ಬೆಳಗಾವಿ: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕಾಟಿಪಳ್ಳದಲ್ಲಿ ಅಬ್ದುಲ್ ಜಲೀಲ್ ಕೊಲೆ ಪ್ರಕರಣ (Jaleel Murder Case) ಸಂಬಂಧ ವಿಧಾನಸಭೆಯಲ್ಲಿ ವಿಪಕ್ಷ ನಾಯಕರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಶೂನ್ಯ ವೇಳೆಯಲ್ಲಿ ಪ್ರಕರಣವನ್ನು ಪ್ರಸ್ತಾಪ ಮಾಡಿದ ವಿಪಕ್ಷ ಉಪನಾಯಕ ಯು.ಟಿ.ಖಾದರ್ (U.T.Khadar), ಅಬ್ದುಲ್ ಜಲೀಲ್ನನ್ನು ಕೋಮುವಾದಿ ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ. ಅನೈತಿಕ ಗೂಂಡಾಗಿರಿಗೆ ಕೂಡಲೇ ಸರ್ಕಾರ ಕಡಿವಾಣ ಹಾಕಬೇಕು. ದುಷ್ಕರ್ಮಿಗಳ ಕೈಯಲ್ಲಿ ಸಮಾಜ ಕೊಟ್ಟು ಸುಮ್ಮನಿರುವುದು ಸರಿಯಲ್ಲ. ಸರ್ಕಾರ ಪರಿಹಾರ ಕೊಡಲ್ಲ, ಇನ್ನೊಂದು ಕಡೆ ಯುಎಪಿಎ ಹಾಕಲ್ಲ. ಈ ರೀತಿ ಸರ್ಕಾರದ ತಾರತಮ್ಯ ಸರಿಯಲ್ಲ ಎಂದು ಟೀಕಿಸಿದರು.
ಈ ವೇಳೆ ಎದ್ದುನಿಂತ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah), ದಕ್ಷಿಣ ಕನ್ನಡದಲ್ಲಿ ಅನೇಕ ಕಡೆ ನೈತಿಕ ಪೊಲೀಸ್ ಗಿರಿ ನಡೆಯುತ್ತಿದೆ. ಬಜರಂಗದಳದವರು ಮಾಡುತ್ತಿದ್ದಾರೆ. ಎರಡು ಬಾರಿ ಮುಖ್ಯಮಂತ್ರಿಯವರು ಮಂಗಳೂರಿಗೆ ಹೋದಾಗಲೇ ಇಂತಹ ಕೊಲೆ ಆಗಿದೆ. ಆಕ್ಷನ್ಗೆ ರಿಯಾಕ್ಷನ್ ಅಂತಾ ಮುಖ್ಯಮಂತ್ರಿಯವರು ಪ್ರಚೋದನೆ ರೀತಿ ಹೇಳುತ್ತಾರೆ. ಮುಸಲ್ಮಾನರು ಕೊಲೆಯಾದರೆ ಸರ್ಕಾರದ ದುಡ್ಡು ಯಾಕೆ ಕೊಡಲ್ಲ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಮಂಗಳೂರು: ಜಲೀಲ್ ಹತ್ಯೆ ಪ್ರಕರಣ: ಸುರತ್ಕಲ್ನಲ್ಲಿ 144 ಸೆಕ್ಷನ್ ಜಾರಿ
ಜಲೀಲ್ ಪ್ರಕರಣದಲ್ಲಿ ಕೂಡಾ ಯುಎಪಿಎ ಹಾಕಿ ಕ್ರಮ ತೆಗೆದುಕೊಳ್ಳಿ ಎಂದು ಸರ್ಕಾರವನ್ನು ಒತ್ತಾಯಿಸಿದ ಸಿದ್ದರಾಮಯ್ಯ, ಕರಾವಳಿ ಪ್ರದೇಶದಲ್ಲಿ ಇಂತಹ ಘಟನೆಗಳು ಹೆಚ್ಚಾಗುತ್ತಿವೆ. ನೈತಿಕ ಪೊಲೀಸ್ ಗಿರಿ ಮಾಡುವವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಜಲೀಲ್ ಕುಟುಂಬಕ್ಕೆ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.
ಜಲೀಲ್ ಕುಟುಂಬಸ್ಥರಿಗೆ ಪರಿಹಾರ ನೀಡುವಂತೆ ಯು.ಟಿ.ಖಾದರ್ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಸಚಿವ ಜೆ.ಸಿ.ಮಾಧುಸ್ವಾಮಿ, ಎಲ್ಲಾ ಪ್ರಕರಣಗಳಿಗೂ ಪರಿಹಾರ ಕೊಡಲು ಆಗುವುದಿಲ್ಲ. ನೈತಿಕ ಪೊಲೀಸ್ಗಿರಿ ನಡೆಯುವುದಕ್ಕೆ ಅವಕಾಶ ಕೊಡಲ್ಲ. ನಾವು ಯಾರಿಗೂ ಫ್ರೀ ಹ್ಯಾಂಡ್ ಕೊಟ್ಟಿಲ್ಲ ಎಂದರು. ಅಲ್ಲದೆ, ಈ ಪ್ರಕರಣ ಕುರಿತು ಗೃಹ ಸಚಿವರ ಗಮನಕ್ಕೆ ತರಲಾಗುವುದು ಎಂದರು.
ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುವ ಅಶ್ಲೀಲ, ಅರೆನಗ್ನ ಚಿತ್ರಗಳು: ವಿಧಾನ ಪರಿಷತ್ನಲ್ಲಿ ಗಂಭೀರ ಚರ್ಚೆ
ವಿಧಾನ ಪರಿಷತ್ನಲ್ಲಿಯೂ ಮಂಗಳೂರಿನ ಜಲೀಲ್ ಹತ್ಯೆ ಪ್ರಕರಣ ಸದ್ದು ಮಾಡಿದೆ. ಜಲೀಲ್ ಹತ್ಯೆ ಪ್ರಕರಣ ಕುರಿತು ಚರ್ಚೆಗೆ ವಿಪಕ್ಷ ಕಾಂಗ್ರೆಸ್ ಒತ್ತಾಯ ಮಾಡಿತು. ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಅವರು ನಿಯಮ 59 ಅಡಿ ಚರ್ಚೆಗೆ ಅವಕಾಶ ಕೊಡುವಂತೆ ಒತ್ತಾಯಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:38 pm, Mon, 26 December 22