ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ನೆಲ್ಯಾಡಿ ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭೀಕರ ಅಪಘಾತ ಭೀಕರ ಅಪಘಾತ ಸಂಭವಿಸಿದೆ. ಬುಧವಾರ ರಾತ್ರಿ ನಡೆದ ಈ ದುರ್ಘಟನೆಯಲ್ಲಿ ಲಾರಿ ಮತ್ತು ಬಸ್ಗೆ ಬೆಂಕಿ ಹೊತ್ತಿಕೊಂಡಿದೆ. ಕೆಲವೇ ನಿಮಿಷಗಳಲ್ಲಿ ಎರಡೂ ವಾಹನಗಳು ಸುಟ್ಟು ಭಸ್ಮವಾಗಿವೆ. ಲಾರಿ ಚಾಲಕ ಸಜೀವ ದಹನವಾಗಿದ್ದು, ಬಸ್ನಲ್ಲಿದ್ದ ಪ್ರಯಾಣಿಸಕರು ಸೇಫ್ ಆಗಿದ್ದಾರೆ. ಇದೇ ಬಸ್ನಲ್ಲಿ ತುಳು ನಟಿ ನೀಮಾ ರೇ ಕೂಡ ಪ್ರಯಾಣ ಮಾಡುತ್ತಿದ್ದರು!
ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಗೂಡ್ಸ್ ಲಾರಿ ನಡುವೆ ಡಿಕ್ಕಿ ಸಂಭವಿಸಿತು. ಪರಿಣಾಮ ಎರಡೂ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿತು. ಬಸ್ನಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಅವರ ಪೈಕಿ ತುಳು ಚಿತ್ರರಂಗದ ಖ್ಯಾತ ನಟಿ ನೀಮಾ ರೇ ಕೂಡ ಇದ್ದರು. ಅದೃಷ್ಟವಶಾತ್ ಅವರೆಲ್ಲರೂ ಪಾರಾಗಿದ್ದಾರೆ.
ಡಿಕ್ಕಿ ಹೊಡೆದ ತಕ್ಷಣ ಬಸ್ನಲ್ಲಿ ಹೊಗೆ ಆವರಿಸಲು ಆರಂಭ ಆಯಿತು. ಅದರಿಂದ ಎಲ್ಲರೂ ಗಾಬರಿಗೊಂಡಿದ್ದಾರೆ. ಹೇಗೋ ಸಾಹಸಪಟ್ಟು ಬಾಗಿಲು ತೆರೆಯಲು ಪ್ರಯತ್ನಿಸಿದ್ದಾರೆ. ಬೆಂಕಿ ಆವರಿಸಿಕೊಳ್ಳುವ ಮುನ್ನವೇ ಎಲ್ಲರೂ ಬಸ್ನಿಂದ ಹೊರಬಂದಿದ್ದಾರೆ. ಸ್ವಲ್ಪವೇ ತಡವಾಗಿದ್ದರೂ ಎಲ್ಲರೂ ಸಜೀವದಹನ ಆಗಬೇಕಾಗಿತ್ತು! ಘಟನೆಗೆ ಸಂಬಂಧಿಸಿದಂತೆ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
‘ಬಾಗಿಲು ತೆಗೆಯುವುದು ತುಂಬ ಕಷ್ಟ ಆಗಿತ್ತು. ಎಲ್ಲವೂ ಜಾಮ್ ಆಗಿತ್ತು. ತುಂಬ ಕಷ್ಟಪಟ್ಟು ಹೊರಬಂದೆವು. ನಾನು ಈಗ ಚೆನ್ನಾಗಿದ್ದೇನೆ. ಎಲ್ಲ ಪ್ರಯಾಣಿಕರು ಸೇಫ್ ಆಗಿದ್ದೇವೆ. ಕೆಲವರಿಗೆ ಗಾಯಗಳಾಗಿವೆ’ ಎಂದು ಮಾಧ್ಯಮಗಳಿಗೆ ನೀಮಾ ರೇ ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚೆಗೆ ಘೋಷಣೆಯಾದ 67ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಯಲ್ಲಿ ‘ಅತ್ಯುತ್ತಮ ತುಳು ಸಿನಿಮಾ’ ಎಂಬ ಗೌರವಕ್ಕೆ ಪಾತ್ರವಾದ ‘ಪಿಂಗಾರ’ ಸಿನಿಮಾದಲ್ಲಿ ನೀಮಾ ರೈ ನಟಿಸಿದ್ದಾರೆ.
ಇದನ್ನೂ ಓದಿ: ಕಳೆದೊಂದು ವರ್ಷದಲ್ಲಿ ಕೊರೊನಾಕ್ಕಿಂತ ರಸ್ತೆ ಅಪಘಾತಕ್ಕೆ ಬಲಿಯಾದವರೇ ಹೆಚ್ಚು: ನಿತಿನ್ ಗಡ್ಕರಿ