ಹಿಂಡಲಗಾ ಜೈಲಿನ ಅಕ್ರಮ ಬಯಲು ಮಾಡಿದ ಟಿವಿ9; ಕಾಸಿದ್ರೆ ಜೈಲಲ್ಲೂ ರಾಜನಂತೆ ಮೆರೆಯಬಹುದು

ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಹತ್ತು ಸಾವಿರ ಕೊಟ್ರೆ ಕೀ ಪ್ಯಾಡ್ ಸೆಟ್, ಇಪ್ಪತ್ತು ಸಾವಿರ ಕೊಟ್ರೆ ಆಂಡ್ರಾಯ್ಡ್ ಪೋನ್ ಸಿಗುತ್ತಂತೆ. ಹೆಚ್ಚು ಹಣ ಕೊಟ್ರೆ ಒಳ್ಳೆಯ ಸೆಲ್ ಮತ್ತು ಟಿವಿ, ಹಾಸಿಗೆ, ಹೊರಗಿನಿಂದ ಊಟ ಕೂಡ ಬರುತ್ತಂತೆ.

ಹಿಂಡಲಗಾ ಜೈಲಿನ ಅಕ್ರಮ ಬಯಲು ಮಾಡಿದ ಟಿವಿ9; ಕಾಸಿದ್ರೆ ಜೈಲಲ್ಲೂ ರಾಜನಂತೆ ಮೆರೆಯಬಹುದು
ಹಿಂಡಲಗಾ ಜೈಲು
Follow us
| Updated By: ಆಯೇಷಾ ಬಾನು

Updated on: Aug 03, 2023 | 4:41 PM

ಬೆಳಗಾವಿ, ಆ.03: ಪುರಾತನ, ಇತಿಹಾಸಹೊಂದಿರುವ ಬೆಳಗಾವಿ ಹಿಂಡಲಗಾ ಜೈಲು(Belagavi Hindalga Central Jail) ಅಕ್ರಮಗಳ ಕೂಟ ಆಗ್ತಿದೆಯಾ ಎಂಬ ಬಗ್ಗೆ ಟಿವಿ9 ಬಹಿರಂಗ ಪಡಿಸಿದೆ. ಜೈಲಿನಲ್ಲಿ ಹೇಗಿದೆ ವ್ಯವಸ್ಥೆ? ಸಿಬ್ಬಂದಿಗಳ ದಬ್ಬಾಳಿಕೆ, ದೌರ್ಜನ್ಯ ಕುರಿತು ಜೈಲಿನಲ್ಲೇ ಕುಳಿತು ಕೈದಿಯೊಬ್ಬ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದ. ಇತ್ತ ಜೈಲಿನಲ್ಲಿ ಹಣಕೊಟ್ರೇ ಮೊಬೈಲ್(Mobile) ಕೂಡ ಸಿಗುತ್ತೆ, ಐಷಾರಾಮಿ ಜೀವನ ಕೂಡ ಮಾಡಬಹುದು ಅನ್ನೋದು ಟಿವಿ9 ಬಹಿರಂಗ ಮಾಡಿದೆ. ಹಿಂಡಲಗಾ ಜೈಲಿನ ಕರ್ಮಕಾಂಡದ ಬಗ್ಗೆ ಟಿವಿ9 ಸತ್ಯ ಬಿಚ್ಚಿಡ್ತಿದ್ದಂತೆ ಬಂಧಿಖಾನೆ ಅಧಿಕಾರಿಗಳು ಅಧೀಕ್ಷಕರಿಗೆ ವರದಿ ಕೇಳಿದ್ದಾರೆ.

ಬೆಳಗಾವಿ ಹಿಂಡಲಗಾ ಜೈಲು ಕೈದಿಗಳ ಮನಪರಿವರ್ತನೆ ಮಾಡುವ ಜೈಲಾಗಬೇಕಿತ್ತು. ಆದ್ರೇ ಈ ಜೈಲು ಸದ್ಯ ಕೈದಿಗಳನ್ನ ಇನ್ನಷ್ಟು ಅಕ್ರಮ ಚಟುವಟಿಕೆ ಮಾಡಲು ಪ್ರೇರಿಪಿಸುವಂತೆ ಮಾಡ್ತಿದೆಯಾ ಅನ್ನೋ ಅನುಮಾನ ಕಾಡುತ್ತಿದೆ. ಈ ಕುರಿತು ಟಿವಿ9 ತೆರೆದಿಟ್ಟ ಜೈಲಿನ ಕರ್ಮಕಾಂಡದಲ್ಲಿ ಎಲ್ಲವೂ ಬಟಾಬಯಲಾಗಿದೆ. ಜೈಲಿನಲ್ಲಿ ಹಣ ಕೊಟ್ರೆ ರಾಜ್ಯಾತಿಥ್ಯ ಸಿಗುತ್ತೆ ಅನ್ನೋದು ಮತ್ತೊಮ್ಮೆ ಬಹಿರಂಗವಾಗಿದೆ. ಈ ಹಿಂದೆ ಮಾಜಿ ಸಚಿವ ವಿನಯ್ ಕುಲಕರ್ಣಿ ಈ ಜೈಲಿನಲ್ಲಿದ್ದಾಗ ಟಿವಿ9 ಕುಲಕರ್ಣಿಗೆ ನೀಡ್ತಿದ್ದ ರಾಜಾತಿಥ್ಯ ಬಗ್ಗೆ ಬಿಚ್ಚಿಟ್ಟಿತ್ತು. ಇದಾದ ಬಳಿಕವೂ ಸುಧಾರಣೆಯಾಗದ ಜೈಲು ದಿನೇ ದಿನೇ ಹದಗೆಡುತ್ತಾ ಬರ್ತಾಯಿದೆ. ಜೈಲಿನಲ್ಲಿ ಒಂದು ಸೂಜಿಯೂ ಒಳ ಹೋಗುವುದಿಲ್ಲಾ ಅಂತಾರೆ. ಇಲ್ಲಿ ಮೊಬೈಲ್ ಪೋನ್ ಗಳು ರಿಂಗ್ ಆಗ್ತವೆ. ಇಲ್ಲಿಂದ ಯಾರಿಗೆ ಬೇಕಾದ್ರೂ ಕಾಲ್ ಹೋಗಿ ಬೆದರಿಕೆ ಕೂಡ ಹಾಕ್ತಾರೆ ಕೈದಿಗಳು.

ಹಿಂಡಲಗಾ ಜೈಲಿನ ಅಕ್ರಮ ಬಿಚ್ಚಿಟ್ಟ ಕೈದಿ

ಹತ್ತು ಸಾವಿರ ಕೊಟ್ರೆ ಕೀ ಪ್ಯಾಡ್ ಸೆಟ್, ಇಪ್ಪತ್ತು ಸಾವಿರ ಕೊಟ್ರೆ ಆಂಡ್ರಾಯ್ಡ್ ಪೋನ್ ಸಿಗುತ್ತಂತೆ. ಹೆಚ್ಚು ಹಣ ಕೊಟ್ರೆ ಒಳ್ಳೆಯ ಸೆಲ್ ಮತ್ತು ಟಿವಿ, ಹಾಸಿಗೆ, ಹೊರಗಿನಿಂದ ಊಟ ಕೂಡ ಬರುತ್ತಂತೆ. ಇದನ್ನ ಪ್ರಶ್ನೆ ಮಾಡಿದ್ರೇ ಅವರ ಮೇಲೆ ಸಿಬ್ಬಂದಿ ಹಾಗೂ ಕೆಲ ಕೈದಿಗಳು ಹಲ್ಲೆ ಮಾಡುತ್ತಾರಂತೆ. ಈ ವಿಚಾರವನ್ನ ಪ್ರಶಾಂತ್ ಮೊಗವೀರ್ ಎಂಬ ಕೈದಿ ಸೆಲ್ಫಿ ವಿಡಿಯೋ ಮಾಡಿ ಎಳೆ ಎಳೆಯಾಗಿ ಬಿಚ್ಚಿಟ್ಟ. ಇದರ ಜೊತೆಗೆ ಮೊನ್ನೆಯಷ್ಟೇ ಇಬ್ಬರು ಕೈದಿಗಳ ನಡುವೆ ಗಲಾಟೆ ನಡೆದಿತ್ತು. ಇದರಲ್ಲಿ ಸುರೇಶ್ ಎಂಬಾತ ಕೈದಿಗೆ ಶಂಕರ್ ಭಜಂತ್ರಿ ಎಂಬ ಕೈದಿ ಸ್ಕ್ರೂಡ್ರೈವ್ ನಿಂದ ಹಲ್ಲೆ ಮಾಡಿದ್ದ. ಇದೆಲ್ಲದರ ನಡುವೆ ಕೆಲ ದಿನಗಳ ಹಿಂದೆ ಕೈದಿ ಜಯೇಶ್ ಪೂಜಾರಿ ಕೇಂದ್ರ ಸಚಿವರಿಗೆ ಕರೆ ಮಾಡಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದ. ಹಣ ಕೊಡದಿದ್ರೇ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದ. ಈ ಪ್ರಕರಣದಲ್ಲಿ ಜೈಲಿನಲ್ಲಿದ್ದುಕೊಂಡೆ ಜಯೇಶ್ ಪೂಜಾರಿ ಪೋನ್ ಬಳಿಸಿದ್ದು ಸಾಭೀತಾಗಿ ಇದೀಗ ನಾಗ್ಫುರ ಪೊಲೀಸರು ಆತನನ್ನ ಕರೆದುಕೊಂಡು ಹೋಗಿದ್ದಾರೆ. ಹೀಗೆ ಪ್ರತಿಯೊಂದರ ವಿಡಿಯೋ ಸಾಕ್ಷಿಗಳ ಸಮೇತ ಇಂದು ಟಿವಿ9 ಅಕ್ರಮ ಬಯಲು ಮಾಡಿದೆ.

ಇದನ್ನೂ ಓದಿ: ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಕೈದಿಯಿಂದ ಮತ್ತೊಬ್ಬ ಕೈದಿಯ ಕೊಲೆಗೆ ಯತ್ನ ಟಿವಿ9ನಲ್ಲಿ ಹಿಂಡಲಗಾ ಜೈಲು ಕರ್ಮಕಾಂಡ ಬಯಲಾಗ್ತಿದ್ದಂತೆ ಬಂಧಿಖಾನೆ ಎಡಿಜಿಪಿ ಸೇರಿದಂತೆ ಹಿರಿಯ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಜೈಲು ಅಧೀಕ್ಷಕ ಕೃಷ್ಣಕುಮಾರ್ ಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ ಅಷ್ಟೇ ಅಲ್ಲದೇ ಎಲ್ಲದರ ವಿವರಣೆ ಕೂಡ ಕೇಳಿದ್ದಾರೆ. ಹೌದು ಟಿವಿ9 ವರದಿ ಇಲಾಖೆಯಲ್ಲೇ ಸಂಚಲನ ಸೃಷ್ಟಿಸಿದ್ದು ಇದೀಗ ಜೈಲಿನಲ್ಲಿ ಕೈದಿಗಳ ನಡುವೆ ಆದ ಗಲಾಟೆ, ಮೊಬೈಲ್ ಬಳಕೆ, ಸಿಬ್ಬಂದಿಯಿಂದ ಹಣ ಪಡೆದು ಮೊಬೈಲ್ ನೀಡ್ತಿರುವುದು, ಐಷಾರಾಮಿ ವ್ಯವಸ್ಥೆ ಮಾಡಿಸುತ್ತಿರುವುದು ಈ ಎಲ್ಲದರ ಕುರಿತು ವರದಿ ನೀಡುವಂತೆ ಸೂಚನೆ ನೀಡಿದ್ದಾರೆ. ಜೈಲಿನಲ್ಲಿ ಮೊಬೈಲ್ ಬಳಕೆ ಹೇಗೆ ಮಾಡ್ತಿದ್ದಾರೆ, ಮೊಬೈಲ್ ಗಳು ಹೇಗೆ ಕೈದಿಗಳ ಕೈಗೆ ಸಿಗ್ತಿವೆ ಅನ್ನೋ ನಿಟ್ಟಿನಲ್ಲಿ ಸಿಟ್ಟಾಗಿರುವ ಬಂಧಿಖಾನೆ ಎಡಿಜಿಪಿ ಮಾಲಿನಿ ಕೃಷ್ಣಕುಮಾರ್ ತಪ್ಪಿತಸ್ಥ ಸಿಬ್ಬಂದಿ ವಿರುದ್ದ ಕ್ರಮಕ್ಕೂ ಸೂಚನೆ ನೀಡಿದ್ದಾರೆ.

ಹಿಂಡಲಗಾ ಜೈಲಿಗೆ ಅಧೀಕ್ಷ ದೌಡು

ಇನ್ನೂ ಟಿವಿ9 ವರದಿ ಬಿತ್ತರವಾಗ್ತಿದ್ದಂತೆ ಜೈಲಿಗೆ ಧಾವಿಸಿದ ಅಧೀಕ್ಷ ಕೃಷ್ಣಕುಮಾರ್ ಪ್ರಶಾಂತ್ ಮೊಗವೀರ್, ಸುರೇಶ್ ಸೇರಿದಂತೆ ಕೆಲ ಕೈದಿಗಳ ಸೆಲ್ ಗಳನ್ನ ತಪಾಸಣೆ ನಡೆಸಿದ್ದಾರೆ. ಈ ಕುರಿತು ಟಿವಿ9ಗೆ ಪ್ರತಿಕ್ರಿಯೆ ನೀಡಿದ ಕೃಷ್ಣಕುಮಾರ್ ಆ ವಿಡಿಯೋ ಮಾಡಿದ ಕೈದಿ ಮೇಲೆ ಈ ಹಿಂದೆ ಪ್ರಕರಣ ದಾಖಲಾಗಿದೆ. ಇನ್ನೊಬ್ಬ ಕೈದಿ ಸುರೇಶ್ ಮಂಡ್ಯದಿಂದ ಬಂದಿದ್ದರು. ಮೊನ್ನೆ ಇಬ್ಬರು ಕೈದಿಗಳು ಕಿತ್ತಾಡಿಕೊಂಡಿದ್ದು ಈಗಾಗಲೇ ಪ್ರಕರಣ ದಾಖಲಾಗಿದೆ. ಮೊಬೈಲ್ ಪ್ರಕರಣಗಳು ಬೆಳಕಿಗೆ ಬಂದಾಗ ಕ್ರಮ ಕೈಗೊಂಡಿದ್ದೇವೆ. ಇವತ್ತಿನ ಪ್ರಕರಣವನ್ನ ಖುದ್ದು ನಾನೇ ಸರ್ಚ್ ಮಾಡುತ್ತೇನೆ. ರಾತ್ರಿಯೂ ಒಂದು ಬಾರಿ ಸರ್ಚ್ ಮಾಡುತ್ತೇನೆ. ಮೊಬೈಲ್ ಸೇರಿದಂತೆ ಎನಾದ್ರೂ ಕಂಡು ಬಂದ್ರೇ ಪ್ರಕರಣ ಬುಕ್ ಮಾಡ್ತೇನಿ. ಸ್ಮಗ್ಲಿಂಗ್ ಆಗಿ ಮೊಬೈಲ್ ಒಳಗೆ ಬರ್ತಿದ್ದು ಅವುಗಳನ್ನ ಶೋಧ ನಡೆಸಿ ಕೇಸ್ ಮಾಡಿ ತನಿಖೆ ಮಾಡ್ತೇವಿ. ಜೈಲಿನಲ್ಲಿ ಈಗಿರುವ ಜಾಮರ್ ವರ್ಕ್ ಆಗುತ್ತಿಲ್ಲ. ಅದಕ್ಕಿಂತ ಮುಖ್ಯವಾಗಿ ನಾವು ಶೋಧ ನಡೆಸಿ ಕ್ರಮ ಕೈಗೊಳ್ತೇವಿ. ಮೊಬೈಲ್ ಸಿಕ್ಕಾಗ ಕೇಸ್ ದಾಖಲಿಸುತ್ತೇವೆ ಈ ವೇಳೆ ಸಿಬ್ಬಂದಿ ಮೇಲೆಯೂ ಕ್ರಮ ಕೈಗೊಳ್ತೇವಿ.

ಈ ಹಿಂದೆ ಮೊಬೈಲ್ ಸಿಕ್ಕಾಗ ಪ್ರಕರಣ ದಾಖಲಿಸಿ ಇಬ್ಬರು ಸಿಬ್ಬಂದಿ ಅಮಾನತು ಮಾಡಿದ್ದೇವು. ಯಾರನ್ನೂ ಬಿಡುವ ಮಾತೇ ಇಲ್ಲಾ ಕಠಿಣ ಕ್ರಮ ಕೈಗೊಳ್ಳುತ್ತೇವೆ, ಇಂದಿನ ಪ್ರಕರಣದ ಕುರಿತು ಕೂಡ ತನಿಖೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ. ನಿನ್ನೆ ಕೈದಿ ಪ್ರಶಾಂತ್ ವಿಡಿಯೋ ಮಾಡಿರುವ ಕುರಿತು ಕೂಡ ಪರಿಶೀಲನೆ ನಡೆಸುತ್ತೇನೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಫೋನ್ ಮಾಡಿರುವ ವಿಚಾರ ತನಿಖೆ ನಡೆಯುತ್ತಿದೆ. ಎನೇ ಆಗಲಿ ಎಲ್ಲ ಅಕ್ರಮ ಸರಿ ಮಾಡಿ ಕ್ರಮ ಕೈಗೊಳ್ತೇವಿ. ಇಂದಿನ ಘಟನೆ ಕುರಿತು ಎಡಿಜಿಪಿ ಅವರಿಗೆ ವರದಿ ಕೊಡ್ತೇವಿ ಎಂದು ತಿಳಿಸಿದರು.

ಒಟ್ಟಿನಲ್ಲಿ ಜೈಲಿನ ಅಕ್ರಮ ಕರ್ಮಕಾಂಡವನ್ನ ಟಿವಿ9 ಇಂದು ಬಿಚ್ಚಿಟ್ಟಿದ್ದು ಇದರಿಂದ ಅಧಿಕಾರಿಗಳಿಗೆ ಢವ ಢವ ಶುರುವಾಗಿದೆ. ಹಣದಾಸೆಗೆ ಕೆಲವು ಸಿಬ್ಬಂದಿ ಕೈದಿಗಳಿಗೆ ಪೀಡಿಸುತ್ತಿರುವುದು ಕೂಡ ಗೊತ್ತಾಗಿದ್ದು ಈ ನಿಟ್ಟಿನಲ್ಲಿ ಇಲಾಖೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ವರದಿ ಕೇಳಿದೆ. ಅದೇನೆ ಇರಲಿ ಮನ ಪರಿವರ್ತನೆ ಮಾಡಬೇಕಿದ್ದ ಜೈಲಿನಲ್ಲೇ ಇದೀಗ ಅಕ್ರಮ ಕೇಳಿ ಬಂದಿದ್ದು ಕೂಡಲೇ ಗೃಹ ಇಲಾಖೆ ಎಚ್ಚೆತ್ತುಕೊಂಡು ಕೆಲ ಅಧಿಕಾರಿಗಳನ್ನ ವರ್ಗಾವಣೆ ಮತ್ತು ತಪ್ಪಿತಸ್ಥರ ಮೇಲೆ ಕ್ರಮ ತೆಗೆದುಕೊಂಡ್ರೇ ಇದಕ್ಕೆ ಕಡಿವಾಣ ಹಾಕಬಹುದು.

ಬೆಳಗಾವಿ ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ