ಬೆಂಗಳೂರು: ಮೂರು ನಾಲ್ಕು ದಿನಗಳಿಂದ ರಾಜ್ಯದ ಹಲವೆಡೆ ಮಳೆಯಾಗುತ್ತಿದ್ದು, ಇಂದು (ಫೆಬ್ರವರಿ 22) ಇಂದು ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸದ್ಯ ಕೇರಳದಲ್ಲಿ ಮಳೆಯ ತೀವ್ರತೆ ಹೆಚ್ಚಿರುವ ಹಿನ್ನೆಲೆ ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆಯಾಗುತ್ತದೆ ಎಂದು ತಿಳಿದುಬಂದಿದೆ. ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಹೀಗಾಗಿ ರಾಜ್ಯದ ಹಲವೆಡೆ ಕಳೆದ ನಾಲ್ಕು ದಿನದಿಂದ ಮಳೆ ಆಗುತ್ತಿದೆ. ಬೆಂಗಳೂರಿನಲ್ಲೂ ಕಳೆದ ಎರಡು ದಿನದಿಂದ ಸಾಧಾರಣ ಮಳೆ ಆಗಿದೆ. ಅದರಂತೆ ಇಂದು ಗುಡುಗು ಸಮೆತ ಮಳೆಯಾಗಬಹುದೆಂದು ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.
ನಿನ್ನೆ ಬೆಳಗ್ಗೆ ಕೂಡಾ ಬೆಂಗಳೂರಿನಲ್ಲಿ ಸಾಧಾರಣ ಮಟ್ಟಿಗೆ ಮಳೆಯಾಗಿದೆ. ಇಂದು ಬೆಳಗ್ಗೆ ಹೊತ್ತಿಗೆ ಸ್ವಲ್ಪ ಚಳಿಗಾಳಿ ಮತ್ತು ಮೋಡ ಮುಸುಕಿದ ವಾತಾವರಣವೇ ಇತ್ತು. ಆದರೆ ಮಧ್ಯಾಹ್ನ ಒಂದು ಗಂಟೆಯಿಂದ ಬಿಸಿಲು ಇದೆ.
ಅಕಾಲಿಕ ಮಳೆಗೆ ಹೈರಣಾದ ರೈತರು
ರಾಜ್ಯದಲ್ಲಿ ಸುಮಾರು ನಾಲ್ಕೈದು ದಿನಗಳಿಂದ ಹಲವೆಡೆ ಸುರಿದ ಮಳೆಗೆ ಬೆಳೆ ಕೂಡಾ ನಾಶವಾಗಿರುವುದು ತಿಳಿದುಬಂದಿದ್ದು, ರೈತರು ಕಂಗಲಾಗಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಇಂದು ಸುರಿದ ಅಕಾಲಿಕ ಮಳೆ ಹಿನ್ನೆಲೆ ಅಪಾರ ಪ್ರಮಾಣದ ದ್ರಾಕ್ಷಿ, ತರಕಾರಿ ಬೆಳೆ ನಾಶವಾಗಿದ್ದು, ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ಲು ಗ್ರಾಮ ಸೇರಿದಂತೆ ಹಲವು ಗ್ರಾಮಗಳಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿರುವುದು ತಿಳಿದುಬಂದಿದೆ.
ಇನ್ನು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ ಭಾರಿ ಮಳೆಯಾಗಿದ್ದು, ಐದಾರು ಅಂಗಡಿಗಳಿಗೆ ಮಳೆ ನೀರು ನುಗ್ಗಿದೆ. ನೀರು ನುಗ್ಗಿದ ಹಿನ್ನೆಲೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಅಲ್ಲದೇ ಕೊಯ್ಲು ಮಾಡಿ ಒಣ ಹಾಕಿದ ನೂರಾರು ಕ್ವಿಂಟಾಲ್ ರಾಗಿ ಮಳೆ ನೀರಿನಲ್ಲಿ ಕೊಚ್ಚಿ ಹೋಗಿದೆ. ಶಿವಮೊಗ್ಗ ನಗರದಲ್ಲಿ ಧಾರಾಕಾರ ಮಳೆಯಿಂದ ವಾಹನ ಸವಾರರು ಪರದಾಟ ಪಟ್ಟರು. ಅವಳಿ ನಗರ ಗದಗ-ಬೆಟಗೇರಿಯಲ್ಲಿ ಧೋ ಅಂತ ಸುರಿದ ಮಳೆಯಿಂದ ವಿದ್ಯುತ್ ಕಟ್ ಆಗಿದೆ.
ಇದನ್ನೂ ಓದಿ:
ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ ಕೇಂದ್ರ ತೆರೆದಿದ್ದರೂ ಅತ್ತ ಕಡೆ ಸುಳಿಯದ ರೈತರು..!
Published On - 1:35 pm, Mon, 22 February 21