ಕೊವಿಡ್​ನಿಂದ ಮೃತಪಟ್ಟವರನ್ನು ಚಿತಾಗಾರಕ್ಕೆ ಸಾಗಿಸಲು ಯಾವುದೇ ಶುಲ್ಕ ಇಲ್ಲ: ಬಿಬಿಎಂಪಿ ಸ್ಪಷ್ಟನೆ

ಕೊವಿಡ್​ನಿಂದ ಮೃತಪಟ್ಟವರನ್ನು ಚಿತಾಗಾರಕ್ಕೆ ಸಾಗಿಸಲು ಯಾವುದೇ ಶುಲ್ಕ ಇಲ್ಲ: ಬಿಬಿಎಂಪಿ ಸ್ಪಷ್ಟನೆ
ಬಿಬಿಎಂಪಿ ಮುಖ್ಯ ಕಚೇರಿ

Bengaluru Covid-19: ಕೊವಿಡ್​ನಿಂದ ಮೃತಪಟ್ಟವರನ್ನು ಆಸ್ಪತ್ರೆಯಿಂದ ಚಿತಾಗಾರಕ್ಕೆ ಸಾಗಿಸಲು ಹೊರಗುತ್ತಿಗೆ ಆಧಾರದ ಮೇಲೆ 49 ಶವ ಸಾಗಾಣಿಕಾ ವಾಹನಗಳನ್ನು ನೇಮಿಸಿಕೊಳ್ಳಲಾಗಿದೆ. ಅಲ್ಲದೇ ಮನೆಯಿಂದ ಆಸ್ಪತ್ರೆಗೆ ಒಯ್ಯಲು ಪಾಲಿಕೆ ವ್ಯಾಪ್ತಿಯ 198 ವಾರ್ಡ್​ಗಳಿಂದ 260 ಆ್ಯಂಬುಲೆನ್ಸ್​ಗಳನ್ನು ನಿಯೋಜನೆ ಮಾಡಲಾಗಿದೆ.

guruganesh bhat

|

Apr 15, 2021 | 7:59 PM

ಬೆಂಗಳೂರು: ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ಮೃತಪಟ್ಟ ಕೊವಿಡ್ ಸೋಂಕಿತರಿಗೆ ಗೌರವಯುತ ಸಂಸ್ಕಾರ ದೊರೆಯುತ್ತಿಲ್ಲ, ದುಬಾರಿ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ದೂರಿನ ಬೆನ್ನಲ್ಲೇ ಬಿಬಿಎಂಪಿ ಈ ಕುರಿತು ಕ್ರಮ ಕೈಗೊಂಡಿದೆ. ಕೊವಿಡ್ ಸೋಂಕಿತರನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಉಚಿತವಾಗಿ ಕರೆದೊಯ್ಯಲಾಗುವುದು ಮತ್ತು ಮೃತಪಟ್ಟವರನ್ನು ಆಸ್ಪತ್ರೆಯಿಂದ ಚಿತಾಗಾರಕ್ಕೆ ಉಚಿತವಾಗಿ ಒಯ್ಯಲಾಗುವುದು. ಅಲ್ಲದೇ ಬಿಬಿಎಂಪಿಯ 13 ವಿದ್ಯುತ್ ಚಿತಾಗಾರಗಳ ಪೈಕಿ 7 ಚಿತಾಗಾರಗಳನ್ನು ಕೊವಿಡ್​ನಿಂದ ಮೃತಪಟ್ಟವರ ಪಾಲಿಗೇ ಮೀಸಲಿಡಲಾಗಿದೆ. ಈ ಸೇವೆಯನ್ನು ಯಾವುದೇ ಶುಲ್ಕವಿಲ್ಲದೇ ಉಚಿತವಾಗಿ ನೀಡಲಾಗುತ್ತದೆ ಎಂದು ಬಿಬಿಎಂಪಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.  

ಕೊವಿಡ್​ನಿಂದ ಮೃತಪಟ್ಟವರನ್ನು ಆಸ್ಪತ್ರೆಯಿಂದ ಚಿತಾಗಾರಕ್ಕೆ ಸಾಗಿಸಲು ಹೊರಗುತ್ತಿಗೆ ಆಧಾರದ ಮೇಲೆ 49 ಶವ ಸಾಗಾಣಿಕಾ ವಾಹನಗಳನ್ನು ನೇಮಿಸಿಕೊಳ್ಳಲಾಗಿದೆ. ಅಲ್ಲದೇ ಮನೆಯಿಂದ ಆಸ್ಪತ್ರೆಗೆ ಒಯ್ಯಲು ಪಾಲಿಕೆ ವ್ಯಾಪ್ತಿಯ 198 ವಾರ್ಡ್​ಗಳಿಂದ 260 ಆ್ಯಂಬುಲೆನ್ಸ್​ಗಳನ್ನು ನಿಯೋಜನೆ ಮಾಡಲಾಗಿದೆ. ಕೊವಿಡ್ ಸೋಂಕಿಗೆ ಸಂಬಂಧಿಸಿದ ಈ ಸೇವೆಗಳಿಗೆ ಹಣ ಪಾವತಿ ಮಾಡಬಾರದು ಎಂದು ಬೆಂಗಳೂರಿನ ಜನತೆಗೆ ಬಿಬಿಎಂಪಿ ತಿಳಿಸಿದೆ.

ಬಿಬಿಎಂಪಿ ಪ್ರಕಟಣೆ

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್​ ಗುಪ್ತಾ ಖಡಕ್ ಸೂಚನೆ ನಗರದ ಚಿತಾಗಾರಗಳಲ್ಲಿ ಅಂತ್ಯಸಂಸ್ಕಾರಕ್ಕೆ ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವ ಆರೋಪಗಳನ್ನು ಗಂಭೀರವಾಗಿ ತೆಗೆದುಕೊಂಡಿರುವ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್​ ಗುಪ್ತಾ ಹಿಂದಿನ ಆದೇಶ ಪಾಲನೆ ಮಾಡುವಂತೆ ಖಡಕ್ ಸೂಚನೆ ನೀಡಿದ್ದಾರೆ. ಚಟ್ಟಕ್ಕೆ ₹ 300, ಅಸ್ಥಿ ಕೊಡುವ ಮಡಿಕೆಗೆ ₹ 250 ನಿಗದಿಪಡಿಸಲಾಗಿದೆ. ಈ ಪೈಕಿ ₹ 350 ಹಣವನ್ನು ಬಿಬಿಎಂಪಿ ನೀಡುತ್ತದೆ. ಮೃತರ ಸಂಬಂಧಿಕರಿಂದ ₹ 250 ಪಡೆಯಬೇಕು ಎಂದು ಆಯುಕ್ತರು ಸೂಚಿಸಿದ್ದಾರೆ. ಈ ಕುರಿತು ಬಿಬಿಎಂಪಿ ಈ ಹಿಂದೆಯೇ ಆದೇಶ ಹೊರಡಿಸಿತ್ತು. ಅದನ್ನು ಪಾಲಿಸಬೇಕೆಂದು ಗೌರವ್ ಗುಪ್ತಾ ಸ್ಪಷ್ಟವಾಗಿ ಹೇಳಿದ್ದಾರೆ.

ಕೊರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಹೆಚ್ಚು ಹಣ ಪಡೆಯುತ್ತಿರುವ ಕುರಿತು ನಗರದ ನಾಗರಿಕರು ಗಂಭೀರ ಆರೋಪ ಮಾಡಿದ್ದಾರೆ. ಅಂತ್ಯಸಂಸ್ಕಾರಕ್ಕೆ 25ರಿಂದ 30 ಸಾವಿರ ರೂಪಾಯಿಯಷ್ಟು ಹಣ ಪಡೆದುಕೊಳ್ಳಲಾಗುತ್ತಿದೆ. ಆಸ್ಪತ್ರೆಯಿಂದ ಆಂಬುಲೆನ್ಸ್​ಗಳಲ್ಲಿ ಶವ ತಂದು ಚಿತಾಗಾರದಲ್ಲಿ ಅಂತ್ಯಸಂಸ್ಕಾರ ಮಾಡಲು ದುಬಾರಿ ಮೊತ್ತ ವಸೂಲಿ ಮಾಡುತ್ತಿದ್ದಾರೆ ಎಂದು ಖಾಸಗಿ ಆಂಬುಲೆನ್ಸ್​ಗಳ ವಿರುದ್ಧ ನಾಗರಿಕರು ಗಂಭೀರ ಆರೋಪ ಮಾಡಿದ್ದಾರೆ.

ಚಿತಾಗಾರದಲ್ಲಿ ಕೊವಿಡ್ ಮೃತದೇಹಗಳ ಕ್ಯೂ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಡಾ.ಕೆ.ಸುಧಾಕರ ನಿನ್ನೆ ಸುಮಾರು 15 ಕೊವಿಡ್ ಸೋಂಕಿತರು ಮೃತಪಟ್ಟಿದ್ದಾರೆ. ಅವರೆಲ್ಲರ ಶವಗಳನ್ನು ಯಲಹಂಕ ಚಿತಾಗಾರಕ್ಕೆ ಕಳುಹಿಸಿದ್ದರು. ಒಂದೇ ಚಿತಾಗಾರಕ್ಕೆ ಕಳುಹಿಸಿದ್ದರಿಂದ ಹೀಗಾಗಿದೆ. ಎಲ್ಲ ಚಿತಾಗಾರಗಳಲ್ಲೂ ಜಂಟಿ ಆಯುಕ್ತರಿಂದ ಪರಿವೀಕ್ಷಣೆ ಮಾಡಿಸಲಾಗುತ್ತಿದೆ. ಈ ಕುರಿತು ಬಿಬಿಎಂಪಿ ಆಯುಕ್ತರ ಜೊತೆ ಈ ಬಗ್ಗೆ ಮಾತನಾಡಿದ್ದೇನೆ. ಸೂಕ್ತ ನಿರ್ಣಯಗಳನ್ನ ತೆಗೆದುಕೊಳ್ಳುವಂತೆ ಸೂಚಿಸಿದ್ದೇನೆ ಎಂದು ಸಚಿವರು ತಿಳಿಸಿದ್ದಾರೆ.

ಇದನ್ನೂ ಓದಿ: ಚಿತಾಗಾರಗಳಲ್ಲಿ ವಸೂಲಿ ತಡೆಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮಧ್ಯಪ್ರವೇಶ; ಆದೇಶ ಪಾಲನೆಗೆ ಖಡಕ್ ಸೂಚನೆ

ಇದನ್ನೂ ಓದಿ: ಕೊವಿಡ್ ಲಸಿಕೆ ಪೋಲಾಗುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ತಮಿಳುನಾಡಿಗೆ ಅಗ್ರಸ್ಥಾನ; ಕೇರಳ, ಪಶ್ಚಿಮ ಬಂಗಾಳದಲ್ಲಿ ವ್ಯರ್ಥವಾಗಿಲ್ಲ ಲಸಿಕೆ

(BBMP clarifies no fees will be taken to Covid 19 patient death cremation)

Follow us on

Related Stories

Most Read Stories

Click on your DTH Provider to Add TV9 Kannada