ಬೆಳಗಾವಿಯಲ್ಲಿ 7ನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ: ಪ್ರತಿ ಟನ್‌ ಕಬ್ಬಿಗೆ 3,500 ರೂ. ನೀಡಬೇಕೆಂದು ಪಟ್ಟು

ಹಸಿರುಶಾಲುಗಳ ಅಲೆ ಎದ್ದಿದೆ, ಅಹೋರಾತ್ರಿ ಪ್ರತಿಭಟನೆ ಜೋರಾಗಿದೆ. ರೈತರು, ವಿದ್ಯಾರ್ಥಿಗಳು, ವಕೀಲರು ಮಹಿಳೆಯರು, ಮಕ್ಕಳೆನ್ನದೆ ಹೋರಾಟಕ್ಕೆ ಧುಮುಕ್ಕಿದ್ದಾರೆ. ಬೆಳಗಾವಿಯಲ್ಲಿ ಹೊತ್ತಿರುವು ಕಬ್ಬಿನ ಬೆಲೆಯ ಕಿಚ್ಚು ವಿಜಯಪುರ, ಬಾಗಲಕೋಟೆ ಸೇರಿ ಉತ್ತರ ಕರ್ನಾಟಕದಲ್ಲಿ ಕಾಡ್ಗಿಚ್ಚಿನಂತೆ ವ್ಯಾಪಿಸುತ್ತಿದೆ. ಪ್ರತಿ ಟನ್‌ ಕಬ್ಬಿಗೆ 3,500 ರೂ. ನೀಡಬೇಕೆಂದು ರೈತರು ಪಟ್ಟು ಹಿಡಿದಿದ್ದಾರೆ.

ಬೆಳಗಾವಿಯಲ್ಲಿ 7ನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ: ಪ್ರತಿ ಟನ್‌ ಕಬ್ಬಿಗೆ 3,500 ರೂ. ನೀಡಬೇಕೆಂದು ಪಟ್ಟು
ಬೆಳಗಾವಿಯಲ್ಲಿ 7ನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ
Updated By: Ganapathi Sharma

Updated on: Nov 05, 2025 | 7:08 AM

ಬೆಂಗಳೂರು, ನವೆಂಬರ್ 5: ಪ್ರತಿ ಟನ್‌ ಕಬ್ಬಿಗೆ 3,500 ರೂಪಾಯಿ ಕನಿಷ್ಠ ಬೆಂಬಲ ಬೆಲೆಗೆ ಆಗ್ರಹಿಸಿ ಬೆಳಗಾವಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ (Sugarcane Farmers Protest) ತೀವ್ರ ಸ್ವರೂಪ ಪಡೆದುಕೊಂಡಿದೆ. ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ರೈತರು ಚಳಿ, ಗಾಳಿಯೆನ್ನದೆ ನಡೆಸುತ್ತಿರುವ ಅಹೋರಾತ್ರಿ ಪ್ರತಿಭಟನೆ 7ನೇ ದಿನಕ್ಕೆ ಪ್ರವೇಶಿಸಿದೆ.

ಬರ್ತ್‌ಡೇ ಸಂಭ್ರಮ ಮರೆತು ರೈತರ ಹೋರಾಟಕ್ಕೆ ವಿಜಯೇಂದ್ರ ಸಾಥ್

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರರಿಗೆ ಇವತ್ತು ಹುಟ್ಟುಹಬ್ಬದ ಸಂಭ್ರಮ. ಆದರೆ ಅದನ್ನು ಬದಿಗಿಟ್ಟು ಮಂಗಳವಾರದಿಂದಲೇ ರೈತರ ಜೊತೆ ಹೋರಾಟಕ್ಕಿಳಿದಿದ್ದಾರೆ. ಬೆಳಗಾವಿಯ ಗುರ್ಲಾಪುರದ ಪ್ರತಿಭಟನೆ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿದ್ದ ವಿಜಯೇಂದ್ರ ರಾತ್ರಿಯೂ ರೈತರ ಜೊತೆ ಧರಣಿ ಸತ್ಯಾಗ್ರಹದಲ್ಲಿ ಭಾಗಿಯಾದರು. ಪ್ರತಿಭಟನಾ ಸ್ಥಳದಲ್ಲೇ ರೈತರು ವಿಜಯೇಂದ್ರಗೆ ಹುಟ್ಟಹಬ್ಬದ ಶುಭಾಶಯ ಕೋರಿದರು.

ವೇದಿಕೆಯಲ್ಲಿ ರೈತರ ಜೊತೆ ತಂಗುವ ಮುನ್ನ ಟಿವಿ9 ಜೊತೆ ಮಾತನಾಡಿದ ವಿಜಯೇಂದ್ರ, ಕಳೆದ 6 ದಿನಗಳಿಂದ ರೈತರು ಶಾಂತಿಯುತ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಹೋರಾಟದ ಕಿಚ್ಚು ಅಕ್ಕಪಕ್ಕದ ತಾಲೂಕಿನಲ್ಲಿ ಬೆಳೆಯುತ್ತಿದೆ. ಆದರೆ ಯಾವೊಬ್ಬ ಸಚಿವರೂ ಸ್ಥಳಕ್ಕೆ ಬಂದಿಲ್ಲ ಎಂದು ಆಕ್ರೋಶ ಹೊರಹಾಕಿದರು.

ಈಮಧ್ಯೆ, ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಕೇಂದ್ರದತ್ತ ಬೊಟ್ಟು ಮಾಡಿದ್ದಾರೆ. ನಾವು ಒಟ್ಟಾಗಿ ಕೇಂದ್ರದ ಬಳಿ ಹೋಗಿ ಚರ್ಚೆ ಮಾಡೋಣ. ಕೇಂದ್ರದಿಂದ ಸೂಕ್ತ ದರ ನಿಗದಿಗೆ ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದು ವಿಜಯೇಂದ್ರಗೆ ಹೇಳಿದ್ದು, ಇದಕ್ಕೆ ವಿಜಯೇಂದ್ರ ತಿರುಗೇಟು ನೀಡಿದ್ದಾರೆ.

ಪ್ರತಿಭಟನಾ ಸ್ಥಳಕ್ಕೆ ಇಂದು ಹೆಚ್‌.ಕೆ.ಪಾಟೀಲ್ ಭೇಟಿ

ಸರ್ಕಾರದ ಪ್ರತಿನಿಧಿಯಾಗಿ ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ, ಕಾನೂನು ಸಚಿವ ಹೆಚ್‌ಕೆ ಪಾಟೀಲ್ ಅವರು ಇಂದು ರೈತರು ಪ್ರತಿಭಟನೆ ನಡೆಯುತ್ತಿರುವ ಗುರ್ಲಾಪುರಕ್ಕೆ ಭೇಟಿ ನೀಡಲಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ವಿಜಯೇಂದ್ರ, ರೈತರಿಗೆ ಸಚಿವರು ಸಿಹಿ ಸುದ್ದಿ ತರಲಿ ಎಂದು ಆಗ್ರಹಿಸಿದ್ದಾರೆ.

ಕಬ್ಬಿಗೆ ಬೆಲೆ ನಿಗದಿ ಮಾಡುವುದು ಕೇಂದ್ರ ಸರ್ಕಾರ ಎಂದ ಸಿಎಂ

ಕಬ್ಬು ಬೆಳೆಗಾರರ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಕಬ್ಬಿಗೆ MRP ನಿಗದಿ ಮಾಡುವುದು ರಾಜ್ಯಸರ್ಕಾರ ಅಲ್ಲ, ಕೇಂದ್ರ ಸರ್ಕಾರ ಎಂದು ಸಮಜಾಯಿಷಿ ನೀಡಿದ್ದಾರೆ.

ನವೆಂಬರ್ 7ರಂದು ರಾಷ್ಟ್ರೀಯ ಹೆದ್ದಾರಿ 4 ಬಂದ್

ಗುರ್ಲಾಪುರ ಕ್ರಾಸ್‌ನಲ್ಲಿ ಮಾತನಾಡಿದ ಹಸಿರು ಸೇನೆ ರೈತರ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ, ಸಕ್ಕರೆ ಕಾರ್ಖಾನೆಯಿಂದ 3,500 ರೂ., ಕೇಂದ್ರ, ರಾಜ್ಯದಿಂದ 2 ಸಾವಿರ ರೂಪಾಯಿಯಂತೆ ಪ್ರತಿ ಟನ್ ಕಬ್ಬಿಗೆ 5500 ರೂ. ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಬೇಡಿಕೆ ಈಡೇರದಿದ್ದರೆ ನವೆಂಬರ್ 7ರಂದು ಬೆಂಗಳೂರು-ಪುಣೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 4ಅನ್ನು ಬಂದ್‌ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಬೆಳಗಾವಿಯ ಅಥಣಿಯಲ್ಲೂ ಪ್ರತಿಭಟನೆ ಕಾವೇರುತ್ತಿದೆ. ಮಂಗಳವಾರ ರಾತ್ರಿ ಸಚಿವ ಶಿವಾನಂದ ಪಾಟೀಲ್‌ಗೆ ಶ್ರದ್ಧಾಂಜಲಿ ಅರ್ಪಿಸುವ ಅಣಕು ಪ್ರದರ್ಶನ ಮೂಲಕ ರೈತರು ಆಕ್ರೋಶ ಹೊರಹಾಕಿದ್ದಾರೆ.

ವಿಜಯಪುರದಲ್ಲೂ ಹೋರಾಟ ಜೋರಾಗುತ್ತಿದೆ. ವಿಜಯಪುರನಗರದ ಗಗನ್ ಮಹಲ್ ಬಳಿ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಯುತ್ತಿದೆ. ರೈತರ ಮನವೊಲಿಸಲು ಇಂದು ಸಚಿವ ಎಂ.ಬಿ.ಪಾಟೀಲ್ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ.

ಇದನ್ನೂ ಓದಿ: ಕಬ್ಬು ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ಬೆಳಗಾವಿಯಲ್ಲಿ ರೈತರ ಪ್ರತಿಭಟನೆ; ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ

ಒಟ್ಟಿನಲ್ಲಿ, ಬೆಳಗಾವಿಯಲ್ಲಿ ಆರಂಭವಾಗಿರುವ ಕಬ್ಬುಬೆಳೆಗಾರರ ಪ್ರತಿಭಟನೆಯ ಕಿಚ್ಚು ಬಾಗಲಕೋಟೆ, ವಿಜಯಪುರ ಹೀಗೆ ಬೇರೆ ಬೇರೆ ಜಿಲ್ಲೆಗಳಿಗೂ ವ್ಯಾಪಿಸಿದೆ. ರಾಜ್ಯಾದ್ಯಂತ ಈ ಪ್ರತಿಭಟನೆಯ ಬೆಂಕಿ ವ್ಯಾಪಿಸುವ ಮೊದಲು ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಳ್ಳಕು ಎಂಬ ಆಗ್ರಹ ವ್ಯಕ್ತವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ