ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುವ ಅಶ್ಲೀಲ, ಅರೆನಗ್ನ ಚಿತ್ರಗಳು: ವಿಧಾನ ಪರಿಷತ್​ನಲ್ಲಿ ಗಂಭೀರ ಚರ್ಚೆ

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಪರಿಷತ್ ಮತ್ತು ವಿಧಾನಸಭೆ ಕಲಾಪ ನಡೆಯುತ್ತಿದೆ. ಈವರೆಗೆ ನಡೆದ ಕಲಾಪದ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುವ ಅಶ್ಲೀಲ, ಅರೆನಗ್ನ ಚಿತ್ರಗಳು: ವಿಧಾನ ಪರಿಷತ್​ನಲ್ಲಿ ಗಂಭೀರ ಚರ್ಚೆ
ಬೆಳಗಾವಿ ಚಳಿಗಾಲದ ಅಧಿವೇಶನ
Follow us
TV9 Web
| Updated By: Rakesh Nayak Manchi

Updated on:Dec 26, 2022 | 1:37 PM

ಬೆಳಗಾವಿ: ಸುವರ್ಣ ವಿಧಾನಸೌಧ (Belagavi Suvarna Vidhana Soudha)ದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶ (Belagavi Winter Session)ನದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುವ ಅಶ್ಲೀಲ ಚಿತ್ರಗಳ ಬಗ್ಗೆ ಗಂಭೀರ ಚರ್ಚೆ ನಡೆಯಿತು. ಪರಿಷತ್ ಪ್ರಶ್ನೋತ್ತರ ಕಲಾಪದ ವೇಳೆ ಪ್ರಶ್ನಿಸಿದ ಕಾಂಗ್ರೆಸ್ ಸದಸ್ಯ ಪಿ.ಆರ್.ರಮೇಶ್ (P.R.Ramesh), ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ, ಅರೆನಗ್ನ, ನಗ್ನ ಚಿತ್ರ ಪ್ರಸಾರಗಳು ಆಗುತ್ತಿವೆ. ರಾತ್ರಿ ಎರಡು ಗಂಟೆವರೆಗೂ ಹಳ್ಳಿ ಹಳ್ಳಿಗಳಲ್ಲಿ ಇಂಥ ದೃಶ್ಯಗಳನ್ನು ನೋಡುತ್ತ ಕಾಲ ಕಳೆಯುತ್ತಿದ್ದಾರೆ. ಇದೊಂದು ಪಿಡುಗಾಗಿ ಪರಿಣಮಿಸುತ್ತಿದೆ. ಹಿಂದೂ ಸಂಸ್ಕೃತಿ ನಾಶ ಆಗುವ ರೀತಿ ಅಶ್ಲೀಲ ದೃಶ್ಯಗಳನ್ನು ಟೂಲ್ ಆಗಿ ಬಳಸುತ್ತಿದ್ದಾರೆ. ಕೆಲವು ರಾಜಕಾರಣಿಗಳು ಇಂಥ ಅಶ್ಲೀಲತೆಯನ್ನೇ ಟೂಲ್ ಆಗಿ ಬಳಸುತ್ತಿದ್ದಾರೆ. ಸಣ್ಣ ಸಣ್ಣ ಮಕ್ಕಳು ಕಾಮಪ್ರಚೋದನೆಗೆ ಒಳಗಾಗುತ್ತಿದ್ದಾರೆ ಎಂದರು.

ಪಿ.ಆರ್.ರಮೇಶ್ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra), ಎಳೆವಯಸ್ಸಿನ ಮಕ್ಕಳು ಬಲಿಯಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಪ್ರತಿ ಜಿಲ್ಲೆಯಲ್ಲಿ ಸೈಬರ್ ಕ್ರೈಂ ಸ್ಟೇಷನ್ ತರೆದಿದ್ದೇವೆ. 528 ಎಫ್ಐಆರ್ ದಾಖಲಿಸಲಾಗಿದೆ. ತಜ್ಞರ ತಂಡವನ್ನು ಸಿಓಡಿಯಲ್ಲಿ ರಚನೆ ಮಾಡಿದ್ದೇವೆ. ಶಾಲಾ ಮಕ್ಕಳಿಗೂ ಸೈಬರ್ ಅಪರಾಧದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದೇವೆ. ಕಾಮೋತ್ತೇಜಕ ದೃಶ್ಯ ಹಾಗೂ ಹಣಕಾಸು ಲಪಟಾಯಿಸುವುದು ಎಲ್ಲವು ಸೈಬರ್ ಕ್ರೈಂ ಅಡಿಯಲ್ಲಿ ಬರುತ್ತದೆ. ಅಪರಾಧದ ರೂಪವೇ ಬದಲಾಗಿದೆ. ರಸ್ತೆಯಲ್ಲಿ ನಿಂತು ತಲೆ ಒಡೆದು ಹಣ ಲಪಟಾಯಿಸುವ ಅಪರಾಧ ಈಗ ಬದಲಾಗುತ್ತಿದೆ. ಎಲ್ಲಿಂದ ವಿಡಿಯೋಗಳು ಪೋಸ್ಟ್ ಆಗುತ್ತಿದೆ ಎಂಬುದನ್ನು ಪತ್ತೆ ಹಚ್ಚುತ್ತಿದ್ದೇವೆ ಎಂದರು.

ಹೆಚ್ಚುತ್ತಿರುವ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು

ಪರಿಷತ್ ಪ್ರಶ್ನೋತ್ತರ ಕಲಾಪದ ವೇಳೆ ಹೆಚ್ಚುತ್ತಿರುವ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ಬಗ್ಗೆ ಬಿಜೆಪಿಯ ಛಲವಾದಿ ನಾರಾಯಣ ಸ್ವಾಮಿ (Chalavadi Narayana Swamy) ಅವರು ಕಳವಳ ವ್ಯಕ್ತಪಡಿಸಿದರು. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ತಪ್ಪಿತಸ್ಥರಿಗೆ ಆರೋಪಿಗಳಿಗೆ ಶಿಕ್ಷೆ ಸರಿಯಾಗುತ್ತಿಲ್ಲ. ಪೋಕ್ಸೋ ಕಾಯ್ದೆಗಳಿದ್ದರೂ ಎಷ್ಟು ಶಿಕ್ಷೆ ಆಗಿದೆ? ಸರ್ಕಾರ ಏನು ಕಠಿಣ ಕ್ರಮ ಜರುಗಿಸಲು ಮುಂದಾಗಿದೆ? ಎಂದು ಪ್ರಶ್ನಿಸಿದರು.

ಛಲವಾದಿ ನಾರಾಯಣ ಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಆರಗ ಜ್ಞಾನೇದ್ರ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ತಡೆಗೆ ಸ್ಪಂದನ ಸಹಾಯವಾಣಿ ಮಾಡಿದ್ದೇವೆ. ದಿನದ 24 ಗಂಟೆಯೂ ಪಿಂಕ್ ಹೊಯ್ಸಳ ತಿರುಗಾಟ ಮಾಡುತ್ತಿದೆ. ಪೋಕ್ಸೋ ಕೋರ್ಟ್​​ಗಳನ್ನು ಎಲ್ಲ ಜಿಲ್ಲೆಗಳಲ್ಲೂ ಮಾಡಿದ್ದೇವೆ. ಶೀಘ್ರವಾಗಿ ಶಿಕ್ಷೆ ಆಗಲು ವಿಶೇಷ ಪ್ರಯತ್ನ ಮಾಡಿದ್ದೇವೆ. ಎಫ್ಐಆರ್ ಹಾಕಿ ಚಾರ್ಜ್ ಶೀಟ್ ಮಾಡಲು ಹೆಚ್ಚಿನ ಸಮಯ ತೆಗೆದುಕೊಳ್ಳಬಾರದು. ಹೆಣ್ಣುಮಕ್ಕಳಿಗೆ ವಿಶೇಷ ಕರಾಟೆ ಕ್ಲಾಸ್, ಓಬವ್ವ ಪಡೆ, ಚನ್ನಮ್ಮ ಪಡೆ, ಶರಾವತಿ ಪಡೆಯ ಹೆಣ್ಣು ಮಕ್ಕಳು ಕಾಲೇಜುಗಳ ಸುತ್ತ ಸಂಚಾರ ಮಾಡುತ್ತಾರೆ. ಪೋಕ್ಸೋ ಪ್ರಕರಣದಲ್ಲಿ ಅಪರಾಧಿಗಳು ಬಿಡುಗಡೆ ಆಗುವ ಸಾಧ್ಯತೆ ತುಂಬಾ ಕಡಿಮೆ. ಬಹಳ ಆದ್ಯತೆಯಾಗಿ ಸರ್ಕಾರ ತೆಗೆದುಕೊಂಡಿದೆ. ಪೊಕ್ಸೋ ಪ್ರಕರಣಗಳು ಬಹುತೇಕ ಪರಿಚಿತರಿಂದಲೇ ಆಗುತ್ತಿದೆ ಎಂದರು.

ಪರಿಷತ್ ಕಲಾಪದಲ್ಲಿ ಪ್ರಸ್ತಾಪವಾದ ಕೊಡಗು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ

ಕೊಡಗು ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (Kodagu Super Speciality Hospital) ನಿರ್ಮಾಣ ವಿಚಾರವಾಗಿ ಪರಿಷತ್​ನಲ್ಲಿ ಪ್ರಸ್ತಾಪಗೊಂಡಿತು. ಸುಜಾ ಕುಶಾಲಪ್ಪ ಪ್ರಸ್ತಾಪಿಸಿದ ವಿಷಯದ ಮೇಲೆ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ (Dr.K.Sudhakar)​, 450 ಹಾಸಿಗೆಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ ನಡೆಯುತ್ತಿದೆ. 300 ಹಾಸಿಗೆ ಬೋಧಕ ಆಸ್ಪತ್ರೆ ಈಗಾಗಲೇ ಇದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪ್ರಸ್ತಾವ ರಾಜ್ಯ ಸರ್ಕಾರದ ಮುಂದಿಲ್ಲ. ವಿರಾಜಪೇಟೆ, ಮಡಿಕೇರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪ್ರಸ್ತಾವ ಇಲ್ಲ ಎಂದರು.

ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಈವರೆಗೆ ಏನೆಲ್ಲಾ ನಡೆಯಿತು?

ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ (Vishweshwar Hegde Kageri) ಅವರು ಮಾಸ್ಕ್ ಧರಿಸುವಂತೆ ಸೂಚನೆ ನೀಡಿದರು. ಕೋವಿಡ್ (Covid-19) ಆತಂಕದ ಹಿನ್ನಲೆ ಯಾರು ಮಾಸ್ಕ್ ಧರಿಸಿಲ್ಲ ಅವರು ತರಿಸಿಕೊಂಡು ಮಾಸ್ಕ್ ಧರಿಸಿ ಎಂದು ಸೂಚನೆ ನೀಡಿದರು.

ಆರಾಧಾನಾ ಅನುದಾನ ಕಡಿಮೆ ಕೊಟ್ಟಿದ್ದಕ್ಕೆ ಅಸಮಾಧಾನ

ಆರಾಧಾನಾ ಅನುದಾನ ಕಡಿಮೆ ಕೊಟ್ಟಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ (Amaregowda Bayyapura) ಆಕ್ಷೇಪ ವ್ಯಕ್ತಪಡಿಸಿದರು. ವಿಧಾನಸಭೆ ಪ್ರಶ್ನೋತ್ತರ ಕಲಾಪದ ವೇಳೆ ಮಾತನಾಡಿದ ಅವರು, ಉತ್ತರದಲ್ಲಿ ಊರುಗಳ ಹೆಸರುಗಳನ್ನು ತಪ್ಪಾಗಿ ಬರೆದಿರುವ ಬಗ್ಗೆಯೂ ಅಸಮಾಧಾನ ಹೊರಹಾಕಿದರು. ಅಲ್ಲದೆ ಕನಿಷ್ಠ 25 ಲಕ್ಷ ಅನುಧಾನ ‌ನೀಡುವಂತೆ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ (Shashikala Jolle), ಇದು ದಲಿತರ ದೇವಸ್ಥಾನಗಳಿಗೆ ಕೊಡುವ ಅನುದಾನ. ಹಿಂದಿನಿಂದಲೂ ಇಷ್ಟೇ ಅನುದಾನ ನೀಡಲಾಗುತ್ತಿದೆ. ಈ ಬಾರಿ ಬಜೆಟ್​​ನಲ್ಲಿ ಹೆಚ್ಚಳ ಮಾಡಲು ಮುಖ್ಯಮಂತ್ರಿಯವರ ಜೊತೆ ಚರ್ಚೆ ಮಾಡುತ್ತೇನೆ. ಊರು ಹೆಸರು ತಪ್ಪು ಬರೆದಿದ್ದಕ್ಕೆ ಕ್ಷಮೆಯಾಚಿಸುತ್ತೇನೆ ಎಂದರು.

ಹೇಮಾವತಿ ಜಲಾಶಯ ಮುಳುಗಡೆ ಸಂತ್ರಸ್ತರಿಗೆ ಸಿಗದ ಸೂಕ್ತ ಪರಿಹಾರ

ಆಲೂರು ತಾಲೂಕಿನ ಬ್ಯಾಬಾ ಫಾರೆಸ್ಟ್ ಗ್ರಾಮದಲ್ಲಿ ಹೇಮಾವತಿ ಜಲಾಶಯ (Hemavathi Reservoir) ಮುಳುಗಡೆ ಸಂತ್ರಸ್ತರಿಗೆ ಬದಲಿ ಜಮೀನು ಮಂಜೂರಾತಿ ವಿಚಾರ ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಪ್ರಸ್ತಾಪಗೊಂಡಿತು. ಬದಲಿ ಜಮೀನು ಮಂಜೂರಾಗಿದ್ದರೂ ದುರಸ್ತಿ ಆಗದ ಕಾರಣ ಸಂತ್ರಸ್ಥರು ಸಂಕಷ್ಟ ಅನುಭವಿಸುತ್ತಿರುವ ಬಗ್ಗೆ ಸಕಲೇಶಪುರ ಶಾಸಕ ಹೆಚ್.ಕೆ. ಕುಮಾರಸ್ವಾಮಿ (H.K.Kumaraswamy) ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಚಿವ ಆರ್.ಅಶೋಕ್ (R.Ashok), ನೈಜ ದಾಖಲೆಗಳನ್ನು ಆಧರಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು. ಸಿಎಂ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ವಿಧಾಬಸಭೆಯಲ್ಲಿ ಪ್ರಸ್ತಾಪವಾದ ಮನೆಗಳ ಸಮಸ್ಯೆ

ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ (Haladi Srinivas Shetty) ಅವರು ಮನೆಗಳ ಸಮಸ್ಯೆ ಪ್ರಸ್ತಾಪ ಮಾಡಿದರು. ಮತ್ಸ್ಯ ಮನೆ ಯೋಜನೆ ಅಡಿಯಲ್ಲಿ ಮನೆ ನೀಡಿಲ್ಲ. ಈ ಸರ್ಕಾರ ಬಂದ ಮೇಲೆ ಒಂದೂ ಮನೆ ನೀಡಿಲ್ಲ. ಅವಿಭಕ್ತ ಕುಟುಂಬ ಈಗ ವಿಭಕ್ತ ಕುಟುಂಬ ಆಗುತ್ತಿವೆ. ಮಕ್ಕಳು ‌ಮದುವೆ ಮಾಡಿಕೊಂಡು ಬೇರೆ ಆಗುತ್ತಿದ್ದಾರೆ. ಮನೆಗಳ ಸಮಸ್ಯೆ ಆಗಿದೆ. ಆದರೆ ಸರ್ಕಾರ ಈ ಯೋಜನೆ ಅಡಿ ಮನೆ ಕೊಟ್ಟಿಲ್ಲ, ಕರಾವಳಿ ಭಾಗದಲ್ಲಿ ಬಹಳ ಸಮಸ್ಯೆ ಅಗಿದೆ ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ಸಚಿವ ಎಸ್.ಅಂಗಾರ (S.Angara), ಸಮಸ್ಯೆ ಬಗ್ಗೆ ಮುಖ್ಯಮಂತ್ರಿಯವರ ಗಮನಕ್ಕೆ ತರುತ್ತೇನೆ, ಹೊಸ ಮನೆಗಳಿಗೆ ಬಜೆಟ್​ನಲ್ಲಿ ಅನುದಾನ ನೀಡುವ ಬಗ್ಗೆ ‌ಮನವಿ ಮಾಡುತ್ತೇನೆ ಎಂದರು.

ವಿಪಕ್ಷದ ಮಾತಿನ ದಾಳಿಗೆ ಸಿಲುಕಿದ ಸಚಿವ ಅಂಗಾರ

ನಾಡದೋಣಿ ಮೀನುಗಾರಿಕೆ ಪರವಾನಿಗೆದಾರರಿಗೆ ಸೀಮೆ ಎಣ್ಣೆ (Kerosene) ಬಿಡುಗಡೆ ವಿಚಾರದ ಬಗ್ಗೆ ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಪರವಾಗಿ ಪುತ್ತೂರು ಶಾಸಕ ಸಂಜೀವ ಮಠಂದೂರು (Sanjeeva Mathandur) ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಸಚಿವ ಅಂಗಾರ, ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗುವ ಸೀಮೆ ಎಣ್ಣೆ ವಿಳಂಬ ಆಗಿದೆ. ಕೈಗಾರಿಕಾ ಸೀಮೆ‌ಎಣ್ಣೆ ಖರೀದಿಸಿ ಕೊಡುವ ಕಡತ ಸಿಎಂ ಬಳಿ ಇದೆ ಎಂದರು. ಈ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah), ಉಪನಾಯಕ ಯು.ಟಿ. ಖಾದರ್, ಶಾಸಕ ಆರ್.ವಿ. ದೇಶಪಾಂಡೆ ಸೇರಿದಂತೆ ಕಾಂಗ್ರೆಸ್ ಶಾಸಕರಿಂದ ಸಚಿವರಿಗೆ ಪ್ರಶ್ನೆ ಮೇಲೆ ಪ್ರಶ್ನೆಗಳನ್ನು ಕೇಳಿದರು. ವಿಪಕ್ಷದ ಮಾತಿನ ದಾಳಿಗೆ ಉತ್ತರಿಸಲು ಅಂಗಾರ ಕಷ್ಟಪಟ್ಟರು.

ವಿಧಾನಸಭೆ ಮೊಗಸಾಲೆಯಲ್ಲಿ ರೆಡ್ಡಿ ಹೊಸ ಪಕ್ಷ ಸ್ಥಾಪನೆ ಚರ್ಚೆ

ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ (G.Janardhana Reddy) ಹೊಸ ಪಕ್ಷ ಸ್ಥಾಪನೆ ಬಗ್ಗೆ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ವಿಧಾನಸಭೆ ಮೊಗಸಾಲೆಯಲ್ಲಿ ಕಾಂಗ್ರೆಸ್ ಸದಸ್ಯರು ರೆಡ್ಡಿ ಹೊಸ ಪಕ್ಷ ಸ್ಥಾಪನೆಯ ಲಾಭ-ನಷ್ಟದ ಬಗ್ಗೆ ಚರ್ಚೆ ನಡೆಸಿದರು. ಈ ಬಾರಿ ಬಿಜೆಪಿಗೆ ಸ್ವಲ್ಪ ಕಷ್ಟ ಇದೆ ಎಂದು ಕೈ ಶಾಸಕರು ಹೇಳುತ್ತಿದ್ದಾರೆ. ಈ ಹಿಂದೆ ಶ್ರೀರಾಮುಲು (Sriramulu) ಪಕ್ಷ ಕಟ್ಟಿದಾಗ ಬಿಜೆಪಿಯ ಕೆಲ ಶಾಸಕರಿಗೆ ಚುನಾವಣೆಯಲ್ಲಿ ಕಷ್ಟವಾಗಿತ್ತು. ಅದೇ ರೀತಿ ಕಷ್ಟ ಆಗಬಹುದೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ ರೆಡ್ಡಿ ಹೊಸ ಪಕ್ಷದಿಂದ ಕಾಂಗ್ರೆಸ್ ಮತಗಳಿಗೇನೂ ತೊಂದರೆಯಿಲ್ಲ ಎಂದೂ ಹೇಳಿದ್ದಾರೆ.

ಸದನಕ್ಕೂ ಮುನ್ನ ರೆಡ್ಡಿ ಸಹೋದರರ ಸುದೀರ್ಘ ಚರ್ಚೆ

ಸದನ ಆರಂಭವಾಗುವ ಮುನ್ನ ಶಾಸಕರಾದ ಕರುಣಾಕರ ರೆಡ್ಡಿ ಮತ್ತು ಸೋಮಶೇಖರ್ ರೆಡ್ಡಿ ಸುದೀರ್ಘ ಚರ್ಚೆ ನಡೆಸಿದರು. ಅರ್ಧ ಗಂಟೆಗೂ ಹೆಚ್ಚು ಕಾಲ ಸದನದಲ್ಲೇ ಚರ್ಚೆ ಮಾಡಿದರು. ಸೋಮಶೇಖರ್ ಮತ್ತು ಕರುಣಾಕರ್ ರೆಡ್ಡಿ ಜೊತೆಗೆ ಬಿಜೆಪಿ ಶಾಸಕರು ಮಾತುಕತೆ ನಡೆಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:37 pm, Mon, 26 December 22