ಚಿಕ್ಕೋಡಿ: ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವು ಆರೋಪ, ಕುಟುಂಬಸ್ಥರಿಂದ ಠಾಣೆ ಎದುರು ಧರಣಿ

| Updated By: Ganapathi Sharma

Updated on: Aug 04, 2023 | 10:38 PM

ಸರ್ಕಾರಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದಲೇ ಆಕೆ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲದೆ, ಕಿರಣ ಟಿಕ್ಕೆ ಸಾವಿಗೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಧರಣಿ ನಡೆಸಿದ್ದಾರೆ.

ಚಿಕ್ಕೋಡಿ: ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವು ಆರೋಪ, ಕುಟುಂಬಸ್ಥರಿಂದ ಠಾಣೆ ಎದುರು ಧರಣಿ
ಮೃತ ಮಹಿಳೆ ಮತ್ತು ಕುಟುಂಬಸ್ಥರ ಧರಣಿ
Follow us on

ಚಿಕ್ಕೋಡಿ: ಆರೋಗ್ಯ ಕೇಂದ್ರದ ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿಯ ಸಾವಾಗಿದೆ ಎಂದು ಆರೋಪಿಸಿ ಆ್ಯಂಬುಲೆನ್ಸ್‌‌ನಲ್ಲಿ ಬಾಣಂತಿ ಶವ ಠಾಣೆಗೆ ತಂದು ಕುಟುಂಬಸ್ಥರು ಧರಣಿ ನಡೆಸಿದ ಘಟನೆ ಬೆಳಗಾವಿ (Belagavi) ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪೊಲೀಸ್ ಠಾಣೆ ಎದುರು ಶುಕ್ರವಾರ ನಡೆದಿದೆ. ಹೆರಿಗೆಗಾಗಿ ಹುಕ್ಕೇರಿ ತಾಲೂಕಿನ ಕೋಣಕೇರಿ ನಿವಾಸಿ ಕಿರಣ ಮಹಾದೇವ ಟಿಕ್ಕೆ ಅವರನ್ನು ನಿಡಸೋಸಿ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. 12 ದಿನಗಳ ಹಿಂದೆ ಸೀಜೇರಿಯನ್ ಆಗಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆಗಸ್ಟ್ 2ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ಕಿರಣ ಮಹಾದೇವ ಟಿಕ್ಕೆ, ಡಿಸ್ಚಾರ್ಜ್ ಬಳಿಕ ತವರು ಮನೆ ಮಹಾರಾಷ್ಟ್ರದ ಗಿಜೋಣಿಗೆ ಹೋಗಿದ್ದರು.

ಇಂದು (ಆಗಸ್ಟ್ 4) ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಕುಟುಂಬದವರು ಆಸ್ಪತ್ರೆಗೆ ಕರೆದೊಯ್ದಿದ್ದರು. ಮಹಾರಾಷ್ಟ್ರದ ಗಡಹಿಂಗ್ಲಜ್ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ಚಿಕಿತ್ಸೆ ಫಲಿಸದೆ ಕಿರಣ ಟಿಕ್ಕೆ ಮೃತಪಟ್ಟಿದ್ದಾರೆ. ಹೆರಿಗೆ ವೇಳೆ ವೈದ್ಯರು ನಿರ್ಲಕ್ಷ್ಯ ತೋರಿದ್ದರಿಂದ ಹೀಗಾಗಿದೆ ಎಂದು ಖಾಸಗಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಹಿಂಡಲಗಾ ಜೈಲಿನ ಅಕ್ರಮ ಬಯಲು ಮಾಡಿದ ಟಿವಿ9; ಕಾಸಿದ್ರೆ ಜೈಲಲ್ಲೂ ರಾಜನಂತೆ ಮೆರೆಯಬಹುದು

ಹೀಗಾಗಿ, ಸರ್ಕಾರಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದಲೇ ಆಕೆ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲದೆ, ಕಿರಣ ಟಿಕ್ಕೆ ಸಾವಿಗೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಧರಣಿ ನಡೆಸಿದ್ದಾರೆ. ಬಾಣಂತಿಯ ಶವ, 12 ದಿನದ ಹಸುಗೂಸಿನೊಂದಿಗೆ ಠಾಣೆ ಬಳಿ ಪ್ರತಿಭಟನೆ ನಡೆಸಿದ್ದಾರೆ. ಇದೇ ವೇಳೆ, ಕುಟುಂಬಸ್ಥರ ಮನವೊಲಿಸಲು ಸಂಕೇಶ್ವರ ಠಾಣೆ ಪೊಲೀಸರು ಯತ್ನಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ