ಸಿದ್ದರಾಮಯ್ಯಗೆ ಅಧಿಕಾರದಿಂದ ಇಳಿಸ್ತಾರೆಂಬ ಭಯ: ಛಲವಾದಿ ನಾರಾಯಣಸ್ವಾಮಿ

ಐದು ವರ್ಷ ನಾನೇ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ. 2013ರಲ್ಲಿ ಅಧಿಕಾರ ವಹಿಸಿಕೊಂಡಾಗ ಇದು ಕೊನೆ ಚುನಾವಣೆ ಅಂತ ಸಿದ್ದರಾಮಯ್ಯ ಹೇಳಿದ್ದರು. ಮನುಷ್ಯನಿಗೆ ನಾಲಿಗೆ ಒಂದೇ ಇರಬೇಕು. ಹೇಳೋದೊಂದು ಮಾಡೋದೊಂದು ಆದ್ರೆ ಯಾರು ಏನು ಮಾಡಲಾಗುತ್ತೆ ಎಂದು ನಾರಾಯಣಸ್ವಾಮಿ ಹೇಳಿದ್ದಾರೆ.

ಸಿದ್ದರಾಮಯ್ಯಗೆ ಅಧಿಕಾರದಿಂದ ಇಳಿಸ್ತಾರೆಂಬ ಭಯ: ಛಲವಾದಿ ನಾರಾಯಣಸ್ವಾಮಿ
ಛಲವಾದಿ ನಾರಾಯಣಸ್ವಾಮಿ ಕಿಡಿ

Updated on: Oct 01, 2025 | 7:26 PM

ಬಳ್ಳಾರಿ, ಅಕ್ಟೋಬರ್​ 01: ತಮ್ಮನ್ನು ಎಲ್ಲಿ ಸಿಎಂ ಸ್ಥಾನದಿಂದ ಕೆಳಗೆ ಇಳಿಸುತ್ತಾರೋ ಎಂಬ ಭಯದಿಂದಲೇ ಸಿದ್ದರಾಮಯ್ಯ (Siddaramaiah) 5 ವರ್ಷ ನಾನೇ ಮುಖ್ಯಮಂತ್ರಿ ಎಂದು ಹೇಳುತ್ತಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದ್ದಾರೆ. 2013ರಲ್ಲಿ ಅಧಿಕಾರ ವಹಿಸಿಕೊಂಡಾಗ ಇದು ಕೊನೆ ಚುನಾವಣೆ ಅಂತ ಸಿದ್ದರಾಮಯ್ಯ ಹೇಳಿದ್ದರು. ಆದರೆ ಈಗ, ಇನ್ನೂ ನಾನೇ‌ ಸಿಎಂ ಎಂದು ಹೇಳುತ್ತಿದ್ದಾರೆ. ಮನುಷ್ಯನಿಗೆ ನಾಲಿಗೆ ಒಂದೇ ಇರಬೇಕು. ಹೇಳಿದ ಮಾತಿನಂತೆ ನಡೆದುಕೊಳ್ಳದಿದ್ರೆ ಯಾರು ಏನು ಮಾಡಲು ಆಗುತ್ತೆ ಎಂದು ಅವರು ಪ್ರಶ್ನಿಸಿದ್ದಾರೆ.

‘ತಪ್ಪಿಸಿಕೊಳ್ಳುವ ಕಲೆ ಸಿಎಂಗೆ ಗೊತ್ತು’

ಭೀಮಾನದಿ ಪ್ರವಾಹದಿಂದಾಗಿ ತತ್ತರಿಸಿರುವ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಿಎಂ ವೈಮಾನಿಕ ಸಮೀಕ್ಷೆ ವಿಚಾರವಾಗಿಯೂ ಛಲವಾದಿ ನಾರಾಯಣಸ್ವಾಮಿ ಕಿಡಿ ಕಾರಿದ್ದು, ಸಂಕಷ್ಟ ಬಂದಾಗ ತಪ್ಪಿಸಿಕೊಳ್ಳುವ ಕಲೆ‌ ಸಿದ್ದರಾಮಯ್ಯಗೆ ಗೊತ್ತಿದೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಸಿಎಂ ಭೇಟಿ ನೀಡಿದ್ದರೆ ಜನ ಮೇಲೆ ಬೀಳ್ತಿದ್ದರು. ಅಲ್ಲದೆ ರಸ್ತೆಗುಂಡಿಗಳಿಂದಾಗಿ ಅವರು ಕಾರಲ್ಲಿ ಪ್ರಯಾಣಿಸಲು ಸಾಧ್ಯವಿಲ್ಲ. ಹೀಗಾಗಿಯೇ ಸಿದ್ದರಾಮಯ್ಯ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: 5 ವರ್ಷವೂ ನಾನೇ ಸಿಎಂ: ವಿರೋಧಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಟಕ್ಕರ್​

‘ನಾಟಕ ಬೇಡ, ಪರಿಹಾರ ಕೊಡಿ’

ಪರಿಹಾರ ಕೊಡಿ ಅಂದ್ರೆ ಕೇಂದ್ರಕ್ಕೆ ಪತ್ರ ಬರೆದಿದ್ದೇವೆ. ತೀರ್ಮಾನ ಬರಬೇಕು ಎಂದು ಸಿಎಂ ಹೇಳ್ತಾರೆ. ಕೇಂದ್ರ ಯಾಕೆ ತಿರ್ಮಾನ ಕೊಡಬೇಕು? NDRFನಿಂದ ಬರೋ ಪರಿಹಾರ ಬಂದೇ ಬರುತ್ತೆ. ಅದನ್ನ ನೀವು ಕೇಳಬೇಕಿಲ್ಲ. ನಿಮ್ಮ ನಾಟಕ ಜನರಿಗೆ ಬೇಡ, ಬದಲು ಅವರ ಸಮಸ್ಯೆಗಳಿಗೆ ಪರಿಹಾರ ನೀಡಿ. ಪ್ರವಾಹದಿಂದಾಗಿ ಬಳ್ಳಾರಿ ಹೊರತು ಪಡಿಸಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಬಹಳ ಹಾನಿಯಾಗಿದೆ. 5 ಜಿಲ್ಲೆಗಳಲ್ಲಿ ಸಂಪೂರ್ಣ ಬೆಳೆ ನಾಶವಾಗಿದೆ. ಬಿದರ್, ಯಾದಗಿರಿ ಹಾಗೂ ಕಲಬುರಗಿಯಲ್ಲಿ ಶೇ.08ರಷ್ಟು ಬೆಳೆ ನೀರುಪಾಲಾಗಿದ್ದು, ಅನ್ನದಾತರು ಕಂಗಾಲಾಗಿದ್ದಾರೆ. ಈಗಲೂ ಹಲವೆಡೆ ಮನೆಗಳಲ್ಲಿ ನೀರು ತುಂಬಿದ್ದು, ಜನ ಕಷ್ಟ ಪಡ್ತಿದ್ದಾರೆ. ಹೀಗಿದ್ದರೂ ಮಂತ್ರಿಗಳು ಸ್ಥಳಕ್ಕೆ ಬಾರದೆ ಸಿಎಂ ಜೊತೆ ವೈಮಾನಿಕ ಸಮೀಕ್ಷೆ ಮಾಡ್ತಾರೆ. ಉಸ್ತುವಾರಿ ಸಚಿವರೇ ಜನರ ಸಮಸ್ಯೆ ಕೇಳದಿದ್ದರೆ ಹೇಗೆ ಎಂದು ನಾರಾಯಣಸ್ವಾಮಿ ಕಿಡಿ ಕಾರಿದ್ದಾರೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:20 pm, Wed, 1 October 25