
ಬೆಳಗಾವಿ/ಹುಬ್ಬಳ್ಳಿ, (ಅಕ್ಟೋಬರ್ 02): ನಾಡಿನಲ್ಲಿ ಈಗ ದಸರಾ ಹಬ್ಬದ ಸಂಭ್ರಮಕ್ಕೆ ದಿನಗಣನೇ ಶುರುವಾಗಿದೆ. ದಸರಾ ಹಬ್ಬದ ರಜೆಯಲ್ಲಿ ಗಾಳಿಪಟ ಹಾರಿಸುವುದು ಉತ್ತರ ಕರ್ನಾಟಕದ ಸಂಪ್ರದಾಯ. ಆದ್ರೆ, ಗಾಳಿಪಟಕ್ಕೆ ಮಾಂಜಾದಾರವನ್ನು ನಿಷೇಧಿಸಲಾಗಿದೆ. ಆದರೂ ಕೆಲವು ಕಡೆ ಮಂಜಾದಾರವನ್ನು ಬಳಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಇದಕ್ಕೆ ಪೂರಕವೆಂಬಂತೆ ಬೆಳಗಾವಿಯಲ್ಲಿ ನಿಷೇಧಿತ ಮಾಂಜಾದಾರಕ್ಕೆ ಇಬ್ಬರು ಯುವಕ ಬಲಿಯಾಗಿದ್ದಾನೆ. ಇನ್ನೊಂದೆಡೆ ಹುಬ್ಬಳ್ಳಿಯಲ್ಲಿ ಸ್ಕೂಟಿ ಮೇಲೆ ಹೋಗುತ್ತಿದ್ದ ಮಹಿಳೆ ಕುತ್ತಿಗೆಗೆ ಮಾಂಜಾದಾರ ಸಿಲುಕಿದ್ದು, ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಳಿಪಟ ಹಾರಿಸುವ ಸಂಭ್ರಮವು ಬೆಳಗಾವಿ ನಗರದಲ್ಲಿ ಸಾರ್ವಜನಿಕರ ಜೀವಕ್ಕೆ ಭಾರಿ ಕಂಟಕವಾಗಿ ಪರಿಣಮಿಸಿದೆ. ನಗರದಲ್ಲಿ ಅಪಾಯಕಾರಿ ಮಾಂಜಾ ದಾರ ಮತ್ತು ಗಾಳಿಪಟದ ಹುಚ್ಚಾಟಕ್ಕೆ ಇಬ್ಬರು ಪ್ರಾಣ ಕಳೆದುಕೊಂಡಿಕೊಂಡಿದ್ದಾರೆ. ವಡಗಾವಿಯ ನಿಜಾಮಿಯಾನಗರದಲ್ಲಿ ಗಾಳಿಪಟ ಹಿಡಿಯಲು ಯತ್ನಿಸುವಾಗ ಎರಡನೇ ಮಹಡಿಯ ಟೆರೇಸ್‌ನಿಂದ ಬಿದ್ದು 9 ವರ್ಷದ ಬಾಲಕ ಮೃತಪಟ್ಟ ಘಟನೆ ಮಾಸುವ ಮುನ್ನವೇ, ಮತ್ತೊಂದು ಘಟನೆ ನಡೆದಿದ್ದು, ಬೈಕ್ ಮೇಲೆ ಹೋಗುತ್ತಿದ್ದ ಮಹಾಂತೇಶ ನಗರದ ನಿವಾಸಿ ದ್ರುವ ಕರ್ಜಗಿ (19) ಮಾಂಜಾದಾರಕ್ಕೆ ಸಿಲುಕಿ ದುರಂತ ಅಂತ್ಯಕಂಡಿದ್ದಾನೆ.
ಮಾಂಜಾ ದಾರದ ದುರಂತಕ್ಕೆ ಬಲಿಯಾದ ಯುವಕನನ್ನು ಮಹಾಂತೇಶನಗರದ ನಿವಾಸಿ ಧ್ರುವ ಸಂತೋಷ ಕರಜಗಿ (19) ಎಂದು ಗುರುತಿಸಲಾಗಿದೆ. ಧ್ರುವ ನಿನ್ನೆ (ಅ.01) ಬೈಕ್ನಲ್ಲಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದಾಗ ಏಕಾಏಕಿ ಗಾಳಿಪಟದ ಹರಿತವಾದ ಮಾಂಜಾ ದಾರ ಆತನ ಕುತ್ತಿಗೆಗೆ ಸಿಲುಕಿಕೊಂಡಿದ್ದು, ಮಾಂಜಾ ದಾರವು ಕುತ್ತಿಗೆಗೆ ಆಳವಾಗಿ ಕೊಯ್ದ ಪರಿಣಾಮ ತೀವ್ರ ರಕ್ತಸ್ರಾವವಾಗಿದೆ. ಪರಿಣಾಮ ಬೈಕ್ ಮೇಲೆಯೇ ಉಸಿರು ಚೆಲ್ಲಿದ್ದಾನೆ.
ಇನ್ನೂ ಉಪಜೀವನಕ್ಕೆ ಇತನ ತಂದೆ-ತಾಯಿ ಬೆಂಗಳೂರಲ್ಲಿ ನೆಲೆಸಿದ್ದಾರೆ. ಇತ್ತ ಅಜ್ಜಿಯ ಆಶ್ರಯದಲ್ಲಿ ಬೆಳೆದ ದ್ರುವ ಅಜ್ಜಿ ಜೊತೆಗೆ ಬೆಳಗಾವಿಯಲ್ಲಿ ಇದ್ದ. ಐಟಿಐ ವ್ಯಾಸಂಗ ಮಾಡ್ತಿದ್ದ ದ್ರುವ ರಾತ್ರಿ ಹೊತ್ತಲ್ಲಿ ಮಕ್ಕಳಿಲ್ಲದ ಹಿರಿಯ ಜೀವಗಳ ಕೇರ್ ಟೇಕರ್ ಆಗಿ ಕೆಲಸ ಮಾಡುತ್ತಿದ್ದ. ಹೀಗೆ ತನ್ನ ಅಜ್ಜಿಯ ಜೊತೆಗೆ ಹಲವು ಜೀವಗಳಿಗೂ ಈ 19 ವರ್ಷದ ದ್ರುವ ಆಶ್ರವಾಗಿದ್ದ. ಕೇರ್ ಟೇಕರ್ ಕೆಲಸದಿಂದ ಬರುತ್ತಿದ್ದ ಅಲ್ಪಸ್ವಲ್ಪ ಹಣದಲ್ಲೇ ದ್ರುವ ತನ್ನ ಅಜ್ಜಿಯನ್ನು ಸಲುಹುವ ಜೊತೆಗೆ ತನ್ನ ವಿದ್ಯಾಭ್ಯಾಸಕ್ಕೂ ಬಳಸುತ್ತಿದ್ದ.
ಮಾಂಜಾದಾರಕ್ಕೆ ಬೆಳಗಾವಿಯಲ್ಲಿ ಸಾಕಷ್ಟು ಯುವಕರು ಸಾವನಪ್ಪಿದ್ದಾರೆ. ಈ ಕಾರಣಕ್ಕೆ ಬೆಳಗಾವಿಯ ಹಿಂದಿನ ಡಿಸಿ ಎಂ.ಜಿ ಹಿರೇಮಠ ಬೆಳಗಾವಿ ಜಿಲ್ಲೆಯಾದ್ಯಂತ ಮಾಂಜಾದಾರ ಬಳಕೆ ಹಾಗೂ ಮಾರಾಟಕ್ಕೆ ನಿಷೇಧ ಹೇರಿ ಆದೇಶ ಹೊರಡಿಸಿದ್ದರು. ನಿಷೇಧ ಆದೇಶ ಇದ್ದರೂ ರಾಜಸ್ಥಾನ ಮೂಲದ ವ್ಯಾಪಾರಿಗಳು ಅಕ್ರಮವಾಗಿ ಬೆಳಗಾವಿಯ ಪಾಂಗುಳ್ ಗಲ್ಲಿ ಸೇರಿದಂತೆ ಹಲವಡೆ ಮಾಂಜಾದಾರ ಮಾರಾಟ ಮಾಡ್ತಿದ್ದಾರೆ.
ಇನ್ನೊಂದೆಡೆ ಹುಬ್ಬಳ್ಳಿಯಲ್ಲಿ ಓರ್ವ ಮಹಿಳೆ ಸಹ ಈ ನಿಷೇಧಿತ ಮಾಂಜಾದಾರಕ್ಕೆ ಸಿಲುಕಿ ಬೈಕ್ ಮೇಲಿಂದ ಬಿದ್ದಿರುವ ಘಟನೆ ನಡೆದಿದೆ. ಹುಬ್ಬಳ್ಳಿಯ ಬಂಕಾಪುರ ಚೌಕದಲ್ಲಿ ನಿನ್ನೆ (ಅ.01) ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದ ಮಹಿಳೆಯ ಕುತ್ತಿಗೆಗೆ ಏಕಾಏಕಿ ಮಂಜಾದಾರ ಸಿಲುಕಿದೆ. ಪರಿಣಾಮ ಮಹಿಳೆ ಸ್ಕೂಟಿ ಮೇಲಿಂದ ಕೆಳಕಕ್ಕೆ ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಈ ಮಾಂಜಾ ದಾರ ಮಾರಾಟಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿದ್ದಾರೆ.