ಬೆಳಗಾವಿ, ಫೆ.24: ಬೆಳಗಾವಿ-ಗೋವಾ ನಡುವೆ 43 ಕಿ.ಮೀ ರಸ್ತೆ ಕಾಮಗಾರಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅವರು ಬೆಳಗಾವಿ ಜಿಲ್ಲೆಯ ಖಾನಾಪುರ (Khanapur) ತಾಲೂಕಿನ ಕಣಕುಂಬಿ ಬಳಿ ಭೂಮಿ ಪೂಜೆ ನೆರವೇರಿಸಿದ್ದಾರೆ. ಗೋವಾ ಗಡಿಯಿಂದ ರಸ್ತೆ ಸುಧಾರಣೆ ಕಾಮಗಾರಿ ಇದಾಗಿದ್ದು, ಕರ್ನಾಟಕ- ಗೋವಾ ರಸ್ತೆ ಹದಗಟ್ಟಿದ್ದರಿಂದ ಪ್ರಯಾಣಿಕರಿಗೆ ಸಮಸ್ಯೆಯಾಗಿತ್ತು. ಮಳೆಗಾಲದಲ್ಲಿ ಸಾವಿನ ಹೆದ್ದಾರಿಯಾಗಿ ಮಾರ್ಪಟ್ಟಿದ್ದ ಈ ರಸ್ತೆಗೆ ಅಭಿವೃದ್ಧಿಯ ಕೂಗು ಕೇಳಿಬಂದ ಹಿನ್ನಲೆ ಕಾಮಗಾರಿ ಕೈಗೊಳ್ಳಲಾಗಿದೆ. ಇದೇ ರಸ್ತೆಯಲ್ಲಿ ಮಲಪ್ರಭಾ ನದಿಗೆ ಹೊಸ ಸೇತುವೆ ನಿರ್ಮಾಣವಾಗಲಿದ್ದು, 3 ತಿಂಗಳಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳ್ಳಲಿದೆ.
ಇನ್ನು ಭೂಮಿ ಪೂಜೆ ನೆರವೇರಿಸಿ ಕಣಕುಂಬಿಯಲ್ಲಿ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ‘ಸುಮಾರು ದಿನಗಳಿಂದ ಗೋವಾ-ಚೋರ್ಲಾ ರಸ್ತೆ ದುರಸ್ತಿ ಮಾಡುವಂತೆ ಸಾರ್ವಜನಿಕರ ಆಗ್ರಹವಿತ್ತು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಲು ಕಡಿಮೆ ಅವಧಿ ಪ್ರಯಾಣದ ರಸ್ತೆ ಇದಾಗಿದೆ. ಈ ರಸ್ತೆ ಬಗ್ಗೆ ಎರಡ್ಮೂರ ಸಾರಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿಯಾಗಿ ಮನವಿ ಮಾಡಿದ್ದೆ. ಅದರ ಪರಿಣಾಮ ಮೂರು ತಿಂಗಳ ಹಿಂದೆಯೇ ಗಡ್ಕರಿ ಅವರು ರಸ್ತೆ ಕಾಮಗಾರಿಗೆ ಅನುಮೋದನೆ ನೀಡಿದ್ದರು ಎಂದರು.
ಇದನ್ನೂ ಓದಿ:ಬೆಳಗಾವಿಯಲ್ಲಿ 6,975 ಕೋಟಿ ರೂ. ಮೌಲ್ಯದ ಕಾಮಗಾರಿಗೆ ಚಾಲನೆ: ನಿತಿನ್ ಗಡ್ಕರಿಯನ್ನು ಕೊಂಡಾಡಿದ ಸತೀಶ್ ಜಾರಕಿಹೊಳಿ
ಚೋರ್ಲಾದಿಂದ ಬೆಳಗಾವಿಯ ರಣಕುಂಡೆವರೆಗೆ ರಸ್ತೆ ದುರಸ್ತಿ ಕಾಮಗಾರಿ ನಡೆಯುತ್ತೆ. ಸಿದ್ದರಾಮಯ್ಯ ಸರ್ಕಾರ ಬಂದ ಮೆಲೆ ಕೇಂದ್ರ ಸಚಿವರೊಂದಿಗೆ ಆರು ಬಾರಿ ಸಭೆ ಮಾಡಿದ್ದೇನೆ. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಬಳಿ ರಾಜ್ಯದ ರಸ್ತೆಗಳ ಸಮಸ್ಯೆ ಗಮನಕ್ಕೆ ತರಲಾಗಿದೆ. ರಾಜ್ಯದಲ್ಲಿ ಹಿಂದಿಗಿಂತ ಬಹಳಷ್ಟು ವೇಗವಾಗಿ ರಾಷ್ಟ್ರೀಯ ಹೆದ್ದಾರಿ ಕೆಲಸಗಳು ಆಗುತ್ತಿವೆ.
ಚಿಕ್ಕ ಕೆಲಸ ಇದ್ದರೂ ಬೇಗ ಮಾಡಲೇಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಉತ್ತರ ಮತ್ತು ದಕ್ಷಿಣ ವಿಭಾಗ ಮಾಡಿ ಎರಡು ರಾಷ್ಟ್ರೀಯ ಹೆದ್ದಾರಿ ಕಚೇರಿ ತೆರೆಯಲಾಗಿದೆ. ಇದರಿಂದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಗ ಸಿಗುತ್ತದೆ.
ಮತ್ತೊಂದೆಡೆ ಭೂಸ್ವಾಧೀನ ಮಾಡುವುದು ದೊಡ್ಡ ಸಮಸ್ಯೆಯಾಗಿದೆ. ಭೂ ಸ್ವಾಧೀನ ಪ್ರಕ್ರಿಯೆ ನಡೆಯಬೇಕಿದ್ದು, ರಾಜ್ಯ ರಸ್ತೆ ಕಾಮಗಾರಿಗಳ ಅಭಿವೃದ್ಧಿಗೆ ವೇಗ ನೀಡುವ ಭರವಸೆಯನ್ನು ಕೇಂದ್ರ ಸಚಿವರು ನೀಡಿದ್ದಾರೆ. ಈ ಬಜೆಟ್ನಲ್ಲಿ ಬೆಂಗಳೂರು- ಮಂಗಳೂರು ಮತ್ತೊಂದು ರಾಜ್ಯ ಹೆದ್ದಾರಿ ಕಾಮಗಾರಿ ಆರಂಭ ಆಗುತ್ತದೆ. ಗೋಕಾಕ್ ಫಾಲ್ಸ್ ಅಭಿವೃದ್ಧಿ ಕಾಮಗಾರಿ ಚಾಲನೆ ನೀಡುತ್ತೇವೆ. ಈಗಾಗಲೇ ಬೆಳಗಾವಿಯಲ್ಲಿ ಪ್ಲೈವ್ ಓವರ್ ಘೋಷಣೆ ಆಗಿದೆ. 450ಕೋಟಿ ವೆಚ್ಚದಲ್ಲಿ 5 ಕಿ.ಮೀ ಕಾಮಗಾರಿ ಚಾಲನೆ ಸಿಗುತ್ತದೆ. ಪ್ಲೈ ಓವರ ಆಗೋದ್ರಿಂದ ಟ್ರಾಫಿಕ್ ಸಮಸ್ಯೆಯಾಗಿದ್ದು, ಸುಗಮ ಸಂಚಾರಕ್ಕೆ ಅನುಕೂಲ ಆಗುತ್ತದೆ. ಹೊಸ ಬಜೆಟ್ ನಲ್ಲೂ ಹೊಸ ಹೊಸ ರಸ್ತೆ ಮಾಡಲು ಯೋಜನೆ ರೂಪಿಸಲಾಗಿದೆ ಎಂದ ಸತೀಶ್ ಜಾರಕಿಹೊಳಿ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ