮೋದಿಯಂತ ವ್ಯಕ್ತಿ ಬಗ್ಗೆ ಹಗುರವಾಗಿ ಏಕಚಚನದಲ್ಲಿ ಮಾತಾಡುತ್ತಾರೆ. ನರೇಂದ್ರ ಮೋದಿ ಇವತ್ತು ವಿಶ್ವನಾಯಕ. ಯಕಶ್ವಿತ್ ಸಿದ್ದರಾಮಯ್ಯ ಮೋದಿ ಬಗ್ಗೆ ಏಕವಚನದಲ್ಲಿ ಮಾತನಾಡಬಾರದು. ನನಗೂ ಸಿದ್ದರಾಮಯ್ಯಕ್ಕಿಂತ ಕೆಟ್ಟ ಭಾಷೆ ಬರುತ್ತದೆ. ನಾನು ಅದೇ ಜಾತಿಯವನೇ. ನಮ್ಮ ಪಕ್ಷ ಸಂಸ್ಕಾರ ಕೊಟ್ಟಿದೆ. ಮುಖ್ಯಮಂತ್ರಿ ಆದವರಿಗೆ ವಿರೋಧ ಪಕ್ಷದಲ್ಲಿದ್ದವರಿಗೆ ನಾನು ಏಕವಚನದಲ್ಲಿ ಮಾತಾಡೋದಿಲ್ಲ. ಒಳ್ಳೆಯ ರೀತಿ ಮಾತಾಡಿ ಎಂದು ಒಬ್ಬ ಸ್ನೇಹಿತನಾಗಿ ಸಲಹೆ ನೀಡುತ್ತಿದ್ದೇನೆ ಎಂದರು.
ಸಿದ್ದರಾಮಯ್ಯ ಎಲ್ಲಿ ಸ್ಪರ್ಧೆ ಮಾಡ್ತಾರೆ ಎಂದು ಬಿಜೆಪಿಯವರು ಕಾಯುತ್ತಿದ್ದಾರೆ
ಸಿದ್ದರಾಮಯ್ಯ ಎಲ್ಲಿ ಸ್ಪರ್ಧೆ ಮಾಡುತ್ತಾರೆ ಎಂಬುದನ್ನ ಬಿಜೆಪಿಯವರು ಕಾಯುತ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದು, ಅವರಿಗೆ ಗತಿ ಇಲ್ಲ. ಅವರ ಜೊತೆ ನಾವು ಏಕೆ ಹೋಗೋಣ. ಚಾಮುಂಡಿಯಲ್ಲಿ ಸೋಲುತ್ತೇನೆ ಅಂದ್ಮೇಲೆ ಬಾದಾಮಿಗೆ ಬಂದರು.
ಯಾವ ವ್ಯಕ್ತಿ ಶಾಸಕ ಆದವರು ಆ ಕ್ಷೇತ್ರದ ಜನ ಮನಸ್ಸು ಗೆಲ್ಲೋಕೆ ಆಗದೇನೆ ಚುನಾವಣೆಯಲ್ಲಿ ಸೋತು ಇನ್ನೊಂದು ಕ್ಷೇತ್ರಕ್ಕೆ ಹೋದರೆ ಅಷ್ಟು ಒಳ್ಳೆಯದು ಅಲ್ಲ ಅನ್ನೋದು ನನ್ನ ಭಾವನೆ. ಬೇಕಾದಷ್ಟು ಜನ ಹೋಗಿರಬಹುದು. ಸಿದ್ದರಾಮಯ್ಯ ನಿಮಗೆ ಆತ್ಮಸ್ಥೈರ್ಯ ಇಲ್ಲ. ಯಾವ ಕ್ಷೇತ್ರದಲ್ಲಿ ಸಾಬರು ಜಾಸ್ತಿ ಇದಾರೆ. ಎಲ್ಲಿ ಜಾಸ್ತಿ ದುಡ್ಡು ಹಂಚಬಹುದು, ಎಲ್ಲಿ ನನ್ನ ಜಾತಿ ಜನ ಹೆಚ್ಚಿದ್ದಾರೆ ಹೋಗ್ತಿರಿ. ಇಂತಹ ದಯನೀಯ ಸ್ಥಿತಿ ಒಬ್ಬ ಸಿಎಂ ಆದವರಿಗೆ ಬರಬಾರದು ಎಂದು ಹೇಳಿದರು.
ಭಾರತ ಜೋಡೋ ಎನ್ನಲು ಕಾಂಗ್ರೆಸ್ಗೆ ಅಧಿಕಾರ ಇದೆಯಾ?
ರಾಹುಲ್ ಗಾಂಧಿ ಯಾತ್ರೆಗೆ ಟಿಕೆಟ್ ಬೇಕಾದವರು ಐದು ಸಾವಿರ ಜನ ಕರೆದು ತರಬೇಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಹೇಳಿದ್ದಾರೆ. ಯಾತ್ರೆಗೆ ಜನ ಸೇರುತ್ತಿಲ್ಲ, ಇವರು ಕರೆದುಕೊಂಡು ಬರ್ತಿರೋದು. ಭಾರತ ಜೋಡೋ ಎನ್ನಲು ಕಾಂಗ್ರೆಸ್ಗೆ ಅಧಿಕಾರ ಇದೆಯಾ ಎಂದು ಭಾರತ ಜೋಡೋ ವಿರುದ್ಧ ಕಿಡಿಕಾರಿದರು. ಭಾರತವನ್ನು ಒಡೆದವರು ನೀವು. ನೆಹರು ಪ್ರಧಾನಿ ಆಗುವ ಆಸೆಗೆ ಹಿಂದುಸ್ತಾನ, ಪಾಕಿಸ್ತಾನ ಅಂತ ಒಡೆದರು. ಪಾಕ್ನಲ್ಲಿ ಇದ್ದ 23 % ಹಿಂದೂ ಜನಸಂಖ್ಯೆ ಇವತ್ತು 2% ಗೆ ಬಂದಿದೆ. ದೇಶದಲ್ಲಿ ಕಾಂಗ್ರೆಸ್ ನಿರ್ಣಾಮ ಆಗಿದೆ. ಕಾಂಗ್ರೆಸ್ ಪಕ್ಷ ಬದುಕಿದೆ ಅಂತ ತೋರಿಸಲು ಯಾತ್ರೆ ಹೊರಟಿದೆ. ಭಾರತ ಜೋಡೋದಿಂದ ನೀವು ಮಾಡಿದ ಸಾಧನೆ ಏನು ಎಂದು ಪ್ರಶ್ನಿಸಿದರು. ದೇಶದ ಜನರನ್ನ ಮತ್ತೊಮ್ಮೆ ಮೂರ್ಖರನ್ನಾಗಿ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಜನರು ಮೂರ್ಖರಲ್ಲ. ಕಾಂಗ್ರೆಸ್ನ್ನ ಮೂಲೆಗೆ ತಳ್ಳುವ ಪರಿಸ್ಥಿತಿ ಬರುತ್ತೆ ಎಂದು ಹೇಳಿದರು.
ಪತ್ರಕರ್ತರ ಮೇಲೆ ಮಾಜಿ ಸಚಿವ ಈಶ್ವರಪ್ಪ ಕೆಂಡಾಮಂಡಲ
40% ಕಮಿಶನ್ ವಿಚಾರವಾಗಿ ಮಾತನಾಡಿದ ಅವರು 40% ಅನ್ನೋದೆಲ್ಲ ಸುಳ್ಳು. ಎಷ್ಟು ಪರ್ಸೆಂಟ್ ನಡಿತಾ ಇದೆ ಎನ್ನುವ ಪ್ರಶ್ನೆಗೆ ಸಿಡಿಮಿಡಿಗೊಂಡರು. ಇದು ಮಾನ ಮರ್ಯಾದ ಇಲ್ಲದೇ ಇರೋರ ಕೇಳುವ ಪ್ರಶ್ನೆ ಇದು. ಅವರಿಗಂತೂ(ಕೆಂಪಣ್ಣ) ಜ್ಞಾನ ಇಲ್ಲ. ನೀವು ಮೈಮೇಲೆ ಜ್ಞಾನ ಇಟ್ಟಿಕೊಂಡು ಕೇಳಬೇಕು. ಅವರು(ಕೆಂಪಣ್ಣ) ಕಾಂಗ್ರೆಸ್ನಿಂದ ದುಡ್ಡು ತಿಂದು ಹೇಳಿಕೆ ಕೊಡ್ತಿರೋದು. ಆರೋಪ ಮಾಡಬೇಕಾದರೆ ದಾಖಲೆ ಇರಬೇಕು ಎಂದು ಈಶ್ವರಪ್ಪ ವಾದಿಸಿದರು. 2018 ರಲ್ಲಿ ನರೇಂದ್ರ ಮೋದಿ 10% ಸರ್ಕಾರ ಎಂದಾಗ ಯಾವ ದಾಖಲೆ ಕೊಟ್ಟಿದ್ರಿ ಎನ್ನುವ ಮಾಧ್ಯಮದವರ ಪ್ರಶ್ನೆಗೆ ತಡಬಡಿಸಿದರು.
ಅದು ಮೋದಿ ಹತ್ರ ಏನು ದಾಖಲೆ ಇತ್ತು. ನೀವು ಅವರನ್ನ ಕೇಳಿ ನನಗೇನು ಗೊತ್ತು? ನಾನಂತೂ ಚುನಾವಣೆಯಲ್ಲಿ ಕಾಂಗ್ರೆಸ್ಗೆ 10% ಸರ್ಕಾರ ಎಂದೂ ಯಾವತ್ತು ಮಾತಾಡಿಲ್ಲ. ಕಾರಣ ನನಗೇನು ಗೊತ್ತಿರಲಿಲ್ಲ. ಈಗ ನನ್ನ ಮೇಲೆ ರಾಹುಲ್ ಗಾಂಧಿ ಸಹ ಯಾಕೆ ರಾಜೀನಾಮೆ ಕೊಟ್ರಿ ಅಂದಿದ್ದಾರೆ. ಮರ್ಯಾದೆ ಪ್ರಶ್ನೆ ನಾನು ರಾಜೀನಾಮೆ ಕೊಟ್ಟೆ. ನಾನು ತನಿಖೆಯಲ್ಲಿ ನಿರ್ದೋಷಿ ಎಂದು ಗೊತ್ತಾದ ಮೇಲೂ ನನ್ನ ಹೆಸರೇ ಗೊತ್ತಿಲ್ಲದ ರಾಹುಲ್ ಗಾಂಧಿ ಕಡೆಯಿಂದ ಮಾತಾಡಿಸಿದ್ರು. ಆ ಕೆಂಪಣ್ಣನಿಗೆ ಈಗಲೂ ಹೇಳ್ತೇನೆ. ನಿಮ್ಮಕಡೆ ಒಬ್ಬ ಮಂತ್ರಿ ಬಗ್ಗೆ ದಾಖಲೆ ಇದ್ರೆ ಕೊಡಿ. ಸಂತೋಷ ಪಾಟೀಲ ಮೇಲೆ ನಾನು ಕೇಸ್ ಹಾಕಿದೆ. ಪಾಪ ಅವನು ಸುಸೈಡ್ ಮಾಡಿಕೊಂಡ. ನಾನೇನು ಮಾಡ್ಲಿ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.