ಚಿಕ್ಕೋಡಿ ನ.01: ಮಹಾರಾಷ್ಟ್ರ ಏಕೀಕರಣ ಸಮಿತಿ (MES) ಪ್ರತಿವರ್ಷ ಕರ್ನಾಟಕ ರಾಜ್ಯೋತ್ಸವ (Karnataka Rajyotsava) ದಿನದಂದು ಗಡಿ ತಗಾದೆಯನ್ನು ತೆಗೆಯುತ್ತದೆ. ಎಮ್ಇಎಸ್ ಪ್ರತಿವರ್ಷ ಕನ್ನಡ ರಾಜ್ಯೋತ್ಸವಕ್ಕೆ ವಿರುದ್ಧವಾಗಿ ಕರಾಳ ದಿನಾಚರಣೆ (Black Day) ಆಚರಿಸುತ್ತ ಬರುತ್ತಿದೆ. ಅದರಂತೆ ಈ ವರ್ಷವೂ ಬೆಳಗಾವಿಯಲ್ಲಿ ನಾಡದ್ರೋಹಿ ಎಮ್ಇಎಸ್ ಕರಾಳ ದಿನಾಚರಣೆಗೆ ಸಿದ್ದತೆ ನಡೆಸಿದ್ದು, ಇದಕ್ಕೆ ಶಿವಸೇನೆ ಬೆಂಬಲ ವ್ಯಕ್ತಪಡಿಸಿದೆ. ಜಿಲ್ಲಾಡಳಿತದ ನಿಷೇಧದ ಮಧ್ಯೆಯೂ ಕರಾಳ ದಿನಾಚರಣೆಗೆ ಎಮ್ಇಎಸ್ ತಯಾರಿ ನಡೆಸಿದೆ. ಉದ್ಧವ್ ಠಾಕ್ರೆ ಶಿವಸೇನೆ ಬಣ ಇಂದು (ನ.01) ಬೆಳಗಾವಿ ಚಲೋಗೆ ಕರೆ ನೀಡಿದೆ.
ಬೆಳಗ್ಗೆ 8 ಗಂಟೆಗೆ ಕೊಲ್ಹಾಪುರ ಜಿಲ್ಲೆ ಕಾಗಲ್ನ ಲಕ್ಷ್ಮೀ ಟೇಕ್ ಬಳಿ ಜಮಾವಣೆಯಾಗುವಂತೆ ಎಮ್ಇಎಸ್ ಕಾರ್ಯಕರ್ತರಿಗೆ, ಶಿವಸೇನೆ ಬಣದ ಕೊಲ್ಹಾಪುರ ಜಿಲ್ಲಾಧ್ಯಕ್ಷ ವಿಜಯ್ ದೇವಣೆ, ಉದ್ಧವ್ ಠಾಕ್ರೆ ಕರೆ ನೀಡಿದ್ದಾರೆ. ಕಾಗಲ್ನಿಂದ ಭಗವಾ ಧ್ವಜದೊಂದಿಗೆ ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿರುವ ನಿಪ್ಪಾಣಿ ಹೊರವಲಯದ ಕೊಗನೊಳ್ಳಿ ಟೋಲ್ಗೇಟ್ ಮಾರ್ಗವಾಗಿ ಬೆಳಗಾವಿಗೆ ಆಗಮಿಸಲು ನಿರ್ಧರಿಸಿದ್ದಾರೆ. ಆದರೆ ಕರ್ನಾಟಕ ಪೊಲೀಸರು ಕೊಗನೊಳ್ಳಿ ಟೋಲ್ಗೇಟ್ ಬಳಿಯೇ ಎಮ್ಇಎಸ್ ಕಾರ್ಯಕರ್ತರನ್ನು ತಡೆಯಲು ಸಿದ್ದರಾಗಿದ್ದಾರೆ.
ನಿಷೇಧದ ನಡುವೆಯೂ ಬುಧವಾರ ಬೆಳಗ್ಗೆ 9 ಗಂಟೆಗೆ ಮರಾಠಾ ಭವನ ಬಳಿ ಎಂಇಎಸ್ ಕಾರ್ಯಕರ್ತರು ಜಮಾವಣೆಗೊಳ್ಳಲಿದ್ದಾರೆ. ಮಹಾರಾಷ್ಟ್ರದ ಮೂರು ಜನ ಸಚಿವರು ಹಾಗೂ ಓರ್ವ ಸಂಸದನಿಗೆ ಬೆಳಗಾವಿ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಈ ನಾಯಕರು ಬೆಳಗಾವಿ ಪ್ರವೇಶಿಸದಂತೆ ತಡೆಯಲು ಗಡಿ ಭಾಗದಲ್ಲಿ 18 ಚೆಕ್ ಪೋಸ್ಟ್ಗಳನ್ನು ನಿರ್ಮಾಣ ಮಾಡಲಾಗಿದೆ.
ಇದನ್ನೂ ಓದಿ: ರಾಜ್ಯೋತ್ಸವದಂದು MES ಕರಾಳ ದಿನಾಚರಣೆಗೆ ಮಹಾರಾಷ್ಟ್ರ ಸಿಎಂ ಬೆಂಬಲ
ಮಹಾರಾಷ್ಟ್ರದ ನಾಯಕರು ಗಡಿ ಪ್ರವೇಶಕ್ಕೆ ಯತ್ನಿಸಿದರೇ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕರಾಳ ದಿನ ಆಚರಣೆ ಹೆಸರಲ್ಲಿ ಕಾನೂನು ಉಲ್ಲಂಘಿಸಿದ್ರೆ ಕ್ರಮ ಕೈಗೊಳ್ಳುತ್ತೇವೆ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಸಿದ್ದರಾಮಪ್ಪ ಎಚ್ಚರಿಕೆ ನೀಡಿದ್ದಾರೆ
ಮಹಾರಾಷ್ಟ್ರ ನಾಯಕರಿಗೆ ಬೆಳಗಾವಿ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದೇವೆ. ಕರಾಳ ದಿನಾಚರಣೆಗೆ ಅವಕಾಶವಿಲ್ಲ. ಅಧಿವೇಶನ ವೇಳೆಯೂ ಮಹಾಮೇಳಾವಗೆ ಅವಕಾಶ ಕೊಡುವುದಿಲ್ಲ. ಕಳೆದ ವರ್ಷವೂ ಅವಕಾಶ ಕೊಟ್ಟಿಲ್ಲ. ಈ ವರ್ಷವೂ ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ. ಮಹಾರಾಷ್ಟ್ರ ನಾಯಕರು ಬೆಳಗಾವಿ ಜಿಲ್ಲೆಯ ಪ್ರವೇಶಿಸದಂತೆ ಎಸ್ಪಿ ಮತ್ತು ಪೊಲೀಸ್ ಕಮೀಷನರ್ ಕ್ರಮವಹಿಸುತ್ತಾರೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಮಾಹಿತಿ ನೀಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ