ಬೆಳಗಾವಿ: ಹಿಂದೂ ಶಬ್ದಕ್ಕೆ ಇರುವ ಅರ್ಥ ಸೋತವರು ಅಥವಾ ಗುಲಾಮರು ಎಂದು ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದರು. ವಿಕಿಪೀಡಿಯಾ ಮತ್ತು ಕೋರಾ (Quora) ಆನ್ಲೈನ್ ವೇದಿಕೆಗಳಲ್ಲಿರುವ ವಿವರಗಳ ಜೊತೆಗೆ ‘ಬಸವ ಭಾರತ’ ಪಾಕ್ಷಿಕ ಪತ್ರಿಕೆಯಲ್ಲಿ ಬಸವ ತತ್ವ ಪ್ರಚಾರಕ ಡಾ.ಜಿ.ಎಸ್.ಪಾಟೀಲ್ ಬರೆದ ಲೇಖನವನ್ನೂ ಮಾಧ್ಯಮ ಪ್ರತಿನಿಧಿಗಳಿಗೆ ನೀಡಿದರು. ‘ನನ್ನ ಹೇಳಿಕೆಯ ಬಗ್ಗೆ ಸರಿಯಾದ ರೀತಿಯಲ್ಲಿ ಚರ್ಚೆಯಾಗುತ್ತಿಲ್ಲ’ ಎಂದು ವಿಷಾದಿಸಿದರು. ‘ನೀವು ಹಿಂದೂ ಧರ್ಮಕ್ಕೆ ಸೇರಿದವರೇ’ ಎಂಬ ಪ್ರಶ್ನೆಗೆ ಉತ್ತರಿಸುವಾಗ, ‘ನಾನು ಭಾರತೀಯ’ ಎಂದು ಹೇಳಿದರು.
ತಮ್ಮ ಹೇಳಿಕೆಯ ಕುರಿತು ಮಾಧ್ಯಮಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ ಅವರು, ‘ಹಿಂದೂ ಎಂಬುದು ಪರ್ಷಿಯನ್ ಭಾಷೆಯಿಂದ ಬಂದ ಶಬ್ದ. ಹಿಂದೂ ಪದದ ಬಗ್ಗೆ ಶಬ್ದಕೋಶದಲ್ಲಿ, ವಿಕಿಪಿಡಿಯಾದಲ್ಲಿ ಇರುವ ವಿವರಣೆಯನ್ನೇ ನಾನು ಹೇಳಿದ್ದೇನೆ. ಹಿಂದೂ ಪದದ ಬಗ್ಗೆ ಚರ್ಚೆಯಾಗಬೇಕು. ನಾನು ಏನು ಹೇಳಿದ್ದೇನೆಯೋ ಅದರ ಬಗ್ಗೆ ಅಥವಾ ಹಿಂದೂ ಪದದ ನಿಜವಾದ ಅರ್ಥದ ಬಗ್ಗೆ ಚರ್ಚೆ ನಡೆಯುತ್ತಿಲ್ಲ. ಬೇರೆ ಯಾವ್ಯಾವುದೋ ವಿಷಯಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ನಾನು ತಪ್ಪು ಹೇಳಿದ್ದೇನೆಂದು ಸಾಬೀತುಪಡಿಸಿದರೆ ಕ್ಷಮೆಯಾಚಿಸುವುದಷ್ಟೇ ಅಲ್ಲ, ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ ಎಂದು ಸವಾಲು ಹಾಕಿದರು.
‘ಹಿಂದೂ ಎಂದರೆ ಹಾದಿಗಳ್ಳ’
ಸತೀಶ್ ಜಾರಕಿಹೊಳಿ ಬಿಡುಗಡೆ ಮಾಡಿರುವ ಕೋರಾ ಸ್ರೀನ್ಶಾಟ್ನಲ್ಲಿ ಇರುವ ವಿವರದ ಕನ್ನಡದ ಅನುವಾದ ಹೀಗಿದೆ. ‘(ಹಿಂದೂ ಎನ್ನುವುದು) ಪರ್ಷಿಯನ್ ಪದ. ಅದರ ಅರ್ಥ ಸೋತವರು ಅಥವಾ ಗುಲಾಮರು. 1964ರಲ್ಲಿ ಲಖನೌ ನಗರದಲ್ಲಿ ಪ್ರಕಟವಾಗಿರುವ ‘ಲುಘೆತ್-ಎ-ಕಿಶ್ವಾರಿ’ ಪರ್ಷಿಯನ್ ನಿಘಂಟಿನ ಪ್ರಕಾರ ಹಿಂದೂ ಎನ್ನುವ ಪದಕ್ಕೆ ಕಳ್ಳ, ಡಕಾಯಿತ, ಗುಲಾಮ, ಹಾದಿಗಳ್ಳ ಎಂಬ ಅರ್ಥಗಳಿವೆ’. ಈ ಸ್ಕ್ರೀನ್ಶಾಟ್ ಜೊತೆಗೆ ಅದರ ವಿವರವನ್ನೂ ಸತೀಶ್ ಜಾರಕಿಹೊಳಿ ತಮ್ಮ ಮಾಧ್ಯಮಗೋಷ್ಠಿಯಲ್ಲಿ ನೀಡಿದರು.
‘ಸಾಮಾಜಿಕ ಮಾಧ್ಯಮ’ ರೀತಿಯಲ್ಲಿ ಕಾರ್ಯನಿರ್ವಹಿಸುವ ಆದರೆ ‘ಸಂವಾದ ತಾಣ’ ಎಂದು ಕರೆಸಿಕೊಳ್ಳುವ ‘ಕೋರಾ’ ವೇದಿಕೆಯಲ್ಲಿರುವ ಪ್ರಶ್ನೋತ್ತರ ಸಂವಾದದ ಗೂಗಲ್ಸರ್ಚ್ ರಿಸಲ್ಟ್ನ ಸ್ಕ್ರೀನ್ಶಾಟ್ ಒಂದನ್ನು ದಾಖಲೆ ಎಂದು ಸತೀಶ್ ಜಾರಕಿಹೊಳಿ ಬಿಡುಗಡೆ ಮಾಡಿದ್ದಾರೆ. ಆದರೆ ಕೋರಾ ತಾಣದಲ್ಲಿ ಯಾರು ಬೇಕಾದರೂ ಯಾವ ಪ್ರಶ್ನೆಯನ್ನು ಬೇಕಾದರೂ ಕೇಳಲು ಹಾಗೂ ಉತ್ತರಿಸಲು ಅವಕಾಶವಿದೆ. ಈ ಸಂವಾದವನ್ನು ಅಧಿಕೃತ ದಾಖಲೆ ಎಂದು ಒಪ್ಪಿಕೊಳ್ಳಲು ಆಗುವುದಿಲ್ಲ.
‘ಹಿಂದೂಗಳ ನಿಷ್ಠೆ ಇಂದಿಗೂ ಮಧ್ಯಪ್ರಾಚ್ಯಕ್ಕೆ’
ಸತೀಶ್ ಜಾರಕಿಹೊಳಿ ಅವರು ‘ಬಸವ ಭಾರತ’ ಪಾಕ್ಷಿತ ಪತ್ರಿಕೆಯಲ್ಲಿ ಪ್ರಕಟವಾಗಿರುವ ‘ಹಿಂದೂ ಎಂದರೆ ನಿಜವಾಗಿಯೂ ಯಾರು?’ ಎಂಬ ಲೇಖನದ ಜೆರಾಕ್ಸ್ ಪ್ರತಿಗಳನ್ನು ಮಾಧ್ಯಮಗೋಷ್ಠಿಯಲ್ಲಿ ವಿತರಿಸಿದರು. ಆದರೆ ಈ ಪ್ರತಿಗಳಲ್ಲಿ ಎಲ್ಲಿಯೂ ಅದು ನಿರ್ದಿಷ್ಟವಾಗಿ ಇಂಥದ್ದ ಪತ್ರಿಕೆಯ ಪುಟ ಎಂಬ ಉಲ್ಲೇಖ ಇಲ್ಲ. ವಿಜಯಪುರದ ಡಾ ಜೆ.ಎಸ್.ಪಾಟೀಲ ಅವರ ಬರಹ ಈ ಪುಟದಲ್ಲಿದೆ. ಈ ಲೇಖನದಲ್ಲಿ ಪ್ರಸ್ತಾಪವಾಗಿರುವ ಮುಖ್ಯ ಅಂಶಗಳು ಇವು.
ಈ ಲೇಖನದಲ್ಲಿ ಜೆ.ಎಸ್.ಪಾಟೀಲ ಅವರು ಹಲವು ಇತರರ ಬರಹಗಳನ್ನು ಉಲ್ಲೇಖಿಸಿದ್ದಾರೆ. ತಮ್ಮ ಲೇಖನವನ್ನು ಮೂಲ ಸಂಶೋಧನೆಯಾಗಿ ಪ್ರಸ್ತುತಪಡಿಸಿಲ್ಲ. ಈ ಅಂಶವನ್ನು ಸತೀಶ್ ಜಾರಕಿಹೊಳಿ ಅವರು ಗಮನಕ್ಕೆ ತೆಗೆದುಕೊಂಡಂತೆ ಇಲ್ಲ.
Published On - 3:31 pm, Tue, 8 November 22