ಕಾರ್ಯಾಗಾರದಲ್ಲಿ ವಿಜ್ಞಾನಿಗಳು, ಧಾರ್ಮಿಕ ಮುಖಂಡರು, ಸಾಮಾಜಿಕ ಹೋರಾಟಗಾರರು, ಪರಿಸರ ಕಾರ್ಯಕರ್ತರು (ಚಿತ್ರಕೃಪೆ: ಸ್ವರ್ಣವಲ್ಲಿ ಮಠ)
ಶಿರಸಿ: ಕರ್ನಾಟಕ ಬಜೆಟ್ 2021ರಲ್ಲಿ ಉಲ್ಲೇಖಿಸಲಾಗಿರುವ ಬೇಡ್ತಿ-ವರದಾ ನದಿಗಳ ಜೋಡಣೆ ಪ್ರಸ್ತಾಪ ಹಿಂಪಡೆಯಬೇಕು ಮತ್ತು ಸ್ಥಳ ಸಮೀಕ್ಷೆ ನಡೆಸಬಾರದು ಎಂಬ ಒಮ್ಮತದ ದೃಢ ನಿರ್ಧಾರ ಹೊರಬಿದ್ದಿದೆ. ನಿನ್ನೆ (ಮಾರ್ಚ್ 24) ಶಿರಸಿಯಲ್ಲಿ ನಡೆದ ನದಿ ತಿರುವು ಯೋಜನೆ ಕಾರ್ಯಾಗಾರದಲ್ಲಿ ವಿಜ್ಞಾನಿಗಳು, ಧಾರ್ಮಿಕ ಮುಖಂಡರು, ಸಾಮಾಜಿಕ ಹೋರಾಟಗಾರರು, ಪರಿಸರ ಕಾರ್ಯಕರ್ತರು ಮತ್ತು ನೂರಾರು ಸ್ಥಳೀಯರು ವೈಜ್ಞಾನಿಕ ಕಾರಣಗಳೊಂದಿಗೆ ನದಿ ಜೋಡಣೆ ಯೋಜನೆಯನ್ನು ವಿರೋಧಿಸುವ ನಿರ್ಧಾರ ಕೈಗೊಂಡರು. ಸೋಂದಾ ಸ್ವರ್ಣವಲ್ಲಿಯ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ವಿಜ್ಞಾನ ಲೇಖಕ ನಾಗೇಶ್ ಹೆಗಡೆ, ಪರಿಸರ ತಜ್ಞ ಟಿ.ವಿ.ರಾಮಚಂದ್ರ, ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಪರಿಸರ ತಜ್ಞ ಕೇಶವ ಕೊರ್ಸೆ, ಹಿರಿಯ ಪರಿಸರ ಕಾರ್ಯಕರ್ತ ಶಿವಾನಂದ ಕಳವೆ ನದಿ ಜೋಡಣೆ ಯೋಜನೆಯ ಬಾಧಕಗಳನ್ನು ವಿವರಿಸಿದರು.
- ರಾಜ್ಯ ನೀರಾವರಿ ಇಲಾಖೆ ಬೇಡ್ತಿ- ವರದಾ ನದಿ ಜೋಡಣೆ ಯೋಜನೆ ಕುರಿತು ಯೋಜನಾ ವರದಿ ತಯಾರಿಸಲು ಕೇಂದ್ರ ಸರ್ಕಾರದ ಎನ್.ಡಬ್ಲ್ಯು.ಡಿ.ಎ.ಗೆ ನೀಡಿರುವ ಆದೇಶವನ್ನು ರದ್ದುಪಡಿಸಬೇಕು. ಸ್ಥಳ ಸಮೀಕ್ಷೆಗೆ ಅವಕಾಶ ನೀಡಬಾರದು.
- ಬೇಡಿಕೆ ಈಡೇರಿಸಲು ನಿಯೋಗದ ಮೂಲಕ ಮುಖ್ಯಮಂತ್ರಿಗಳಿಗೆ ಹಕ್ಕೊತ್ತಾಯದ ಮನವಿ ಸಲ್ಲಿಸಬೇಕು. ವಿಧಾನಸಭಾ ಅಧ್ಯಕ್ಷರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ನೇತೃತ್ವದಲ್ಲಿ ಈ ನಿಯೋಗ ಒಯ್ಯಲು ದಿನಾಂಕ ನಿಶ್ಚಯಿಸಬೇಕು.
ಪಶ್ಚಿಮ ಘಟ್ಟದಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳ ದಿಕ್ಕು ತಿರುಗಿಸುವ ಕುರಿತು ಅಧ್ಯಯನ ಮಾಡಲು ರಾಜ್ಯ ನೀರಾವರಿ ಇಲಾಖೆ ಎನ್.ಡಬ್ಲ್ಯು.ಡಿ.ಎ.ಗೆ ನೀಡಿರುವ ಆದೇಶ ಹಿಂಪಡೆಯುವ ಜತೆ ರದ್ದು ಮಾಡಬೇಕು.
- ಜಿಲ್ಲೆಯ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿಗಳು, ಗ್ರಾಮ ಪಂಚಾಯಿತಿಗಳು ಈ ಯೋಜನೆ ಪ್ರಸ್ತಾವನೆಯನ್ನು ಸರ್ಕಾರ ಕೈ ಬಿಡುವಂತೆ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಸಲ್ಲಿಸಬೇಕು. ಇದೇ ರೀತಿ ಸಹಕಾರಿ ಸಂಸ್ಥೆಗಳು, ಗ್ರಾಮೀಣ ಅಭಿವೃದ್ಧಿ, ಕೃಷಿ ಕಿಸಾನ್, ರೈತ, ವನವಾಸಿ ಸಂಘಟನೆಗಳು ಸರ್ಕಾರಕ್ಕೆ ಮನವಿ ನೀಡಬೇಕು. ಜತೆ, ತಮ್ಮ ವ್ಯಾಪ್ತಿಯಲ್ಲಿ ನದಿ ಜೋಡಣೆ ಯೋಜನೆ ದುಷ್ಪರಿಣಾಮಗಳ ಕುರಿತು ಜಾಗೃತಿ ಸಭೆ ನಡೆಸಬೇಕು.
- ಕಾಳಿ, ಬೇಡ್ತಿ, ಅಘನಾಶಿನಿ, ಶರಾವತಿ ನದಿಗಳು ಸೇರಿದಂತೆ ಪಶ್ಚಿಮಘಟ್ಟದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ನದಿ ತಿರುವು ಅಥವಾ ಜೋಡಣೆ ಯೋಜನೆ ಕೈಬಿಡಬೇಕು.
- ಹೋರಾಟದಲ್ಲಿ ಜನ ಸಹಭಾಗಿತ್ವ ಅತ್ಯಗತ್ಯ. ಯಾವುದೇ ಯೋಜನೆಗಳಾದರೂ ಜನ ವಿರೋಧದ ನಡುವೆ ಆಗಲು ಸಾಧ್ಯವಿಲ್ಲ ಎಂದರು. ಪಶ್ಚಿಮಘಟ್ಟ, ಮಲೆನಾಡು ಜಿಲ್ಲೆಗಳಲ್ಲಿ ಪರಿಸರ ಸಂರಕ್ಷಣೆ, ಕಾರ್ಯಚಟುವಟಿಕೆ ಹೆಚ್ಚಿಸುವ ದೃಷ್ಟಿಯಿಂದ ಪಶ್ಚಿಮಘಟ್ಟ ಪರಿಸರ ಸಂಘ ಸಂಸ್ಥೆಗಳ ಒಕ್ಕೂಟ ರಚಿಸಲಾಗುವುದು.
-
ಪಶ್ಚಿಮ ಘಟ್ಟಗಳ ನದಿಗಳನ್ನು ಬಯಲುಸೀಮೆಗೆ ಜೋಡಿಸುವುದರಿಂದ ಎರಡೂ ಭಾಗಗಳ ಜನರು ನೀರಿಗಾಗಿ ಬವಣೆ ಅನುಭವಿಸಬೇಕಾಗುತ್ತದೆ. ಬಯಲುಸೀಮೆಯ ಜನರಿಗೆ ಕುಡಿಯುವ ನೀರಿನ ಬವಣೆ ಇಲ್ಲ ಎಂದು ಹೋರಾಟ ಸಮಿತಿ ಹೇಳುತ್ತಿಲ್ಲ. ಆದರೆ ಅಲ್ಲಿಯ ಕುಡಿಯುವ ನೀಡಿನ ಬವಣೆಗೆ ಮಲೆನಾಡಿನ ನದಿಗಳನ್ನು ಅಲ್ಲಿಗೆ ಹರಿಸುವುದು ಪರಿಹಾರ ಅಲ್ಲ ಎಂದಷ್ಟೇ ಹೇಳುತ್ತಿದೆ. ಹೀಗಾಗಿ, ಉದ್ದೇಶಿತ ಯೋಜನೆಯ ಬದಲು ಬಯಲು ಸೀಮೆಯಲ್ಲಿ ಹಸಿರು ಬೆಳೆಸುವ, ನೀರು ಇಂಗಿಸುವ ಕೆಲಸ ಆಗಬೇಕು ಎಂದು ಹೋರಾಟ ಸಮಿತಿ ಒಮ್ಮತದ ನಿರ್ಧಾರ ಕೈಗೊಂಡಿತು.
ಇದನ್ನೂ ಓದಿ: ಬೇಡ್ತಿ-ವರದಾ ನದಿ ಜೋಡಣೆ: ಕುಡಿಯುವ ನೀರಿನ ಯೋಜನೆಯೋ? ಪರಿಸರ ನಿರ್ನಾಮದ ತಂತ್ರವೋ?
ನೀರೇ ಇರದ ಬೇಡ್ತಿಯಿಂದ ಯಲ್ಲಾಪುರಕ್ಕೆ ಕುಡಿಯುವ ನೀರಿನ ಯೋಜನೆ; ಬೇಡ್ತಿ-ವರದಾ ಜೋಡಣೆ ಎಷ್ಟು ಸರಿ?