ಬೆಳಗಾವಿ: ಕನ್ನಡ ರಾಜ್ಯೋತ್ಸವಕ್ಕೇ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಇವೆ. ಆದ್ರೆ ಈ ಮೊದಲೇ ಎಂಇಎಸ್ ಕಿರಿಕ್ ಮಾಡಿದೆ. ಬೆಳಗಾವಿಯಲ್ಲಿ ಮರಾಠಿ ಬೋರ್ಡ್ ಹಾಕುವಂತೆ ಎಂಇಎಸ್ ಪುಂಡರು ಕ್ಯಾತೆ ತೆಗೆದಿದ್ದಾರೆ. ಬೆಳಗಾವಿಯಲ್ಲಿ ಎಂಇಎಸ್ ಸಂಘಟನೆ ಪ್ರತಿಭಟನೆಗೆ ಮುಂದಾಗಿದೆ. ಸಂಭಾಜಿ ವೃತ್ತದಲ್ಲಿ ಎಂಇಎಸ್ ಕಾರ್ಯಕರ್ತರು ಧರಣಿ ನಡೆಸುತ್ತಿದ್ದಾರೆ. ರಸ್ತೆಯಲ್ಲಿ ಹಾಕಿದ್ದ ಬ್ಯಾರಿಕೆಟ್ ತಳ್ಳಿ ಎಂಇಎಸ್ ಪುಂಡರು ಪುಂಡಾಟ ನಡೆಸಿದ್ದು ಪೊಲೀಸರ ಜೊತೆಗೆ ವಾಗ್ವಾದ ನಡೆಸಿದ್ದಾರೆ.
ಮರಾಠಿ ಭಾಷಿಕರ ಮೇಲೆ ಅನ್ಯಾಯವಾಗುತ್ತಿದೆ. ಗಡಿ ಭಾಗ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಘೋಷಣೆ ಕೂಗಿ ಕರ್ನಾಟಕ ಸರ್ಕಾರದ ವಿರುದ್ಧ ಎಂಇಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಮನವಿ ಸ್ವೀಕರಿಸಲು ಬಂದ ಅಪರ ಜಿಲ್ಲಾಧಿಕಾರಿ ಅಶೋಕ್ ದುಡಗುಂಟಿ ಎದುರೇ ನಾಡದ್ರೋಹಿಗಳು ಘೋಷಣೆ ಕೂಗಿದ್ದು ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಘೋಷಣೆ ಕೂಗುತ್ತಿದ್ದಾರೆ. ಎಂಇಎಸ್ ಪುಂಡರು ಎಡಿಸಿ ಅಶೋಕ್ ದುಡಗುಂಟಿಗೆ ಏಕವಚನದಲ್ಲೇ ಮಾತನಾಡಿದ್ದಾರೆ. ಕನ್ನಡದಲ್ಲಿ ಮಾತನಾಡುತ್ತಿದ್ದ ಎಡಿಸಿಗೆ ಮರಾಠಿಯಲ್ಲಿ ಮಾತನಾಡುವಂತೆ ಪಟ್ಟು ಹಿಡಿದಿದ್ದಾರೆ. ಆದ್ರೆ ಈ ವೇಳೆ ಅಶೋಕ್ ದುಡಗುಂಟಿ, ಎಂಇಎಸ್ ಪುಂಡರ ಬಳಿ ಕನ್ನಡದಲ್ಲೇ ಮಾತನಾಡಿ ಮನವಿ ಸ್ವೀಕರಿಸಿ ಕಳಿಸಿದ್ರು.
ಮಹಾನಗರ ಪಾಲಿಕೆ ಎದುರಿನ ಕನ್ನಡ ಧ್ಚಜ ತೆರವು ಮಾಡಬೇಕು. ಸ್ಮಾರ್ಟ್ ಸಿಟಿ ಬೋರ್ಡ್‌ಗಳಲ್ಲಿ ಮರಾಠಿ ಭಾಷೆ ಬೋರ್ಡ್ ಅಳವಡಿಸಬೇಕು. ಮರಾಠಿ ಭಾಷೆಯಲ್ಲಿ ಸರ್ಕಾರಿ ದಾಖಲೆ ನೀಡಬೇಕು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದ್ದಾರೆ. ಇನ್ನು ಜಿಲ್ಲಾಧಿಕಾರಿ ಕಚೇರಿಗೆ ಹೊರಟ್ಟಿದ್ದ ಮೆರವಣಿಗೆ ತಡೆದಿದ್ದಕ್ಕೆ ಬೇರೊಂದು ಮಾರ್ಗದಲ್ಲಿ ಓಡಿ ಹೋಗುತ್ತಿದ್ದ ಪುಂಡರನ್ನ ಪೊಲೀಸರು ತಡೆದಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಎಂಇಎಸ್‌ನಿಂದ ದಿನಕ್ಕೊಂದು ನಾಟಕ; ಭಾಷಾ ರಾಜಕಾರಣದ ಹೆಸರಲ್ಲಿ ವಿಷಬೀಜ ಬಿತ್ತಲು ಪ್ರಯತ್ನ
Published On - 2:53 pm, Mon, 25 October 21