ಬಿಬಿಎಂಪಿ ಅಧಿಕಾರಿಗಳು, ನೌಕರರ ರಜಾ ರದ್ದು ಮಾಡಿ ಆದೇಶ ಹೊರಡಿಸಿದ ಉಪ ಆಯುಕ್ತ

|

Updated on: Apr 23, 2021 | 7:43 PM

ಕೋವಿಡ್​ ಎರಡನೇ ಅಲೆಯಲ್ಲಿ ಇಡೀ ಕರ್ನಾಟಕ ತತ್ತರಿಸಿದೆ. ಅದರಲ್ಲೂ ಬೆಂಗಳೂರಿನ ಸ್ಥಿತಿ ಭೀಕರವಾಗಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು, ನೌಕರರ ರಜೆ ರದ್ದುಗೊಳಿಸಿ ಆದೇಶ ಹೊರಡಿಸಲಾಗಿದೆ.

ಬಿಬಿಎಂಪಿ ಅಧಿಕಾರಿಗಳು, ನೌಕರರ ರಜಾ ರದ್ದು ಮಾಡಿ ಆದೇಶ ಹೊರಡಿಸಿದ ಉಪ ಆಯುಕ್ತ
ಬಿಬಿಎಂಪಿ ಮುಖ್ಯ ಕಚೇರಿ
Follow us on

ಬೆಂಗಳೂರು: ಕೋವಿಡ್ ನಿಯಂತ್ರಣ ಕಾರ್ಯಗಳಿಗೆ ನಿಯೋಜನೆಗೊಂಡಿರುವ ಎಲ್ಲಾ ಬಿಬಿಎಂಪಿ ಅಧಿಕಾರಿಗಳು, ನೌಕರರ ರಜೆಗಳನ್ನು ರದ್ದುಗೊಳಿಸಲಾಗಿದೆ. ಸಾರ್ವಜನಿಕ ರಜಾ ದಿನದಂದು ಸಹ ಕೆಲಸಕ್ಕೆ ಹಾಜರಾಗಲು ಸೂಚನೆ ನೀಡಲಾಗಿದೆ. ಅಧಿಕಾರಿಗಳು ಯಾವುದೇ ಕಾರಣಕ್ಕೂ ಕೇಂದ್ರಸ್ಥಾನವನ್ನು ಬಿಡಬಾರದು ಹಾಗೂ ಮೊಬೈಲ್ ಫೋನ್ ಚಾಲ್ತಿಯಲ್ಲಿಟ್ಟುಕೊಂಡಿರಬೇಕು ಎಂದು ಸೂಚನೆಯನ್ನು ನೀಡಲಾಗಿದೆ. ಇನ್ನು ತುರ್ತು ಸಂದರ್ಭವಿದ್ದಲ್ಲಿ ಕಾರ್ಯಪ್ರವೃತ್ತರಾಗುವಂತೆ ಆದೇಶ ನೀಡಲಾಗುತ್ತದೆ ಎಂದು ರಜೆ ರದ್ದುಗೊಳಿಸಿರುವ ಬಿಬಿಎಂಪಿ ಉಪ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಕೊರೊನಾ ಎರಡನೇ ಅಲೆಯು ತೀವ್ರವಾಗಿದ್ದು, ದೇಶದಾದ್ಯಂತ 3,32,730 ಪ್ರಕರಣಗಳು ಹೊಸದಾಗಿ ವರದಿ ಆಗಿವೆ. ಇನ್ನು 24,28,616 ಸಕ್ರಿಯ ಪ್ರಕರಣಗಳಿವೆ. ಒಂದೇ ದಿನದಲ್ಲಿ 2,263 ಮಂದಿಯನ್ನು ಕೊರೊನಾ ಬಲಿ ತೆಗೆದುಕೊಂಡಿದೆ. ಬೆಂಗಳೂರಿನಲ್ಲಿ ಶುಕ್ರವಾರದ ರಾತ್ರಿಯಿಂದಲೇ ಕಠಿಣ ನಿರ್ಬಂಧ ಜಾರಿ ಆಗಲಿದ್ದು, ಸೋಮವಾರ ಬೆಳಗ್ಗೆ ತನಕ ಇರಲಿದೆ. ಆಸ್ಪತ್ರೆಗಳಲ್ಲಿ ಬೆಡ್​ಗಳು ದೊರೆಯದೆ ಹಾಗೂ ವೈದ್ಯಕೀಯ ಆಮ್ಲಜನಕದ ಕೊರತೆಯಿಂದ ಜನರು ಕಂಗಾಲಾಗಿದ್ದಾರೆ.

ಕೋವಿಡ್ ರೋಗಿಗಳಿಗಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಶೇ 50ರಷ್ಟು ಬೆಡ್ ಮೀಸಲಿಡಬೇಕು ಎಂದು ಈಗಾಗಲೇ ಆದೇಶ ಹೊರಡಿಸಲಾಗಿದೆ.  ಹೆಚ್ಚುವರಿ ದರವನ್ನು ವಸೂಲು ಮಾಡಬಾರದು ಎಂದು ಸಹ ಸರ್ಕಾರದಿಂದ ತಾಕೀತು ಮಾಡಲಾಗಿದೆ. ಮತ್ತೆ ಬೆಂಗಳೂರಿನ ವಿಚಾರಕ್ಕೆ ಬಂದರೆ, ಕರ್ನಾಟಕದಲ್ಲಿ ಕೋವಿಡ್ ಸ್ಥಿತಿ ಉಲ್ಬಣವಾಗಿರುವುದು ಹೌದಾದರೂ ಬೆಂಗಳೂರಿನಲ್ಲಿ ಅದರ ತೀವ್ರತೆ ವಿಪರೀತವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಕಠಿಣ ನಿರ್ಬಂಧಗಳನ್ನು ಹೇರಿದೆ.

ಹೋಟೆಲ್, ರೆಸ್ಟೋರೆಂಟ್ ಸೇರಿದಂತೆ ಇತರ ಮಳಿಗೆ, ವ್ಯಾಪಾರ- ವ್ಯವಹಾರಗಳನ್ನು ನಡೆಸದಂತೆ ಗಂಭೀರವಾದ ಎಚ್ಚರಿಕೆಯನ್ನು ನೀಡಿದೆ. ಅಷ್ಟೇ ಅಲ್ಲ, ಯಾವುದೋ ನೆಪ ಇಟ್ಟುಕೊಂಡು ರಸ್ತೆಗೆ ಇಳಿಯುವವರ ಮೇಲೆ ಕಠಿಣವಾದ ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಭಾರೀ ಪ್ರಮಾಣದಲ್ಲಿ ಪೊಲೀಸರನ್ನು ನೇಮಕ ಮಾಡಲಾಗಿದೆ. ಘೋಷಣೆ ಮಾಡಿದ್ದಕ್ಕಿಂತ ಮುಂಚಿತವಾಗಿಯೇ ಮಳಿಗೆಗಳನ್ನು ಮುಚ್ಚಿಸಲು ಮುಂದಾದ ಪೊಲೀಸರ ಬಗ್ಗೆ ವರ್ತಕರು ಹಾಗೂ ಸಾರ್ವಜನಿಕರಿಂದಲೂ ಆಕ್ರೋಶ ಕೇಳಿಬಂದಿತ್ತು.

ಇದನ್ನೂ ಓದಿ: Karnataka Weekend Curfew: ಕರ್ನಾಟಕದಲ್ಲಿ ಕೊರೊನಾ ನಿಯಂತ್ರಣಕ್ಕೆ ವೀಕೆಂಡ್​ ಕರ್ಫ್ಯೂ ಘೋಷಿಸಿದ ಸರ್ಕಾರ, ಶಾಲಾ-ಕಾಲೇಜುಗಳು ಕ್ಲೋಸ್​

(BBMP employees and officials leaves and holidays cancelled)

Published On - 7:16 pm, Fri, 23 April 21