ಬೆಳಗಾವಿ, ನ.22: ಜಿಲ್ಲೆಯ ಚಿಕ್ಕೋಡಿ(chikkodi) ಉಪವಿಭಾಗದ ಅಥಣಿ, ನಿಪ್ಪಾಣಿ, ರಾಯಬಾಗ ಸೇರಿದಂತೆ ಹಲವೆಡೆ ಒಂದೂವರೆ ಲಕ್ಷಕ್ಕೂ ಹೆಚ್ಚು ಚರ್ಮ ಕುಶಲಕರ್ಮಿಗಳು ಇದ್ದು, ಹಲವು ವರ್ಷಗಳಿಂದ ಚರ್ಮದ ಚಪ್ಪಲಿ ತಯಾರಿಸುತ್ತಿದ್ದಾರೆ. ಅಥಣಿ ಸೇರಿ ವಿವಿಧೆಡೆ ತಯಾರಾಗುವ ವಿಶಿಷ್ಟ ಶೈಲಿಯ ಚಪ್ಪಲಿಗೆ ಹೆಸರು ಬಂದಿದ್ದು ಮಾತ್ರ ಮಹಾರಾಷ್ಟ್ರದ ಕೊಲ್ಹಾಪುರ. ಶಾಹು ಮಹಾರಾಜರ ಕಾಲದಿಂದಲೂ ಅಥಣಿ ತಾಲೂಕಿನ ಮದಬಾವಿ ಸೇರಿ ವಿವಿಧೆಡೆ ತಯಾರಾಗುತ್ತಿದ್ದ ಚಪ್ಪಲಿಗಳನ್ನು ಕೊಲ್ಹಾಪುರದಲ್ಲಿ ಮಾರಾಟ ಮಾಡಲಾಗುತ್ತಿತ್ತು. ಹೀಗಾಗಿ ಅಂದಿನಿಂದಲೂ ಈ ಚಪ್ಪಲಿಗಳಿಗೆ ಕೊಲ್ಹಾಪುರಿ ಚಪ್ಪಲಿ(Kolhapuri Chappal) ಎಂದು ಹೆಸರು ಬಂದಿದೆ. ಮಾರುಕಟ್ಟೆಯಲ್ಲಿ ಬಂದ ದೊಡ್ಡ ದೊಡ್ಡ ಬ್ರ್ಯಾಂಡ್ಗಳ ಮಧ್ಯೆ ಅಥಣಿಯ ಚಪ್ಪಲಿ ತಯಾರಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದರಲ್ಲೂ ಚರ್ಮ ಕುಶಲಕರ್ಮಿಗಳ ಬಳಿಯೂ ಶೇಕಡ 12 ರಷ್ಟು ಜಿಎಸ್ಟಿ ವಸೂಲಾತಿ ಮಾಡಲಾಗುತ್ತಿದ್ದು, ನಮಗೆ ತೊಂದರೆಯಾಗಿದೆ ಎಂದು ಅಖಿಲ ಕರ್ನಾಟಕ ಚರ್ಮಕಾರ ಸಮಾಜ ಮಹಾಒಕ್ಕೂಟ ಅಧ್ಯಕ್ಷ ಅನಿಲ್ ಕುಮಾರ್ ಸೌದಾಗರ್ ಆರೋಪಿಸಿದ್ದಾರೆ.
ಅಷ್ಟೇ ಅಲ್ಲದೇ ಅಥಣಿಯಲ್ಲಿ ತಯಾರಾಗಿ ವಿದೇಶಕ್ಕೆ ಚಪ್ಪಲಿಗಳು ರಫ್ತಾಗುತ್ತಿತ್ತು. ಅದನ್ನೂ ಸಹ ಈಗ ಸ್ಥಗಿತಗೊಳಿಸಿದ್ದಾರೆ. ಮೊದಲು ರಾಜ್ಯ ಸರ್ಕಾರ 60:40 ಅನುಪಾತದಲ್ಲಿ ಸಬ್ಸಿಡಿ ಸೌಲಭ್ಯ ನೀಡುತ್ತಿತ್ತು. ಇದನ್ನು ಕಡಿತ ಮಾಡಿದ್ದು ಚರ್ಮ ಕುಶಲಕರ್ಮಿಗಳು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಬೆಳಗಾವಿಯಲ್ಲಿ ಡಿಸೆಂಬರ್ 4ರಿಂದ ನಡೆಯುವ ಅಧಿವೇಶನದಲ್ಲಿ ಚರ್ಮಕುಶಲಕರ್ಮಿಗಳ ಸಂಕಷ್ಟದ ಬಗ್ಗೆ ಚರ್ಚೆ ಮಾಡಬೇಕು. ಚರ್ಮ ಕುಶಲಕರ್ಮಿಗಳ ಅನುಕೂಲಕ್ಕಾಗಿ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪನೆ ಮಾಡಿ 200 ಕೋಟಿ ರೂ. ಹಣ ಮೀಸಲಿಡಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಪಿಎಂ ವಿಶ್ವಕರ್ಮ ಯೋಜನೆ: ಅರ್ಹತೆಗಳೇನು, ಪ್ರಯೋಜನಗಳೇನು ಗೊತ್ತಾ? ಸವಲತ್ತು ಪಡೆಯಲು ಹೀಗೆ ನೋಂದಣಿ ಮಾಡಿಕೊಳ್ಳಿ
ಇನ್ನು ಕೊಲ್ಹಾಪುರ ಬ್ರ್ಯಾಂಡ್ಗೆ ಪರ್ಯಾಯವಾಗಿ ರಾಜ್ಯದಲ್ಲಿ ಅಥಣಿ ಬ್ರ್ಯಾಂಡ್ ಚರ್ಮದ ಚಪ್ಪಲಿ ಹೆಸರಿನಡಿ ಮಾರಾಟ ಮಾಡಬೇಕೆಂದು ಹಿಂದಿನ ಸರ್ಕಾರ ಘೋಷಣೆ ಮಾಡಿತ್ತು. ಆದ್ರೆ, ಮಾರ್ಕೆಟಿಂಗ್ ವ್ಯವಸ್ಥೆ ಸರಿ ಇಲ್ಲ ಎಂದು ಚರ್ಮ ಕುಶಲಕರ್ಮಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ನೆರೆಯ ಮಹಾರಾಷ್ಟ್ರ ಬ್ರ್ಯಾಂಡ್ಗೆ ನಮ್ಮ ರಾಜ್ಯದ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇದರ ಬದಲಿಗೆ ಕರ್ನಾಟಕ ಬ್ರ್ಯಾಂಡ್ನ್ನೇ ಬೆಳೆಸಬೇಕೆಂಬ ಉದ್ದೇಶದಿಂದ ಅಥಣಿ ಬ್ರ್ಯಾಂಡ್ ಆರಂಭಿಸಲಾಗಿದ್ದು, ಇದರ ಮಾರ್ಕೆಟಿಂಗ್ಗೆ ಕ್ರಮ ವಹಿಸುವಂತೆಯೂ ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲದೇ ಹೊರದೇಶದಿಂದ ಚರ್ಮವನ್ನು ಆಮದು ಮಾಡಿಕೊಳ್ಳುವುದನ್ನು ಸ್ಥಗಿತಗೊಳಿಸಿದ್ದಾರೆ. ಇತ್ತ ವಿದೇಶಕ್ಕೆ ಚಪ್ಪಲಿಗಳ ರಫ್ತು ಸ್ಥಗಿತಗೊಳಿಸಿದ್ದರಿಂದ ಚರ್ಮ ಕುಶಲಕರ್ಮಿಗಳ ಮೇಲೆ ಪರಿಣಾಮ ಬೀರಿದೆ ಎಂದು ಆರೋಪಿಸಿದ್ದಾರೆ.
ಅಷ್ಟೇ ಅಲ್ಲದೇ ಈಗ ಚರ್ಮದ ಚಪ್ಪಲಿಗಳ ತಯಾರಿಕೆಗೆ ಅತ್ಯಾಧುನಿಕ ಯಂತ್ರೋಪಕರಣಗಳು ಬಂದಿದ್ದು, ಯಂತ್ರೋಪಕರಣಗಳ ಖರೀದಿಗೆ ಸರ್ಕಾರ ನೆರವು ನೀಡಬೇಕು. ಮೊದಲಿನಂತೆಯೇ 60:40 ಅನುಪಾತದಡಿ ಸಬ್ಸಿಡಿ ನೀಡುವ ಯೋಜನೆ ರೂಪಿಸಬೇಕು ಎಂದು ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲದೇ ಈಗಾಗಲೇ ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕೆಗಳ ಅಭಿವೃದ್ಧಿ ನಿಗಮಕ್ಕೂ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ಅತ್ಯುತ್ತಮ ಗುಣಮಟ್ಟದ ಅಥಣಿ ಬ್ರ್ಯಾಂಡ್ ಚಪ್ಪಲಿಗಳ ಮಾರಾಟಕ್ಕೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದ್ದಾರೆ. ಒಟ್ಟಾರೆಯಾಗಿ ರಾಜ್ಯಾದ್ಯಂತ 18 ಲಕ್ಷಕ್ಕೂ ಹೆಚ್ಚು ಚರ್ಮ ಕುಶಲಕರ್ಮಿಗಳು ಇದ್ದು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 4ರಿಂದ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಈ ಬಗ್ಗೆ ಚರ್ಚಿಸಬೇಕು. ಈಗಾಗಲೇ ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕೆಗಳ ಅಭಿವೃದ್ಧಿ ನಿಗಮವಿದ್ದರೂ ಚರ್ಮ ಕುಶಲಕರ್ಮಿಗಳಿಗೆ ಪ್ರತ್ಯೇಕ ನಿಗಮ ಸ್ಥಾಪನೆ ಮಾಡಬೇಕೆಂಬುದು ಚರ್ಮ ಕುಶಲಕರ್ಮಿಗಳ ಹಕ್ಕೊತ್ತಾಯ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ