ಬೆಳಗಾವಿ, ಡಿ.08: ಜಾತಿ ಜನಗಣತಿ(Caste Census) ಅಂಕಿ-ಅಂಶ ಬಿಡುಗಡೆ ಮಾಡದ ಸರ್ಕಾರದ ವಿರುದ್ಧ ನಟ ಚೇತನ್(Chetan Kumar) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಳಗಾವಿ(Belagavi)ಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ‘ಜಾತಿ ಜನಗಣತಿ ವರದಿಗೆ ಸಿದ್ದರಾಮಯ್ಯ(Siddaramaiah) ಸರ್ಕಾರ 200 ಕೋಟಿ ರೂ. ಬಿಡುಗಡೆ ಮಾಡಿದ್ದು ಒಳ್ಳೆಯದು. ಆದ್ರೆ, ಸಿಎಂ ಉದ್ದೇಶಪೂರ್ವಕವಾಗಿ ತಡೆ ಮಾಡುತ್ತಿದ್ದಾರೆ ಅನಿಸುತ್ತಿದೆ ಎಂದಿದ್ದಾರೆ.
1931 ರಿಂದ ಜಾತಿ ಜನಗಣತಿ ಇಡೀ ದೇಶದಲ್ಲಿ ಬಂದಿಲ್ಲ. ವೀರಶೈವ ಲಿಂಗಾಯತ, ಒಕ್ಕಲಿಗರ ಲಾಭಿಗಳು, ಅವರ ವೈಯಕ್ತಿಕ ಲಾಭಕ್ಕೆ, ಅವರ ಸವಲತ್ತು ಉಳಿಸಲು ಹುನ್ನಾರ ಮಾಡಲಾಗುತ್ತಿದೆ. ಶೋಷಿತ ವರ್ಗದವರು ಎಷ್ಟು ಹಿಂದುಳಿದಿದ್ದಾರೆ ಎಂಬುದು ಗೊತ್ತಾಗಬಾರದು ಎಂದು ಪ್ರಭಾವಿ ಸಮುದಾಯಗಳು ಸಂಚು ರೂಪಿಸುತ್ತಿವೆ. ನಾವು ಲಿಂಗಾಯತ, ಒಕ್ಕಲಿಗರ ವಿರುದ್ಧ ಅಲ್ಲ.
ಆದ್ರೆ, ಅವರಿಗೆ ಸಿಕ್ಕಿರುವ ಸಮಾನವಾದ ಸವಲತ್ತುಗಳು ಸಿಗಬೇಕು.
ಇದನ್ನೂ ಓದಿ:ಇಡೀ ದೇಶದಲ್ಲಿ ಜಾತಿ ಜನಗಣತಿ ಆರಂಭಿಸಿದ್ದು ಕಾಂಗ್ರೆಸ್ ಸರ್ಕಾರ: ಸಿಎಂ ಸಿದ್ದರಾಮಯ್ಯ
ರಾಜಕೀಯವಾಗಿ 70 ವರ್ಷ ಗೌಡ, ಲಿಂಗಾಯತ ಹಾಗೂ ಬ್ರಾಹ್ಮಣರೇ ಆಳ್ವಿಕೆ ಮಾಡಿದ್ದಾರೆ. ನಮಗೆ ಬದಲಾವಣೆ ಬೇಕು, ಒಂದು ದಾಖಲೆ ಅಂಕಿ ಅಂಶ ಬೇಕು. 2018 ರಲ್ಲಿ ಸಿದ್ದರಾಮಯ್ಯ ಅವರು ಎರಡು ತಿಂಗಳಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮ ರೆಡಿ ಮಾಡುತ್ತಾರೆ. ಆದರೆ, ಏಳೆಂಟು ವರ್ಷ ಆದರೂ ಜಾತಿ ಜನಗಣತಿ ಬಿಡುಗಡೆ ಮಾಡುತ್ತಿಲ್ಲ. ಎಲ್ಲೋ ಒಂದು ಕಡೆ ಸಿಎಂಗೆ ಬದಲಾವಣೆ ಮಾಡುವುದು ಇಷ್ಟವಿಲ್ಲ. ಅವರೇ ಅಹಿಂದ ಎಂದು ಹೇಳಿಕೊಂಡಿದ್ದಾರೆ. ಹಾಗೇ ಶೋಷಣೆಯೊಳಗೆ ಉಳಿಯಲಿ ಪ್ರಭಾವಿಗಳು ಆಳಲಿ ಎಂಬ ಮನಸ್ಥಿತಿ ಸಿದ್ದರಾಮಯ್ಯ ಸರ್ಕಾರದಲ್ಲಿ ಇದೆ.
200 ಕೋಟಿ ರೂ. ಖರ್ಚು ಮಾಡಿರಬಹುದು. ಆದ್ರೆ, ಸಣ್ಣ ಸಣ್ಣ ನೆಪಗಳಿಂದ ಮುಂದೆ ತಳ್ಳುತ್ತಿದ್ದಾರೆ. ಉದ್ದೇಶಪೂರ್ವಕವಾಗಿ ನಮಗೆ ನ್ಯಾಯ ದೊರಕಿಸಬಾರದು ಎಂದು ಅನಿಸುತ್ತೆ. ಒಕ್ಕಲಿಗ, ಲಿಂಗಾಯತ ಪ್ರಭಾವಿ ಸಮಾಜಗಳ ಜೊತೆ ನಿಂತುಕೊಂಡು ನಮ್ಮನ್ನು ಕಡೆಗಣಿಸುವುದು ಮಾಡಬಾರದು. ನಮಗೆ ಈ ಸತ್ಯ ಬಿಡುಗಡೆ ಆಗಲಿ. 200 ಕೋಟಿ ರೂ. ಬಿಡುಗಡೆ ಮಾಡಿದ್ದಾರೆಂದರೆ, ವೈಜ್ಞಾನಿಕವಾಗಿ ಬಿಡುಗಡೆ ಮಾಡಿದ್ದಾರೆಂಬ ನಂಬಿಕೆ ನಮಗಿದೆ. ಸಣ್ಣ ಸಣ್ಣ ನೆಪ ಹೇಳಿ ಕಣ್ಣಾಮುಚ್ಚಾಲೆ ಮಾಡಬೇಡಿ ಎಂದು ಹೇಳುವುದಕ್ಕೆ ಇಚ್ಚಿಸುತ್ತೇನೆ ಎಂದರು.
ಇದನ್ನೂ ಓದಿ:ಜಾತಿ ಜನಗಣತಿ ವರದಿ ಬಿಡುಗಡೆ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ: ಅತಿ ಹಿಂದುಳಿದ ವರ್ಗಗಳ ವೇದಿಕೆಯಿಂದ ಎಚ್ಚರಿಕೆ
ಇದೇ ವೇಳೆ ದಲಿತ ಸಮುದಾಯಕ್ಕೆ ಮೀಸಲಿಟ್ಟ SCP-TSP ಹಣ ಗ್ಯಾರಂಟಿ ಯೋಜನೆಗಳಿಗೆ ಬಳಕೆ ವಿಚಾರ ‘ರಾಜ್ಯ ಸರ್ಕಾರದ ವಿರುದ್ಧ ನಟ ಚೇತನ್ ಹರಿಹಾಯ್ದಿದ್ದಾರೆ. ‘11 ಸಾವಿರ ಕೋಟಿ SCP-TSP ಹಣ ದಲಿತರಿಗೆ ಶೋಷಿತ ವರ್ಗದವರಿಗೆ ಇರಬೇಕು. ಅದು ಗ್ಯಾರಂಟಿ ಸ್ಕೀಮ್ ಮೀರಿ ನ್ಯಾಯಕ್ಕಾಗಿ ಇರಬೇಕು. ಅದು ಬಿಟ್ಟು ಐದು ತ್ಯಾಪೆ ಹಚ್ಚುವ ಸ್ಕೀಮ್ಗಳಿಗೆ ಬಳಸಿದ್ರೆ ಹೇಗೆ?. ದಲಿತರು, ಆದಿವಾಸಿಗಳ ಹಣ ದುರುಪಯೋಗ ಮಾಡುತ್ತಿದ್ದಾರೆ. ಅದು ಸಹ ಸಿದ್ದರಾಮಯ್ಯನವರ ಬಾಯಿಯಿಂದಲೇ ಬರುತ್ತದೆ.
ಬಹುಶಃ ನಿಮಗೆ ಚುನಾವಣೆ ಗೆಲ್ಲುವುದಕ್ಕೆ ಸಿಎಂ ಸೀಟ್ ತಗೆದುಕೊಳ್ಳೋಕೆ ಗೊತ್ತಿದೆ. ಆದ್ರೆ, ನಿಮಗೆ ನಿಜವಾದ ನ್ಯಾಯದ ಪರಿಕಲ್ಪನೆ ಅಂಬೇಡ್ಕರ್ ವಾದ, ಪೆರಿಯಾರ್ ವಾದ, ಸಮಾನವಾದ, ಸಂವಿಧಾನ ಪೀಠ ಅರ್ಥೈಸಿಕೊಂಡು ಜನರಿಗೆ ತಲುಪಿಸುವಲ್ಲಿ ವಿಫಲ ಆಗಿದ್ದೀರಿ ಎಂದು ಸಿಎಂ ವಿರುದ್ದ ಕಿಡಿಕಾರಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:55 pm, Fri, 8 December 23