AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗ್ರಾಹಕರಿಗೆ ಶಾಕ್ ಮೇಲೆ ಶಾಕ್: ಬೆಂಗಳೂರು ಹೋಟೆಲ್​ಗಳಲ್ಲಿ ಕಾಫಿ, ತಿಂಡಿ ದರ ಹೆಚ್ಚಳ ಸಾಧ್ಯತೆ

ಗ್ರಾಹಕರಿಗೆ ಶಾಕ್ ಮೇಲೆ ಶಾಕ್: ಬೆಂಗಳೂರು ಹೋಟೆಲ್​ಗಳಲ್ಲಿ ಕಾಫಿ, ತಿಂಡಿ ದರ ಹೆಚ್ಚಳ ಸಾಧ್ಯತೆ

ಗಣಪತಿ ಶರ್ಮಾ
|

Updated on: Mar 07, 2026 | 11:44 AM

Share

ಇಸ್ರೇಲ್-ಇರಾನ್ ಯುದ್ಧದ ಪರಿಣಾಮವಾಗಿ ಭಾರತದಲ್ಲಿ ಎಲ್​ಪಿಜಿ ಸಿಲಿಂಡರ್ ದರ ಏರಿಕೆಯಾಗಿದ್ದು, ವಾಣಿಜ್ಯ ಸಿಲಿಂಡರ್‌ಗಳ ಬೆಲೆ 115 ರೂಪಾಯಿ ಹೆಚ್ಚಾಗಿದೆ. ಇದರಿಂದ ಹೋಟೆಲ್ ಉದ್ಯಮಕ್ಕೆ ತೀವ್ರ ಹೊಡೆತ ಬಿದ್ದಿದೆ. ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಕಾರ್ಯದರ್ಶಿ ವೀರೇಂದ್ರ ಕಾಮತ್ ಅವರು ಸಿಲಿಂಡರ್ ಅಭಾವ ಮತ್ತು ಬೆಲೆ ಏರಿಕೆಯಿಂದ ಹೋಟೆಲ್‌ಗಳು ಮುಚ್ಚುವ ಪರಿಸ್ಥಿತಿ ಬರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ಬೆಲೆ ಏರಿಕೆ ನಿರ್ಧಾರ ಕೈಗೊಂಡಿಲ್ಲ, ಆದರೆ ಮುಂದಿನ ದಿನಗಳಲ್ಲಿ ಗ್ರಾಹಕರ ಮೇಲೆ ಹೊರೆ ಬೀಳುವ ಸಾಧ್ಯತೆಯಿದೆ.

ಬೆಂಗಳೂರು, ಮಾರ್ಚ್ 7: ಇಸ್ರೇಲ್-ಇರಾನ್ ನಡುವಿನ ಯುದ್ಧದಿಂದಾಗಿ ಭಾರತದಲ್ಲಿ ಗೃಹ ಬಳಕೆಯ ಮತ್ತು ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರ್ ದರ ಏರಿಕೆಯಾಗಿದ್ದು, ಜನಸಾಮಾನ್ಯರ ಜೇಬಿಗೆ ಕತ್ತರಿ ಬಿದ್ದಿದೆ. ಗೃಹ ಬಳಕೆಯ ಸಿಲಿಂಡರ್ ದರ 60 ರೂಪಾಯಿ ಹೆಚ್ಚಳವಾಗಿದ್ದರೆ, ವಾಣಿಜ್ಯ ಬಳಕೆಯ ಸಿಲಿಂಡರ್ ದರ 115 ರೂಪಾಯಿ ಏರಿಕೆಯಾಗಿದೆ. ಅಲ್ಲದೆ, ಕಮರ್ಷಿಯಲ್ ಎಲ್​ಪಿಜಿ ಸಿಲಿಂಡರ್ ಬೆಲೆ ಸತತ ಮೂರು ತಿಂಗಳಿನಿಂದ ಏರಿಕೆಯಾಗಿದೆ. ಈ ಬೆಲೆ ಏರಿಕೆಯು ಹೋಟೆಲ್ ಉದ್ಯಮದ ಮೇಲೆ ಗಂಭೀರ ಪರಿಣಾಮ ಬೀರಿದೆ. ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಕಾರ್ಯದರ್ಶಿ ವೀರೇಂದ್ರ ಕಾಮತ್ ಅವರ ಪ್ರಕಾರ, ವಾಣಿಜ್ಯ ಸಿಲಿಂಡರ್‌ಗಳ ದರ ಏರಿಕೆಯ ಜೊತೆಗೆ ಮುಂದಿನ ದಿನಗಳಲ್ಲಿ ಸಿಲಿಂಡರ್ ಅಭಾವ ಉಂಟಾಗುವ ಸಾಧ್ಯತೆ ಇದೆ.

ಕೇಂದ್ರ ಪೆಟ್ರೋಲಿಯಂ ಖಾತೆಯು ಹೊರಡಿಸಿರುವ ಮಾರ್ಗಸೂಚಿಯಂತೆ ಗೃಹ ಬಳಕೆಯ ಸಿಲಿಂಡರ್‌ಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ, ವಾಣಿಜ್ಯ ಸಿಲಿಂಡರ್‌ಗಳಿಗೆ ಅಭಾವ ಉಂಟಾಗಬಹುದು ಎಂದು ಡಿಸ್ಟ್ರಿಬ್ಯೂಟರ್‌ಗಳಿಂದ ಹೋಟೆಲ್ ಅಸೋಸಿಯೇಷನ್‌ಗೆ ಮಾಹಿತಿ ಲಭಿಸಿದೆ. ಬೆಂಗಳೂರು ಸೇರಿದಂತೆ ದೇಶದ 95% ಹೋಟೆಲ್‌ಗಳು ಅಡುಗೆ ಅನಿಲ ಸಿಲಿಂಡರ್‌ಗಳನ್ನೇ ಅವಲಂಬಿಸಿವೆ. ಸಿಲಿಂಡರ್ ಸಿಗದಿದ್ದರೆ ಹೋಟೆಲ್‌ಗಳನ್ನು ನಡೆಸಲು ಸಾಧ್ಯವಿಲ್ಲ. ಇದರಿಂದಾಗಿ ಅನೇಕ ಕಾರ್ಮಿಕರು ಕೆಲಸ ಕಳೆದುಕೊಳ್ಳಬಹುದು ಮತ್ತು ಹೋಟೆಲ್ ಮಾಲೀಕರಿಗೆ ದೊಡ್ಡ ನಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಹೋಟೆಲ್ ಅಸೋಸಿಯೇಷನ್ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ. ಸದ್ಯಕ್ಕೆ ಯಾವುದೇ ದರ ಏರಿಕೆ ನಿರ್ಧಾರ ಕೈಗೊಂಡಿಲ್ಲವಾದರೂ, ಭವಿಷ್ಯದಲ್ಲಿ ಹೊರೆ ಹೆಚ್ಚಾದರೆ ಗ್ರಾಹಕರ ಮೇಲೆ ಬೆಲೆ ಹಾಕುವ ಅನಿವಾರ್ಯತೆ ಬರಬಹುದು ಎಂದು ಕಾಮತ್ ತಿಳಿಸಿದ್ದಾರೆ.

ವರದಿ: ನಟರಾಜ್, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us