ಬೆಳಗಾವಿ, ಡಿ.3: ಅಧಿವೇಶನದಲ್ಲಿ (Belagavi Session) ಪ್ರತಿ ನಿತ್ಯ ಕೋರಂಗೆ ಬೇಗ ಬರುವ ಸದಸ್ಯರಿಗೆ ರಾಜ್ಯ ಮತ್ತು ರಾಷ್ಟ್ರೀಯ ಚಿಹ್ನೆ ಇರುವ ಟೀ ಕಪ್ ನೀಡಲಾಗುತ್ತದೆ ಎಂದು ವಿಧಾನಸಭೆ ಸ್ಪೀಕರ್ ಯುಟಿ ಖಾದರ್ (UT Khader) ಹೇಳಿದರು. ಅಲ್ಲದೆ, ತಡವಾಗಿ ಅಥವಾ ಗೈರಾದ ಸದಸ್ಯರಿಗೆ ಬೇಗ ಬರುವಂತೆ ಪ್ರಶಸ್ತಿ ನೀಡಲಾಗುತ್ತದೆ ಎಂದರು.
ನಾಳೆಯಿಂದ ಅಧಿವೇಶನ ಆರಂಭಗೊಳ್ಳಲಿರುವ ಹಿನ್ನೆಲೆ ಸುವರ್ಣ ವಿಧಾನಸೌಧದಲ್ಲಿ ವಿಧಾನಸಭೆ ಸಭಾಧ್ಯಕ್ಷ ಯು.ಟಿ ಖಾದರ್ ಹಾಗೂ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಜಂಟಿ ಸುದ್ದಿಗೋಷ್ಠಿ ನಡೆಸಿದರು.
ಯುಟಿ ಖಾದರ್ ಮಾತನಾಡಿ, ಕೋರಂಗೆ ಬೇಗ ಬಂದವರಿಗೆ ಗುರುತಿಸಲು ಪ್ರಶಸ್ತಿ ನೀಡುತ್ತೇವೆ. ಈ ಸಲ ಸ್ಟೇಟ್ ಹಾಗೂ ನ್ಯಾಷನಲ್ ಸಿಂಬಲ್ ಇರುವ ಟೀ ಕಪ್ ನೀಡಲಾಗುತ್ತದೆ. ಒಮ್ಮೆ ಕೋರಂಗೆ ಬೇಗ ಬಂದವರಿಗೆ ಒಂದು ಕಪ್, ಎರಡು ಸಲ ಬೇಗ ಬಂದರೆ ಎರಡು ಕಪ್, ಹತ್ತ ಸಲ ಬೇಗ ಬಂದರೆ ಹತ್ತು ಟೀ ಕಪ್ ವಿತರಿಸಲಾಗುತ್ತದೆ. ಅತಿ ಹೆಚ್ಚು ಗೈರು ಆದವರಿಗೆ ಬೇಗ ಬರುವಂತೆ ಪ್ರಶಸ್ತಿ ನೀಡುತ್ತೇವೆ ಎಂದು ನಗುತ್ತಲೇ ಹೇಳಿದರು.
ನಾಳೆಯಿಂದ 16ನೇ ವಿಧಾನಮಂಡಲ ಅಧಿವೇಶನ ಆರಂಭವಾಗುತ್ತಿದೆ. ಶನಿವಾರ, ಭಾನುವಾರ ರಜೆ ಇರುತ್ತದೆ. ವಿಧಾನಮಂಡಲದ ಅಧಿವೇಶಕ್ಕೆ ಬರುವ ಶಾಸಕರು, ಪತ್ರಕರ್ತರು ಹಾಗೂ ಅಧಿಕಾರಿಗಳಿಗೆ ಉತ್ತಮ ವ್ಯವಸ್ಥೆ ಕಲ್ಪಿಸಲಾಗಿದೆ. ಅಧಿಕಾರಿ ವರ್ಗದವರಿಗೂ ವ್ಯವಸ್ಥೆ ಮಾಡಲಾಗಿದೆ. ಉತ್ತಮವಾದ ಊಟದ ವ್ಯವಸ್ಥೆ ಮತ್ತು ಅಗತ್ಯ ಇರುವ ಉತ್ತಮ ವಾತಾವರಣ ನೀಡಲು ತೀರ್ಮಾನಿಸಿದ್ದೇವೆ ಎಂದರು.
ಇದನ್ನೂ ಓದಿ: ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ: MES ಮಹಾಮೇಳಕ್ಕೆ ಪೊಲೀಸ್ ಆಯುಕ್ತರಿಂದ ಅನುಮತಿ ನಿರಾಕರಣೆ
ವಿಧಾನಮಂಡಲ ನಡೆಯುವ ವೇಳೆ ಅಧಿಕಾರಿಗಳು ಎಲ್ಲ ತಯಾರಿ ಮಾಡಿಕೊಂಡಿದ್ದಾರೆ. ಮತ್ತಷ್ಟು ಚೆನ್ನಾಗಿ ಅಧಿವೇಶನ ನಡೆಸುವ ಹಿನ್ನೆಲೆಯಲ್ಲಿ ಆಹಾರ ಮತ್ತು ವಸತಿ ವಿಚಾರವಾಗಿ ಹೆಚ್ಚಿನ ಗುಣಮಟ್ಟದ ವ್ಯವಸ್ಥೆ ಕಲ್ಪಿಸಲಾಗಿದೆ. ಹಟ್ಟಿ ಕಾಫಿ ಎಂಬ ಕೆಫೆ ತೆರೆದಿದ್ದೇವೆ ಎಂದರು.
ವಿಧಾನಸಭೆ ಸೌದರ್ಯ ಹೆಚ್ಚಿಸಲು ಶಾಶ್ವತವಾಗಿ ಎಲ್ಇಡಿ ವ್ಯವಸ್ಥೆ ಮಾಡಲಾಗುತ್ತಿದೆ. ಈ ಹಿಂದೆ ಅಧಿವೇಶನದಲ್ಲಿ ಮಾತ್ರ 15 ದಿನ ಅಳವಡಿಕೆ ಮಾಡಲಾಗಿತ್ತು. ಇನ್ನು ಮುಂದೆ ಪ್ರತಿ ಶನಿವಾರ, ಭಾನುವಾರ ವಿದ್ಯುತ್ ದೀಪಗಳಿಂದ ಅಲಂಕರಿಸಾಗುತ್ತದೆ. ರಾಷ್ಟ್ರೀಯ ಹಬ್ಬಗಳ ದಿನದಂದು ಸುವರ್ಣಸೌಧದ ವಿದ್ಯುತ್ ದೀಪಗಳಿಂದ ಕಂಗೊಳಿಸಲಿದೆ ಎಂದರು.
ಅಧಿವೇಶನ ವೀಕ್ಷಣೆ ಮಾಡಲು ಬರುವ ಶಾಲಾ ಮಕ್ಕಳಿಗೆ ಆಡಿಟೋರಿಯಂ ಹಾಲ್ನಲ್ಲಿ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳು ಕಾಯುವ ಅವಶ್ಯಕತೆ ಇಲ್ಲ. ಸಂವಿಧಾನ ಪೀಠಿಕೆ ವಿಚಾರವಾಗಿ ಸಂಪನ್ಮೂಲ ವ್ಯಕ್ತಿಗಳಿಂದ ಮಕ್ಕಳಿಗೆ ತಿಳಿಸಿಕೊಡಲಾಗುತ್ತದೆ. ಹಿಂದೆ 10 ನಿಮಿಷ ಮಾತ್ರ ಕೂರಲು ಅವಕಾಶ ಇರುತ್ತಿತ್ತು. ಈ ಬಾರಿ ಮಕ್ಕಳಿಗೆ 30 ನಿಮಿಷಕಾಲ ಅವಕಾಶ ಹೆಚ್ಚಿಸಲಾಗಿದೆ. ಮಕ್ಕಳಿಗೆ ಚಾಕಲೇಟ್ ಹಾಗೂ ತಂಪುಪಾನಿಯ ವಿತರಿಸಲು ಮುಂದಾಗಿದ್ದೇವೆ ಎಂದರು.
ಸುವರ್ಣ ಸಂಭ್ರಮದ ಕಾಲಘಟ್ಟದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಅಧಿವೇಶನ ಪ್ರಾರಂಭವಾಗುವವರೆಗೆ ಈ ಕಾರ್ಯಕ್ರಮ ನಡೆಯಲಿದೆ. 12 ರಂದು ಸುವರ್ಣ ಸಂಭ್ರಮದ ಕಾರ್ಯಕ್ರಮ ಏರ್ಪಡಿಸಲಾಗಿದೆ. ಆಳ್ವಾಸ್ ವಿದ್ಯಾಸಂಸ್ಥೆಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ ಎಂದರು.
ತೆಲಂಗಾಣ ಚುನಾವಣೆ ಪ್ರಚಾರದ ವೇಳೆ ಸಚಿವ ಜಮೀರ್ ಅಹ್ಮದ್ ಖಾನ್ ವಿವಾದಾತ್ಮಕ ಹೇಳಿಕೆಯನ್ನು ಖಂಡಿಸಿ ಸದನದಲ್ಲಿ ವಿಪಕ್ಷ ಬಿಜೆಪಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಈ ವಿಚಾರವಾಗಿ ಮಾತನಾಡಿದ ಯುಟಿ ಖಾದರ್, ನಮಗೆ ಇರುವುದು 10 ದಿವಸ. ಈ ಹತ್ತು ದಿನದಲ್ಲಿ ರಾಜ್ಯ ಉತ್ತರ ಕರ್ನಾಟಕ ಬಗ್ಗೆ ಚರ್ಚೆ ಆಗಬೇಕು. ಜನರಿಗೆ ಅಗತ್ಯವಿರುವ ವಿಚಾರಗಳ ಬಗ್ಗೆ ಚರ್ಚೆ ಆಗಬೇಕು ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ