ಬಳ್ಳಾರಿ: ಆ ತಾಲೂಕು ರಾಜ್ಯದಲ್ಲಿಯೇ ಅತ್ಯಂತ ಬರಪೀಡಿತ ತಾಲೂಕು ಅಂತಾ ಪ್ರತಿ ವರ್ಷ ಘೋಷಣೆಯಾಗುತ್ತಲೇ ಇದೆ. ಅದೇ ತಾಲೂಕಿನಲ್ಲಿಯೇ ಅತಿಹೆಚ್ಚು ಅರಣ್ಯ ಪ್ರದೇಶ ಕೂಡ ಇದೆ. ಮರಗಳ್ಳರ ಹಾವಳಿ, ಮರುಳು ಮಾಫಿಯಾ ಅರಣ್ಯ ಪ್ರದೇಶಗಳಲ್ಲಿ ಎಗ್ಗಿಲ್ಲದೇ ನಡೆಯುತ್ತಿತ್ತು. ಆದರೆ ಇದುವರೆಗೆ ಅರಣ್ಯಾಧಿಕಾರಿಗಳು ಅಷ್ಟೊಂದು ತಲೆಕೆಡಿಸಿಕೊಂಡಿದಿಲ್ಲ.
ಇದರಿಂದಾಗಿ ಆ ತಾಲೂಕಿನ ಸಾವಿರಾರು ಹೆಕ್ಟೇರ್ ಅರಣ್ಯ ಪ್ರದೇಶಗಳಲ್ಲಿದ್ದ ಗಿಡ ಮರಗಳು ಅಳಿವಿನಂಚಿನಲ್ಲಿತ್ತು. ಆದ್ರೆ ಈ ತಾಲೂಕಿಗೆ ಬಂದ ದಿಟ್ಟ ಮಹಿಳಾ ಅಧಿಕಾರಿ ಅಕ್ರಮಗಳಿಗೆ ಕಡಿವಾಣ ಹಾಕಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿದ್ದ ಅರಣ್ಯ ಪ್ರದೇಶವನ್ನ ಸಂರಕ್ಷಿಸಿದ್ದಾರೆ.
ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನಲ್ಲಿ ಕೂಡ್ಲಿಗಿ ಮತ್ತು ಗುಡೇಕೋಟೆ ವಲಯ ಎಂಬ 2 ಅರಣ್ಯ ವಿಭಾಗಗಳು ಇವೆ. ಕೂಡ್ಲಿಗಿ ವಲಯದ ವ್ಯಾಪ್ತಿಗೆ 24,460 ಹೆಕ್ಟೇರ್ ಪ್ರದೇಶ ಅರಣ್ಯ ಇದೆ. ಚಿರಿಬಿ ಕಾಯ್ದಿಟ್ಟ ಅರಣ್ಯ ಪ್ರದೇಶ, ಸುಂಕದಕಲ್ಲು ಕಾಯ್ದಿಟ್ಟ ಅರಣ್ಯ ಪ್ರದೇಶ, ಕಕ್ಕುಪ್ಪಿ ಕಾಯ್ದಿಟ್ಟ ಅರಣ್ಯ ಪ್ರದೇಶ, ಬಣವಿಕಲ್ಲು ಕಾಯ್ದಿಟ್ಟ ಅರಣ್ಯ ಪ್ರದೇಶ, ಜರ್ಮಲಿ ಕಾಯ್ದಿಟ್ಟ ಅರಣ್ಯ ಪ್ರದೇಶ, ಸಂಡೂರು ತಾಲೂಕಿನ ಬಂಡ್ರಿ ಕಾಯ್ದಿಟ್ಟ ಅರಣ್ಯ ಪ್ರದೇಶ, ಸೋಮಲಾಪುರ ಕಾಯ್ದಿಟ್ಟ ಅರಣ್ಯ ಪ್ರದೇಶ ಬರುತ್ತೆ.
ಈ ವ್ಯಾಪ್ತಿಯಲ್ಲಿ ನಿರಂತರವಾಗಿ ನಡೆಯುತ್ತಿದ್ದ ಅಕ್ರಮ ಮರುಳು ಸಾಗಾಣಿಕೆ, ಮರಗಳ್ಳತನ, ಕಾಡು ಪ್ರಾಣಿಗಳ ಬೇಟೆಗೆ ಈಗ ಬ್ರೇಕ್ ಬಿದ್ದಿದೆ. ಕೂಡ್ಲಿಗಿ ವಲಯ ಅರಣ್ಯಾಧಿಕಾರಿಯಾಗಿರುವ ರೇಣುಕಾ ಅರಣ್ಯ ಅಕ್ರಮ ದಂಧೆಕೋರರಿಗೆ ಸಿಂಹ ಸ್ವಪ್ನ ಆಗಿದ್ದಾರೆ.
ಅರಣ್ಯ ಇಲಾಖೆಯ ಕಾನೂನುಗಳಿಗೆ ಮರುಜೀವ:
ಅಕ್ರಮ ಮರುಳು ಮಾಫಿಯಾ, ಮರಗಳ್ಳರಿಂದ ಈಗಾಗಲೇ ಅರಣ್ಯವನ್ನು ಬಹುತೇಕ ರಕ್ಷಣೆ ಮಾಡುವಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ರೇಣುಕಾ ಬೇಸಿಗೆ ಕಾಲದಲ್ಲಿ ಬೆಂಕಿಯಿಂದಲೂ ಅರಣ್ಯವನ್ನು ರಕ್ಷಣೆ ಮಾಡಲು 24 ತಾಸು ಅರಣ್ಯ ಇಲಾಖೆಯ ತಂಡವನ್ನು ರಚಿಸಿದ್ದು, 24 ತಾಸು ಗಸ್ತುವಾಹನ ತಂಡ ರೆಡಿ ಇರುತ್ತದೆ. ಕಾಡ್ಗಿಚ್ಚು ಅಲ್ಲದೇ ರಾತ್ರಿ ಅಕ್ರಮ ಮರಳು ತುಂಬಿದರೆ, ಕಾಡು ಕಡಿದರೆ ಈ ತಂಡ ಮಧ್ಯರಾತ್ರಿಯಾದರೂ ಅಲ್ಲಿಗೆ ಹಾಜರು. ಕಳ್ಳರನ್ನು ರಾತ್ರಿಯೇ ಹಿಡಿದು ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಭಯವಿದ್ರೂ ಲೆಕ್ಕಿಸದೇ ಈ ಮಹಿಳಾ ಅಧಿಕಾರಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸುತ್ತಿದೆ.
ಕೂಡ್ಲಿಗಿ ವಲಯ ಅರಣ್ಯಾಧಿಕಾರಿ ಆಗಿರುವ ರೇಣುಕಾ ಅವರ ಕಾರ್ಯಕ್ಷಮತೆಯಿಂದಾಗಿ ಸಾವಿರಾರು ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿನ ಗಿಡ-ಮರಗಳು ಪ್ರಾಕೃತಿಕ ಸಂಪತ್ತು ಉಳಿದಿದೆ. ಜೊತೆಗೆ ಕಾಡಿನಲ್ಲಿ ವಾಸಿಸುವ ಕಾಡು ಪ್ರಾಣಿಗಳಿಗೆ, ಪಕ್ಷಿಗಳು, ಸಹಸ್ರಾರು ಜೀವವೈವಿಧ್ಯಗಳಿಗೆ ನೆಲೆ ಒದಗಿದಂತಾಗಿದೆ.
Published On - 5:44 pm, Mon, 8 June 20