ಬೆಳಗಾವಿ, ಡಿ.16: ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಘಾತಕ್ಕೆ ಒಳಗಾಗಿರುವ ಸಂತ್ರಸ್ತೆಗೆ ಚಿಕಿತ್ಸೆ ಒದಗಿಸುತ್ತಿರುವ ಹಿನ್ನೆಲೆ ಆಕೆಯ ಭೇಟಿಗೆ ಹೈಕೋರ್ಟ್(High Court) ನಿರ್ಬಂಧ ವಿಧಿಸಿದೆ. ಮುಖ್ಯ ನ್ಯಾಯಮೂರ್ತಿ ಕಚೇರಿಯಲ್ಲೇ ಇಂದು ಪಿಐಎಲ್ ವಿಚಾರಣೆ ನಡೆಸಲಾಗಿದ್ದು, ಕೋರ್ಟ್ ಸಾಮಾನ್ಯವಾಗಿ ವ್ಯಕ್ತಿಗಳ ಸ್ವಾತಂತ್ರ್ಯ ನಿರ್ಬಂಧಿಸುವುದಿಲ್ಲ. ನೊಂದಿರುವ ಸಂತ್ರಸ್ತ ಮಹಿಳೆಗೆ ವೈದ್ಯರು ಚಿಕಿತ್ಸೆ ಒದಗಿಸುತ್ತಿದ್ದಾರೆ. ಹೀಗಾಗಿ ಸಂತ್ರಸ್ತೆಯ ಭೇಟಿಗೆ ಷರತ್ತುಬದ್ಧ ನಿರ್ಬಂಧ ವಿಧಿಸಲಾಗಿದೆ.
ವೈದ್ಯಾಧಿಕಾರಿ ಲಿಖಿತ ಅನುಮತಿಯಿಲ್ಲದೇ ಭೇಟಿ ನೀಡುವಂತಿಲ್ಲ ಹಾಗೂ ವ್ಯಕ್ತಿ, ಸಂಘಟನೆ ಅಥವಾ ರಾಜಕೀಯ ಪಕ್ಷಗಳ ಭೇಟಿಗೂ ಕೂಡ ನಿರ್ಬಂಧ ಹೇರಲಾಗಿದೆ. ಆಯೋಗಗಳು, ತನಿಖಾ ಸಂಸ್ಥೆಗಳು ಮಾತ್ರ ಸಂತ್ರಸ್ತೆ ಭೇಟಿ ಮಾಡಬಹುದು. ಇದು ಸಂತ್ರಸ್ತೆಯ ಹಿತದೃಷ್ಟಿಯಿಂದ ಈ ಕ್ರಮ ಎಂದು ಮುಖ್ಯ ನ್ಯಾಯಾಧೀಶರಾದ ಪ್ರಸನ್ನ ಬಿ ವರಾಳೆ ಹಾಗೂ ನ್ಯಾಯಮೂರ್ತಿ.ಕೃಷ್ಣ ದೀಕ್ಷಿತ್‌ರಿದ್ದ ಪೀಠ ಆದೇಶಿಸಿದೆ. ಈ ವೇಳೆ ಆದೇಶ ಪಾಲಿಸುವುದಾಗಿ ಸರ್ಕಾರದ ಎಎಜಿ ಪ್ರತಿಮಾ ಹೊನ್ನಾಪುರ ಭರವಸೆ ನೀಡಿದ್ದಾರೆ.
ಇದನ್ನೂ ಓದಿ:ಬೆಳಗಾವಿಯಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ; ಸಿಪಿಐ ಅಮಾನತು
ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಸ್ಥಳಕ್ಕೆ ಹೋಗಲು ತಡ ಮಾಡಿದ ಹಿನ್ನಲೆ ನಿನ್ನೆ(ಡಿ.15) ಕಾಕತಿ ಠಾಣೆಯ ಸಿಪಿಐ ವಿಜಯ್ ಸಿನ್ನೂರ್ ಅವರನ್ನು ಅಮಾನತುಗೊಳಿಸಿ ಬೆಳಗಾವಿ ಪೊಲೀಸ್ ಆಯುಕ್ತ ಸಿದ್ರಾಮಪ್ಪ ಆದೇಶಿಸಿದ್ದರು. ಘಟನೆ ನಡೆದ ದಿನ ರಾತ್ರಿ ಮೂರು ಗಂಟೆಗೆ ಠಾಣೆಯ ಕಾನ್ಸ್‌ಟೇಬಲ್ ದೂರವಾಣಿ ಕರೆ ಮುಖಾಂತರ ಸಿಪಿಐಗೆ ಮಾಹಿತಿ ನೀಡಿದ್ದರು. ಆದರೆ, ಬೆಳಗ್ಗೆ 7 ಗಂಟೆಗೆ ಸಿಪಿಐ ವಿಜಯ್ ಸಿನ್ನೂರ್ ಘಟನಾ ಸ್ಥಳಕ್ಕೆ ತೆರಳಿದ್ದರು. ಈ ಕುರಿತು ಎಸಿಪಿ ಅವರು ಬೆಳಗಾವಿ ಪೊಲೀಸ್ ಆಯುಕ್ತರಿಗೆ ವರದಿ ನೀಡಿದ ಹಿನ್ನಲೆ ಅಮಾನತುಗೊಳಿಸಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:16 pm, Sat, 16 December 23