ಬೆಂಗಳೂರು: ನಗರದ ಒಂದಷ್ಟು ರಸ್ತೆಗಳಲ್ಲಿ ಹೊಂಡಗಳು ಬಿದ್ದಿದ್ದು, ರಸ್ತೆ ಅಪಘಾತಗಳಿಗೆ ಕಾರಣವಾಗುತ್ತಿವೆ. ವಿಪಕ್ಷಗಳು ಸರ್ಕಾರ ಹಾಗೂ ಬಿಬಿಎಂಪಿ (BBMP) ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಲೇ ಇವೆ. ಸಾರ್ವಜನಿಕರಂತೂ ದಿನನಿತ್ಯ ಹಿಡಿ ಶಾಪ ಹಾಕುತ್ತಿರುತ್ತಾರೆ. ಆದರೂ ರಸ್ತೆಗಳಲ್ಲಿನ ಗುಂಡಿಗಳು ಮಾತ್ರ ಮುಚ್ಚಲಾಗುತ್ತಿಲ್ಲ. ಇದರಿಂದ ಬೇಸತ್ತಿರುವ ನಗರವಾಸಿಗಳು, ಕೆಆರ್ಎಸ್ ಪಕ್ಷದ ಕಾರ್ಯಕರ್ತರು ರಸ್ತೆ ಗುಂಡಿಗಳಲ್ಲಿ ಬಿಬಿಎಂಪಿಯ ಪಿಂಡ ಪ್ರದಾನ ಮಾಡಿದ್ದಾರೆ. ಇನ್ನೊಂದೆಡೆ ಆಮ್ ಆದ್ಮಿ ಪಾರ್ಟಿ (AAP) ಸರ್ಕಾರದ ವಿರುದ್ಧ ಪ್ರತಿಭಟನೆ (Protest) ನಡೆಸಿ ಆಕ್ರೋಶ ವ್ಯಕ್ತಪಡಿಸಿದೆ.
ಯಲಹಂಕದ ಅಟ್ಟೂರು ಮುಖ್ಯರಸ್ತೆಯ ಗುಂಡಿಗಳಲ್ಲಿ ಬಿಬಿಎಂಪಿ ತಿಥಿ ಮಾಡಲಾಯಿತು. ರಸ್ತೆಯ ಗುಂಡಿಗೆ ಯುವಕರು ಬಲಿಯಾಗಿದ್ದಾರೆ. ಇದಕ್ಕೆ ಬಿಬಿಎಂಪಿ ಆಯುಕ್ತರು ನಾಚಿಕೆಗೇಡಿನ ಹೇಳಿಕೆ ನೀಡಿದ್ದಾರೆ. ಸಾರ್ವಜನಿಕರ ಪ್ರಾಣಕ್ಕೆ ಬೆಲೆ ಇಲ್ವ? ನಿಮ್ಮ ನಿರ್ಲಕ್ಷ್ಯಕ್ಕೆ ಇನ್ನೆಷ್ಟು ಬಲಿ ಬೇಕು ಎಂದು ಅಟ್ಟೂರಿನನಲ್ಲಿ ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕೆಆರ್ಎಸ್ ಪಕ್ಷದವರಿಂದ ಬಿಬಿಎಂಪಿಯ ಪಿಂಡ ಪ್ರಧಾನ ಕಾರ್ಯ ನಡೆಯಿತು.
ಅಟ್ಟೂರು ಲೇಔಟ್ ಬಳಿ ಬಿಬಿಎಂಪಿ ಕಾಟಾಚಾರಕ್ಕೆ ರಸ್ತೆ ಗುಂಡಿ ಮುಚ್ಚಿದೆ. ಅದಾಗ್ಯೂ ನೂರಾರು ಮಕ್ಕಳು ಓಡಾಡುವ ಅಟ್ಟೂರಿನ ಖಾಸಗಿ ಶಾಲೆ ಮುಂಬಾಗದಲ್ಲಿನ ರಸ್ತೆಯಲ್ಲಿ ಗುಂಡಿಗಳ ಸಾಲು ಇವೆ. ಅಪಘಾತವಾಗಿ ಸಾವನ್ನಪ್ಪಿದ ನಂತರ ಎಚ್ಚೆತ್ತ ಬಿಬಿಎಂಪಿ, ಕೇವಲ ಗುಂಡಿಗೆ ಜಲ್ಲಿ, ಮಣ್ಣು ತುಂಬಿ ಹೋಗಿದೆ. ಆದರೆ ಗುಂಡಿಗೆ ಹಾಕಿದ ಜಲ್ಲಿಯಿಂದ ಮತ್ತೆ ಜನ ಬಿದ್ದರೆ ಯಾರು ಹೊಣೆ? ಕಾರುಗಳು ಓಡಾಡುವಾಗ ಜಲ್ಲಿ ವಿದ್ಯಾರ್ಥಿಗಳಿಗೆ ತಗುಲಿದರೆ ಯಾರು ಹೊಣೆ? ಎಂದು ಪ್ರಶ್ನಿಸಲಾಗುತ್ತಿದೆ.
ಬಿಬಿಎಂಪಿಯಿಂದ ಬೇಜವಾಬ್ದಾರಿ ಕೆಲಸ ಮಾಡಲಾಗುತ್ತಿದ್ದು, ನಿನ್ನೆ ಜಲ್ಲಿ, ಮಣ್ಣು ತುಂಬಿದ ಜಾಗದಲ್ಲೇ ಮತ್ತೆ ಗುಂಡಿಗಳು ಆಗಿವೆ. ಗುಂಡಿಯಿಂದಾಗಿ ಸಾವನ್ನಪ್ಪಿದ್ದರೂ ಗುಂಡಿಯಿಂದ ಸಾವನ್ನಪ್ಪಿಲ್ಲ ಎಂದು ಹೇಳುವ ಬಿಬಿಎಂಪಿಗೆ ನಾಚಿಕೆಯಾಗಲ್ವಾ? ನಿಮ್ಮ ಕೆಲಸ ನೀವು ಮಾಡಿದಿದ್ದರೆ ಇಷ್ಟೇಲ್ಲ ಅಪಘಾತ ಆಗುತ್ತಿತ್ತಾ? ಗುಂಡಿ ಮುಚ್ಚದೆ ಸಾರ್ವಜನಿಕರ ಮೇಲೆ ಆರೋಪ ಮಾಡುತ್ತೀರಲ್ವಾ, ಮೊದಲು ಗುಂಡಿ ಮುಚ್ಚಿ ನಂತರ ಹೇಳಿಕೆ ನೀಡಿ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ವಿರುದ್ಧ ಎಎಪಿ ಪ್ರತಿಭಟನೆ
ರಸ್ತೆ ಗುಂಡಿಗಳಿಗೆ ವಾಹನ ಸವಾರರು ಬಲಿಯಾಗುತ್ತಿರುವ ಹಿನ್ನೆಲೆ ಸರ್ಕಾರದ ವಿರುದ್ಧ ಆಮ್ ಆದ್ಮಿ ಪಕ್ಷವು ಫ್ರೀಡ್ಂ ಪಾರ್ಕ್ ನಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿತು. ಮುತ್ತಿಗೆ ಹಾಕುವ ನಿಟ್ಟಿನಲ್ಲಿ ಕಾಲ್ನಡಿಗೆ ಮೂಲಕ ಬಿಬಿಎಂಪಿ ಕೇಂದ್ರ ಕಚೇರಿಗೆ ಆಗಮಿಸಿದ ಕಾರ್ಯಕರ್ತರನ್ನು ಫ್ರೀಡ್ಂ ಪಾರ್ಕ್ ಬಳಿಯೇ ಪೊಲೀಸರು ವಶಕ್ಕೆ ಪಡೆದರು.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:09 pm, Mon, 31 October 22