ಹಿಂಡಲಗಾ ಜೈಲಿನಲ್ಲಿ ಅಕ್ರಮ: ಕಾರಾಗೃಹಕ್ಕೆ ಭೇಟಿ ನೀಡಿದ ಗೃಹ ಸಚಿವ ಪರಮೇಶ್ವರ್

| Updated By: Rakesh Nayak Manchi

Updated on: Nov 20, 2023 | 7:41 PM

ಬೆಳಗಾವಿಯ ಹಿಂಡಲಗಾ ಕಾರಾಗೃಹದಲ್ಲಿ ನಡೆಯುತ್ತಿದ್ದ ಅಕ್ರಮಗಳ ಬಗ್ಗೆ ಟಿವಿ9 ವರದಿ ಮಾಡಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಜೈಲಿಗೆ ಭೇಟಿನೀಡಿ ಪರಿಶೀಲನೆ ನಡೆಸಿದರು. ಜೈಲಿನ ಅಡುಗೆ ಮನೆಗೂ ಭೇಟಿ, ಮಹಿಳಾ ಕೈದಿಗಳ ವಾರ್ಡ್‌ಗೂ ಭೇಟಿ ನೀಡಿದರು. ಹೊರಗಿನಿಂದ ಮೊಬೈಲ್‌ ಹೇಗೆ ಬರುತ್ತಿವೆ ಅಂತಾ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಹಿಂಡಲಗಾ ಜೈಲಿನಲ್ಲಿ ಅಕ್ರಮ: ಕಾರಾಗೃಹಕ್ಕೆ ಭೇಟಿ ನೀಡಿದ ಗೃಹ ಸಚಿವ ಪರಮೇಶ್ವರ್
ಹಿಂಡಲಗಾ ಜೈಲಿಗೆ ಗೃಹ ಸಚಿವ ಪರಮೇಶ್ವರ ಭೇಟಿ
Follow us on

ಬೆಳಗಾವಿ, ನ.20: ಹಿಂಡಲಗಾ ಕಾರಾಗೃಹದಲ್ಲಿ (Hindalga Prison) ನಡೆಯುತ್ತಿದ್ದ ಅಕ್ರಮಗಳ ಬಗ್ಗೆ ಟಿವಿ9 ವರದಿ ಪ್ರಸಾರ ಮಾಡಿದ ಬೆನ್ನಲ್ಲೇ ಜೈಲಿಗೆ ಭೇಟಿ ನೀಡಿದ ಗೃಹ ಸಚಿವ ಡಾ.ಪರಮೇಶ್ವರ್ ಅವರು ಪರಿಶೀಲನೆ ನಡೆಸಿದರು. ಇದೇ ವೇಳೆ, ಹೊರಗಿನಿಂದ ಜೈಲಿನೊಳಗೆ ಮೊಬೈಲ್ ಹೇಗೆ ಬರುತ್ತಿದೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗದುಕೊಂಡರು.

ಕೈದಿಗಳ ಸೆಲ್‌ಗೆ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆದ ಗೃಹ ಸಚಿವರು, ಜೈಲಿನ ಅಡುಗೆ ಮನೆಗೂ ಭೇಟಿ, ಮಹಿಳಾ ಕೈದಿಗಳ ವಾರ್ಡ್‌ಗೂ ಭೇಟಿ ನೀಡಿದರು. ಇದೇ ವೇಳೆ ಕೈದಿಗಳ ನಡುವೆ ಗಲಾಟೆ ಆಗದಂತೆ, ಮೊಬೈಲ್ ಬಳಸದಂತೆ ನೋಡಿಕೊಳ್ಳುವಂತೆ ಜೈಲು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಸುಮಾರು ಒಂದು ಗಂಟೆಗಳ ಕಾಲ ಗೃಹ ಸಚಿವರು ಜೈಲು ಪರಿಶೀಲನೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಹಿಂಡಲಗಾ ಜೈಲಿಗೆ ಬೇಕಾದ ಸೌಲಭ್ಯ ನೀಡಲಾಗುವುದು. ಅಂದಿನ ಸಂದರ್ಭಕ್ಕೆ ತಕ್ಕಂತೆ ಬ್ರಿಟಿಷರು ಜೈಲು ಮಾಡಿಕೊಂಡಿದ್ದರು. ಬೆಳಗಾವಿಯ ಹಿಂಡಲಗಾ ಜೈಲನ್ನು ಆಧುನೀಕರಣ ಮಾಡಬೇಕಿದೆ ಎಂದರು.

ಇದನ್ನೂ ಓದಿ: ಕೆಇಎ ಸಂಸ್ಥೆಯಿಂದ ಪಿಎಸ್​ಐ ಪರೀಕ್ಷೆ ನಡೆಸಲು ನಿರ್ಧಾರ: ಗೃಹ ಸಚಿವ ಡಾ ಜಿ ಪರಮೇಶ್ವರ್

ಬ್ಯಾರೆಕ್ಸ್​ ಕ್ಯಾಮರಾ, ಜಾಮರ್​ ಬದಲಾವಣೆಗೆ ಪ್ರಸ್ತಾವನೆಗೆ ಸೂಚನೆ ನೀಡಲಾಗುವುದು. ಶೀಘ್ರದಲ್ಲೇ ಆಧುನೀಕತೆಗೆ ಅನುಗುಣವಾಗಿ ಸೌಲಭ್ಯ ನೀಡಲಾಗುವುದು. 10-20 ವರ್ಷದ ಹಿಂದೆ ಹಾಕಿರುವ ಜಾಮರ್ ಬದಲಾವಣೆ ಮಾಡುತ್ತೇವೆ. 5G ಜಾಮರ್ ಅಳವಡಿಸಲು ಸೂಚನೆ ನೀಡಿದ್ದೇವೆ ಎಂದರು.

ಈ ಹಿಂದೆ ಇದೇ ಜೈಲಿನಿಂದ ಕೈದಿಯೊಬ್ಬ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದನು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪರಮೇಶ್ವರ, ಈ ರೀತಿ ಮುಂದೆ ಆಗದಂತೆ ಕ್ರಮ ವಹಿಸಲಾಗುವುದು. ಇದು ರಾಜ್ಯದಲ್ಲೇ ಹೈ ಸೆಕ್ಯುರಿಟಿ ಇರುವ ಜೈಲು. ಅದಕ್ಕೆ ಜೈಲಿಗೆ ಬೇಕಾದ ಸೌಲಭ್ಯ ಕೊಡಲಾಗುವುದು ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ