PM Narendra Modi: ಫೆ. 27ರ ಬೆಳಗಾವಿ ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿದೆ ಹಲವು ವಿಶೇಷತೆಗಳು, ಇಲ್ಲಿದೆ ವಿವರ

|

Updated on: Feb 26, 2023 | 3:40 PM

ನಾಳೆ (ಫೆಬ್ರುವರಿ 27)ರಂದು ಬೆಳಗಾವಿ ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದು, ನಗರದ ಯಡಿಯೂರಪ್ಪ ಮಾರ್ಗದ ಮಾಲಿನಿ ಸಿಟಿಯಲ್ಲಿ ಬೃಹತ್ ವೇದಿಕೆ ಸಿದ್ದವಾಗಿದೆ. ವೇದಿಕೆ ಮುಂಭಾಗದಲ್ಲಿ ಸಿರಿಧಾನ್ಯಗಳಿಂದ ಸಿಂಗಾರ ಮಾಡಲಾಗಿದೆ. ಹಾಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಸ್ವಾಗತಿಸಲು ಸಾಮಾನ್ಯ ನಾಗರಿಕರಿಗೆ ಅವಕಾಶ ನೀಡಲಾಗಿದೆ.

ಬೆಳಗಾವಿ: ನಾಳೆ (ಫೆಬ್ರುವರಿ 27)ರಂದು ಬೆಳಗಾವಿ (Belagavi) ನಗರಕ್ಕೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಭೇಟಿ ನೀಡಲಿದ್ದು, ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಈ ಹಿನ್ನೆಲೆ ಬಿ.ಎಸ್ ಯಡಿಯೂರಪ್ಪ ಮಾರ್ಗದ ಮಾಲಿನಿ ಸಿಟಿಯಲ್ಲಿ ಬೃಹತ್ ವೇದಿಕೆ ಸಿದ್ದವಾಗಿದೆ. ವಿಶೇಷವೆಂದರೆ ಕೃಷಿ ಇಲಾಖೆ ವೇದಿಕೆಯ ಮುಂಭಾಗವನ್ನು ಸಿರಿಧಾನ್ಯಗಳಿಂದ (Millet) ಸಿಂಗಾರ ಮಾಡಲಾಗಿದೆ. ಹಾಗೇ ಪಿಎಂ ಕಿಸಾನ್, ಜಿ 20, ಅಂತರಾಷ್ಟ್ರೀಯ ಮಟ್ಟದ ಮಿಲೇಟ್ಸ್ ವರ್ಷದ ಚಿತ್ರಣ, ಸಿರಿ ಧಾನ್ಯದಲ್ಲಿ ಮೂರು ಲೋಗೋಗಳನ್ನು ಬಿಡಿಸಲಾಗಿದೆ. ಇನ್ನು ಪ್ರಧಾನಿ ಮೋದಿಯವರು ಕರ್ನಾಟಕದ ಸಿರಿಧಾನ್ಯಗಳ ಬಗ್ಗೆ ಆಗಾಗ ಮೆಲಕು ಹಾಕುತ್ತಿರುತ್ತಾರೆ. ನಿನ್ನೆ (ಫೆ.26) ನವದೆಹಲಿಯಲ್ಲಿ ನಡೆದ ಬಾರಿಸು ಕನ್ನಡ ಡಿಂಡಿವ ಕಾರ್ಯಕ್ರಮದಲ್ಲೂ ರಾಜ್ಯದ ಸಿರಿಧಾನ್ಯದ ಬಗ್ಗೆ ಪ್ರಸ್ತಾಪಿಸಿದ್ದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ವಾಗತಿಸಲು ಸಾಮಾನ್ಯ ನಾಗರಿಕರಿಗೆ ಅವಕಾಶ

ನಾಳೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶಿವಮೊಗ್ಗದಿಂದ ಹೊರಟು, ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಇಳಿಯಲಿದ್ದಾರೆ. ವಿಮಾನ ನಿಲ್ದಾಣದಲ್ಲಿ ಸಾಮಾನ್ಯ ನಾಗರಿಕರು ಮೋದಿಯವರನ್ನು ಸ್ವಾಗತಿಸಲಿದ್ದಾರೆ. ನೇಕಾರ ಕಲ್ಲಪ್ಪ ಟೋಪಗಿ, ಪೌರ ಕಾರ್ಮಿಕ ಮಹಿಳೆ ಮೀನಾಕ್ಷಿ, ರೈತ ಕಾರ್ಮಿಕ ಮಹಿಳೆ ಶೀಲಾ ಖನ್ನುಕರ್, ಆಟೋ ಚಾಲಕ ಮಯೂರ ಚೌಹಾಣ್, ಕಟ್ಟಡ ಕಾರ್ಮಿಕ ಮಂಗೇಶ್ ಮೋದಿಯವರನ್ನು ಬರಮಾಡಿಕೊಳ್ಳಲಿದ್ದಾರೆ. ಇವರು ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ್ ನೇತೃತ್ವದಲ್ಲಿ ಆಯ್ಕೆಯಾಗಿದ್ದು, ಈಗಾಗಲೇ ಅಧಿಕಾರಿಗಳು ಐವರಿಗೆ ಕೊವಿಡ್ ಟೆಸ್ಟ್ ಮಾಡಿದ್ದಾರೆ.

ಬೆಳಗಾವಿಯ ಯಡಿಯೂರಪ್ಪ ರಸ್ತೆ ಬಳಿ ಬೃಹತ್ ಪೆಂಡಾಲ್​​

ಬೆಳಗಾವಿಯ ಯಡಿಯೂರಪ್ಪ ರಸ್ತೆ ಬಳಿ ಬೃಹತ್ ಪೆಂಡಾಲ್ ಹಾಕಿದ್ದು, ವೇದಿಕೆ ಸಿದ್ದವಾಗಿದೆ. ಸುಮಾರು 2 ಲಕ್ಷ ಜನರಿಗೆ ಆಸನದ ವ್ಯವಸ್ಥೆ ಮಾಡಿದ್ದಾರೆ. ವೇದಿಕೆ ಕಾರ್ಯಕ್ರಮಕ್ಕೆ 15 ಎಲ್‌ಇಡಿ ಸ್ಕ್ರೀನ್​ಗಳನ್ನ ಅಳವಡಿಸಲಾಗಿದೆ. 50 ಎಕರೆ ಪ್ರದೇಶದಲ್ಲಿ 3 ಕಡೆ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದು, ಸಮಾವೇಶಕ್ಕೆ ಬರುವ ಜನರಿಗೆ 1,500ಕ್ಕೂ ಹೆಚ್ಚು ಬಸ್​​ಗಳ​​ ವ್ಯವಸ್ಥೆ ಮಾಡಲಾಗಿದೆ.

ಬೆಳಗಾವಿಯಲ್ಲಿ ಪ್ರಧಾನಿ ಮೋದಿ ರೋಡ್​ ಶೋ: ವಿಶೇಷತೆ

ಬೆಳಗಾವಿಯಲ್ಲಿ ಪ್ರಧಾನಿ ಮೋದಿ 10.7 ಕಿಮೀ ರೋಡ್​ ಶೋ ನಡೆಸಲಿದ್ದಾರೆ. ಈ ಸಂಬಂಧ ಭರ್ಜರಿ ತಯಾರಿಯಾಗಿದ್ದು, ರಸ್ತೆ ಉದ್ದಕ್ಕೂ ಕೇಸರಿ ಬಾವುಟಗಳು ರಾರಾಜಿಸುತ್ತಿವೆ. 2 ಲಕ್ಷ ಜ‌ನ ರೋಡ್ ಶೋ ದಲ್ಲಿ ಭಾಗಿಯಾಗಲಿದ್ದಾರೆ. ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ಪ್ರಧಾನಿ ನೀಡಿದ ಕೊಡುಗೆಗಳ ಕ್ಯಾನ್ವಸ್ ನಡೆಯಲಿದೆ. ಆಯಾ ರಾಜ್ಯದ ಜನರಿಂದಲೇ ಆ ರಾಜ್ಯದ ವೇಷಭೂಷಣ, ಸಂಸ್ಕೃತಿ ಅನಾವರಣವಾಗಲಿದೆ. ಮಹಾನ್ ಪುರುಷರ ಲೈವ್ ಪ್ರದರ್ಶನ ನಡಯುತ್ತದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆದ ಕಾರ್ಯ, ಬಿಜೆಪಿ ಸರ್ಕಾರ ಬಂದ ಮೇಲೆ ಆದ ಬದಲಾವಣೆ ಕುರಿತು ಲೈವ್ ಶೋ ನಡೆಯಲಿದೆ. 10 ಸಾವಿರ ಹೆಣ್ಣು ಮಕ್ಕಳು ತಲೆ ಮೇಲೆ ಕುಂಭ ಹೊತ್ತು ನಿಲ್ಲಲಿದ್ದಾರೆ. 90 ಕಡೆಗಳಲ್ಲಿ ಕೇಂದ್ರ ಸರ್ಕಾರ ಯೋಜನೆಗಳ ಬಗ್ಗೆ ಲೈವ್ ಪ್ರದರ್ಶನ ನಡೆಯಲಿದೆ ಎಂದು ಶಾಸಕ ಅಭಯ್ ಪಾಟೀಲ್ ಹೇಳಿದ್ದಾರೆ.

ರೋಡ್​ ಶೋ ಮಾರ್ಗ

ಮಧ್ಯಾಹ್ನ 2.45ಕ್ಕೆ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಧಾನಿ ಮೋದಿ ಹೆಲಿಕಾಪ್ಟರ್ ಮೂಲಕ ನಗರದ ಕೆಎಸ್‌ಆರ್‌ಪಿ ಮೈದಾನಕ್ಕೆ ಬರುತ್ತಾರೆ. ಅಲ್ಲಿಂದ ವೈ ಜಂಕ್ಷನ್ ಮಾರ್ಗವಾಗಿ ಚನ್ನಮ್ಮ ವೃತ್ತಕ್ಕೆ ತೆರಳಲಿದ್ದಾರೆ. ಚನ್ನಮ್ಮ ವೃತ್ತದಿಂದ ಭರ್ಜರಿ 10.7 ಕಿಮೀ ರೋಡ್ ಶೋ ನಡೆಯಲಿದೆ. ಕಾಲೇಜು ಮಾರ್ಗವಾಗಿ ಸಂಭಾಜಿ ವೃತ್ತ, ಕಿರ್ಲೋಸ್ಕರ್ ರಸ್ತೆ, ಶನಿ ಮಂದಿರ, ಕಪಿಲೇಶ್ವರ ದೇವಸ್ಥಾನ ರಸ್ತೆ, ಶಿವಾಜಿ ಗಾರ್ಡನ್, ಓಲ್ಡ್ ಪಿಬಿ ರೋಡ್, ಯಡಿಯೂರಪ್ಪ ಮಾರ್ಗವಾಗಿ ರೋಡ್ ಶೋ ಮಾಲಿನಿ ಸಿಟಿ ತಲುಪಲಿದೆ.

ಬೆಳಗಾವಿಯ ಹಲವು ಕಡೆ ಮಾರ್ಗ ಬದಲಾವಣೆ

ಪೊಲೀಸ್ ಇಲಾಖೆ, ನಗರದ ಸಂಚಾರದಲ್ಲಿ ಹಲವು ಬದಲಾವಣೆ ಮಾಡಿದ್ದಾರೆ. ನಿಪ್ಪಾಣಿಯಿಂದ ಖಾನಾಪುರ ಹಾಗೂ ಗೋವಾಕ್ಕೆ ತೆರಳುವ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಬಾಕ್ಸೈಟ್ ರಸ್ತೆ, ಹಿಂಡಲಗಾ ಗಣಪತಿ ದೇವಸ್ಥಾನ, ಶೌರ್ಯ ಸರ್ಕಲ್ ಮೂಲಕ ಕಾಂಗ್ರೆಸ್ ರಸ್ತೆಗೆ ಮಾರ್ಗ ಬದಲಾವಣೆ ಮಾಡಲಾಗಿದೆ. ಶಹಾಪುರ ಕಡೆಯಿಂದ ಬರುವ ವಾಹನಗಳು ಇದೇ ಮಾರ್ಗವಾಗಿ ನಿಪ್ಪಾಣಿ ಕಡೆಗೆ ತೆರಳಬೇಕು.

ಈ ರಸ್ತೆಗಳಲ್ಲಿ ಸಂಚಾರ ನಿಷೇಧ

ಸಂಚಾರಿ ಪೊಲೀಸರು ನಗರದ ಹಲವು ಮಾರ್ಗದಲ್ಲಿ ಸಂಚಾರಕ್ಕೆ ನಿಷೇಧ ವಿಧಿಸಿದ್ದಾರೆ. ಸೋಮವಾರ ಬೆಳಗ್ಗೆ 8ರಿಂದ ಸಂಜೆ 8 ಗಂಟೆಯ ವರೆಗೆ ಈ ಆದೇಶ ಜಾರಿಯಲ್ಲಿರಲಿದೆ. ಕಾಲೇಜು ರಸ್ತೆ, ಧರ್ಮವೀರ ಸಂಭಾಜಿ ವೃತ್ತ, ಶನಿ ಮಂದಿರ, ಎಸ್‌ಬಿಎಂ ರಸ್ತೆ, ಓಲ್ಡ್ ಪಿಬಿ ರೋಡ್, ಯಡಿಯೂರಪ್ಪ ಮಾರ್ಗದಲ್ಲಿ ಸಂಚಾರ ನಿಷೇಧಿಸಲಾಗಿದೆ.

ಮೋದಿ ಕಾರ್ಯಕ್ರಮಕ್ಕೆ ಈ ಮೂರು ವಸ್ತುಗಳನ್ನು ತರುವಂತಿಲ್ಲ

ಪ್ರಧಾನಿಗಳ ಕಾರ್ಯಕ್ರಮಕ್ಕೆ ಮೂರು ವಸ್ತುಗಳ ತರೋದು ನಿಷಿದ್ಧ. ಭದ್ರತೆಯ ದೃಷ್ಟಿಯಿಂದ ಕೈಚೀಲ, ನೀರಿನ ಬಾಟಲಿ, ಎಲೆಕ್ಟ್ರಾನಿಕ್ ವಸ್ತುಗಳನ್ನು ಪ್ರಧಾನಿ ಕಾರ್ಯಕ್ರಮಕ್ಕೆ ತರುವಂತಿಲ್ಲ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಮಹತ್ವದ ಆದೇಶ ಹೊರಡಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 3:40 pm, Sun, 26 February 23