ವಿಜಯನಗರ: ಕಲುಷಿತ ನೀರು ಸೇವಿಸಿ 6 ಜನರ ಸಾವು ಪ್ರಕರಣ, ಇಬ್ಬರು ಅಧಿಕಾರಿಗಳು ಅಮಾನತು

| Updated By: ಆಯೇಷಾ ಬಾನು

Updated on: Oct 06, 2021 | 9:19 AM

ಮಕರಬ್ಬಿಯಲ್ಲಿ ಕಲುಷಿತ ನೀರು ಸೇವಿಸಿ 6 ಜನರು ಮೃತಪಟ್ಟ ಕೇಸ್ಗೆ ಸಂಬಂಧಿಸಿ ಇಬ್ಬರು ಅಧಿಕಾರಿಗಳನ್ನ ಅಮಾನತು ಮಾಡಲಾಗಿದೆ.

ವಿಜಯನಗರ: ಕಲುಷಿತ ನೀರು ಸೇವಿಸಿ 6 ಜನರ ಸಾವು ಪ್ರಕರಣ, ಇಬ್ಬರು ಅಧಿಕಾರಿಗಳು ಅಮಾನತು
ಪಿಡಿಒ ಶರಣಪ್ಪ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಂಜಿನಿಯರ್ ವಿಜಯ್ ನಾಯ್ಕ್
Follow us on

ವಿಜಯನಗರ: ಮಕರಬ್ಬಿಯಲ್ಲಿ ಕಲುಷಿತ ನೀರು ಸೇವಿಸಿ 6 ಜನರು ಮೃತಪಟ್ಟ ಕೇಸ್ಗೆ ಸಂಬಂಧಿಸಿ ಇಬ್ಬರು ಅಧಿಕಾರಿಗಳನ್ನ ಅಮಾನತು ಮಾಡಲಾಗಿದೆ. ಹೂವಿನಹಡಗಲಿ ತಾಲೂಕಿನ ಮಕರಬ್ಬಿ ಪಿಡಿಒ ಶರಣಪ್ಪ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಂಜಿನಿಯರ್ ವಿಜಯ್ ನಾಯ್ಕ್ ಸಸ್ಪೆಂಡ್ ಮಾಡಿ ಬಳ್ಳಾರಿ ಜಿ.ಪಂ. ಸಿಇಒ ನಂದಿನಿ ಆದೇಶ ಹೊರಡಿಸಿದ್ದಾರೆ. ಹಾಗೂ ಎಇಇ ಎಂ.ಡಿ.ಕುಮಾರ್, ವಿನೋದ್ ಕುಮಾರ್ ಗುಪ್ತಾ ಸೇರಿ ಮತ್ತಿಬ್ಬರು ಇಂಜಿನಿಯರ್‌ಗಳ ಅಮಾನತಿಗೆ ಶಿಫಾರಸು ಮಾಡಲಾಗಿದೆ. ಈ ಹಿಂದೆ ಮಕರಬ್ಬಿ ಪರಿಸ್ಥಿತಿಯ ಬಗ್ಗೆ ಟಿವಿ9 ವರದಿ ಪ್ರಸಾರ ಮಾಡಿತ್ತು. ಸದ್ಯ ಟಿವಿ9 ವರದಿ ಬಳಿಕ ವೈದ್ಯಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದ್ದಾರೆ.

ಇನ್ನು ಪಿಡಿಒ ಶರಣಪ್ಪರನ್ನ ಅಮಾನತುಗೊಳಿಸಿದ್ದಕ್ಕೆ ಮಕರಬ್ಬಿ ಗ್ರಾ,ಪಂಗೆ ಬೀಗ ಹಾಕಿ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ಗ್ರಾ,ಪಂ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಪೈಪ್ ಲೈನ್ ಕಾಮಗಾರಿ ಮಾಡಿದ ಜೆಜೆ ಎಂ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಕಲುಷಿತ ನೀರು ಸೇವಿಸಿ ಮೃತಪಟ್ಟ ಕುಟುಂಬಗಳಿಗೆ ತಲಾ 3 ಲಕ್ಷ ಪರಿಹಾರ ಘೋಷಣೆ
ಕಲುಷಿತ ನೀರು ಸೇವಿಸಿ ಮೃತಪಟ್ಟ 6 ಜನ ಕುಟುಂಬಕ್ಕೆ ಸರ್ಕಾರದಿಂದ ತಲಾ 3 ಲಕ್ಷ ಪರಿಹಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಮನೀಷ್ ಮೌದ್ಗಿಲ್ ನೇತೃತ್ವದಲ್ಲಿ ಸಮಿತಿ ರಚಿಸಿದ್ದೇವೆ. ಸೂಕ್ತ ತನಿಖೆ ಮಾಡಿ ವರದಿ ನೀಡುವಂತೆ ಸೂಚಿಸುತ್ತೇನೆ ಎಂದು ಅವರು ಬೆಂಗಳೂರಿನಲ್ಲಿ ತಿಳಿಸಿದ್ದಾರೆ. ಗ್ರಾಮಕ್ಕೆ ತಹಶೀಲ್ದಾರ್ ಮಹೇಂದ್ರ ಭೇಟಿ ನೀಡಿ ಪಂಚಾಯಿತ್ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದ್ದಾರೆ.

ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮಕರಬ್ಬಿಯಲ್ಲಿ ಕಲುಷಿತ ನೀರು ಸೇವಿಸಿ 6 ಜನ ಸಾವನ್ನಪ್ಪಿರುವ ಕಾರಣ ಆತಂಕಗೊಂಡ ಕೆಲ ಕುಟುಂಬಗಳು ಗ್ರಾಮವನ್ನು ತೊರೆದು ಹೋಗಿವೆ. ಕೆಲ ಜನರು ಮನೆಗೆ ಬೀಗ ಹಾಕಿ ಸಂಬಂಧಿಕರ ಮನೆಗೆ ತೆರಳಿದ್ದಾರೆ. ಅಸ್ವಸ್ಥಗೊಂಡ ಕೆಲವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಹುಬ್ಬಳ್ಳಿ, ದಾವಣಗೆರೆ, ಹಾವೇರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಕರಬ್ಬಿ ಗ್ರಾಮದಲ್ಲಿ ಶಾಲೆಗೆ ತಾತ್ಕಾಲಿಕವಾಗಿ ರಜೆ ಘೋಷಣೆ ಮಾಡಲಾಗಿದೆ.

ವಾಂತಿಭೇದಿಯಿಂದ ಅಸ್ವಸ್ಥರಾಗಬಹುದೆಂಬ ಆತಂಕದಲ್ಲಿ ತಮ್ಮ ತಮ್ಮ ಮಕ್ಕಳನ್ನು ಗ್ರಾಮಸ್ಥರು ಸಂಬಂಧಿಕರ ಮನೆಗಳಿಗೆ ಕಳುಹಿಸಿದ್ದಾರೆ. ಸರಣಿ ಸಾವಿನಿಂದ ಗ್ರಾಮದಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ. ಸದ್ಯ ಉಳಿದವರಿಗೆ ಚಿಕಿತ್ಸೆ ಮುಂದುವರಿದಿದ್ದು, ಗ್ರಾಮದ ಸರ್ಕಾರಿ ಶಾಲೆಯಲ್ಲಿ 7-8 ತರಗತಿ ಮಕ್ಕಳಿಗೆ ರಜೆ ಘೋಷಣೆ ಮಾಡಿದ್ದಾರೆ.
ಈ ಬಗ್ಗೆ ಟಿವಿ9ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್, ಮೃತ ಕುಟುಂಬಗಳಿಗೆ ಸಿಎಂ ಪರಿಹಾರ ನಿಧಿ ಅಡಿ ಪರಿಹಾರ ನೀಡಲು ಚಿಂತನೆ ನಡೆಸಲಾಗಿದೆ. ಈ ಸಂಬಂಧ ವರದಿ ತರಿಸಿಕೊಳ್ಳಲು ಡಿಸಿಗೆ ಸೂಚನೆ ನೀಡಲಾಗುವುದು. ಗ್ರಾಮಕ್ಕೆ ಭೇಟಿ ನೀಡಲು ಡಿಸಿಗೆ ಸೂಚನೆ ನೀಡಲಾಗಿದೆ. ನೀರು ಯಾವ ಕಾರಣಕ್ಕೆ ಕಲುಷಿತವಾಗಿದೆ ಅನ್ನೋ ಬಗ್ಗೆ ಪರಿಶೀಲನೆ ನಡೆಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ನೀರು ಕಲುಷಿತಗೊಳ್ಳಲು ಕಾರಣವೇನು?
ಬೋರ್ ವೆಲ್ನಿಂದ ಹೊಸ ಪೈಪ್ ಲೈನ್ ಕಾಮಗಾರಿ ನಡೆಯುತ್ತಿದ್ದು ಈ ವೇಳೆ, ಹಳೆ ಪೈಪ್ ಗಳಿಗೆ ಡ್ಯಾಮೇಜ್ ಆಗಿದೆ. ಡ್ಯಾಮೇಜ್ ಆದ ಪೈಪ್ ನೊಳಗೆ ಚರಂಡಿ ನೀರು ಮಿಶ್ರವಾಗಿದ್ದು, ಇದೇ ನೀರನ್ನು ಮಕರಬ್ಬಿ ಗ್ರಾಮಸ್ಥರು ಸೇವಿಸಿದ್ದಾರೆ. ಸುಮಾರು 2 ಸಾವಿರಕ್ಕೂ ಅಧಿಕ ಜನಸಂಖ್ಯೆ ಇರೋ ಮಕರಬ್ಬಿ ಗ್ರಾಮದಲ್ಲಿ ಈ ಕಾರಣದಿಂದ ಸುಮಾರು 200 ಕ್ಕೂ ಜನರು ವಾಂತಿಬೇಧಿಯಿಂದ ಬಳಲಿದ್ದರು. ಹುಬ್ಬಳ್ಳಿ, ದಾವಣಗೆರೆ, ಹಾವೇರಿ ಆಸ್ಪತ್ರೆಯಲ್ಲಿ ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಇದುವರೆಗೆ ಗ್ರಾಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹಾಗೂ ಜಿಲ್ಲಾಧಿಕಾರಿಗಳು ಸೇರಿದಂತೆ ಅಧಿಕಾರಿಗಳು ಆಗಮಿಸಿಲ್ಲ. ಈ ಕುರಿತು ಜಿಲ್ಲಾಡಳಿತದ ವಿರುದ್ದ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ವಿಜಯನಗರ: ಕಲುಷಿತ ನೀರು ಸೇವನೆಯಿಂದ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿಕೆ; ಸ್ಪಂದಿಸದ ಜಿಲ್ಲಾಡಳಿತದ ವಿರುದ್ಧ ಜನರ ಆಕ್ರೋಶ

Published On - 8:56 am, Wed, 6 October 21