ಬೆಳಗಾವಿ, ಅಕ್ಟೋಬರ್ 09: ಕರ್ನಾಟಕ ರಾಜ್ಯೋತ್ಸವ ದಿನ (ನವೆಂಬರ್ 1) ಕರಾಳ ದಿನ ಆಚರಿಸಲು ಅನುಮತಿ ಕೋರಿ ಮಹರಾಷ್ಟ್ರ ಏಕೀಕರಣ ಸಮಿತಿ (MES) ಮುಖಂಡರಿಗೆ ಅನುಮತಿ ನೀಡುವುದಿಲ್ಲ ಎಂದು ಬೆಳಗಾವಿ (Belagavi) ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದ್ದಾರೆ.
ರಾಜ್ಯೋತ್ಸವ ಹಿನ್ನೆಲೆ ಕನ್ನಡ ಪರ ಸಂಘಟನೆಗಳ ಜತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಂಗಳವಾರ ಪೂರ್ವಭಾವಿ ಸಭೆ ನಡೆಸಿದರು. ಸಭೆಯಲ್ಲಿ ಎಂಇಎಸ್ ಪುಂಡರು ಕರಾಳ ದಿನ ಆಚರಿಸುವ ವಿಚಾರವೂ ಪ್ರಸ್ತಾಪವಾಯಿತು. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಬೆಳಗಾವಿಯಲ್ಲಿ ಕರಾಳ ದಿನ ಆಚರಣೆಗೆ ಅವಕಾಶ ಕೊಡುವುದಿಲ್ಲ. ಕರಾಳ ದಿನ ಆಚರಣೆಗೆ ಮುಂದಾದರೆ ಪೊಲೀಸರು ಪ್ರಕರಣ ದಾಖಲಿಸುತ್ತಾರೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ: ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ “ಕೈ”ಗೆ ಎಂಇಎಸ್ ಸಾಥ್; ಬಿಜೆಪಿ ಕಾರ್ಪೊರೇಟರ್ಗೆ ಜೀವ ಬೆದರಿಕೆ
ಬೆಳಗಾವಿ ಜಿಲ್ಲಾಡಳಿತದ ದಿಟ್ಟತನಕ್ಕೆ ಕನ್ನಡ ಹೋರಾಟಗಾರರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಈ ಬಾರಿ ದೀಪಾವಳಿ ಹಬ್ಬ ಮತ್ತು ಕನ್ನಡ ರಾಜ್ಯೋತ್ಸವ ಒಟ್ಟಿಗೆ ಬಂದಿದ್ದರಿಂದ ಅದ್ಧೂರಿಯಾಗಿ ರಾಜ್ಯೋತ್ಸವ ಆಚರಿಸಲು ತೀರ್ಮಾನ ಕೈಗೊಳ್ಳಲಾಗಿದೆ.
1956ರಲ್ಲಿ ರಾಜ್ಯಗಳ ಪುನರ್ ವಿಂಗಡಣೆ ಆದ ಬಳಿಕ ರಾಜ್ಯದ ಮರಾಠಿ ಭಾಷಿಕ ಪ್ರದೇಶಗಳನ್ನು ಮಹಾರಾಷ್ಟ್ರದೊಂದಿಗೆ ವಿಲೀನಗೊಳಿಸಬೇಕೆಂದು ಒತ್ತಾಯಿಸಲು ಎಂಇಎಸ್ ಹುಟ್ಟಿಕೊಂಡಿತು. ಕರ್ನಾಟಕ ರಾಜ್ಯ ಉದಯವಾದ ದಿನದಂದೇ ಕರಾಳ ದಿನ ಆಚರಿಸುತ್ತ ಬರಲಾಗಿದೆ. ದಶಕಗಳ ಹಿಂದೆ ಬೃಹತ್ ಪ್ರಮಾಣದ ರ್ಯಾಲಿ ನಡೆಯುತ್ತಿತ್ತು. ಆದರೆ, ಈಗ ಒಂದು ಜಾಗಕ್ಕೆ ಮಾತ್ರ ಸೀಮಿತಗೊಂಡು ಆಚರಿಸುತ್ತ ಬಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:18 am, Wed, 9 October 24