ಬೆಳಗಾವಿ, ನ.01: ಬೆಳಗಾವಿಯಲ್ಲಿ ಇಂದು ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವ (Kannada Rajyotsava) ಆಚರಣೆ ಮಾಡಲು ಸಕಲ ಸಿದ್ಧತೆ ನಡೆದಿದೆ. ಚನ್ನಮ್ಮ ವೃತ್ತ ಮದುವಣಗಿತ್ತಿಯಂತೆ ಕಂಗೊಳಿಸುತ್ತಿದೆ. ನಗರದ ಪ್ರತಿಯೊಂದು ಬೀದಿಯಲ್ಲಿ ಕನ್ನಡದ ಬಾವುಟಗಳು ರಾರಾಜಿಸುತ್ತಿವೆ. ಆದರೆ ಕನ್ನಡ ರಾಜ್ಯೋತ್ಸವಕ್ಕೆ ವಿರುದ್ಧವಾಗಿ MES ಸಂಘಟನೆ ಕರಾಳ ದಿನ ಆಚರಣೆ ಮಾಡಲು ಮುಂದಾಗಿದೆ. ನಿಷೇಧದ ನಡುವೆಯೂ ಕರಾಳ ದಿನ ಆಚರಿಸಲು ನಾಡದ್ರೋಹಿಗಳು ಪ್ಲ್ಯಾನ್ ಮಾಡಿದ್ದಾರೆ. ಬೆಳಗಾವಿಯ (Belagavi) ಸಂಭಾಜಿ ಉದ್ಯಾನದಿಂದ ಮೆರವಣಿಗೆ ಆರಂಭವಾಗಿದೆ. ಕಪ್ಪು ಬಟ್ಟೆ ಧರಸಿ ನೂರಾರು ಜನ ಎಂಇಎಸ್ ಪುಂಡರು ಮೆರವಣಿಗೆಯಲ್ಲಿ ಭಾಗಿಯಾಗಿದ್ದಾರೆ. ನಾಡದ್ರೋಹಿ ಘೋಷಣೆ ಕೂಗುತ್ತಿದ್ದಾರೆ. ಭಾರಿ ಪೊಲೀಸ್ ಬಂದೋಬಸ್ತ್ ನಲ್ಲಿ ಎಂಇಎಸ್ ಮೆರವಣಿಗೆ ನಡೆಯುತ್ತಿದೆ. ಕರಾಳ ದಿನಾಚರಣೆಗೆ ಅವಕಾಶ ನೀಡಲ್ಲ ಎಂದಿದ್ದ ಜಿಲ್ಲಾಡಳಿತ ಕೈಕಟ್ಟಿ ಕುಳಿತಿದೆ.
ಎಂಇಎಸ್ ಕರಾಳ ದಿನಾಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಿಸಿತ್ತು. ನಿಷೇಧದ ನಡುವೆಯೂ ಪೊಲೀಸ್ ಭದ್ರತೆಯಲ್ಲಿ ಕರಾಳ ದಿನ ಆಚರಿಸಲಾಗುತ್ತಿದೆ. ಕರಾಳ ದಿನಾಚರಣೆ ಮಾಡಲು ಬಿಡುವುದಿಲ್ಲ ಎಂದ ಪೊಲೀಸರೇ ಭದ್ರತೆ ನೀಡಿದ್ದಾರೆ. ಪೊಲೀಸರ ಸಮ್ಮುಖದಲ್ಲಿ ನಾಡದ್ರೋಹಿ ಘೋಷಣೆ ಕೂಗಿ ಎಂಇಎಸ್ ಪುಂಡಾಟ ಮೆರೆಯುತ್ತಿದೆ. ಬೆಳಗಾವಿ, ಕಾರವಾರ, ನಿಪ್ಪಾಣಿ ಸಂಯುಕ್ತ ಮಹಾರಾಷ್ಟ್ರ ಆಗಲೇಬೇಕು ಅಂತಾ ಘೋಷಣೆ ಕೂಗಲಾಗುತ್ತಿದೆ. ಅನುಮತಿ ನೀಡುವುದಿಲ್ಲ ಎಂದಿದ್ದ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ನಾಡದ್ರೋಹಿಗಳಿಗೆ ರಕ್ಷಣ ನೀಡಿ ಕೈ ಕಟ್ಟಿ ಕುಳಿತಿದೆ. ಕರಾಳ ದಿನಕ್ಕೆ ಅವಕಾಶ ಇಲ್ಲ ಎಂದು ಹೇಳಿದ್ದ ಡಿಸಿ ಮತ್ತು ಕಮಿಷನರ್, ಈಗ ಎಂಇಎಸ್ ಪುಂಡರಿಗೆ ಭದ್ರತೆ ನೀಡಿ ಮೆರವಣಿಗೆಗೆ ಅವಕಾಶ ಕೊಟ್ಟಿದ್ದಾರೆ. ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ಇಬ್ಬಗೆಯ ನೀತಿಗೆ ಕನ್ನಡಿಗರು ಆಕ್ರೋಶ ಹೊರ ಹಾಕಿದ್ದಾರೆ. ಕನ್ನಡದ ನೆಲದಲ್ಲಿದ್ರೂ ನಾಡದ್ರೋಹಿ ಘೋಷಣೆ ಕೂಗಿ ಎಂಇಎಸ್ ಪುಂಡಾಟ ಮೆರೆಯುತ್ತಿದೆ. ಇದಕ್ಕೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಪರೋಕ್ಷವಾಗಿ ಸಪೋರ್ಟ್ ಮಾಡುತ್ತಿದ್ದು ರಾಜಕೀಯ ಒತ್ತಡಕ್ಕೆ ಮಣಿದು ಸುಮ್ಮನಾದ್ರಾ ಎಂಬ ಮಾತುಗಳು ಕೇಳಿ ಬರುತ್ತಿವೆ. ಕರಾಳ ದಿನಾಚರಣೆ ಬಂದ್ ಮಾಡುವ ಪವರ್ ಇದ್ರೂ ಪೊಲೀಸ್ ಇಲಾಖೆ ಸೈಲೆಂಟ್ ಆಗಿದೆ ಎಂದು ಕನ್ನಡಿಗರು ಆರೋಪಿಸಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ, ಬೀದಿ-ಬದಿಗಳಲ್ಲಿ ರಾರಾಜಿಸಿದ ನಮ್ಮ ಕನ್ನಡ ಬಾವುಟ
ಕನ್ನಡ ರಾಜ್ಯೋತ್ಸವ ವಿರುದ್ಧವಾಗಿ ನಾಡದ್ರೋಹಿ ಎಂಇಎಸ್ ಕರಾಳ ದಿನಾಚರಣೆಯಲ್ಲಿ ಭಾಗಿಯಾಗಲು ಬೆಳಗಾವಿ ಗಡಿ ಪ್ರವೇಶಿಸಲು ಆಗಮಿಸಿದ್ದ ಶಿವಸೇನೆ ಪುಂಡರನ್ನು ಮಹಾರಾಷ್ಟ್ರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಹಾರಾಷ್ಟ್ರದ ಗಡಿಯಲ್ಲೇ ವಿಜಯ್ ದೇವಣೆ ಸೇರಿ 50ಕ್ಕೂ ಹೆಚ್ಚು ಪುಂಡರನ್ನು ವಶಕ್ಕೆ ಪಡೆಯಲಾಗಿದೆ. ವಿಜಯ್ ದೇವಣೆ, ಶಿವಸೇನೆ ಉದ್ಧವ್ ಠಾಕ್ರೆ ಬಣ ಕೊಲ್ಹಾಪುರ ಜಿಲ್ಲಾಧ್ಯಕ್ಷನನ್ನು ಪೊಲೀಸ್ ವಾಹನದಲ್ಲಿ ವಾಪಸ್ ಕಾಗಲ್‌ಗೆ ಕರೆದುಕೊಂಡು ಹೋಗಲಾಗಿದೆ. ಗಡಿ ವಿವಾದವನ್ನ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಶಿವಸೇನೆ ಉದ್ಧವ್ ಠಾಕ್ರೆ ಬಣ ಯತ್ನಿಸಿದ್ದು ಪ್ರತಿ ವರ್ಷ ಕನ್ನಡ ರಾಜ್ಯೋತ್ಸವದಂದು ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿ ಅರ್ಧ ಗಂಟೆ ಹೈಡ್ರಾಮಾ ಮಾಡುತ್ತೆ. ಇಂದು ಸಹ ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿ ಅರ್ಧಗಂಟೆ ಕಾಲ ಶಿವಸೇನೆ ಪುಂಡರು ಹೈಡ್ರಾಮ ಮಾಡಿದರು. ಕರ್ನಾಟಕ ಮಹಾರಾಷ್ಟ್ರ ಗಡಿ ಕೊಗನೊಳ್ಳಿ ಹೊರವಲಯದಲ್ಲಿ ಕರ್ನಾಟಕ ವಿರುದ್ಧ ಘೋಷಣೆ ಕೂಗಿ ಹೈಡ್ರಾಮಾ ಮಾಡಿದರು. ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಸಂಯುಕ್ತ ಮಹಾರಾಷ್ಟ್ರ ಸೇರಬೇಕೆಂದು ನಾಡದ್ರೋಹಿ ಘೋಷಣೆ ಕೂಗಿದರು. ಗಡಿಯಲ್ಲೇ ಮುಖಭಂಗ ಅನುಭವಿಸಿ ಶಿವಸೇನೆ ಪುಂಡರು ವಾಪಸ್ ಆಗಿದ್ದಾರೆ.
ಬೆಳಗಾವಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ